ಸಚಿವೆ ಉಮಾಶ್ರೀಯಿಂದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಘೋಷಣೆ
ಬೆಂಗಳೂರು, ಮಾ. 6: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನೀಡುವ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’ಗೆ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಿದ 8 ವ್ಯಕ್ತಿಗಳು, 5 ಸಂಸ್ಥೆಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 9 ಮಂದಿ, ಓರ್ವ ವೀರ ಮಹಿಳೆ ಸೇರಿದಂತೆ ಒಟ್ಟು 23 ಮಂದಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಪ್ರಶಸ್ತಿ ಪ್ರಕಟಿಸಿರುವ ಸಚಿವರು, ಮಾ.8ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ವೀರ ಮಹಿಳೆ: ‘ವೀರ ಮಹಿಳೆ’ ಪ್ರಶಸ್ತಿಗೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಗಣೇಶ್‌ನಗರದ ನಿವಾಸಿ ಡಿ.ಎನ್.ಕೃಪಾ ಆಯ್ಕೆಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಬೆಂಗಳೂರಿನ ಎ.ಜಿ.ರತ್ನ ಕಾಳೇಗೌಡ ಹಾಗೂ ಮಂಡ್ಯದ ಡಾ.ಸುಶೀಲ ಹೊನ್ನೇಗೌಡ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಕ್ರೀಡಾ ಕ್ಷೇತ್ರದಲ್ಲಿ ಅನನ್ಯ ಸಾಧನೆಗೈದ ಹಾಸನ ಜಿಲ್ಲೆ ಎಚ್.ಕೆ.ಪುಷ್ಪಾ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಜಯಪುರದ ಭುವನೇಶ್ವರಿ ಚಂದ್ರಶೇಖರಯ್ಯ, ಕಲಾ ಕ್ಷೇತ್ರದಲ್ಲಿ ಸಾಧನೆಗೈದ ಬೆಂಗಳೂರು ನಗರ ಜಿಲ್ಲೆಯ ಡಾ.ಸುಪರ್ಣಾ ರವಿಶಂಕರ್, ವೃಂದಾ ಎಸ್.ರಾವ್, ಶಾಂತಿ ವಾಸು, ಬಾಗಲಕೋಟೆ ಜಿಲ್ಲೆಯ ಪ್ರೇಮಾ ಬಸವರಾಜ ಪಾಟೀಲ, ಹಾಸನ ಜಿಲ್ಲೆಯ ರೋಹಿಣಿ ಅನಂತ್ ಆಯ್ಕೆಯಾಗಿದ್ದಾರೆ ಎಂದು ಉಮಾಶ್ರೀ ತಿಳಿಸಿದ್ದಾರೆ.
ಸಂಸ್ಥೆಗಳು: ಆಕ್ಷನ್ ಫಾರ್ ಸೋಶಿಯಲ್ ಅಂಡ್ ಎಜುಕೇಷನಲ್ ಡೆವೆಲಪ್ ಮೆಂಟ್ ಅಸೋಸಿಯೇಷನ್-ಗೌರಿಬಿದನೂರು, ಚರಕ ಮಹಿಳಾ ವಿವಿಧೋದ್ಧೇಶ ಕೈಗಾರಿಕಾ ಸಹಕಾರ ಸಂಘ ನಿಯಮಿತ-ಸಾಗರ,ಕನಕ ಶ್ರೀ ಮಹಿಳಾ ಸಂಘ- ಕಡೂರು, ಸರ್ವೋದಯ ಮಹಿಳಾ ಮಂಡಳ ಎಸ್ಸಿ-ಎಸ್ಟಿ ಅಭಿವೃದ್ಧಿ ಸಂಸ್ಥೆ ಡಂಬಳ- ಮುಂಡರಗಿ ಹಾಗೂ ಪ್ರಗತಿ ಸಮಾಜ ಸೇವಾ ಸಂಸ್ಥೆ-ಸಿರುಗುಪ್ಪ ಬಳ್ಳಾರಿ.
ವ್ಯಕ್ತಿಗಳು: ಬೆಂಗಳೂರಿನ ಮಧುರಾ ಅಶೋಕ್ ಕುಮಾರ್, ಡಾ.ಪದ್ಮಿನಿ ಪ್ರಸಾದ್, ಸೌಭಾಗ್ಯ ಈಶ್ವರಯ್ಯ, ಕೆ.ಎಸ್.ನಾಗವೇಣಿ(ಕೋಲಾರ), ಡಿ.ಎಸ್.ಕೋಕಿಲಾ (ಚಿತ್ರದುರ್ಗ), ಸಿ.ಲಲಿತಾ ಮಲ್ಲಪ್ಪ(ತುಮಕೂರು), ಉಮಾ ವೀರಭದ್ರಪ್ಪ (ದಾವಣಗೆರೆ), ಯುಗಾಂತ್ರಿ.ಎ.ದೇಶಮಾನ್ಯೆ (ಕಲಬುರರ್ಗಿ) ಆಯ್ಕೆಯಾಗಿದ್ದಾರೆ ಎಂದು ತಿಳಿಸಲಾಗಿದೆ.
ಅತ್ಯುತ್ತಮ ಸ್ತ್ರೀಶಕ್ತಿ ಗುಂಪು ವಿಭಾಗ: ಕರೇನಳ್ಳಮ್ಮ ಸ್ತ್ರೀಶಕ್ತಿ ಗುಂಪು- ಮಹದೇವಪುರ, ನೆಲಮಂಗಲ ಬೆಂ.ಗ್ರಾಮಾಂತರ ಜಿಲ್ಲೆ. ಕಲ್ಲಾಳಮ್ಮ ಸ್ತ್ರೀಶಕ್ತಿ ಗುಂಪು, ಮಾವಿನತೋಪು, ತಿಪಟೂರು, ಅಂಬಾಭವಾನಿ ಸ್ತ್ರೀಶಕ್ತಿ ಗುಂಪು ಹಡಗಲಿ ವಿಜಯಪುರ ಅತ್ಯುತ್ತಮ ಸ್ತ್ರೀಶಕ್ತಿ ಗುಂಪು ಪ್ರಶಸ್ತಿಗೆ ಆಯ್ಕೆಯಾಗಿದೆ. ಯಶೋಧರಮ್ಮ ದಾಸಪ್ಪವಿಭಾಗೀಯ ಮಟ್ಟದ ಪ್ರಶಸ್ತಿಗೆ ಲಕ್ಷ್ಮೀ ಸ್ತ್ರೀಶಕ್ತಿ ಗುಂಪು, ಚಿಕ್ಕಬ್ಯಾಲಕೆರೆ ಬೆಂಗಳೂರು ನಗರ ಜಿಲ್ಲೆ. ಲಕ್ಷ್ಮೀದೇವಿ ಸ್ತ್ರೀಶಕ್ತಿ ಗುಂಪು ಕುಪ್ಪೆ, ಕೆ.ಆರ್. ನಗರ ಮೈಸೂರು ಜಿಲ್ಲೆ. ಲಕ್ಷ್ಮೀದೇವಿ ಸ್ತ್ರೀಶಕ್ತಿ ಗುಂಪು ಹಳಿಂಗಳಿ ಜಮಖಂಡಿ ಬಾಗಲಕೋಟೆ ಜಿಲ್ಲೆ. ಭವಾನಿ ಸ್ತ್ರೀಶಕ್ತಿ ಗುಂಪು, ಬೆಳಮಗಿ, ಆಳಂದ ಕಲಬುರ್ಗಿ ಜಿಲ್ಲೆ.
ಅತ್ಯುತ್ತಮ ತಾಲ್ಲೂಕು ಒಕ್ಕೂಟ ಪ್ರಶಸ್ತಿಗೆ ಗುಬ್ಬಿ ತಾಲೂಕು ಸ್ತ್ರೀಶಕ್ತಿ ಒಕ್ಕೂಟ, ತುಮಕೂರು ಜಿಲ್ಲೆ. ಬೆಳ್ತಂಗಡಿ ತಾಲೂಕು, ಸ್ತ್ರೀಶಕ್ತಿ ಒಕ್ಕೂಟ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶಹಪುರ ತಾಲೂಕು ಸ್ತ್ರೀಶಕ್ತಿ ಒಕ್ಕೂಟ, ಯಾದಗಿರಿ ಜಿಲ್ಲೆ.
‘ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಹಿಳಾ ಅಭಿವೃದ್ಧಿ ನಿಗಮದಿಂದ ಸಮೃದ್ಧಿ ಮತ್ತು ಧನಶ್ರೀ ಯೋಜನೆಗಳ ಲೋಕಾರ್ಪಣೆ ಮಾಡುವ ಮೂಲಕ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಲಾಗುವುದು’
-ಉಮಾಶ್ರೀ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ