×
Ad

ಬಿಜೆಪಿ ‘ಒಂದು ದೇಶ, ಒಬ್ಬ ಉದ್ಯಮಿ’ ಕಾರ್ಯಸೂಚಿಗೆ ಕುಮ್ಮಕ್ಕು ನೀಡುತ್ತಿದೆ: ಅಖಿಲೇಶ್ ಯಾದವ್ ಆರೋಪ

ಬಿಜೆಪಿ ಏಕಸ್ವಾಮ್ಯವನ್ನು ಉತ್ತೇಜಿಸುತ್ತಿದೆ ಎಂದು ಎಸ್ಪಿ ಮುಖ್ಯಸ್ಥ

Update: 2025-12-21 23:54 IST

ಅಖಿಲೇಶ್ ಯಾದವ್ |Photo Credit : PTI

ಲಕ್ನೊ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ‘ಒಂದು ದೇಶ, ಒಬ್ಬ ಉದ್ಯಮಿ’ ಕಾರ್ಯಸೂಚಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ರವಿವಾರ ಆರೋಪಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಜೆಪಿಯು ದೇಶದ ಆರ್ಥಿಕತೆ ಮತ್ತು ರಾಜಕೀಯ ಜೀವನದಲ್ಲಿ ವ್ಯವಸ್ಥಿತವಾಗಿ ಏಕಸ್ವಾಮ್ಯವನ್ನು ಉತ್ತೇಜಿಸುತ್ತಿದೆ ಎಂದೂ ದೂರಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, ರಾಜಕೀಯ ನಿಧಿಯನ್ನು ಖಾತರಿಪಡಿಸಲು ಕೆಲವೇ ಉದ್ಯಮಿಗಳ ಕೈಯಲ್ಲಿ ವ್ಯಾಪಾರ ವಹಿವಾಟುಗಳು ಕೇಂದ್ರೀಕೃತವಾಗುವುದನ್ನು ಬಿಜೆಪಿ ಬಯಸುತ್ತಿದೆ ಎಂದು ಆರೋಪಿಸಿದ್ದಾರೆ.

“ಒಂದು ದೇಶ, ಓರ್ವ ಉದ್ಯಮಿ”ಯಾಗುವತ್ತ ಸಾಗುವುದು ಬಿಜೆಪಿ ಸರಕಾರದ ಗುಪ್ತ ಕಾರ್ಯಸೂಚಿಯಾಗಿದೆ” ಎಂದೂ ಅವರು ಟೀಕಿಸಿದ್ದಾರೆ.

“ಒಂದು ಉದ್ಯಮ, ಒಂದು ದೇಣಿಗೆ” ಮೂಲದ ತತ್ವದಡಿ ಆಯ್ದ ಕೆಲವೇ ಉದ್ಯಮಿಗಳ ಹಿಡಿತಕ್ಕೆ ದೇಶದ ಆರ್ಥಿಕತೆಯ ಎಲ್ಲ ವಲಯವನ್ನೂ ತರಲು ಬಯಸುತ್ತಿದ್ದಾರೆ. ಆ ಮೂಲಕ, ದೇಣಿಗೆಗಾಗಿ ಅವರು ವಿವಿಧ ಸ್ಥಳಗಳಿಗೆ ತೆರಳುವ ಅಗತ್ಯ ಬೀಳುವುದಿಲ್ಲ” ಎಂದೂ ಅವರು ವ್ಯಂಗ್ಯವಾಡಿದ್ದಾರೆ.

ರಾಜಕೀಯ ಮತ್ತು ಹಣಕಾಸು ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಆಡಳಿತಾರೂಢ ಪಕ್ಷವು ತನ್ನ ಹಣದ ದಾಹವನ್ನು ಆದ್ಯತೆಯನ್ನಾಗಿಸಿಕೊಂಡಿದ್ದು, ತನ್ನ ವಿಧೇಯ ಕೈಗೊಂಬೆಗಳನ್ನು ಸರಕಾರ ಮತ್ತು ಪಕ್ಷದ ಸಂಘಟನೆಯಲ್ಲಿ ಕೂರಿಸುತ್ತಿದೆ ಎಂದೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆದ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News