ಹಿಜಾಬ್ ಧರಿಸಿದ್ದಕ್ಕೆ ಪರೀಕ್ಷಾ ಕೊಠಡಿ ಪ್ರವೇಶ ನಿರಾಕರಣೆ; ಆರೋಪ

Update: 2017-03-10 16:02 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.10: ಹಿಜಾಬ್ ಧರಿಸಿದ್ದ ಕಾರಣಕ್ಕಾಗಿ ಪಿಯುಸಿ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೊಠಡಿ ಪ್ರವೇಶಕ್ಕೆ ಅವಕಾಶ ನೀಡದ ಘಟನೆಯು ನಗರದ ಕೆಂಪಾಪುರದಲ್ಲಿರುವ ಸಿಂಧಿ ಕಾಲೇಜಿನಲ್ಲಿ ಗುರುವಾರ ನಡೆದಿದೆ ಎಂದು ಆರೋಪಿಸಲಾಗಿದೆ.

ಜೀವಶಾಸ್ತ್ರ ಪರೀಕ್ಷೆ ಬರೆಯಲು ಪ್ರೆಸಿಡೆಂಸಿ ಕಾಲೇಜಿನ ಕೆಲ ವಿದ್ಯಾರ್ಥಿನಿಯರು ನಿಗದಿತ ಸಮಯಕ್ಕೆ ಸಿಂಧಿ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದಾರೆ. ಈ ವೇಳೆ ಪರೀಕ್ಷಾ ಸಿಬ್ಬಂದಿಯು ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದಿಟ್ಟು ಕೊಠಡಿ ಪ್ರವೇಶಿಸುವಂತೆ ಸೂಚನೆ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಪೋಷಕರು, ಸುಮಾರು 40 ನಿಮಿಷಗಳ ಕಾಲ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಆನಂತರ, ಕಾಲೇಜಿನ ಕೆಲ ಉಪನ್ಯಾಸಕರು ವಿದ್ಯಾರ್ಥಿನಿಯರ ಮನವೊಲಿಸಿ ಹಿಜಾಬ್ ತೆಗೆಸಿದ್ದಾರೆ. ಆದರೆ, ಪೂರ್ಣಪ್ರಮಾಣದಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗದೆ ಮಕ್ಕಳು ಆತಂಕಕ್ಕೆ ಒಳಗಾಗಿದಾ್ದರೆ ಎಂದು ಅಳಲು ತೋಡಿಕೊಂಡರು.

ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಲು ನಮಗೆ ಮುಜುಗರ ಆಗುತ್ತದೆ. ಆದುದರಿಂದ, ಕಾಲೇಜಿನಲ್ಲಿರುವ ಮಹಿಳಾ ಸಿಬ್ಬಂದಿಗಳನ್ನು ಕರೆಸಿ ನಮ್ಮ ತಪಾಸಣೆ ನಡೆಸಿ, ಆನಂತರ ಪರೀಕ್ಷೆ ಬರೆಯಲು ಅವಕಾಶ ನೀಡಿ ಎಂದು ವಿದ್ಯಾರ್ಥಿನಿಯರು ಮನವಿ ಮಾಡಿದರೂ, ಪರೀಕ್ಷಾ ಕೊಠಡಿಯ ಸಿಬ್ಬಂದಿ ಇದಕ್ಕೆ ಅವಕಾಶ ನೀಡಿಲ್ಲ ಎಂದು ಪೋಷಕರು ದೂರಿದರು.

ವಿಜ್ಞಾನದ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಪರೀಕ್ಷೆಗಳಿಗೆ ತಯಾರಿ ನಡೆಸಿರುತ್ತಾರೆ. ಪರೀಕ್ಷೆಯ ಸಮಯದ ಒಂದೊಂದು ನಿಮಿಷವೂ ಅತ್ಯಮೂಲ್ಯ. ಅಂತಹದರಲ್ಲಿ, ಸುಮಾರು 40 ನಿಮಿಷಗಳ ಕಾಲ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದು ಖಂಡನಾರ್ಹ ಎಂದು ಅವರು ಕಿಡಿಗಾರಿದರು.

ಪರೀಕ್ಷಾ ಕೇಂದ್ರವಿರುವ ಕಾಲೇಜಿನ ಆಡಳಿತ ಮಂಡಳಿಯೂ ವಿದ್ಯಾರ್ಥಿನಿಯರಿಗೆ ವಸ್ತ್ರಸಂಹಿತೆ ಕುರಿತು ಯಾವುದೆ ಮಾಹಿತಿ ನೀಡಿರಲಿಲ್ಲ. ವಿದ್ಯಾರ್ಥಿನಿಯರಿಗೆ ಹಿಜಾಬ್ ಕಾರಣಕ್ಕೆ ಪರೀಕ್ಷೆ ಬರೆಯಲು ಅವಕಾಶ ನೀಡದಿರುವ ಕ್ರಮ ಒಪ್ಪುವಂತದ್ದಲ್ಲ.

ಮಾ.14ರಂದು ಗಣಿತ ಪರೀಕ್ಷೆಯಿದೆ. ಆಗಲೂ, ಪರೀಕ್ಷಾ ಸಿಬ್ಬಂದಿ ಇದೇ ಧೋರಣೆ ಅನುಸರಿಸುವ ಸಾಧ್ಯತೆಗಳಿವೆ. ಆದುದರಿಂದ, ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ಸೇಠ್‌ಗೆ ದೂರು ಸಲ್ಲಿಸುವುದಾಗಿ ಪೋಷಕರು ಹೇಳಿದರು.


ಹಿಜಾಬ್ ಧರಿಸಿದ ಕಾರಣಕ್ಕಾಗಿ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೇಂದ್ರ ಪ್ರವೇಶ ಮಾಡಲು ಅವಕಾಶ ನಿರಾಕರಿಸುವಂತಿಲ್ಲ. ಕೆಂಪಾಪುರದ ಸಿಂಧಿ ಕಾಲೇಜಿನ ಪ್ರಕರಣ ನನ್ನ ಗಮನಕ್ಕೆ ಬಂದ ಕೂಡಲೆ, ರಾಜ್ಯ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗಿದೆ. ಮುಂದೆ ಇಂತಹ ಘಟನೆ ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

-ತನ್ವೀರ್‌ಸೇಠ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News