ವಾಮಾಚಾರಕ್ಕೆ ಬಾಲಕಿ ಕೊಲೆ ; ನಾಲ್ವರ ಸೆರೆ
ಬೆಂಗಳೂರು, ಮಾ.5: ವಾಮಾಚಾರಕ್ಕೆ ಹತ್ತು ವರ್ಷದ ಬಾಲಕಿಯೊಬ್ಬಳನ್ನು ಕೊಲೆಗೈದ ಆರೋಪದಲ್ಲಿ ನಾಲ್ವರನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ.
ಮಾಗಡಿ ತಾಲೂಕಿನ ಸುಣ್ಣಕಲ್ ಗ್ರಾಮದ ನಿವಾಸಿ ಆಯಿಶಾ. ಬಿ ಎಂಬಾಕೆಯನ್ನು ಕೊಲೆಗೈದ ಆರೋಪದಲ್ಲಿ ಮುಹಮ್ಮದ್ ವಾಸಿಲ್(42), ರಾಶೀದುನ್ನಿಸಾ, ಮಾಟಗಾತಿ ನಸೀಮ ತಾಜ್ ಮತ್ತು ಹದಿನೇಳರ ಹರೆಯದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಬಾಲಕಿ ಆಯಿಶಾ. ಬಿ ಮೃತದೇಹ ಹೊಸಹಳ್ಳಿ ಕಾಲುವೆಯೊಂದರಲ್ಲಿ ಶುಕ್ರವಾರ ಪತ್ತೆಯಾಗಿತ್ತು. ಬಾಲಕಿಯ ಕತ್ತನ್ನು ಕೊಯ್ಯಲಾಗಿತ್ತು. ಆಕೆಯ ಕಾಲಿಗೆ ನಿಂಬೆಹಣ್ಣನ್ನು ಕಟ್ಟಲಾಗಿತ್ತು. ಬಾಲಕಿಯನ್ನು ವಾಮಚಾರಕ್ಕೆ ಬಳಸಿ ಕೊಲೆಗೈದಿರುವ ಗುಮಾನಿ ವ್ಯಕ್ತವಾಗಿತ್ತು.
ನಾಲ್ಕನೇ ತರಗತಿ ಓದುತ್ತಿದ್ದ ಬಾಲಕಿ ಆಯಿಷಾ ಮಾರ್ಚ್ 1 ರಾತ್ರಿ 8 ಗಂಟೆ ಸುಮಾರಿಗೆ ಕಾಣೆಯಾಗಿದ್ದಳು.ಈ ಬಗ್ಗೆ ಆಕೆಯ ಹೆತ್ತವರು ಮಾಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಾಲಕಿಯನ್ನು ಮನೆಯ ಪಕ್ಕದಿಂದ ಅಪಹರಿಸಿದ ಹಂತಕರು ವಾಮಚಾರಕ್ಕೆ ಬಳಸಿ ಕೊಲೆಗೈದು ಬಳಿಕ ಹೊಸಹಳ್ಳಿ ರಸ್ತೆಯ ಪಕ್ಕದ ಕಾಲುವೆಗೆ ಎಸೆದಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿತ್ತು.