ಬೆಂಗಳೂರು : ಜಾಹೀರಾತು ಫಲಕ ಹಾಕಲು 17ಕ್ಕೂ ಹೆಚ್ಚು ಮರಗಳಿಗೆ ಆ್ಯಸಿಡ್ ಹಾಕಿ ನಾಶ !

Update: 2017-03-10 15:33 GMT

ಬೆಂಗಳೂರು, ಮಾ.10: ಮಾರತ್ ಹಳ್ಳಿ ಹೊರವರ್ತುಲ ರಸ್ತೆಯಲ್ಲಿ 17ಕ್ಕೂ ಹೆಚ್ಚು ಊರ್ವಶಿ ಮರಗಳಿಗೆ ಆ್ಯಸಿಡ್ ಹಾಕಿ ಒಣಗುವಂತೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವೊಂದು ಜಾಹೀರಾತು ಕಂಪೆನಿಗಳಿಗೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳುವಂತೆ ಪಾಲಿಕೆಯ ಆಯುಕ್ತರಿಗೆ ಬಿಬಿಎಂಪಿಯ ತೋಟಗಾರಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಸೂಚಿಸಿದ್ದಾರೆ. ಮಾ.10ರಂದು ಹೊರವರ್ತುಲ ರಸ್ತೆಯಲ್ಲಿ ಆ್ಯಸಿಡ್ ದಾಳಿಯಿಂದ ಸುಟ್ಟು ಹೋಗಿರುವ ಮರಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಈ ಭಾಗಗಳಲ್ಲಿ ಏರ್‌ಟೆಲ್ ಕಂಪೆನಿಯ ಐಫೋನ್ ಜಾಹೀರಾತು ಹಾಗೂ ಭಿಮಾ ಗೋಲ್ಡ್ ಸಂಸ್ಥೆಗೆ ಅನುಮತಿ ನೀಡಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಅಲ್ಲಿಯೇ ಇದ್ದ ಬಿಬಿಎಂಪಿಯ ಜಾಹೀರಾತು ವಿಭಾಗದ ಸಿಬ್ಬಂದಿಯನ್ನು ಕರೆದು ಭಿಮಾ ಗೋಲ್ಡ್ ಸಂಸ್ಥೆಯ ಜಾಹೀರಾತು ಫಲಕವನ್ನು ತೆರವುಗೊಳಿಸಿದರು. ನೈಲ್ ಎಂಟರ್‌ಪ್ರೈಸಸ್ ಸಂಸ್ಥೆಯು ಮಾರತ್‌ಹಳ್ಳಿ ರಿಂಗ್ ರಸ್ತೆಯಲ್ಲಿ ಬೃಹತ್ ಫಲಕವನ್ನು ಪ್ರದರ್ಶಿಸಿದೆ. ಇದು ಸಾರ್ವಜನಿಕರಿಗೆ ಕಾಣಬೇಕೆಂಬ ಉದ್ದೇಶದಿಂದ ಎತ್ತರವಾಗಿ ಬೆಳೆದಿದ್ದ ಮರವನ್ನು ಕತ್ತರಿಸಿದೆ. ಹಲವು ಮರಗಳಿಗೆ ಆ್ಯಸಿಡ್ ಹಾಕಲಾಗಿದ್ದು, ಮರಗಳು ಒಣಗಿಹೋಗಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಕಷ್ಟಪಟ್ಟು ಬೆಳೆಸಿದ್ದ ಮರಗಳನ್ನು ಕತ್ತರಿಸಿದವರ ಬಗ್ಗೆ ಕಂದಾಯ ಅಧಿಕಾರಿ ಹನುಮೇಗೌಡರನ್ನು ಪ್ರಶ್ನಿಸಿದರು. ಜನವರಿ ತಿಂಗಳಲ್ಲೇ ಜಾಹೀರಾತು ಫಲಕವನ್ನು ತೆರವುಗೊಳಿಸಿದ್ದರೂ ಮತ್ತೆ ಫಲಕವನ್ನು ಅನುಮತಿ ಪಡೆಯದೆ ಹಾಕಿದ್ದಾರೆ ಎಂದಾಗ ಜಾಹೀರಾತು ಫಲಕವನ್ನು ಕೂಡಲೇ ತೆರವುಗೊಳಿಸಲು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News