ಕ್ಷೇತ್ರಾಭಿವೃದ್ಧಿ ನಿಧಿ ಬಳಕೆಯಲ್ಲಿ ಶಾಸಕರು ವಿಫಲ: ಬಳಕೆಯಾಗದೇ ಕೊಳೆಯುತ್ತಿದೆ 700 ಕೋಟಿಗೂ ಹೆಚ್ಚು ಹಣ!

Update: 2017-03-17 14:25 GMT

ಬೆಂಗಳೂರು, ಮಾ.18: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ, ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿರುವ ಸಂದರ್ಭದಲ್ಲೇ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಬಳಕೆಯಲ್ಲಿ ಶಾಸಕರೇ ದಿವ್ಯ ನಿರ್ಲಕ್ಷ ತೋರುತ್ತಿರುವುದು ಕಂಡು ಬಂದಿದೆ. ಸುಮಾರು 700 ಕೋಟಿ ರೂ.ಗಿಂತಲೂ ಹೆಚ್ಚು ಹಣ ಬಳಕೆಯಾಗದೆ ಈ ನಿಧಿಯಲ್ಲೇ ಕೊಳೆಯುತ್ತಿದೆ. ಇದರ ಜೊತೆಗೆ ಗುರುವಾರ ಸಹ ಹೊಸದಾಗಿ 300 ಕೋಟಿ ರೂ. ಬಿಡುಗಡೆಯಾಗಿದೆ.
ಒಟ್ಟಾರೆ 1,000 ಕೋಟಿ ರೂ. ವಿವಿಧ ಜಿಲ್ಲಾಧಿಕಾರಿಗಳ ಖಾತೆಗೆ ಸೇರ್ಪಡೆಯಾಗಿದೆ. ಜನಪರ ಕಾರ್ಯಗಳಿಗೆ ವಿನಿಯೋಗವಾಗಬೇಕಾದ ಹಣ ಇದೀಗ ನಿರುಪಯುಕ್ತವಾಗಿ ಕೊಳೆಯುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

ಕ್ಷೇತ್ರಗಳ ಅಭಿವೃದ್ಧಿ ಮತ್ತು ಜನಪರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದ ಈ ನಿಧಿ ನಿರುಪಯುಕ್ತವಾಗುತ್ತಿದೆ. ತಮ್ಮ ಕ್ಷೇತ್ರಗಳಲ್ಲಿ ಶಾಶ್ವತ ಕಾಮಗಾರಿ ಕೈಗೆತ್ತಿಕೊಂಡು ಆಸ್ತಿ ಸೃಷ್ಟಿ ಮಾಡಬೇಕಾದ ಸದುದ್ದೇಶ ಸ್ವತಃ ಶಾಸಕರಲ್ಲೂ ಸಹ ಇಲ್ಲವಾಗಿದೆ.

ಈ ಒಂದು ಸಾವಿರ ಕೋಟಿ ರೂ. ಜೊತೆಗೆ ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಬಳಕೆಯಾಗದೇ ಇರುವ ಸುಮಾರು 300 ಕೋಟಿ ರೂ. ಹಣ ಸಹ ವಿವಿಧ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ಈ ಹಣವನ್ನು ಸಹ ಸರಕಾರದ ಬೊಕ್ಕಸಕ್ಕೆ ತರುವ ಪ್ರಯತ್ನ ನಡೆಯುತ್ತಿದೆ.

ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸದಸ್ಯರ ಅಧಿಕಾರದ ಅವಧಿ ಪೂರ್ಣಗೊಂಡ ಬಳಕವೂ ಮೂರು ತಿಂಗಳ ಅವಧಿವರೆಗೆ ತಮ್ಮ ವಿವೇಚನಾ ಕೋಟದಡಿ ನಿಗದಿಯಾಗಿರುವ ಹಣ ವೆಚ್ಚ ಮಾಡಲು ಅವಕಾಶವಿದೆ. ವೆಚ್ಚ ಮಾರ್ಗಸೂಚಿಯಡಿ ಮೂರು ತಿಂಗಳ ಕಾಲ ಮಾಜಿ ಶಾಸಕರು ನೀಡಿದ ಕೆಲಸಗಳನ್ನು ಜಿಲ್ಲಾಧಿಕಾರಿಗಳು ಕೈಗೆತ್ತಿಕೊಳ್ಳಲು ಹಣ ಬಿಡುಗಡೆ ಮಾಡಬೇಕು.

ಆದರೆ ಕಳೆದ 2013ರ ಮೇ ತಿಂಗಳ ನಂತರ ಹಿಂದಿನ ವಿಧಾನಸಭೆಯ ಸದಸ್ಯರು ವೆಚ್ಚ ಮಾಡದೇ ಇದ್ದ ಸುಮಾರು 300 ಕೋಟಿ ರೂ. ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ಚುನಾವಣೆಯಲ್ಲಿ ಪರಾಭವಗೊಂಡ ಬಹುತೇಕ ಶಾಸಕರು ತಮಗೆ ಮಂಜೂರಾಗಿರುವ ಹಣವನ್ನು ವೆಚ್ಚ ಮಾಡದೇ ನಿರ್ಲಕ್ಷ್ಮ ತೋರಿದ್ದರು. ಆದರೆ ಈ ಹಣ ನಷ್ಟವಾಗಿಲ್ಲ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ನಿರುಪಯುಕ್ತವಾಗಿದ್ದು, ಇದನ್ನು ಬೊಕ್ಕಸಕ್ಕೆ ತರುವಂತೆ ಸರಕಾರ ಸ್ಪಷ್ಟ ಸೂಚನೆ ನೀಡಿದೆ.

ವೆಚ್ಚವಾಗದೇ ಇರಲು ಕಾರಣ: ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಬಹುತೇಕ ಶಾಸಕರು ತಮ್ಮ ಬೆಂಬಲಿಗರು, ಚುನಾವಣೆಗೆ ಸ್ಪರ್ಧಿಸುವವರ ಬೆಂಬಲಿಗರು, ಕ್ಷೇತ್ರದ ಮತದಾರರನ್ನು ಸಂಪ್ರೀತಗೊಳಿಸಲು ಹಾಗೂ ಗುಡಿ, ಗೋಪುರಗಳ ನಿರ್ಮಾಣಕ್ಕೆ ಮಂಜೂರಾತಿ ಪತ್ರ ನೀಡುತ್ತಾರೆ.
ಐದು ವರ್ಷಗಳ ಅವಧಿಯಲ್ಲಿ ಪಂಚಾಯತ್‌ಗಳು, ನಗರ ಸ್ಥಳೀಯ ಸಂಸ್ಥೆಗಳು, ಎಪಿಎಂಸಿ, ಸಹಕಾರ ಸಂಸ್ಥೆಗಳಂತಹ ಹತ್ತು ಹಲವು ಚುನಾವಣೆಗಳು ನಡೆಯುತ್ತಲೇ ಇರುತ್ತವೆ.

ಇಂತಹ ಚುನಾವಣೆಗಳಿಗೆ ಹಣ ಹಂಚುವ ಬದಲು ಕಾಮಗಾರಿ ಗುತ್ತಿಗೆ ನೀಡಿದರೆ ಗೆಲ್ಲಲು ಅನುಕೂಲವಾಗಲಿದೆ. ಜೊತೆಗೆ ಕೆಲಸ ಮುಗಿದ ತಕ್ಷಣವೇ ಹಣ ಬಿಡುಗಡೆಯೂ ಆಗಲಿದೆ. ಹೀಗಾಗಿ ಚುನಾವಣಾ ಕಾಲಕ್ಕೆ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಬಳಕೆ ರಾಜಕಾರಣ ಮಾಡಲು ವರದಾನವಾಗಿದೆ.

ಇನ್ನು ಚುನಾವಣೆ ಮುಗಿದ ನಂತರ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರು, ಪಕ್ಷದ ಪರವಾಗಿ ಕೆಲಸ ಮಾಡದವರು, ಪಕ್ಷಾಂತರಿಗಳಿಗೆ ಮಂಜೂರು ಮಾಡಿದ್ದ ಕಾಮಗಾರಿಯನ್ನು ತಕ್ಷಣವೇ ಬದಲಾವಣೆ ಮಾಡುವ ಅಧಿಕಾರ ಸಂಬಂಧಪಟ್ಟ ಶಾಸಕರಿಗಿದೆ. ತಮಗೆ ವ್ಯತಿರಿಕ್ತವಾಗುವವರಿಗೆ ಕಾಮಗಾರಿ ರದ್ದುಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಶಾಸಕರು ಪತ್ರ ನೀಡಿದರೆ ಸಾಕು. ಅಲ್ಲಿಗೆ ಆ ಕೆಲಸ ಮತ್ತು ಅದಕ್ಕೆ ನಿಗದಿಯಾದ ಹಣ ನೆನೆಗುದಿಗೆ ಬೀಳುತ್ತದೆ.

ಇನ್ನು ಬಹುತೇಕ ಸಂದರ್ಭಗಳಲ್ಲಿ ಗುಡಿ-ಗೋಪುರಗಳ ನಿರ್ಮಾಣಕ್ಕೆ ಬಿಡುಗಡೆಯಾದ ಹಣ ಸಹ ನೆನೆಗುದಿಗೆ ಬೀಳುವಂತಾಗುತ್ತದೆ. ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳು, ಸರಕಾರಿ ಭೂಮಿಯಲ್ಲಿ ಅನುಮತಿ ಪಡೆದ ದೇವಾಲಯಗಳ ನಿರ್ಮಾಣಕ್ಕೆ ಹಣ ವೆಚ್ಚ ಮಾಡಲು ಅನುಮತಿ ಇದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ನಿಯಮ ಪಾಲನೆಯಾಗುವುದಿಲ್ಲ. ಹೀಗಾಗಿ ಕ್ರಿಯಾ ಯೋಜನೆಗೆ ಅನುಮತಿ ದೊರೆಯದೇ ಸಮಸ್ಯೆ ಸೃಷ್ಟಿಯಾಗುತ್ತದೆ.

ಬಹುತೇಕ ಸಂದರ್ಭಗಳಲ್ಲಿ ತಾವು ಅನುಮತಿ ನೀಡಿದ ಕಾಮಗಾರಿಗಳ ಬಗ್ಗೆ ಶಾಸಕರು ಸಹ ಪ್ರಗತಿ ಪರಿಶೀಲನೆ ಮಾಡುವುದಿಲ್ಲ. ನೋಡೆಲ್ ಅಧಿಕಾರಿಗಳಿಂದ ಮಾಹಿತಿ ಪಡೆಯುವುದಿಲ್ಲ. ಇಂತಹ ನಿರಾಸಕ್ತಿಯಿಂದಾಗಿಯೂ ಬಹಳಷ್ಟು ಕೆಲಸ ಮಂದವಾಗಿ ಸಾಗುತ್ತದೆ. ಕ್ಲುಪ್ತ ಕಾಲಕ್ಕೆ ಹಣ ವೆಚ್ಚವಾಗುವುದಿಲ್ಲ.

ಇದೀಗ ಶಾಸಕರು ಮತ್ತು ಮೇಲ್ಮನೆ ಸದಸ್ಯರಿಗೆ ಬಿಡುಗಡೆಯಾಗಿರುವ ತಲಾ ಒಂದು ಕೋಟಿ ರೂ. ವೆಚ್ಚ ಮಾಡಲು ಈ ವರ್ಷದಲ್ಲಿ ಉಳಿದಿರುವುದು ಎರಡು ವಾರ. ಹೀಗಾಗಿ ಈ ಮೊತ್ತ ಕೂಡ ಮುಂದಿನ ವರ್ಷಕ್ಕೆ ವರ್ಗಾವಣೆಯಾಗುತ್ತದೆ. ಕ್ಯಾರಿ ಫಾರ್ವರ್ಡ್‌ನಿಂದಾಗಿ ನಿಧಿಗೆ ಹೆಚ್ಚೆಚ್ಚು ಹಣ ಸೇರುತ್ತಾ ಹೋಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ರಾಶಿ ಬೀಳುವಂತಾಗುತ್ತದೆ.

ಬಹುತೇಕ ರಾಜ್ಯದ ಎಲ್ಲಾ ಭಾಗಗಳಲ್ಲೂ ಶಾಸಕರ ನಿಧಿ ಬಳಕೆ ಪ್ರಮಾಣ ಕಡಿಮೆಯಾಗುತ್ತಿದ್ದು, ಇದು ಒಂದೆರಡು ಕಡೆಗಳಲ್ಲಿನ ಸಮಸ್ಯೆಗಳಲ್ಲ. ಶಾಸಕರ ನಿರಾಸಕ್ತಿಯಿಂದಾಗಿ ಇಂತಹ ಸಮಸ್ಯೆ ಸೃಷ್ಟಿಯಾಗಿದೆ. ಕ್ರಿಯಾ ಯೋಜನೆಗಳಿಗೆ ತಕ್ಷಣವೇ ಅನುಮತಿ ನೀಡಿ ತ್ವರಿತವಾಗಿ ಹಣ ಬಳಕೆ ಮಾಡಿಕೊಳ್ಳುವಂತೆ ಯೋಜನಾ ಸಚಿವಾಲಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಸೇರಿ ಸರಕಾರದ ಕಾರ್ಯಕ್ರಮಗಳ ಬಗ್ಗೆ ತಮ್ಮ ಜಿಲ್ಲೆಗಳಲ್ಲಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಿ, ಲೋಪದೋಷಗಳಿದ್ದರೆ ಸಂಬಂಧಪಟ್ಟ ನೋಡೆಲ್ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು. ಚುನಾವಣಾ ವರ್ಷದಲ್ಲಿ ಹಣ ಸದ್ಬಳಕೆಗೆ ವಿಶೇಷ ಒತ್ತು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ನಿರ್ದೇಶನ ನೀಡಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರು, ಉಸ್ತುವಾರಿ ಕಾರ್ಯದರ್ಶಿಗಳ ಜವಾಬ್ದಾರಿ ಹೆಚ್ಚಾಗಿದ್ದು, ಯಾವುದೇ ಕಾರಣಕ್ಕೂ ನಿರ್ಲಕ್ಷ ಸಲ್ಲದು ಎಂದು ಮುಖ್ಯಮಂತ್ರಿ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News