ಶಸ್ತ್ರಧಾರಿ ಕಳ್ಳರ ಜೊತೆ ಹೋರಾಡಿ ಮಾಲಕನನ್ನು ರಕ್ಷಿಸಿದ ನಾಯಿ

Update: 2017-03-16 11:26 GMT

ಬೆಂಗಳೂರು,ಮಾ.16: ಬೆಳಗಿನ ಜಾವ ಹಾಲು ತರಲೆಂದು ಬೂತ್‌ಗೆ ತೆರಳಿದ್ದಾಗ ಮಾರಕಾಸ್ತ್ರಗಳನ್ನು ಹೊಂದಿದ್ದ ದರೋಡೆಕೋರರ ಕೈಗೆ ಸಿಕ್ಕಿ ಹಾಕಿಕೊಂಡಿದ್ದ ಪ್ರೊಫೆಸರ್ ಓರ್ವರನ್ನು ಅವರ ಮುದ್ದಿನ ನಾಯಿ ರಕ್ಷಿಸಿದ ಘಟನೆ ನಗರದ ಮಹಾಲಕ್ಷ್ಮಿ ಲೇ ಔಟ್‌ನಲ್ಲಿ ನಡೆದಿದೆ.

ಪ್ರತಿನಿತ್ಯದಂತೆ ಅಂದು ಬೆಳಿಗ್ಗೆ ಕೂಡ 5.30ರ ವೇಳೆಗೆ ಪ್ರೊಫೆಸರ್ ಹಾಲು ತರಲೆಂದು ಸಮೀಪದ ನಂದಿನಿ ಮಿಲ್ಕ್ ಬೂತ್‌ಗೆ ತನ್ನ ಸ್ಕೂಟರ್‌ನಲ್ಲಿ ತೆರಳಿದ್ದರು. ಯಾವಾಗಲೂ ಮನೆ ಬಾಗಿಲಿನಲ್ಲಿಯೇ ಮಾಲಿಕನನ್ನು ಬೀಳ್ಕೊಡುತ್ತಿದ್ದ ಅವರ ಒಂದೂವರೆ ವರ್ಷ ಪ್ರಾಯದ ಲ್ಯಾಬ್ರಡಾರ್ ನಾಯಿ ಲಿಯೊ ಅಂದು ಸ್ಕೂಟರ್‌ನ್ನು ಹಿಂಬಾಲಿಸಿತ್ತು.

ಹಾಲು ಖರೀದಿಸಿದ ಪ್ರೊಫೆಸರ್ ಮನೆಗೆ ವಾಪಸಾಗುತ್ತಿದ್ದಾಗ ಐವರು ದುಷ್ಕರ್ಮಿಗಳಿದ್ದ ಕಾರು ಅವರನ್ನು ಅಡ್ಡಗಟ್ಟಿತ್ತು. ಮೂವರು ಕೆಳಗಿಳಿದು ಬಂದಿದ್ದು, ಅವರ ಪೈಕಿ ಓರ್ವ ಪ್ರೊಫೆಸರ್ ಕತ್ತಿನ ಬಳಿ ಮಚ್ಚು ಇಟ್ಟಿದ್ದರೆ ಇನ್ನೋರ್ವ ತಲವಾರು ಝಳಪಿಸುತ್ತಿದ್ದ. ತನ್ನಲ್ಲಿರುವುದನ್ನೆಲ್ಲ ತೆಗೆದುಕೊಳ್ಳಿ,ತನಗೇನೂ ಮಾಡಬೇಡಿ ಎಂದು ಅವರನ್ನು ಕೋರಿದ ಪ್ರೊಫೆಸರ್ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್‌ನ್ನು ಕಳಚುತ್ತಿದ್ದಾಗ ಲಿಯೋ ಏಕಾಏಕಿ ಮಚ್ಚು ಹಿಡಿದವನ ಮೈಮೇಲೆಯೇ ಹಾರಿತ್ತು. ಸುಲಿಗೆಕೋರರಿಬ್ಬರೂ ಕಂಗಾಲಾಗಿ ಅಲ್ಲಿಂದ ಪರಾರಿಯಾಗಿದ್ದು ಲಿಯೋ ಅವರನ್ನು ಅಟ್ಟಿಸಿಕೊಂಡು ಹೋಗಿತ್ತು. ಪ್ರೊಫೆಸರ್ ಅದನ್ನು ಕರೆದರೂ ಬಂದಿರಲಿಲ್ಲ.

ಸ್ಕೂಟರ್‌ನ್ನು ಅಲ್ಲಿಯೇ ಬಿಟ್ಟು ದೂರದಲ್ಲಿದ್ದ ಮನೆಯೊಂದಕ್ಕೆ ಧಾವಿಸಿದ ಪ್ರೊಫೆಸರ್ ಅವರ ಫೋನ್‌ನಿಂದ ಮಗನಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಕೆಲವೇ ಕ್ಷಣಗಳಲ್ಲಿ ಅವರ ಪತ್ನಿ ಮತ್ತು ಮಗ ಕಾರಿನಲ್ಲಿ ಅಲ್ಲಿ ತಲುಪಿದ್ದರು.

 ಮಗ ಸ್ಕೂಟರ್ ಬಳಿ ಹೋದಾಗ ಲಿಯೋ ಯಜಮಾನನಿಗಾಗಿ ಕಾಯುತ್ತ ಅಲ್ಲಿ ನಿಂತಿತ್ತು. ಕರೆದರೂ ಬರದಿದ್ದಾಗ ಆತ ಅದನ್ನು ಬಲವಂತದಿಂದ ಕಾರಿನಲ್ಲಿ ಹಾಕಿಕೊಂಡು ಪ್ರೊಫೆಸರ್ ಬಳಿಗೆ ವಾಪಸಾಗಿದ್ದ. ತನ ಒಡೆಯ ಸುರಕ್ಷಿತವಾಗಿರುವುದನ್ನು ಕಂಡ ಲಿಯೊ ಬಾಲ ಅಲ್ಲಾಡಿಸುತ್ತ ಬಳಿ ಬಂದು ಮೈಯನ್ನು ನೆಕ್ಕುತ್ತ ಸಂತಸ ವ್ಯಕ್ತಪಡಿಸಿತ್ತು.

ಲಿಯೋ ತನ್ನ ಮಾಲಿಕನನ್ನು ಮಾತ್ರವಲ್ಲ, ಅವರ ಬಳಿಯಿದ್ದ ಸುಮಾರು ಐದು ಲಕ್ಷ ರೂ.ವೌಲ್ಯದ ಸೊತ್ತುಗಳನ್ನೂ ರಕ್ಷಿಸುವ ಮೂಲಕ ತನ್ನ ನಿಷ್ಠೆಯನ್ನು ಮೆರೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News