×
Ad

ಮಾಜಿ ಸಿಬಿಐ ನಿರ್ದೇಶಕ ಸಿಂಗ್ ಆಸ್ತಿ ಜಪ್ತಿ ಸಾಧ್ಯತೆ

Update: 2017-03-05 09:15 IST

ಹೊಸದಿಲ್ಲಿ, ಮಾ.5: ಸಿಬಿಐನ ಮಾಜಿ ನಿರ್ದೇಶಕ ಎ.ಪಿ.ಸಿಂಗ್ ಅವರ ವಿರುದ್ಧ ಹಣ ದುರುಪಯೋಗ ತಡೆ ಕಾಯ್ದೆ (ಪಿಎಂಎಲ್‌ಎ) ಕಾಯ್ದೆಯಡಿ ಪ್ರಕರಣ ದಾಖಲಿಸಿ, ಅವರ ಎಲ್ಲ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ. ವಿವಾದಾತ್ಮಕ ಮಾಂಸ ರಫ್ತುದಾರ ಮೊಯಿನ್ ಖುರೇಷಿ ಜತೆ ಸಿಂಗ್ ಷಾಮೀಲಾಗಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಿದಾಗ, ಹಣಕಾಸು ಅವ್ಯವಹಾರ ಎಸಗಿರುವುದು ಬೆಳಕಿಗೆ ಬಂದಿತ್ತು.

ಮಾಂಸದ ವ್ಯಾಪಾರಿಯನ್ನು ಕಾನೂನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಈಗಾಗಲೇ ವಿಚಾರಣೆಗೆ ಗುರಿಪಡಿಸಿದ್ದು, ಸಿಂಗ್ ಅವರ ಜತೆ ಹಾಗೂ ಇತರ ಸರ್ಕಾರಿ ಅಧಿಕಾರಿಗಳ ಜತೆಗಿನ ಸಂಬಂಧದ ಬಗ್ಗೆಯೂ ಪ್ರಶ್ನಿಸಲಾಗಿದೆ. ಇದೀಗ ಸೂಕ್ತ ಪುರಾವೆಗಳು ಸಿಕ್ಕ ಹಿನ್ನೆಲೆಯಲ್ಲಿ ಸಿಂಗ್ ವಿರುದ್ಧ ಪಿಎಂಎಲ್‌ಎ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಫೆಬ್ರವರಿ ಕೊನೆಯ ವಾರ ಸಿಬಿಐ, ಸಿಂಗ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿತ್ತು. ಸಿಂಗ್ 2010ರಿಂದ 2012ರ ವರೆಗೆ ಸಿಬಿಐ ಮುಖ್ಯಸ್ಥರಾಗಿದ್ದರು.

ಸಿಬಿಐ ತಂಡ ಸಿಂಗ್ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ಬಳಿಕ ಹಣ ಅವ್ಯವಹಾರದ ಬಗ್ಗೆ ಕಾನೂನು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News