ಬಿಜೆಪಿ ಎಂಬ ಬೆತ್ತಲೆ ಪ್ರಪಂಚಕ್ಕೆ ಸ್ವಾಭಿಮಾನವೆಂಬ ಹರಿದ ಬಟ್ಟೆ ತೊಟ್ಟು ಹೋದ ಶ್ರೀನಿವಾಸ್ ಪ್ರಸಾದ್

Update: 2017-03-13 18:14 GMT

ಮಾನ್ಯರೆ, ಸ್ವತಂತ್ರ ಭಾರತದ  ರಾಜಕಾರಣದಲ್ಲಿ ನಾವು ಇತಿಹಾಸವನ್ನು ನೋಡುತ್ತಾ ಹೋದರೆ ಅನೇಕ ರಾಜಕೀಯ ಪಕ್ಷಗಳು ತಮ್ಮದೇ ಆದ ತಾತ್ವಿಕ ನೆಲೆಗಳ ಅಡಿಯಲ್ಲಿ ಹುಟ್ಟಿಕೊಂಡಿವೆ. ಜೀವಂತವಾಗಿಯೂ ಇವೆ ಹಾಗೆಯೇ ಕೆಲವು ಪಕ್ಷಗಳು ಹುಟ್ಟುತ್ತಲೇ ಸತ್ತೂ ಹೋಗಿವೆ.

ನಮ್ಮ ಭಾರತೀಯ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ಉಲ್ಲೇಖಿಸಿರುವಂತೆ ಜ್ಯಾತ್ಯತೀತ, ಸಮಾಜವಾದ, ಪ್ರಜಾಪ್ರಭುತ್ವವಾದ, ರಾಷ್ಟ್ರೀಯವಾದ ಹಾಗೂ ಗಣತಂತ್ರವಾದಗಳ ನೆಲೆಗಟ್ಟಿನಲ್ಲಿ ಅನೇಕ ಪಕ್ಷಗಳು ಹುಟ್ಟಿ ಬೆಳೆದು ಇವತ್ತಿಗೂ ಜೀವಂತವಿರುವ ಮತ್ತು ಹಾಗೆಯೇ ಕೆಲವು ಪಕ್ಷಗಳು ಇತ್ತೀಚಿನ ದಿನಗಳಲ್ಲಿ  ಕ್ಷೀಣಿಸುತ್ತಿರುವದನ್ನೂ ನಾವು ಕಾಣಬಹುದಾಗಿದೆ.

ಸಂವಿಧಾನದಲ್ಲಿ ಅಡಕವಾಗಿರುವ ತತ್ವ ಸಿದ್ಧಾಂತಗಳ ಅಡಿಯಲ್ಲಿ ಹುಟ್ಟಿಕೊಂಡಿರುವ ರಾಜಕೀಯ ಪಕ್ಷಗಳ ಕಥೆ ಒಂದೆಡೆಯಾದರೆ, ಜಾತ್ಯತೀತ ತತ್ವದ ಆಧಾರದಲ್ಲಿ ಜಾರಿಗೆ ಬಂದಿರುವ ಸಂವಿಧಾನದ ಮೂಲ ಆಶಯಗಳ ವಿರುದ್ಧವಾಗಿ ಹಿಂದೂ ರಾಷ್ಟ್ರ ಎಂಬ ಹುಸಿ ಪರಿಕಲ್ಪನೆಯ ಅಡಿಯಲ್ಲಿ ಸಂಘ ಪರಿವಾರದ ಸಂತತಿಗಳ ಸಮ್ಮಿಲನದಿಂದ ಜನ್ಮ ತಾಳಿದ ಬಿಜೆಪಿ ಎಂಬ ಕೋಮುವಾದಿ ಪಕ್ಷ ಒಂದು ಕಡೆ. ಇನ್ನೊಂದು ಕಡೆ ನೆರೆಯ ರಾಷ್ಟ್ರಗಳ ರಾಜಕೀಯ ಸಿದ್ಧಾಂತದ ಪ್ರಭಾವದಿಂದ ದೇಶದ ಕಾರ್ಮಿಕರಿಂದ ಕಮ್ಯುನಿಸ್ಟ್ ಪಕ್ಷವೂ ಇಂದಿಗೂ ಜೀವಂತ ಇರುವುದನ್ನು ಕಾಣಬಹುದಾಗಿದೆ.

ಆದರೆ ಪ್ರಮುಖವಾಗಿ ದೇಶದಲ್ಲಿ ರಾಜಕೀಯ ಸಂಘರ್ಷ ನಡೆದಿರುವದು ಜಾತ್ಯತೀತ ಶಕ್ತಿಗಳು ಮತ್ತು ಕೋಮುವಾದಿಗಳ ನಡುವೆ ಮಾತ್ರ.
ಕಾರಣ ಇಷ್ಟೇ, ಒಂದು ಹಂತದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಮಾಜವಾದಿ ಸಿದ್ಧಾಂತದಡಿಯಲ್ಲಿ ಪಕ್ಷ ತಲೆ ಎತ್ತಿ ನಿಂತರೂ,  ಕಾಲಾನುಕ್ರಮವಾಗಿ ಆ ಪಕ್ಷದ ನಾಯಕರ  ಆಂತರಿಕ ಕಲಹದಿಂದ ಪಕ್ಷ ಒಡೆದು ಅನೇಕ ಹೋಳಾಗಿ ತಮ್ಮ ತಮ್ಮ ರಾಜ್ಯಕ್ಕೆ ಸೀಮಿತವಾಗುವಂತೆ ಪ್ರಾಂತೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವುದರಲ್ಲೇ ಹೆಣಗಾಡುತ್ತಿರುವ ಕಾಲದಲ್ಲಿ, ದೇಶಕ್ಕೆ ಮಾರಕವಾಗಿರುವ ಪಕ್ಷಕ್ಕೆ ನಿಧಾನವಾಗಿ ನೆಲೆ ಗಟ್ಟಿಯಾಗಿಸಿಕೊಳ್ಳಲು ಅವಕಾಶ ಸಿಕ್ಕಂತಾಯಿತು.

ಇಂತಹ ಅವಕಾಶಗಳ ನಡುವೆ ಕೆಲ ರಾಜಕೀಯ ಪಕ್ಷಗಳು ಅಧಿಕಾರದ ದುರಾಸೆಯಿಂದ ತತ್ವ ಸಿದ್ಧಾಂತ ಬದಿಗಿರಿಸಿ ಕೋಮು ಶಕ್ತಿಗಳೊಂದಿಗೆ ಅಧಿಕಾರ ಹಂಚಿಕೊಳ್ಳುವ ಮೂಲಕ ಸಮಾಜವಾದಿ ಸಿದ್ಧಾಂತ ಪ್ರತಿಪಾದಿಸಿದ್ದ ಪಕ್ಷಗಳು ತಮ್ಮ ಗುಂಡಿ ತಾವೇ ತೋಡಿಕೊಂಡು ಸಮಯ ಸಾಧಕ ರಾಜಕೀಯದ ಫಲವಾಗಿ ಅವನತಿಯ ಅಂಚಿಗೆ ಬಂದು ನಿಂತಿರುವ ಅನೇಕ ಉದಾಹರಣೆಗಳನ್ನು ಕೊಡಬಹುದಾಗಿದೆ.

ದೇಶದಲ್ಲಿ ಇತರ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ ಪಕ್ಷ ಮಾತ್ರ ದೇಶದ ಸಂವಿಧಾನವನ್ನು ಎತ್ತಿ ಹಿಡಿಯುವ ಮೂಲಕ ಜಾತ್ಯತೀತ ತತ್ವಗಳನ್ನು ಪ್ರತಿಪಾದಿಸುತ್ತ ಮತ್ತು ಪ್ರತಿಪಾದನೆಯಂತೆ ನಡೆದುಕೊಳ್ಳವುದರಲ್ಲಿ ಸಫಲವಾಗುತ್ತ ಬಂದಿರುವ ಕಾರಣ ದೇಶದಲ್ಲಿಯೇ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಜಾತ್ಯತೀತ ಶಕ್ತಿಯಾಗಿ ಹೊರಹೊಮ್ಮಿದ್ದನ್ನೂ ನಾವು ಇತಿಹಾಸದಲ್ಲಿ ನೋಡಬಹುದಾಗಿದೆ.

ಸಂವಿಧಾನ ವಿರೋಧಿ ಕೋಮುಶಕ್ತಿಗಳನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಜಾತ್ಯತೀತ ತತ್ವಗಳನ್ನು ಗಟ್ಟಿಯಾಗಿ ಒಪ್ಪಿಕೊಳ್ಳುವ ಮೂಲಕ ರಾಜಕಾರಣದ ಅನೇಕ ಮಜಲುಗಳನ್ನು ತಲುಪಿರುವಂಥವರನ್ನೂ ನಾವು ಕಾಣಬಹುದಾಗಿದೆ. ಹಾಗೆಯೇ ಕಾಲಕಾಲಕ್ಕೆ ಅಧಿಕಾರದ ದುರಾಸೆಯಿಂದ ತತ್ವ ಸಿದ್ಧಾಂತ ಧಿಕ್ಕರಿಸಿ, ಸಮಯ ಸಾಧಕ ರಾಜಕೀಯದಾಟದಲ್ಲಿ ವಿರುದ್ಧವಾದ ತತ್ವಕ್ಕೆ ತಬ್ಬಿಕೊಂಡವರನ್ನೂ  ನೋಡಬಹುದಾಗಿದೆ.

ಆದರೆ ಈ ದೇಶಕ್ಕೆ ಸರ್ವಶ್ರೇಷ್ಠ ಸಂವಿಧಾನ ನೀಡಿದ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ ತತ್ವ ಸಿದ್ಧಾಂತದಲ್ಲಿ ನಿಜವಾದ ನಂಬಿಕೆ ಇರುವ ಯಾವುದೇ ರಾಜಕಾರಣಿಗಳು ಕೋಮುವಾದಿ ಶಕ್ತಿಗಳೊಂದಿಗೆ ಕೈಜೋಡಿಸಿರುವ ಉದಾಹರಣೆಗಳು ಅತೀ ವಿರಳ ಎನ್ನಬಹುದು. ಸಮಯ ಸಾಧಕ ರಾಜಕೀಯ ಮಾಡಲು ಹೋಗಿ ಕೋಮುವಾದಿಗಳ ಸಂಗ ಮಾಡಿದವರ ಗತಿ ಈ ದೇಶದಲ್ಲಿ ಏನಾಗಿದೆ ಎಂಬುವದನ್ನೂ ನಾವು ಇಂದಿಗೂ ಸಹ ಕಣ್ಣಾರೆ ಕಾಣಬಹುದಾಗಿದೆ.

ಡಾ.ಅಂಬೇಡ್ಕರ್ ರವರ ನಿಜವಾದ ಅನುಯಾಯಿಗಳು ಯಾವದೇ ಕಾರಣಕ್ಕೆ ಸಂವಿಧಾನ ವಿರೋಧಿಗಳೊಂದಿಗೆ ತಾತ್ವಿಕವಾಗಿ ರಾಜಿ ಮಾಡಿಕೊಳ್ಳುವ ಸಾಧ್ಯತೆಗಳು ಇಲ್ಲವೇ ಇಲ್ಲ . ಯಾಕೆಂದರೆ ಡಾ.ಅಂಬೇಡ್ಕರ್ ರವರ ಸಿದ್ಧಾಂತದಲ್ಲಿ ಗಟ್ಟಿತನದ ಜೊತೆಗೆ ಸ್ವಾಭಿಮಾನದ ಕಿಚ್ಚು ಅಡಗಿರುತ್ತದೆ.
ಡಾ.ಅಂಬೇಡ್ಕರ್ ಅವರ ಹೋರಾಟ ಅಸಮಾನತೆಯ ವಿರುದ್ಧವಾಗಿತ್ತಾದ್ದರಿಂದ, ಜಾತಿ ನಿರ್ಮೂಲನೆಯೇ ಅವರ ಪ್ರಥಮ  ಆದ್ಯತೆಯಾಗಿದ್ದ ಕಾರಣ , ಅಂಬೇಡ್ಕರ್ ರವರನ್ನು ನಿಜವಾಗಿಯೂ  ಅರ್ಥ ಮಾಡಿಕೊಂಡಿರುವವರು ಯಾರೂ ಕೋಮುವಾದಿಗಳ ಸಂಗ(ಘ)ಮಾಡಲಾರರು.

ಆದರೆ ಕೆಲ ಸ್ವಾರ್ಥಿ ರಾಜಕಾರಣಿಗಳು ಅಂಬೇಡ್ಕರ್ ಹೆಸರಿನಲ್ಲಿ ಜಾತ್ಯತೀತ ಮುಖವಾಡ ಹಾಕಿ ಅನೇಕ ಹಂತದ ಅಧಿಕಾರ ಅನುಭವಿಸಿದರೂ ಕೊನೆಯ ಉಸಿರುರುವವರೆಗೂ ಅಧಿಕಾರದಲ್ಲಿಯೇ ಇರಬೇಕೆಂಬ ಹಪಾಹಪಿಯೊಂದಿಗೆ ತತ್ವ ಸಿದ್ಧಾಂತಗಳ ಮಖವಾಡ ಕಳಚಿ ತಮ್ಮ ನಿಜವಾದ ಬಣ್ಣ ಬಯಲು ಮಾಡಿಕೊಂಡು ಅಮಾಯಕ ಜನರಿಗೆ ಮೋಸ ಮಾಡುತ್ತಿರುವವರನ್ನೂ ನಾವು ಕಾಣುತ್ತಿದ್ದೇವೆ.

ಡಾ. ಅಂಬೇಡ್ಕರ್ ಹೆಸರನ್ನು ತಮ್ಮ ರಾಜಕೀಯ ರಕ್ಷಾ ಕವಚವನ್ನಾಗಿ ಬಳಸಿ ಅಧಿಕಾರ ವಂಚಿತರಾದ ತಕ್ಷಣ ತತ್ವ ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟು ಜನರ ಭಾವನೆಗೆ ಧಕ್ಕೆ ಉಂಟು ಮಾಡಿದ ನಾಯಕರನ್ನು ನಾವು ನೋಡಬಹುದಾಗಿದೆ.

ತಮ್ಮ ಸ್ವಾರ್ಥಕ್ಕಾಗಿ ಅವರು ಅಂಬೇಡ್ಕರ್ ತತ್ವ ಸಿದ್ಧಾಂತದ ಮುಖವಾಡ ಧರಿಸಿರುವುದನ್ನು ಅರಿಯದ ಮುಗ್ಧ ಜನತೆ ಅಂತಹವರನ್ನು ನಂಬಿ "ಮಾನವಂತ ರಾಜಕಾರಣಿ" ಎಂಬ ಬಿರುದು ಕೊಟ್ಟು ಮೋಸ ಹೋದ ಅಂಬೇಡ್ಕರ್ ಅಭಿಮಾನಿಗಳನ್ನೂ  ನಾವು ಕಾಣಬಹುದಾಗಿದೆ.

ಅವರು ಅಂಬೇಡ್ಕರ್ ವಾದಿ ಎಂಬ ಹೆಸರಿನಲ್ಲಿ ರಾಜಕೀಯ ಅಧಿಕಾರ ಅನುಭವಿಸುವಾಗ 'ಸ್ವಾಭಿಮಾನಿ'ಗಳಾಗಿರುತ್ತಾರೋ ? ಅಥವಾ  ಇಲ್ಲವೋ ?' ಗೊತ್ತಿಲ್ಲ. ಆದರೆ ಅಧಿಕಾರ ವಂಚಿತರಾದ ತಕ್ಷಣ ರಾತ್ರೋ ರಾತ್ರಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ 'ಸ್ವಾಭಿಮಾನಿ' ಗಳಾಗಿ ಹೊರಹೊಮ್ಮುತ್ತಾರೆ. ಶೋಷಿತ ಸಮುದಾಯಗಳಿಗೆ  "ಸ್ವಾಭಿಮಾನ" ಎಂಬ ಶಬ್ದದ  ಅರ್ಥ ತಿಳಿಸಿಕೊಟ್ಟವರೇ ಡಾ.ಅಂಬೇಡ್ಕರ್  ಎಂಬುದನ್ನು ಮರೆತು ತಾವೇ 'ಸ್ವಾಭಿಮಾನ' ಹುಟ್ಟು ಹಾಕಿದವರಂತೆ ಸ್ವಯಂ ಘೋಷಣೆ ಮಾಡಿಕೊಂಡು ಅಂಬೇಡ್ಕರ್ ಸಿದ್ಧಾಂತಕ್ಕೆ ಮಸಿ ಬಳಿಯುವ ಮೂಲಕ ಅಂಬೇಡ್ಕರ್ ವಿರೋಧಿಗಳನ್ನು ಅಪ್ಪಿಕೊಳ್ಳುತ್ತಾರೆ. ಇಂತಹವರು ಸ್ವಾಭಿಮಾನದ ಅರ್ಥ ಏನೆಂದು ತಿಳಿದಿದ್ದಾರೋ ನನಗಂತೂ ಗೊತ್ತಾಗುತ್ತಿಲ್ಲ.

ನನ್ನ ಪ್ರಕಾರ , ಸ್ವಾವಲಂಬಿಯಾಗಿ ಬದುಕುವುದು ಸ್ವಾಭಿಮಾನ.  ಮನುಷ್ಯ ಮನುಷ್ಯನನ್ನಾಗಿ ಕಾಣಲು ಅವಕಾಶ ನೀಡದ ಧರ್ಮದ ಪ್ರತಿಪಾದನೆ ಮಾಡುವವರ ಸಂಗ ಮಾಡುವವರು ಸ್ವಾಭಿಮಾನಿಯೇ? ಮನುಷ್ಯ ಮನುಷ್ಯನನ್ನು ಪ್ರೀತಿಸಲು ಅವಕಾಶ ನೀಡದ ಜಾತಿ ವ್ಯವಸ್ಥೆಯ ಜೀವಂತಿಕೆ ಬಯಸುವವರ ಸಂಗ ಮಾಡುವವರು ಸ್ವಾಭಿಮಾನಿಯೇ ? ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಸಿ ಮನುಷ್ಯರ ಶಾಂತಿ, ನೆಮ್ಮದಿ ಹಾಳು ಮಾಡುವವರ ಸಂಗ ಮಾಡುವವರು ಸ್ವಾಭಿಮಾನಿಯೇ ? ಎಂಬ ಪ್ರಶ್ನೆ ನನ್ನನ್ನು ಕಾಡಲಾರಂಭಿಸಿದೆ.

ಕಾರಣ ಇಷ್ಟೆ , ನಾವೆಲ್ಲರೂ ನಿಜವಾದ ಅಂಬೇಡ್ಕರ್ ವಾದಿ ಎಂದು ನಂಬಿದ್ದ ಶ್ರೀನಿವಾಸ್ ಪ್ರಸಾದ್ ಅವರ ಇತ್ತೀಚಿನ ರಾಜಕೀಯ ನಡವಳಿಕೆಗಳನ್ನು ಮತ್ತು ಅವರ ಮಾನಸಿಕತೆಯನ್ನು ಗಮನಿಸಿದಾಗ ಈ ತರಹದ ಅನೇಕ ಪ್ರಶ್ನೆಗಳು ಕಾಡಲಾರಂಭಿಸಿವೆ.

ಯಾಕೆಂದರೆ ರಾಜಕಾರಣದಲ್ಲಿ ರಾಜಕೀಯ ಪಕ್ಷಗಳನ್ನು ಬದಲಾಯಿಸಲು ನನ್ನ ವಿರೋಧವಿಲ್ಲ. ಸಮಾನ ಮನಸ್ಕ ತತ್ವ ಸಿದ್ಧಾಂತ ಹೊಂದಿರುವ ಪಕ್ಷಗಳಿಗೆ ಪಕ್ಷಾಂತರ ಮಾಡಿದಾಗ ಯಾರಿಗೂ ತಕರಾರು ಇರಲಾರದು. ಆದರೆ ಮಾನವ ವಿರೋಧಿ , ಬಡವರ ವಿರೋಧಿ , ದಲಿತ ಅಲ್ಪಸಂಖ್ಯಾತರ ವಿರೋಧಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸಂವಿಧಾನ ವಿರೋಧಿಗಳ ತೆಕ್ಕೆಗೆ ಹೋಗುವುದು ಎಷ್ಟು ಸರಿ? ಇಂತಹ ಅಸಂಬದ್ಧ ರಾಜಕೀಯ ನಡೆಯಿಂದ ಅಂಬೇಡ್ಕರ್ ಹೆಸರಿನಲ್ಲಿ ಅಧಿಕಾರ ಅನುಭವಿಸಿದ ಇವರು ಅಂಬೇಡ್ಕರ್ ವಿರೋಧಿಗಳೊಂದಿಗೆ ಕೈ ಜೋಡಿಸಿದ  ಇವರಿಗೆ ಎಲ್ಲಿಯ ಸ್ವಾಭಿಮಾನ/ ಸಮಯಕ್ಕೆ ತಕ್ಕಂತೆ ಮುಖವಾಡ ಬದಲಿಸುವ ಇವರಿಂದ ರಾಜ್ಯದ ಜನತೆ ಸ್ವಾಭಿಮಾನದ ಪಾಠ ಕಲಿಯಬೇಕೇ? ಕೋಮು ಶಕ್ತಿಗಳ ಸಂಗ ಮಾಡಿದ ನಂತರ ಅವರ ಭಾಷೆ ಗಮನಿಸಿದಾಗ ಮಾನಸಿಕ ಸ್ಥಿಮಿತ ಕಳೆದುಕೊಂಡು  ತಮ್ಮತನವನ್ನೇ ಮರೆತಿದ್ದಾರೆ ಎಂದು ಅನಿಸದೇ ಇರದು.

ಒಬ್ಬ ಹಿರಿಯ ರಾಜಕಾರಣಿಯಾಗಿ ಸಾರ್ವಜನಿಕವಾಗಿ ಇನ್ನೊಬ್ಬರ ವಿರುದ್ಧ ಏಕ ವಚನ ಪ್ರಯೋಗ ಮತ್ತು ವೈಯುಕ್ತಿಕ ದಾಳಿಯ ಮೂಲಕ ತೇಜೋವಧೆ ಮಾಡುವುದು ಸ್ವಾಭಿಮಾನಿಗಳ ಲಕ್ಷಣವೇ? ಇನ್ನೊಬ್ಬರ ಮಾನ ಅಭಿಮಾನಕ್ಕೆ ಧಕ್ಕೆ ಉಂಟು ಮಾಡದವನೇ ನಿಜವಾದ ಸ್ವಾಭಿಮಾನಿಯಾಗುತ್ತಾನೆ.
ಈ ವಯಸ್ಸಿನಲ್ಲಿಯೂ ರಾಜಕೀಯ ಅಧಿಕಾರದ ದುರಾಸೆಯಿಂದ ಹತಾಶರಾಗಿ ಏಕವಚನ ಪ್ರಯೋಗದಿಂದ ನಾಲಿಗೆ ಹರಿಯಬಿಟ್ಟರೆ ಸಾರ್ವಜನಿಕವಾಗಿ ಅವರ ಗೌರವವನ್ನು ಅವರೇ ಹಾಳು ಮಾಡಿಕೊಂಡಂತಾಗುವುದಿಲ್ಲವೇ?

ಇನ್ನೊಬ್ಬರಿಗೆ ಬಾಯಿಗೆ ಬಂದಂತೆ ಮಾತನಾಡುವದೇ ಸ್ವಾಭಿಮಾನ ಎಂದು ಭಾವಿಸಿದಂತಿದೆ ಪಾಪ. ಸ್ವಾಭಿಮಾನದ ಹೆಸರಿನಲ್ಲಿ ದುರಹಂಕಾರಿಯೊಬ್ಬನ
(ತನ್ನ ಕಚೇರಿಯಿಂದ ಅಂಬೇಡ್ಕರ್ ಭಾವಚಿತ್ರ ಹೊರ ಹಾಕಿರುವ ವ್ಯಕ್ತಿಯ) ಸಂಗ ಮಾಡಿರುವ ಶ್ರೀನಿವಾಸ್ ಪ್ರಸಾದ್ ಅವರಿಗೆ ಜನರೇ ಪಾಠ ಕಲಿಸಲಿದ್ದಾರೆ.

ಕೊನೆಯದಾಗಿ ಹೇಳಬೇಕೆಂದರೆ, ಡಾ.ಅಂಬೇಡ್ಕರ್ ಮತ್ತು ಜಾತ್ಯತೀತ ತತ್ವ ಸಿದ್ಧಾಂತಗಳಲ್ಲಿ ನಂಬಿಕೆ ಇರುವವರ ಕೂಟ ಬಟ್ಟೆ ತೊಟ್ಟ ಸ್ವಾಭಿಮಾನಿಗಳ ಪ್ರಪಂಚ ಇದ್ದಂತೆ. ಸಂವಿಧಾನ ವಿರೋಧಿ ಸಂಘ ಪರಿವಾರ ಹಾಗೂ ಕೋಮುವಾದಿಗಳ ಕೂಟ ಬೆತ್ತಲೆ ಪ್ರಪಂಚವಿದ್ದಂತೆ. ಬೆತ್ತಲೆ ಪ್ರಪಂಚದೊಳಗೆ ಶ್ರೀನಿವಾಸ್ ಪ್ರಸಾದ್ ಅವರು ಸ್ವಾಭಿಮಾನ ಎಂಬ ಬಟ್ಟೆ ತೊಟ್ಟು ಹೋಗಿದ್ದಾರೆ. ಬೆತ್ತಲಾಗಿರುವ ಜಗತ್ತಿನೊಂದಿಗೆ ಹೊಂದಿಕೊಳ್ಳಲು ತೊಟ್ಟ ಬಟ್ಟೆ ಬಿಚ್ಚಲೇಬೇಕು. ಇಲ್ಲದಿದ್ದರೆ ಬೆತ್ತಲಾಗಿರುವವರೆಲ್ಲ ಸೇರಿ ಅವರಿಗೆ ಹುಚ್ಚರ ಪಟ್ಟ ಕಟ್ಟಿ ಗಹಗಹಿಸಿ ನಗುವುದರಲ್ಲಿ ಸಂದೇಹವೇ ಇಲ್ಲ.

ಆದ್ದರಿಂದ ಸನ್ಮಾನ್ಯ ಶ್ರೀನಿವಾಸ್ ಪ್ರಸಾದ್ ಅವರ ಗತಿ "ಬೆತ್ತಲೆ ಪ್ರಪಂಚದಲ್ಲಿ ಬಟ್ಟೆ ತೊಟ್ಟವರನ್ನು ಕಂಡು 'ಹುಚ್ಚ'ನೆಂಬ ಪಟ್ಟ ಕಟ್ಟಿ ನಗುವಂತಾಗಬಾರದು"ಎಂಬ ಕಾಳಜಿಯಿಂದ ನಾಲ್ಕು ಸಾಲು ಬರಿದಿದ್ದೇನೆ.

"ಸಾರ ಸಜ್ಜನರ ಸಂಗ ಲೇಸು ಕಂಡಯ್ಯಾ
ದೂರ ದುರ್ಜನರ ಸಂಗ(ಘ) ಭಂಗವಯ್ಯಾ
ಸಂಗ ಎರಡುಂಟು,  ಒಂದು ಹಿಡಿ ಒಂದು ಬಿಡು
ಅವ ಹಾವಾದಡೋನು? ವಿಷವೊಂದೆ 
ಅಂಥವರ ಸಂಗ (ಘ) ಬೇಡವಯ್ಯ
ಅಂತರಂಗ ಶುದ್ಧವಿಲ್ಲದವರ ಸಂಗ (ಘ) ಶಿಂಗಿ ಕಾಳ ಕೂಟ ವಿಷವೋ ಕೂಡಲಸಂಗಮ ದೇವಾ " ಎಂಬ ವಚನ ನೆನಪಾಯಿತು.

ಮುಂದಿನ ದಿನಗಳಲ್ಲಿ ಮಾನ್ಯ ಶ್ರೀನಿವಾಸ್ ಪ್ರಸಾದ್ ಅವರಿಗೆ ಈ ವಚನ ನೆನಪಾಗಲಿದೆ ಎಂಬ ಖಚಿತ  ಆಶಯವಿದೆ.

ಲೇಖನ: ಟಿ.ಶಶಿದರ್

Writer - ಟಿ.ಶಶಿಧರ್

contributor

Editor - ಟಿ.ಶಶಿಧರ್

contributor

Similar News