ಬಾಲ ಭಾಷೆ

Update: 2017-03-04 09:56 GMT

ತೀರಾ ಸಣ್ಣ ಮಕ್ಕಳಲ್ಲಿ ಭಾವವನ್ನು ಪೋಷಿಸಲು ಭಾಷೆ ಬಳಕೆಯಾಗುತ್ತದೆ. ಸ್ವಲ್ಪ ಬೆಳೆದ ಮಕ್ಕಳಲ್ಲಿ ಭಾವ ಮತ್ತು ಮನಸ್ಥಿತಿಯನ್ನು ಪೋಷಿಸುವುದು. ಇನ್ನೂ ಬೆಳೆಯುತ್ತಿರುವ ಮಕ್ಕಳಲ್ಲಿ ಭಾವ, ಮನಸ್ಥಿತಿ ಮತ್ತು ವಿಚಾರಗಳನ್ನು ಪೋಷಿಸುವುದು. ಒಂದು ಮಗುವಿನಲ್ಲಿ ಆನಂದ, ಭೀತಿ, ಜಿಗುಪ್ಸೆ, ನೀರಸ, ಚುರುಕುತನ, ಜಡತ್ವ ಹೀಗೆ ಹಲವು ಭಾವಗಳೂ ಮತ್ತು ಮನಸ್ಥಿತಿಗಳೂ ಇರುವುದು. ನಮ್ಮ ಭಾಷೆಯ ಬಳಕೆಯು ಅದರ ಆಧಾರಿತವಾಗಿ ಇರಬೇಕು. ಉದಾಹರಣೆಗೆ ಆನಂದದ ಭಾವವನ್ನು ಉದ್ದೀಪನಗೊಳಿಸಲು ಭಾಷೆಯನ್ನು ಬಳಸಿದರೆ, ಭೀತಿಯ ಭಾವವನ್ನು ನಿವಾರಿಸಲು ಭಾಷೆಯ ಬಳಕೆ ಆಗಬೇಕು.

ಮಗುವು ಆಡುವ ತೊದಲು ನುಡಿಯನ್ನು ಬಾಲ ಭಾಷೆ ಎಂದು ಹೇಳುವ ಪರಿಪಾಠ ನಮ್ಮಲ್ಲಿದೆ. ನೀರು ಎನ್ನುವುದಕ್ಕೆ ಜೀಯ, ಮಲಗು ಎನ್ನುವುದಕ್ಕೆ ತಾಚಿ, ದೇವರು ಎನ್ನುವುದಕ್ಕೆ ಚಾಮಿ, ವಂದಿಸುವುದಕ್ಕೆ ಜೋತಾ, ಊಟಕ್ಕೆ ಬುವ್ವ, ಮುತ್ತು ಎನ್ನಲು ಉಮ್ಮ, ಹೊರಗೆ ಹೋಗಲು ಆಯಿ; ಹೀಗೆಲ್ಲಾ ಮಗುವಿಗೆ ವಿಷಯಗಳನ್ನು ಮುಟ್ಟಿಸಲು ಸಾಮಾನ್ಯವಾಗಿ ಮಕ್ಕಳು ಪ್ರಾಥಮಿಕ ಹಂತದಲ್ಲಿ ಹೊರಡಿಸುವ ಶಬ್ದಗಳನ್ನು ಆಧರಿಸಿಕೊಂಡು ಅನೇಕ ಪದಗಳಿವೆ. ಪ್ರಾದೇಶಿಕವಾಗಿ ಭಿನ್ನತೆಯೂ ಅದಕ್ಕಿದೆ. ಆದರೆ ಇಲ್ಲಿ ಹೇಳುತ್ತಿರುವುದು ಅಂತಹ ಬಾಲ ಭಾಷೆಯನ್ನಲ್ಲ. ಪೋಷಕರು, ಶಿಕ್ಷಕರು, ಪಾಲಕರು ಅಥವಾ ಮಗುವಿನ ಕುರಿತಾಗಿ ಮಗುವಿ ನೊಂದಿಗೆ ವ್ಯವಹರಿಸುವವರು ಮಕ್ಕಳ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಬಳಸಬೇಕಾಗಿರುವ ಭಾಷೆಯನ್ನು ಕುರಿತು ಇಲ್ಲಿ ನಾವು ತಿಳಿದುಕೊಳ್ಳುತ್ತಿರುವುದು. ಮಕ್ಕಳ ವಿವಿಧ ಹಂತಗಳಿಗೆ ವಿವಿಧ ರೀತಿಯ ಪದಗಳನ್ನು ಬಳಸಬೇಕೆಂದು ತಜ್ಞರು ಹೇಳುವರಾದರೂ ವಿವಿಧ ಭಾಷೆಗಳಿಗೆ ವಿವಿಧ ರೀತಿಯ ಪದಗಳ ಬಳಕೆ ಇರುವುದರಿಂದ ಅವನ್ನು ವಿಸ್ತರಿಸಿ ಹೇಳಲು ಇಲ್ಲಾಗದು. ಆದರೆ ಎಲ್ಲಾ ಭಾಷೆಗಳಿಗೂ ಸಾಮಾನ್ಯೀಕರಿಸಿ ಒಂದು ಹಂತದ ಅರಿವನ್ನು ಪಡೆಯಲು ಸಾಧ್ಯವಾಗುುದು. ಅದೇ ಈ ಲೇಖನದ ಉದ್ದೇಶ.

ಭಾಷೆಯ ಉಪಯೋಗ ಎಲ್ಲಿಂದ?

ಎಳೆಯ ಮಗುವಿಗೆ ಭಾಷೆಯ ಅಗತ್ಯವೇ ಇರದು. ಅದು ಬರೀ ತನ್ನ ವೌನ, ನೋಟ ಮತ್ತು ಅಳುವಿನ ಮೂಲಕ ತನ್ನ ಪ್ರತಿಕ್ರಿಯೆಯನ್ನು ತೋರ್ಪಡಿಸುತ್ತದೆ. ನಂತರ ಹಗುರವಾಗಿ ತನ್ನ ಕೈ ಕಾಲುಗಳನ್ನು ಆಡಿಸುವ ಮೂಲಕ ಆಂಗಿಕವಾಗಿಯೂ ತನ್ನ ಅಭಿವ್ಯಕ್ತಿಯನ್ನು ಬಿಂಬಿಸುತ್ತದೆ. ನಂತರ ಶುರುವಾಗುವುದು ಭಾಷೆ. ಆಗಲೂ ಕೂಡ ತಕ್ಷಣದ ಅಗತ್ಯಗಳಿಗೆ ಮಾತ್ರ ಆ ಸಂವಹನ ಅಥವಾ ಭಾಷೆಯ ಬಳಕೆ ಸೀಮಿತವಾಗಿರುತ್ತದೆ.

ಬೇಕಾ, ಬೇಡ, ತಗೋ, ಬಂದೆ, ಆಯ್ತು, ಇನ್ನೂ ಬೇಕಾ ಎನ್ನುವಂತಹ ಪದಗಳ ಜೊತೆಗೆ ನಮ್ಮ ಮುದ್ದನ್ನು ಸುರಿಸುವ ಇನ್ನೂ ಕೆಲವು ಪದಗಳನ್ನು ಬಳಸುತ್ತೇವೆ. ನಮ್ಮ ಮುದ್ದಿನ ಪದಗಳು ನಮ್ಮ ಸಂತೋಷಕ್ಕಾಗಿಯೇ ಹೊರತು, ಅದು ಮಗುವಿಗೆ ಏನೂ ಅರ್ಥ ಆಗುವುದಿಲ್ಲ. ಆದರೆ ಅಗತ್ಯವಿದೆ. ನಾವು ಚಿನ್ನ ಮರಿ, ಜಾಣ ಮರಿ, ಬಂಗಾರು ಪುಟ್ಟ ಅಂತೆಲ್ಲಾ ಮುದ್ದಾಡುವಾಗ ಅದಕ್ಕೆ ನಮ್ಮಲ್ಲಿರುವ ಸಂತೋಷವನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಹಾಗೆಯೇ ಆಗ ನಾವು ಅದರಲ್ಲಿರುವ ಆನಂದದ ಭಾವ ಅಥವಾ ಸ್ಥಿತಿಯನ್ನು ಪೋಷಿಸುವಂತಹ ಭಾಷೆ ಮತ್ತು ಮುಖಭಾವವನ್ನು ಹೊಂದಿರಬೇಕು. ಹಾಗಾದಾಗ ಅವರಲ್ಲಿರುವ ಆನಂದದ ಭಾವವು ಉದ್ದೀಪನಗೊಂಡು ಆನಂದದ ಪರಿಸರ ಉಂಟಾಗುತ್ತದೆ.

ಇದು ಬಹಳ ಮುಖ್ಯವಾದ ಅಂಶ. ಭಾಷೆಯನ್ನು ಬಳಸುವುದು ಏಕೆಂದು ನಾವು ಅರ್ಥ ಮಾಡಿಕೊಳ್ಳಬೇಕು. ತೀರಾ ಸಣ್ಣ ಮಕ್ಕಳಲ್ಲಿ ಭಾವವನ್ನು ಪೋಷಿಸಲು ಭಾಷೆ ಬಳಕೆಯಾಗುತ್ತದೆ. ಸ್ವಲ್ಪ ಬೆಳೆದ ಮಕ್ಕಳಲ್ಲಿ ಭಾವ ಮತ್ತು ಮನಸ್ಥಿತಿಯನ್ನು ಪೋಷಿಸುವುದು. ಇನ್ನೂ ಬೆಳೆಯುತ್ತಿರುವ ಮಕ್ಕಳಲ್ಲಿ ಭಾವ, ಮನಸ್ಥಿತಿ ಮತ್ತು ವಿಚಾರಗಳನ್ನು ಪೋಷಿಸುವುದು. ಒಂದು ಮಗುವಿನಲ್ಲಿ ಆನಂದ, ಭೀತಿ, ಜಿಗುಪ್ಸೆ, ನೀರಸ, ಚುರುಕುತನ, ಜಡತ್ವ ಹೀಗೆ ಹಲವು ಭಾವಗಳೂ ಮತ್ತು ಮನಸ್ಥಿತಿಗಳೂ ಇರುವುದು.

ನಮ್ಮ ಭಾಷೆಯ ಬಳಕೆಯು ಅದರ ಆಧಾರಿತವಾಗಿ ಇರಬೇಕು. ಉದಾಹರಣೆಗೆ ಆನಂದದ ಭಾವವನ್ನು ಉದ್ದೀಪನಗೊಳಿಸಲು ಭಾಷೆಯನ್ನು ಬಳಸಿದರೆ, ಭೀತಿಯ ಭಾವವನ್ನು ನಿವಾರಿಸಲು ಭಾಷೆಯ ಬಳಕೆ ಆಗಬೇಕು. ನೀರಸವಾಗಿರುವ ಭಾವವಿದ್ದಲ್ಲಿ ಉತ್ಸಾಹ ತುಂಬುವ ಕೆಲಸ ನಮ್ಮ ಭಾಷೆಯ ಬಳಕೆಯಿಂದ ಆಗಬೇಕು. ಜಡವಾಗಿರುವ ಮಗುವಿಗೆ ಚೈತನ್ಯ ತುಂಬುವ ಕೆಲಸ ಭಾಷೆಯಿಂದಾಗಬೇಕು. ಇದು ಭಾಷೆಯಿಂದ ಮಾಡುವ ಭಾವ ಪೋಷಣೆಯ ಕೆಲಸ.

ಸಣ್ಣ ಮಗುವಿಗೆ ಶೇಕ್ಸ್ ಪಿಯರ್‌ನ ನಾಟಕದ ಭಾಗವನ್ನೋ, ಬೇಂದ್ರೆಯವರ ಕಾವ್ಯ ಭಾಗವನ್ನೋ ಅಥವಾ ಯಾವುದೋ ಸಂಸ್ಕೃತಿಯ, ದೇಶದ ಇತಿಹಾಸವನ್ನೋ ಹೇಳಿಕೊಂಡು ಕೂರಲು ಸಾಧ್ಯವೇ? ಅದಕ್ಕೆ ಆ ಹೊತ್ತಿನ, ಅದರಲ್ಲೂ ಅದರ ಕಣ್ಣಿಗೆ ಕಾಣುವ ವಸ್ತು ಮತ್ತು ವಿಷಯಗಳನ್ನಷ್ಟೇ ಗುರುತಿಸುವಂತಹ ಭಾಷೆಯ ಬಳಕೆ ಮತ್ತು ಪದ ಪ್ರಯೋಗಗಳಾಗಬೇಕು. ಅದು ಯಾವುದೇ ಭಾಷೆಯ ಪರಿಸರವನ್ನುಳ್ಳ ಮಗುವಾಗಿರಲಿ. ಮಗುವಿಗೆ ತಾಯ್ನುಡಿ ಮತ್ತು ಪ್ರಾದೇಶಿಕ ಭಾಷೆಯನ್ನಷ್ಟೇ ಗ್ರಹಿಸಲು ಸಾಧ್ಯವಾದ್ದರಿಂದ ಭಾಷೆಯ ಸೂಕ್ತ ಬಳಕೆಯನ್ನು ಕಂಡುಕೊಳ್ಳಬೇಕಾಗಿರುವುದು ಅಗತ್ಯ. ಯಾವುದೇ ಭಾಷೆಯಾದರೂ ಮಕ್ಕಳ ದೃಷ್ಟಿಕೋನದಿಂದ ಅವರ ಅಗತ್ಯ ಮತ್ತು ಭಾವ ಪೋಷಣೆಗೆ ಬೇಕಾಗುವ ಪದಗಳು ಮತ್ತು ಶೈಲಿಯನ್ನು ಬಳಸುವುದನ್ನೇ ಇಲ್ಲಿ ನಾವು ಬಾಲಭಾಷೆ ಎಂದು ಹೇಳುವುದು. ಮಕ್ಕಳಾಡುವ ತೊದಲ್ನುಡಿಯೂ ಅಲ್ಲ, ಅಥವಾ ಅವರ ಗಮನ ಸೆಳೆಯಲು ಅವರ ತೊದಲ್ನುಡಿಯ್ನು ನಾವು ಅನುಕರಿಸುವುದೂ ಅಲ್ಲ.

ಕ್ರಿಯಾತ್ಮಕ ಭಾಷೆ

ಮೊದಲನೆಯದಾಗಿ ನಮ್ಮ ಬಾಲಭಾಷೆ ಕ್ರಿಯಾತ್ಮಕವಾಗಿರುತ್ತದೆ. ಮಕ್ಕಳಿಗೆ ಭಾಷೆಯ ಕಲಿಕೆಯೇ ಕ್ರಿಯೆಯಿಂದ ಆಗುವುದು. ಬಾ ಎನ್ನುವಾಗ ಕೈ ಸನ್ನೆ, ತಲೆದೂಗುವಿಕೆ ಎರಡೂ ಸೇರಿ ಬಾ ಎಂಬ ಪದದ ಅರ್ಥವು ಮಗುವಿಗೆ ಆಗುವುದು. ಅದರಂತೆಯೇ ಭೌತಿಕವಾದ ಚಲನವಲನಗಳನ್ನು ಗಮನಿಸಿಕೊಂಡೇ ಮಗುವು ಭಾಷೆಯನ್ನು ಉಪಯೋಗಿಸುತ್ತಿರುವ ಇತರರ ಭಾವವನ್ನು ಅರಿಯುವುದು. ಯಾವುದೇ ಪದವಾಗಲಿ ಭೌತಿಕವಾಗಿರುವ ಚಟುವಟಿಕೆಯನ್ನು ನೋಡಿಯೇ ಮಗುವು ವಿಷಯವನ್ನು ತಿಳಿಯುವುದು. ಇನ್ನು ಮಾರುದ್ದದ ಮಾತುಗಳಂತೂ ಅವರಿಗೆ ತೀರಾ ಅನಗತ್ಯ.

ವಸ್ತುಗಳನ್ನು ಬಳಸುವಾಗ ಅದರೊಂದಿಗೆ ಉಪಯೋಗಿಸುವ ಪದಗಳನ್ನೂ ಅವರು ಹಾಗೆಯೇ ಕಲಿಯುತ್ತಾರೆ. ವಸ್ತುವಿನ ಹೆಸರು ಮತ್ತು ಉಪಯೋಗಗಳನ್ನೂ ಕೂಡ ಮಕ್ಕಳು ತಿಳಿಯುವುದು ಹಾಗೆಯೇ. ಅಂಗನವಾಡಿಯಾಗಿರಲಿ ಅಥವಾ ಯಾವುದೇ ರೀತಿಯ ಪ್ಲೇ ಹೋಂ ಆಗಿರಲಿ, ಮಗುವು ಹೋಗುವ ಮುನ್ನವೇ ತನ್ನ ಮನೆಯಲ್ಲಿ ಒಂದಷ್ಟು ವಿಷಯಗಳನ್ನು ಕಲಿತಿರುತ್ತದೆ. ಅಲ್ಲಿ ಹೆಚ್ಚಿನದ್ದೇನೇ ಕಲಿತಿರಲಿ ಅಥವಾ ಕಲಿಯದೇ ಇರಲಿ, ಸಾಮಾನ್ಯವಾಗಿರುವಂತಹ ವಿಷಯಗಳನ್ನು ಗ್ರಹಿಸುವಂತಹ ಸಾಮರ್ಥ್ಯವನ್ನು ಮಕ್ಕಳು ಹೊಂದಿರುತ್ತಾರೆ.

ಬಾ, ಹೋಗು, ಕೂತ್ಕೋ, ಓಡು, ಕೊಡು, ತಗೋ, ಎತ್ತಿಡು, ಇಳಿಸು; ಹೀಗೆ ಸಾಮಾನ್ಯ ನಿರ್ದೇಶನಗಳನ್ನು ಪಾಲಿಸುವಷ್ಟರ ಮಟ್ಟಿಗಿರುತ್ತವೆ. ಇನ್ನು ತಮ್ಮ ಹಸಿವು, ನೀರಡಿಕೆ, ಮಲ ಮೂತ್ರ ವಿಸರ್ಜನೆ, ಭಯ, ಖುಷಿ ಇವುಗಳನ್ನು ವ್ಯಕ್ತಪಡಿಸುವಷ್ಟು ಸಮರ್ಥವಾಗಿರುತ್ತವೆ. ಇದು ಸಾಮಾನ್ಯವಾಗಿ. ಆದರೆ ಇವುಗಳನ್ನು ವ್ಯಕ್ತಪಡಿಸದೇ ಇರುವಂತಹ ಮಕ್ಕಳೂ ಇರುತ್ತಾರೆ. ಎಷ್ಟು ಹಸಿವಾದರೂ, ನೀರಡಿಕೆಯಾದರೂ ಹೇಳುವುದಿಲ್ಲ. ಹೇಳುವ ಬದಲು ಅಳುತ್ತಾರೆ.

ಮಲಮೂತ್ರ ವಿಸರ್ಜನೆ ಮಾಡುವಂತಾಗಿದೆ ಎಂದು ತಿಳಿಸದೇ ಕುಳಿತಿರುವಲ್ಲಿಯೇ ವಿಸರ್ಜಿಸಿ ಅಳುತ್ತಾರೆ. ಇಂತಹ ಮಕ್ಕಳಾದರೆ ಕೊಂಚ ಹೆಚ್ಚಿನ ಗಮನ ಕೊಡಬೇಕಾಗಿರುವಂತಹ ಅಗತ್ಯ ಬರುತ್ತದೆ. ಅಂತಹ ಮಕ್ಕಳೊಂದಿಗೆ ನಾವು ಹೇಳುತ್ತಿರುವಂತಹ ಾಲಭಾಷೆ ಹೆಚ್ಚಿನ ನೆರವಿಗೆ ಬರುತ್ತಿದೆ.

ಕೆಲವು ಸಲ ಪೋಷಕರು ಮಗುವಿನ ಜೊತೆಗೆ ಸಂವಹನ ಮಾಡುವ ನಿಟ್ಟಿನಲ್ಲಿ ಯಾವ ಕ್ರಮವನ್ನೂ ತೆಗೆದುಕೊಂಡಿರುವುದಿಲ್ಲ. ಮಗುವಿಗೆ ಉಣ್ಣಿಸುವ ಸಮಯದಲ್ಲಿ ಮನವೊಲಿಸಿಯೋ ಅಥವಾ ಬಲವಂತವಾಗಿಯೋ, ಭಯಪಡಿಸಿಯೋ ಊಟ ಮಾಡಿಸಿರುತ್ತಾರೆ. ಇದೇ ರೀತಿಯಲ್ಲಿ ನಿದ್ರೆ, ಸ್ನಾನ ಇತ್ಯಾದಿಗಳೂ ಆಗಿರುತ್ತವೆ. ಇನ್ನು ಆಡುವುದು ಅವರ ಪಾಡಿಗೆ ಅವರು. ಈಗಿನ ಕೆಲವು ಮನೆಗಳಲ್ಲಂತೂ ಮಕ್ಕಳ ಊಟ, ಪೋಷಕರ ಜೊತೆ ಅವರು ಕಳೆಯುವಂತಹ ಸಮಯ ಎಲ್ಲವೂ ಟಿವಿಯ ಮುಂದೆಯೇ ಆಗಿರುತ್ತದೆ. ಆ ಟಿವಿಯಲ್ಲಿ ಬರುವ ಸುದ್ದಿಗಳಾಗಲಿ, ಧಾರಾವಾಹಿಗಳಾಗಲಿ ಬಾಲಭಾಷೆಯಲ್ಲಿ ಇರುವುದಿಲ್ಲ. ಹಾಗಾಗಿ ಅವುಗಳು ಮಕ್ಕಳ ಗ್ರಹಿಕೆಗೆ ಎಟಕುವುದೇ ಇಲ್ಲ. ಇನ್ನು ಪೋಷಕರಿಗೆ ಮಕ್ಕಳೊಂದಿಗೆ ಬಾಲಭಾಷೆಯನ್ನಾಡಿಕೊಂಡು ಅವರೊಂದಿಗೆ ವ್ಯವಹರಿಸುವಷ್ಟು ವ್ಯವಧಾನ ಇರುವುದಿಲ್ಲ. ಧಾರಾವಾಹಿ ಕಥೆಯ ಭಾಗಗಳು ತಪ್ಪಿ ಹೋಗಿಬಿಡುತ್ತವಲ್ಲಾ.

ಇನ್ನು ತಂದೆ ಅಥವಾ ಮನೆಯ ಇತರ ಪುರುಷರು ಮಕ್ಕಳನ್ನು ಎತ್ತಿಕೊಂಡು ಹೋಗಿ ಅಂಗಡಿಯಲ್ಲಿ ಏನಾದರೂ ಕೊಡಿಸುವುದು, ಗಾಡಿಯ ಮೇಲೆ ರೌಂಡ್ ಹೊಡೆಸಿ ಮತ್ತೆ ಮನೆಯ ಬಳಿಗೆ ಬಿಡುವುದು; ಈ ಬಗೆಯ ಕೆಲವು ಚಟುವಟಿಕೆಗಳನ್ನು ಹೊರತುಪಡಿಸಿದರೆ ಬಾಲಭಾಷೆ ಉಪಯೋಗಿಸಿಕೊಂಡು ಮಕ್ಕಳೊಂದಿಗೆ ಸ್ಪಂದಿಸುವ ಕೆಲಸವಾಗಿರುವುದಿಲ್ಲ. ಹಾಗಾಗಿ ಅಂತಹ ಮಕ್ಕಳು ಅಂಗನವಾಡಿ ಅಥವಾ ಪ್ಲೇಹೋಂಗಳಿಗೆ ಬಂದಾಗ ಕಕ್ಕಾಬಿಕ್ಕಿಯಾಗುತ್ತಾರೆ. ಗಾಬರಿಗೊಳ್ಳುತ್ತಾರೆ. ಅಲ್ಲಿ ಟಿವಿ ಇರುವುದಿಲ್ಲ. ಅಲ್ಲಿ ಎಲ್ಲರೂ ಅವರ ಪಾಡಿಗೆ ಅವರು ಓಡಾಡಿಕೊಂಡು, ಇವರನ್ನು ಇವರ ಪಾಡಿಗೆ ಬಿಟ್ಟಿರುವುದಿಲ್ಲ. ಮಾತಾಡಿಸಲು ಬರುತ್ತಾರೆ. ಅದೇನೇನೋ ಮಾಡಲು ಹೇಳುತ್ತಾರೆ. ಇವರ ಕಡೆಗೇ ಗಮನ ಕೊಡುತ್ತಾರೆ. ಅದಕ್ಕೆ ಗಾಬರಿಯಾಗುತ್ತದೆ.

ಇಂತಹ ಹಿನ್ನೆಲೆಗಳಿಂದ ಬರುವ ಮಕ್ಕಳ ಕುರಿತಾಗಿ ಶಿಕ್ಷಕರಿಗೆ ಬಾಲಭಾಷೆ ಬಳಕೆಯ ಹೆಚ್ಚಿನ ಅಗತ್ಯ ಇರುತ್ತದೆ. ಯಾವುದೋ ವಿಭಿನ್ನ, ವಿಶಿಷ್ಟ, ಕೆಲವೊಮ್ಮೆ ವಿಚಿತ್ರ ಪರಿಸರಗಳಿಂದ ಬಂದಿರುವ ಮಕ್ಕಳನ್ನು ಸಾಮಾನ್ಯವಾದ ಸಾಮಾಜಿಕ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುವುದು ಅಂಗನವಾಡಿಯಂತಹ ಶಾಲೆಗಳ ಶಿಕ್ಷಕರಿಗೆ ಸವಾಲಿನ ಕೆಲಸ. ಹಾಗೆಯೇ ುರುತರವಾದ ಜವಾಬ್ದಾರಿಯೂ ಕೂಡ.

ಹಾಗಾಗಿ ಪೋಷಕರ ಹೊಣೆಗಾರಿಕೆ ಮತ್ತು ಅವರ ಕೊಡುಗೆಗಳನ್ನು ಮಕ್ಕಳ ಜೊತೆಯಲ್ಲಿ ನಿರೀಕ್ಷಿಸುವ ಬದಲು ಶಿಕ್ಷಕರು ತಾವೇ ಎಚ್ಚೆತ್ತುಕೊಂಡರೆ ಬಹಳ ಒಳಿತು. ಮಕ್ಕಳ ಮನೆಗಳಲ್ಲಿ ಹೋಗಿ ಶಿಕ್ಷಕರು ಏನು ತಾನೇ ಮಾಡಲು ಸಾಧ್ಯ? ಎಷ್ಟೋ ಸಲ ಮಕ್ಕಳು ಆಡುವ, ವರ್ತಿಸುವ, ಅಭಿವ್ಯಕ್ತಿಸುವ ಬಗೆಗಳನ್ನು ಗಮನಿಸುತ್ತಿದ್ದರೆ ಅವರ ಮನೆಯ ಪರಿಸರ, ಆ ಮಗುವಿನ ಪೋಷಕರ ವರ್ತನೆಗಳು, ಆ ಮಗುವಿನ ಸುತ್ತಲೂ ನಡೆಯುತ್ತಿರುವ ವಿದ್ಯಮಾನಗಳೆಲ್ಲವೂ ಶಿಕ್ಷಕರಿಗೆ ಅರಿವಾಗುತ್ತದೆ.

ಆದರೆ ನಿಜವಾಗಿಯೂ ಮಕ್ಕಳ ಮೇಲೆ ಕುಟುಂಬದ ಯಾವುದೇ ರೀತಿಯ ಪ್ರಭಾವದ ಕುರಿತಾಗಿ ಶಿಕ್ಷಕರು ಅಸಹಾಯಕರೇ. ಮಗುವೊಂದನ್ನೇ ಗುರಿಯಾಗಿಸಿಕೊಂಡು ತಮ್ಮ ಗಮನವನ್ನೆಲ್ಲಾ ಅದರ ಬೆಳವಣಿಗೆ ಮತ್ತು ಪೋಷಣೆಯ ಕಡೆಗೆ ಕೇಂದ್ರೀಕರಿಸುವುದಷ್ಟೇ ಉಳಿದಿರುವ ಮಾರ್ಗ. ಮುಂದಿನ ಪೀಳಿಗೆಗಳನ್ನು ಕಾಯುವ ಬಾಧ್ಯತೆ ಎಂದರೆ ಇದೇಯೇ. ಪ್ರೇರಕ ಭಾಷೆ

ಬಾಲಭಾಷೆಯೆಂದರೆ ಏನೆಂದು ಈಗ ನಮಗೆ ತಿಳಿದಿದೆ. ಮಕ್ಕಳ ಅಗತ್ಯ ಮತ್ತು ಭಾವ ಪೋಷಣೆಗೆ ಪೂರಕವಾಗುವಂತಹ ಸರಳ ಮತ್ತು ತಿಳಿದಿರುವಂತಹ ಪದಗಳ್ನು ಮಕ್ಕಳೊಂದಿಗೆ ಬಳಸುವುದು.

1.ಮಕ್ಕಳು ಕೆಲವೊಮ್ಮೆ ತಮಗೆ ಆಕರ್ಷಕವೆನಿಸುವ ಕೆಲವು ವಸ್ತುಗಳನ್ನು ತಮ್ಮೆಡನೆ ಇಟ್ಟುಕೊಳ್ಳುತ್ತಾರೆ. ಅದನ್ನು ಬಳಸಿಕೊಂಡು, ಅದರ ಸುತಾ್ತ ಸಂಭಾಷಣೆಯನ್ನು ನೇಯುವುದು.

2.ಮನೆಯಲ್ಲಿ ಏನು ತಿಂದೆ, ಏನು ಕುಡಿದೆ, ಸಂಜೆ ಎಲ್ಲಿಗಾದರೂ ಹೋಗಿದ್ದಾ? ಹೀಗೆ ಕೇಳುವ ಮೂಲಕ ಮಕ್ಕಳನ್ನು ಸಂಭಾಷಣೆಗೆ ಪ್ರೇರೇಪಿಸುವುದು. 

3.ಶಾಲೆಯ ಒಳಗೆ ಮತ್ತು ಸುತ್ತಮುತ್ತಲೂ ಇರುವಂತಹ ವಸ್ತುಗಳನ್ನು ತೋರಿಸಿ ಅವುಗಳ ಸುತ್ತ ಾತುಕತೆಯನ್ನು ಕಟ್ಟುವುದು.

4.ಮಕ್ಕಳ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ಕೊಡುವಂತಹ ಮಾತುಗಳನ್ನು ಆಡುವುದು. ಈ ಗೊಂಬೆಯನ್ನು ಎತ್ತಿಕೊಂಡು ಹೋಗಿ ಅಲ್ಲಿ ಕುಳಿತುಕೊಂಡು ಆಡು ಅಥವಾ ಎತ್ತಿಡು, ಇತ್ಯಾದಿ.

ಮೂರರಿಂದ ಎಂಟುವರ್ಷದ ವರೆಗಂತೂ ನಮ್ಮ ಬಾಲಭಾಷೆಯನ್ನು ಅತ್ಯಂತ ಔಚಿತ್ಯಪೂರ್ಣವಾಗಿ ಕಾಪಾಡಿಕೊಳ್ಳುವ ಅಗತ್ಯವಿದೆ. ಅವರಿಗೆ ಕೇಳಬೇಕು. ಅವರು ಹೇಳಬೇಕು. ನಾವು ಹೇಳುತ್ತಿರುವುದು, ಅವರು ಬರಿದೇ ಕೇಳುವುದು ಆಗಕೂಡದು. ಹಾಗಾದಾಗ ಅವರು ನಿಮ್ಮ ಭಾಷೆಯನ್ನು ಅನುಸರಿಸುತ್ತಿದ್ದಾರೋ ಇಲ್ಲವೋ, ಗ್ರಹಿಸುತ್ತಿದ್ದಾರೋ ಇಲ್ಲವೋ, ಅರಿಯುತ್ತಿದ್ದಾರೋ ಇಲ್ಲವೋ ಖಂಡಿತ ಗೊತ್ತಾಗುವುದಿಲ್ಲ.

ಪೋಷಕರು ಮತ್ತು ಶಿಕ್ಷಕರು ಹಿಂದೆ ತಮ್ಮ ಅನುಭವದಲ್ಲಿ ನಡೆದಿರುವ ಘಟನೆಗಳನ್ನು ಮಕ್ಕಳೊಂದಿಗೆ ಹೇಳುವ ಅಗತ್ಯವಂತೂ ಇಲ್ಲ. ಮಕ್ಕಳಿಗೆ ಕಥೆಗಳನ್ನು ಕೇಳಿ ಅರಿತುಕೊಳ್ಳುವ ಹಂತಕ್ಕೆ ತಂದಾದ ಮೇಲೆ, ನಡೆದಿರುವ ವಿದ್ಯಮಾನಗಳನ್ನು ಅವರಿಗೆ ತಿಳಿಯುವ ಹಾಗೆ ಚಿಕ್ಕದಾಗಿ ಹೇಳಬೇಕು.

ಬಾಲಭಾಷೆ ಬಹಳ ವ್ಯಾಪಕವಾದದು. ಇದು ಹುಟ್ಟಿದಾಗಿನಿಂದ ಮೂರು ವರ್ಷದವರೆಗೂ ಮೊದಲನೆಯ ಹಂತವೆಂದು ಗುರುತಿಸುತ್ತೇವೆ. ಎರಡನೆ ಹಂತವನ್ನು ಮೂರರಿಂದ ಎಂಟರವರೆಗೂ ವಿಸ್ತರಿಸಬಹುದು. ಅಲ್ಲಿಗೆ ಇದು ಮುಗಿಯುವುದಿಲ್ಲ. ಮುಂದೆ ಇನ್ನೂ ಕೌತುಕದಿಂದ ಕೂಡಿರುತ್ತದೆ.

Writer - ಯೋಗೇಶ್ ಮಾಸ್ಷರ್

contributor

Editor - ಯೋಗೇಶ್ ಮಾಸ್ಷರ್

contributor

Similar News