ಔರಂಗಜೇಬ್: ನಾವು ನೋಡದ ಮುಖ

Update: 2022-06-10 10:32 GMT
ಆಡ್ರೆ ಟ್ರಶ್ಕ್ / ಔರಂಗಜೇಬ್: ದ ಮ್ಯಾನ್ ಆ್ಯಂಡ್ ದ ಮಿಥ್’ ಕೃತಿ (Photo: firstpost.com)

‘‘ಜನಸಾಮಾನ್ಯರಲ್ಲಿ ಔರಂಗಜೇಬ್‌ನ ನೆನಪು ಕೇವಲ ಐತಿಹಾಸಿಕ ಚಕ್ರವರ್ತಿ ಎಂಬ ಮಬ್ಬು ಹೋಲಿಕೆಗಷ್ಟೇ ಸೀಮಿತ’’ ‘ಔರಂಗಜೇಬ್: ದ ಮ್ಯಾನ್ ಆ್ಯಂಡ್ ದ ಮಿಥ್’ ಕೃತಿಯ ಅಂತಿಮ ಭಾಗದಲ್ಲಿ ಆಡ್ರೆ ಟ್ರಶ್ಕ್ ಅಭಿಪ್ರಾಯಪಡುತ್ತಾರೆ. ಇದು ಅವರ ಇಡೀ ಕೃತಿಯ ಕೇಂದ್ರಬಿಂದು ಕೂಡಾ. ತೀರಾ ಚಿಕ್ಕ- ಚೊಕ್ಕ ಕೃತಿಯಲ್ಲಿ ಟ್ರಶ್ಕ್, ಔರಂಗಜೇಬ್ ಸುತ್ತಲಿನ ಮಿಥ್ಯೆಯನ್ನು, ಅದರಲ್ಲೂ ಕಳೆದ ಕೆಲ ಶತಮಾನಗಳಿಂದ ಜನಸಾಮಾನ್ಯರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಔರಂಗಜೇಬ್ ಬಗೆಗಿನ ತಪ್ಪುಕಲ್ಪನೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ.

ತಮ್ಮ ಪ್ರಮುಖ ಕೃತಿ ‘‘ಕಲ್ಚರ್ಸ್‌ ಆಫ್ ಎನ್‌ಕೌಂಟರ್ಸ್‌: ಸಾಂಕ್ರಿಟ್ ಅಟ್ ಮೊಘಲ್ ಕೋರ್ಟ್’’ ಮೂಲಕ ಮಧ್ಯಕಾಲೀನ ಭಾರತೀಯ ಇತಿಹಾಸ ಅಧ್ಯಯನ ಕ್ಷೇತ್ರದಲ್ಲಿ ಹೊಸ ದೃಷ್ಟಿ ಹರಿಸಿದ್ದಾರೆ. ಸಾಮಾನ್ಯವಾಗಿ ಮೊಘಲ್ ಸಾಮ್ರಾಜ್ಯ ಅದರಲ್ಲೂ ಮುಖ್ಯವಾಗಿ 1560ರಿಂದ 1660ರ ಅವಧಿಯಲ್ಲಿ (ಅಕ್ಬರ್, ಜಹಾಂಗೀರ್ ಹಾಗೂ ಶಹಜಹಾನ್ ಅವಧಿ) ಕೇವಲ ಸಂಸ್ಕೃತವನ್ನು ಪೋಷಣೆ ಮಾಡಿದ್ದು ಮಾತ್ರವಲ್ಲದೇ, ಸಂಸ್ಕೃತ ಸಂಸ್ಕೃತಿಯನ್ನು ತಮ್ಮ ಆಡಳಿತ ದೃಷ್ಟಿಕೋನದ ಭಾಗವಾಗಿ ಅಳವಡಿಸಿಕೊಂಡಿದ್ದರು ಎನ್ನುವುದನ್ನು ನಿರೂಪಿಸುತ್ತಾ ಹೋಗಿದ್ದಾರೆ. ಆಳ ಸಂಶೋಧನೆಗಳ ಮೂಲಕ ತಮ್ಮ ವಾದವನ್ನು ಪುಷ್ಟೀಕರಿಸಿದ್ದಾರೆ. ಈ ಕೃತಿ ಸ್ಪಷ್ಟವಾಗಿ ವೃತ್ತಿಪರ ಮಧ್ಯಕಾಲೀನ ಅಧ್ಯಯನ ಕೃತಿಯಾಗಿ ಹೊರಹೊಮ್ಮಿದೆ.

ಇಲ್ಲಿ ವಿಮರ್ಶೆಗೆ ಆಯ್ದುಕೊಂಡ ಕೃತಿ ಮೊದಲ ಕೃತಿಯ ಅರ್ಧದಷ್ಟು ಮಾತ್ರ ಇದ್ದರೂ, ಸಾಮಾನ್ಯ ಓದುಗರಿಗೆ ಹೇಳಿ ಮಾಡಿಸಿದಂತಿದೆ. ಯಾವುದೇ ಅಡಿಟಿಪ್ಪಣಿಗಳಿಲ್ಲದೇ, ಸಂಕೀರ್ಣ ವಾದಗಳಿಲ್ಲದೇ ಲಘು ಓದಿಗೆ ಪ್ರಶಸ್ತ ಕೃತಿಯಾಗಿದೆ. ಇತಿಹಾಸಕಾರರಾಗಿ ಅವರು, ವೃತ್ತಿಪರ ಜ್ಞಾನ ಹಾಗೂ ಜನಸಾಮಾನ್ಯರ ಗ್ರಹಿಕೆಯ ನಡುವಿನ ಅಂತರದಿಂದ ವಿಚಲಿತರಾದಂತಿದೆ. ಆದರೆ ಈ ಅಂತರವನ್ನು ಪ್ರಾಮಾಣಿಕವಾಗಿ ಕನಿಷ್ಠಗೊಳಿಸುವ ಪ್ರಯತ್ನ ಮಾಡಿದ್ದಾರೆ. ‘‘ಬಹುಮುಖಿ ರಾಜ ಇಸ್ಲಾಂ ಜತೆ ಸಂಕೀರ್ಣ ಸಂಬಂಧ ಹೊಂದಿದ್ದ. ಅಷ್ಟಾಗಿಯೂ ತನ್ನ ಧರ್ಮವನ್ನು ನಿಂದಿಸುವ ಮಟ್ಟಕ್ಕೆ ಹೋಗಿಲ್ಲ. ವಾಸ್ತವವಾಗಿ ಔರಂಗಜೇಬ್ ಬಗ್ಗೆ ಸರಳವಾಗಿರುವ ಅಂಶ ಕಡಿಮೆ. ಶಕ್ತಿ, ನ್ಯಾಯದ ದೃಷ್ಟಿಕೋನ ಹಾಗೂ ಸಾಮ್ರಾಜ್ಯ ವಿಸ್ತರಣೆಗೆ ತನ್ನೆಲ್ಲ ಗಮನ ಕೇಂದ್ರೀಕರಿಸಿದ್ದ ರಾಜ. ಅದ್ಭುತ ಪ್ರತಿಭೆೆಯ ಆದರೆ ಅಷ್ಟೇ ಲೋಪಗಳನ್ನು ಹೊಂದಿದ್ದ ಚಕ್ರವರ್ತಿ. ಮೊಘಲ್ ಸಾಮ್ರಾಜ್ಯವನ್ನು ಶ್ರೇಷ್ಠತೆಯ ತುತ್ತತುದಿವರೆಗೆ ಬೆಳೆಸಿದಂತೆಯೇ ಅದರ ವಿಭಜನೆಗೂ ಕಾರಣನಾದ. ಯಾವುದೇ ಒಂದು ಪ್ರತ್ಯೇಕ ಲಕ್ಷಣ ಅಥವಾ ಕ್ರಿಯೆಯಿಂದ ಔರಂಗಜೇಬನ ಸಮಗ್ರ ವ್ಯಕ್ತಿತ್ವವನ್ನು ಹಿಡಿದಿಡಲು ಸಾಧ್ಯವಿಲ್ಲ’’.

ಇದು ವೃತ್ತಿಪರ ಅಂದಾಜು ಹಾಗೂ ರಾಜನ ಬಗೆಗಿನ ಜನಸಾಮಾನ್ಯರ ಕಲ್ಪನೆಯ ನಡುವಿನ ಅಂತರವನ್ನು ಕನಿಷ್ಠಗೊಳಿಸುವಲ್ಲಿ ಸಮಸ್ಯೆಯಾಗಿ ಪರಿಣಮಿಸಿದೆ. ಇತಿಹಾಸಕಾರನೊಬ್ಬ ರಾಜನ ಆಡಳಿತವನ್ನು ನಿರಂತರವಾಗಿ ಸಮಗ್ರ ಸಂಕೀರ್ಣ ಹಾಗೂ ಪರಸ್ಪರ ವಿರೋಧಾಭಾಸದ ಸಂವಾದದ ಆಧಾರದಲ್ಲಿ ಚಿತ್ರಿಸುತ್ತಾ ಹೋಗುತ್ತಾನೆ. ಇದರಲ್ಲಿ ರಾಜಕೀಯ, ಆಡಳಿತಾತ್ಮಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ, ಪಂಗಡ ಹೀಗೆ ವಿವಿಧ ಆಯಾಮಗಳನ್ನು ಪರಿಗಣಿಸಬೇಕಾಗುತ್ತದೆ. ಆದರೆ ಜನಸಾಮಾನ್ಯರ ಬಿತ್ತಿಪಟಲದಲ್ಲಿ, ಆ ರಾಜನ ಏಕೈಕ ಗುಣಲಕ್ಷಣವನ್ನು ಮೂಡಿಸಿ, ಅದು ಅಚ್ಚಳಿಯದಂತೆ ಮಾಡಲಾಗುತ್ತದೆ ಹಾಗೂ ಔರಂಗಜೇಬನ ಆಡಳಿತದ ಬಗೆಗಿನ ಇತಿಹಾಸದಲ್ಲಿ ಇದೇ ಚಾಲನಾಶಕ್ತಿಯಾಗಿದೆ.

ಔರಂಗಜೇಬ ತಮ್ಮ ಸಹೋದರ ಹಾಗೂ ಪ್ರತಿಸ್ಪರ್ಧಿ ದಾರಾ ಶುಕೋನ್ ಜತೆ ನಡೆಸಿದ ಯುದ್ಧ ಸಂಪ್ರದಾಯವಾದ ಹಾಗೂ ಉದಾರೀಕರಣದ ನಡುವಿನ ಸಂಘರ್ಷವಲ್ಲ; ಇದಲ್ಲದೇ ಇವರಿಬ್ಬರ ಬೆಂಬಲಿಗರು ಕೂಡಾ ಸಂಪ್ರದಾಯವಾದಿಗಳು ಹಾಗೂ ಉದಾರವಾದಿಗಳು ಅಥವಾ ಮುಸ್ಲಿಮರು ಮತ್ತು ಹಿಂದೂಗಳಾಗಿರಲಿಲ್ಲ. ಎಂ.ಅಕ್ಬರ್ ಅಲಿ ಅವರು ತಮ್ಮ ‘‘ಮೊಘಲ್ ನೊಬಿಲಿಟಿ ಅಂಡರ್ ಔರಂಗಜೇಬ್’’ ಕೃತಿಯಲ್ಲಿ (1966) ಇದನ್ನು ನಿರೂಪಿಸಿದ್ದಾರೆ. ಔರಂಗಜೇಬ್ 21 ಮಂದಿ ಉನ್ನತ ಮಟ್ಟದ ಹಿಂದೂ ಧಾರ್ಮಿಕ ಮುಖಂಡರ ಬೆಂಬಲ ಹೊಂದಿದ್ದ. ಇವರಲ್ಲಿ ರಜಪೂತ ರಾಜ ಜೈಸಿಂಗ್ ಹಾಗೂ ಜಸ್ವಂತ್ ಸಿಂಗ್ ಕೂಡಾ ಸೇರಿದ್ದರು. ಅಂತೆಯೇ ದಾದಾ 24 ಮಂದಿಯ ಬೆಂಬಲ ಗಳಿಸಿದ್ದ.

ಔರಂಗಜೇಬ್ ತಮ್ಮ ಆಸ್ಥಾನದಿಂದ ಅಥವಾ ಆಡಳಿತ ವ್ಯವಸ್ಥೆಯಿಂದ ಹಿಂದೂ ಹಾಗೂ ಶಿಯಾಗಳನ್ನು ಕಿತ್ತೆಸೆದಿರಲಿಲ್ಲ ಎನ್ನುವ ಬಗ್ಗೆ ಇತಿಹಾಸಕಾರರಲ್ಲಿ ಸಹಮತ ಇದೆ. ಔರಂಗಜೇಬನ ಅತ್ಯುನ್ನತ ಹಂತದಲ್ಲಿದ್ದ ಹಿಂದೂಗಳ ಸಂಖ್ಯೆ ಮೊಘಲ್ ಇತಿಹಾಸದಲ್ಲೇ ಅತ್ಯಧಿಕ; ಆತ ಕಾಶಿ ಹಾಗೂ ಮಥುರಾ ಸೇರಿದಂತೆ ಹಲವಾರು ದೇವಸ್ಥಾನಗಳನ್ನು ಧ್ವಂಸಗೊಳಿಸಿ ಅವುಗಳ ಅವಶೇಷಗಳಿಂದ ಮಸೀದಿ ನಿರ್ಮಿಸಲು ಆದೇಶ ನೀಡಿದ್ದರೂ, ಆತ ಇತರ ಹಲವು ದೇವಸ್ಥಾನಗಳಿಗೆ, ಮಠಗಳಿಗೆ ಹಾಗೂ ಬ್ರಾಹ್ಮಣರಿಗೆ ಭೂಮಿ ಹಾಗೂ ನಗದನ್ನು ದಾನವಾಗಿ ನೀಡಿದ್ದನ್ನು ಇತಿಹಾಸ ಕೃತಿಗಳಲ್ಲಿ ಪದೇ ಪದೇ ನೆನಪಿಸಲಾಗಿದೆ. ಔರಂಗಜೇಬ್ ಹಿಂದಿಯಲ್ಲಿ ಬರೆದ ಕವಿತೆಯೊಂದಲ್ಲಿ ವಿಷ್ಣು, ಬ್ರಹ್ಮ ಹಾಗೂ ಮಹೇಶ್ವರನ ಗುಣಗಾನ ಮಾಡಿದ್ದಾನೆ. (ಮೆನೇಜರ್ ಪಾಂಡೆ, ಮೊಘಲ್ ಬಾದಶಹಾನ್ ಕಿ ಹಿಂದಿ ಕವಿತಾ ಕೃತಿ ನೋಡಿ).

ಸ್ಪಷ್ಟವಾಗಿ ಹೇಳಬೇಕೆಂದರೆ ಬಹುಮುಖಿ ವ್ಯಕ್ತಿತ್ವದ ರಾಜ ಔರಂಗಜೇಬನನ್ನು ವೈಯಕ್ತಿಕ/ ಧಾರ್ಮಿಕ ಹೀಗೆ ಒಂದೇ ಅಂಶಕ್ಕೆ ಸೀಮಿತಗೊಳಿಸಲಾಗಿದೆ. ವಾಸ್ತವವೆಂದರೆ ಯಾವ ರಾಜನನ್ನೂ ಹೀಗೆ ಮಾಡಿಲ್ಲ. ಪ್ರತೀ ರಾಜನೂ ಬಹುಮುಖಿ, ವೈರುದ್ಧ್ಯಗಳ ಆಯ್ಕೆಯನ್ನು ಹೊಂದಿದ್ದರು. ಇವುಗಳ ನಡುವೆ ಸಮತೋಲನವನ್ನು ಕಾಣುವುದು ಅನಿವಾರ್ಯವಾಗಿತ್ತು. ಕೆಲವೊಮ್ಮೆ ಈ ಸಮತೋಲನ ಯಶಸ್ವಿಯಾದರೆ ಮತ್ತೆ ಕೆಲವು ಬಾರಿ ವಿಫಲವಾಗುತ್ತಿತ್ತು.

ಇದನ್ನು ವಿವರಿಸಲು ನಾವು 17ನೆ ಶತಮಾನದಷ್ಟು ಹಿಂದಕ್ಕೆ ಹೋಗಬೇಕಿಲ್ಲ. ನಮ್ಮ ಸ್ಮತಿಪಟಲದಲ್ಲಿ ಇತ್ತೀಚಿನವರಾದ ಮಾಜಿ ಪ್ರಧಾನಿ ರಾಜೀವ್‌ಗಾಂಧಿಯವರ ನಿದರ್ಶನವನ್ನೇ ತೆಗೆದುಕೊಳ್ಳೋಣ. ಇವರು ಶಹಾ ಬಾಬು ಪ್ರಕರಣದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರಿಂದ, ರಾಮಜನ್ಮಭೂಮಿ ವಿವಾದದಲ್ಲಿ ಹಿಂದೂ ಉಗ್ರವಾದಿಗಳಿಂದ ಪರಸ್ಪರ ವೈರುದ್ಧ್ಯದ ಒತ್ತಡವನ್ನು ಏಕಕಾಲಕ್ಕೆ ಎದುರಿಸಿದರೂ ಅದನ್ನು ಏಕಕಾಲಕ್ಕೆ ನಿಭಾಯಿಸುವ ಪ್ರಯತ್ನ ಮಾಡಿದರು. ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ. ಔರಂಗಜೇಬ್ ಕೂಡಾ ಹಾಗೆಯೇ. ಆದರೆ ಪರಸ್ಪರ ಪೈಪೋಟಿಯ ಎರಡು ಬಣಗಳನ್ನು ಏಕಕಾಲಕ್ಕೆ ನಿಭಾಯಿಸುವ ಪ್ರಯತ್ನವನ್ನಂತೂ ಇಬ್ಬರೂ ಮಾಡಿದ್ದರು.

ಇದು ಜನಸಾಮಾನ್ಯರ ವಾದಕ್ಕೆ ತೀರಾ ಸಂಕೀರ್ಣ ವಿಚಾರವೇ? ಭಾಗಶಃ ಹೌದು. ಏಕೆಂದರೆ ಇದು ಒಂದು ನಿರ್ದಿಷ್ಟ, ಬದಲಾವಣೆಯಾಗದ ಗುಣಲಕ್ಷಣದ ಚಿತ್ರಣಕ್ಕೆ ಇದು ಒಗ್ಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇದು ವರ್ತಮಾನವನ್ನು ರೂಪಿಸುವ ಗತಕಾಲಕ್ಕಿಂತ ಭಿನ್ನವಾಗಿ ಪ್ರಸ್ತುತ ಘಟನಾವಳಿಗಳೇ ಗತಕಾಲವನ್ನು ಚಿತ್ರಿಸುವಂತಿದೆ. ಇಂದಿನ ರಾಜಕೀಯ ಸಂಘರ್ಷಗಳು ಗತಕಾಲದ ಚಿತ್ರಣವನ್ನು ಬಿಂಬಿಸಲು ಹೊರಟಿದೆ. ಔರಂಗಝೇಬನನ್ನು ಭೀಮಸೇನ್, ಈಶ್ವರ್ ದಾಸ್ ಸೇರಿದಂತೆ ಹಲವು ಮಂದಿ ಹಿಂದೂ ಇತಿಹಾಸಕಾರರನ್ನೂ ಒಳಗೊಂಡು ಆ ಕಾಲದ ಇತಿಹಾಸಕಾರರೇ ಉಗ್ರವಾದಿ ಧಾರ್ಮಿಕ ಮನೋಭಾವ ಹೊಂದಿದ್ದ ವ್ಯಕ್ತಿ ಎಂದು ಚಿತ್ರಿಸಿಲ್ಲ. ಈ ಚಿತ್ರಣ ಮೂಡತೊಡಗಿದ್ದೇ 18ನೆ ಶತಮಾನದ ಉತ್ತರಾರ್ಧದಲ್ಲಿ. ಇದು 20ನೆ ಶತಮಾನದ ಸಾಮ್ರಾಜ್ಯಶಾಹಿ ಹಾಗೂ ರಾಷ್ಟ್ರೀಯವಾದಿ ಇತಿಹಾಸಶಾಸ್ತ್ರದಲ್ಲಿ ಗಟ್ಟಿಯಾಗುತ್ತಾ ಹೋಯಿತು.

ಇಂದು ಇಡೀ ಆಡಳಿತ ಪಕ್ಷವು ಸಾಮ್ರಾಜ್ಯಶಾಹಿ ನೀತಿಯಾದ ವಿಭಜಿಸಿ ಆಳುವ ತಂತ್ರವನ್ನು ಅನುಸರಿಸುತ್ತಿದೆ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ, ಮುಸ್ಲಿಮರನ್ನು ಇತರರು ಎಂದು ಭಾವಿಸುವ ಮೂಲಕ ತನ್ನ ಸಾಮಾಜಿಕ ದೃಷ್ಟಿಕೋನವನ್ನು ಪ್ರಚುರಪಡಿಸುತ್ತಿದೆ. ಇವರಿಗೆ ಎಲ್ಲ ದುಷ್ಟತನವನ್ನು ಒಳಗೊಂಡ ಭಯಾನಕ ಶಕ್ತಿಯಾಗಿ ಔರಂಗಜೇಬ್ ಕಾಣುತ್ತಾನೆ. ನಿಜ ಹೇಳಬೇಕೆಂದರೆ ಇತಿಹಾಸ ಎಲ್ಲರ ದಾಸ್ಯ ಮಾಡುತ್ತದೆ. ಇಲೆಕ್ಟ್ರಿಷಿಯನ್ ಅಥವಾ ದಂತವೈದ್ಯ ಇಲ್ಲವೇ ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಪಡೆದ ವ್ಯಕ್ತಿ ಹೀಗೆ ಪ್ರತಿಯೊಬ್ಬರೂ ಅದರ ಯಜಮಾನರೇ. ಸಂಕೀರ್ಣತೆ ಅನಾವರಣಗೊಳಿಸಲು ವೃತ್ತಿಪರರು ನಡೆಸುವ ಜೀವಮಾನದ ಪ್ರಯತ್ನವನ್ನು ಯಾರೂ ಗುರುತಿಸುವುದಿಲ್ಲ.

ಅತ್ಯಂತ ಮೇಧಾವಿ ಹಾಗೂ ಅನುಭವಿ ಟ್ರಶ್ಕ್ ಅವರಂಥವರ ಮಧ್ಯಪ್ರವೇಶದಿಂದ ಔರಂಗಜೇಬನ ವ್ಯಕ್ತಿತ್ವಕ್ಕೆ ಆಗಿರುವ ಅಪಚಾರವನ್ನು ಸರಿಪಡಿಸುವುದಕ್ಕೆ ಪ್ರತಿರೋಧವೂ ಎದುರಾಗಬಹುದು. ರಾಜಕೀಯ ತುರ್ತು ಆವಶ್ಯಕತೆಯು ಇತಿಹಾಸದ ಭಾಗಶಃ ನೆನಪನ್ನಷ್ಟೇ ನಿರ್ದೇಶಿಸುತ್ತದೆ. ಜಾತ್ಯತೀತರೆನಿಸಿಕೊಂಡಿದ್ದ ಮರಾಠರು ರಾಜಸ್ಥಾನದ ಬಹುತೇಕ ಹಿಂದೂ ರಾಜರನ್ನು ಕೊಳ್ಳೆ ಹೊಡೆದಿರುವುದು 1950ರ ದಶಕದ ಇತಿಹಾಸ ಕೃತಿಗಳಲ್ಲಿ ಉಲ್ಲೇಖವಿದ್ದರೂ ಇದೀಗ ಅದು ಬಿತ್ತಿಪಟಲದಿಂದ ಅಳಿಸಿದೆ. ಆದರೆ ಹಿಂದೂ ರಾಷ್ಟ್ರದ ರಾಜಕೀಯ ಯೋಜನೆಯ ಪ್ರತಿಪಾದಕರು ಔರಂಗಜೇಬನ ಬಗ್ಗೆ ಹೊಂದಿದ್ದ ಇಮೇಜ್ ಬಗ್ಗೆ ಮಾತ್ರ ಹಲವಾರು ಮಂದಿ ವೃತ್ತಿಪರರು ಹೊಸ ವಿಷಯಗಳನ್ನು ಸಂಕೀರ್ಣತೆಗಳನ್ನು ಬಯಲುಗೊಳಿಸದ್ದರೂ, ಆ ಇಮೇಜ್ ಮಾತ್ರ ಹಾಗೆಯೇ ಚಲಾವಣೆಯಲ್ಲಿದೆ. ಇತಿಹಾಸಗಾರರು ಗತಕಾಲದ ಬಗ್ಗೆ ಕೆಲಸ ಮಾಡುತ್ತಾರೆ ಎಂದು ಹೇಳುವವರು ಯಾರು? ಅದು ಸದಾ ಪ್ರಸ್ತುತ. ಆದರೆ ಆರೆಸ್ಸೆಸ್ ದೃಷ್ಟಿಕೋನಕ್ಕೆ ಬದ್ಧರಾಗಿರದ ಜನರ ಪಾಲಿಗೆ ಇತಿಹಾಸದ ಸತ್ಯ ಮಹತ್ವದ್ದಾಗುತ್ತದೆ. ಸಂಕೀರ್ಣ ಸತ್ಯದ ನಿರೂಪಣೆಗೆ ಇದು ಅತ್ಯಂತ ಮೌಲಿಕ ನೆರವು ನೀಡುವ ಕೃತಿಯಾಗಿದೆ.

ಕೃಪೆ: thewire.in

Writer - ಹರ್‌ಬನ್ಸ್ ಮುಖಿಯಾ

contributor

Editor - ಹರ್‌ಬನ್ಸ್ ಮುಖಿಯಾ

contributor

Similar News