ಎಸೆಸೆಲ್ಸಿ ಪೂರ್ವಭಾವಿ ಪರೀಕ್ಷೆಗಳನ್ನು ಮಂಡಳಿಯೇ ನಿರ್ವಹಿಸಲಿ

Update: 2017-03-08 18:32 GMT

ಮಾನ್ಯರೆ,

ನಮ್ಮ ರಾಜ್ಯದಲ್ಲಿ ಪ್ರತಿವರ್ಷ 8ರಿಂದ 9ಲಕ್ಷ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯನ್ನು ಎದುರಿಸುತ್ತಿದ್ದು ಫೆಬ್ರವರಿ ತಿಂಗಳಿಂದ ಎಸೆಸೆಲ್ಸಿ ಪೂರ್ವಭಾವಿ ಪರೀಕ್ಷೆಗಳು ಆರಂಭಗೊಳ್ಳುತ್ತವೆ. ಶಾಲಾ ಹಂತದಲ್ಲಿ ಮತ್ತು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘವು ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯ ಮುಖ್ಯೋಪಾಧ್ಯಾಯರ ಸಂಘವು ರಾಜ್ಯಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸಲು ಬೇಕಾದ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಮುದ್ರಿಸಿ ಆಯಾ ಶಾಲೆಗಳಿಗೆ ಪ್ರತೀ ವಿದ್ಯಾರ್ಥಿಗೆ 30 ರೂ.ನಂತೆ ಹಣವನ್ನು ಪಡೆಯಲಾಗುತ್ತದೆ. ಈ ನಿಟ್ಟಿನಲ್ಲಿ ಪ್ರತೀ ಶಾಲೆಯಿಂದ ಬೇಡಿಕೆ ಪತ್ರದೊಂದಿಗೆ ಹಣವನ್ನು ಕಳುಹಿಸಲಾಗುತ್ತಿದೆ. ಇದರಲ್ಲಿ ಕೋಟ್ಯಂತರ ರೂ. ವ್ಯವಹಾರ ನಡೆಯುತ್ತಿದೆ. ಆದರೆ ಕೆಲ ಶಾಲೆಗಳಿಗೆ ಹಣತುಂಬಿದ್ದಾಗ್ಯೂ ನಿಗದಿತ ಪ್ರಮಾಣದಲ್ಲಿ ಉತ್ತರ ಪತ್ರಿಕೆಯನ್ನು ಕಳುಹಿಸದೆ ಜಿಲ್ಲಾ ಹಾಗೂ ರಾಜ್ಯ ಸಂಘಗಳು ವಂಚಿಸುತ್ತಿವೆ.

ಈ ವರ್ಷ ಬೆಳಗಾವಿ ವಿಭಾಗಮಟ್ಟದಲ್ಲಿ ಪ್ರತ್ಯೇಕ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಿದ್ದು ಹಲವಾರು ಶಾಲೆಗಳಿಗೆ ಉತ್ತರಪತ್ರಿಕೆ ಹಾಗೂ ಪ್ರಶ್ನೆ ಪತ್ರಿಕೆ ಕಳುಹಿಸದೆ ಕೊನೆಯ ಹಂತದವರೆಗೂ ವಿದ್ಯಾರ್ಥಿ ಹಾಗೂ ಶಾಲಾ ಮುಖ್ಯಸ್ಥರು ಗೊಂದಲದಲ್ಲಿ ಸಿಲುಕುವಂತೆ ಮಾಡಿದ್ದಲ್ಲದೆ ಹಣವನ್ನು ಪಡೆದುಕೊಂಡರೂ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಪರೀಕ್ಷಾ ಸಾಮಗ್ರಿಗಳನ್ನು ರವಾನಿಸದೆ ವಂಚಿಸಿದ್ದಾರೆ. ಅಲ್ಲದೆ ರಾಜ್ಯಮಟ್ಟದಲ್ಲಿ ದಿ. 06. 03. 2017ರಿಂದ ನಡೆಯಬೇಕಾಗಿದ್ದ ಪೂರ್ವಭಾವಿ ಪರೀಕ್ಷೆಯ ಉತ್ತರ ಹಾಗೂ ಪ್ರಶ್ನೆಪತ್ರಿಕೆಗಳನ್ನು ಸರಿಯಾಗಿ ಎಸೆಸೆಲ್ಸಿ ಪರೀಕ್ಷಾ ಮಂಡಳಿಯ ಮಾದರಿಯಲ್ಲಿ ಕಳುಹಿಸದೆ ಹಳೆಯ ಮಾದರಿಯ ಉತ್ತರಸಹಿತ ಪ್ರಶ್ನೆಪತ್ರಿಕೆಗಳನ್ನು ಕಳುಹಿಸಿದ್ದು, ಈಗ ಮಾನ್ಯ ಆಯುಕ್ತರು ಅದನ್ನು ರದ್ದುಗೊಳಿಸಿ ಆದೇಶವನ್ನು ನೀಡಿದ್ದಾರೆ.ಇದರಿಂದಾಗಿ ವಿದ್ಯಾರ್ಥಿಗಳು ಹಣ ನೀಡಿಯೂ ಪರೀಕ್ಷೆಯನ್ನು ಬರೆಯಲಾಗದ ಸ್ಥಿತಿಯಲ್ಲಿದ್ದಾರೆ. ಅಲ್ಲದೆ ಈಗಾಗಲೆ ಹಣವನ್ನು ಭರಿಸಿದ ಶಾಲೆಗಳು ಮತ್ತೆ ಹಣದ ಹೊರೆಯನ್ನು ಹೊರಬೇಕಾಗಿ ಬಂದಿದೆ.

ಆದ್ದರಿಂದ ಮುಂದಿನ ವರ್ಷಗಳಲ್ಲಿ ಎಸೆಸೆಲ್ಸಿ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸುವ ಹೊಣೆಗಾರಿಕೆಯನ್ನು ವಾರ್ಷಿಕ ಪರೀಕ್ಷೆಯ ಮಾದರಿಯಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೇ ನಿರ್ವಹಿಸಿ ವಿದ್ಯಾರ್ಥಿಗಳ ಗೊಂದಲಗಳಿಗೆ ತೆರೆಎಳೆಯ ಬೇಕೆಂದು ವಿನಂತಿ.

Writer - ಎಂ. ಆರ್. ಮಾನ್ವಿ, ಭಟ್ಕಳ

contributor

Editor - ಎಂ. ಆರ್. ಮಾನ್ವಿ, ಭಟ್ಕಳ

contributor

Similar News