18 ವರ್ಷಗಳ ಹಿಂದೆ ತನ್ನ ಮಾವನನ್ನು ಹತ್ಯೆಗೈದ ಆರೋಪಿಯನ್ನು ಗುಂಡಿಕ್ಕಿ ಕೊಂದ ಅಪ್ರಾಪ್ತ!
ಸಾಂದರ್ಭಿಕ ಚಿತ್ರ
ಲಕ್ನೋ: ಉತ್ತರಪ್ರದೇಶದ ಮುರಾದ್‌ನಗರದಲ್ಲಿ, ಹದಿಹರಯದ ಬಾಲಕನೊಬ್ಬ 18 ವರ್ಷಗಳ ಹಿಂದೆ ತನ್ನ ಮಾವನನ್ನು ಕೊಂದಿರುವ ಆರೋಪ ಎದುರಿಸಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದಾನೆ ಹಾಗೂ ಬಳಿಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ಮೃತನನ್ನು 49 ವರ್ಷದ ಹಾಲಿನ ವ್ಯಾಪಾರಿ ಇಮ್ರಾನ್ ಎಂಬುದಾಗಿ ಗುರುತಿಸಲಾಗಿದೆ. ಇಮ್ರಾನ್ 2007ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಬಳಿಕ ಇಮ್ರಾನ್ ತನ್ನ ಶಿಕ್ಷೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಹೋಗಿದ್ದನು. 2017ರಿಂದ ಆತ ಜಾಮೀನಿನಲ್ಲಿ ಹೊರಗಿದ್ದ.
ಅಪ್ರಾಪ್ತ ವಯಸ್ಸಿನ ಬಾಲಕನು ಶನಿವಾರ ತನ್ನ ಮಾವನ ಕೊಲೆಗೆ ಪ್ರತೀಕಾರವಾಗಿ ಇಮ್ರಾನ್‌ನನ್ನು ಗುಂಡಿಕ್ಕಿ ಹತ್ಯೆಗೈದಿರುವುದು ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ ಎಂದು ಪೊಲೀಸರು ತಿಳಿಸಿದರು.
ಮುರಾದ್‌ನಗರದ ಒಲಿಂಪಿಕ್ ಜಂಕ್ಷನ್‌ನಲ್ಲಿ ಇಮ್ರಾನ್ ತನ್ನ ಗೆಳೆಯನ ಸೈಕಲ್ ಅಂಗಡಿಯಲ್ಲಿ ಕುಳಿತಿದ್ದಾಗ, ಆರೋಪಿ ಬಾಲಕನು ಅಲ್ಲಿಗೆ ಬಂದು ಮೂರು ಸುತ್ತು ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಗುಂಡುಗಳು ಇಮ್ರಾನ್‌ನ ಎದೆಯನ್ನು ಹೊಕ್ಕವು ಹಾಗೂ ಆತ ತಕ್ಷಣ ಕುಸಿದು ಬಿದ್ದನು ಎಂದು ಪೊಲೀಸರು ತಿಳಿಸಿದರು.