ಶಿಕ್ಷಣದಲ್ಲಿ ಮೌಲ್ಯಗಳ ಹುಡುಕಾಟ

Update: 2017-03-17 16:31 GMT

ಭಾರತೀಯ ಆರ್ಮಿಗೆ ಸೇರಬೇಕೆಂಬ ಬಲವಾದ ಆಸೆ ಮತ್ತು ಹಂಬಲದೊಂದಿಗೆ ಅನೇಕ ಬಾರಿ ಪ್ರಯತ್ನಿಸಿ, ಅವಕಾಶ ಸಿಕ್ಕರೂ ಹೋಗಲಾಗದೆ, ಮುಂದೆ ಏನು ಮಾಡಬೇಕೆಂಬ ಗೊತ್ತು ಗುರಿಯಿಲ್ಲದೆ ಎಲ್ಲರೂ ಆ ಸಮಯದಲ್ಲಿ ತುಳಿಯುತ್ತಿದ್ದ ದಾರಿಯನ್ನೇ ಅನುಕರಿಸಿಯೋ ಅನುಸರಿಸಿಯೋ ಪದವಿ ಮುಗಿಸಿದ ನಾನು ಕೂಡ ಬಿ.ಎಡ್.ಗೆ ಸೇರಿದೆ. ತರಗತಿ ಆರಂಭವಾದ ಮೊದಲ ಅವಧಿಗೆ ಮೇಡಮ್ ಒಬ್ಬರು, ಒಂದು ಪ್ರಶ್ನೆಯನ್ನು ಎಲ್ಲ ವಿದ್ಯಾರ್ಥಿಗಳಿಗೆ ಕೇಳಿದರು. ‘‘ಯಾವ ಆಯ್ಕೆ, ಅವಕಾಶವೂ ಇಲ್ಲದೆ ನೀವು ಇಲ್ಲಿಗೆ ಬಂದದ್ದಾ? ಅಥವಾ ಇಂತದ್ದೇ ಉದ್ದೇಶ ಮತ್ತು ಗುರಿ ಇಟ್ಟುಕೊಂಡು, ಶಿಕ್ಷಕ ವೃತ್ತಿಯನ್ನು ಗೌರವಿಸಿ, ತಾನು ಹಾಗೆ ಆಗಬೇಕು ಎಂದು ಬಂದದ್ದಾ?’’ ಎಂದು. ಎಲ್ಲರೂ ಒಮ್ಮೆಲೇ ಕಂಗಾಲಾಗಿ ಮುಖ ಮುಖ ನೋಡಿಕೊಂಡರು. ‘‘ಎಲಾ ಇವರಾ, ಇದೆಂಥಾ ಪ್ರಶ್ನೆ ಕೇಳಿಬಿಟ್ರು ಈ ಯಮ್ಮಾ!’’ ಅಂತ ಗೊಣಗಿದರು. 

ಸರದಿಯಂತೆ ಒಬ್ಬೊಬ್ಬರಾಗಿ ಉತ್ತರಿಸಲು ಮುಂದಾದರು. ವಿಚಿತ್ರವಾದ ಉತ್ತರಗಳು ಬಂತು. ಅವರವರ ಮನೆಯ ಹಣಕಾಸಿನ ಸ್ಥಿತಿಯನ್ನು ಆಧರಿಸಿ ಬಂದ ಉತ್ತರಗಳೇ ಜಾಸ್ತಿ. ಪ್ರಶ್ನೆ ಕೇಳಿದವರ ನಿರೀಕ್ಷೆಯ ಉತ್ತರ ಇಲ್ಲವೇ ಇಲ್ಲ ಅಂದರೂ ತಪ್ಪಲ್ಲ. ನನ್ನ ಸರದಿಯೂ ಬಂತು. ಇರುವ ಕೆಲವೇ ಕೆಲವು ಬೆರಳಣಿಕೆಯ ವಿದ್ಯಾರ್ಥಿಗಳಲ್ಲಿ, ಕನ್ನಡ ಮಾಧ್ಯಮದಿಂದ ಬಂದವರಲ್ಲಿ ನಾನೂ ಒಬ್ಬ ಎಂಬುದು ಆಗ ನನಗೆ ತಿಳಿಯಿತು. ಆ ಸನ್ನಿವೇಶ ಮಾತಾಡುವುದಕ್ಕೆ ಅನುಕೂಲವೂ ಆಯಿತು. ಎಲ್ಲರೂ ಆಂಗ್ಲ ಭಾಷೆಯಲ್ಲೇ ಉತ್ತರ ನೀಡಿರೋದು ನನಗೆ ಅನುಕೂಲವಾಗಿ ಕನ್ನಡದಲ್ಲಿ ಧೈರ್ಯದಿಂದ ಮಾತಾಡಲು ಸಾಧ್ಯವಾಯಿತು.

‘‘ನಮಸ್ತೆ, ಮೇಡಮ್’’ ಅಂತ ಶುರುಮಾಡಿ, ನನ್ನ ಊರು, ಅಲ್ಲಿಯ ಕಲಿಕೆ ವಾತಾವರಣ, ನನ್ನ ಅಲ್ಲಿಯವರೆಗಿನ ಓದು, ಅಪ್ಪ -ಅಮ್ಮ, ಮನೆಯ ವಾತಾವರಣ, ಹಣಕಾಸಿನ ಸ್ಥಿತಿ, ಭವಿಷ್ಯದ ಕುರಿತಾದ ಚಿಂತನೆಗಳು, ನಾನು ಓದಿದ ಶಾಲೆಗಳ ಬಗ್ಗೆ - ಹೀಗೆ ಸುಮಾರು 15-20 ನಿಮಿಷಗಳವರೆಗೆ ಚೆನ್ನಾಗಿಯೇ ವಿವರಿಸಿದೆ. ನನ್ನ ಮಾತುಗಳು ನನ್ನನ್ನೂ ಸೇರಿ ಅಲ್ಲಿದ್ದ ಎಲ್ಲರಿಗೂ ಇಷ್ಟವಾಯ್ತು ಅಂತ ಕರತಾಡನದೊಂದಿಗೆ ಆವರಿಸಿದ ವೌನ ಹೇಳ್ತಾ ಇತ್ತು. ಮೇಡಮ್ ನನ್ನನ್ನೇ ನೋಡ್ತಿದ್ದರು.

ಅವರಿಗೆ ನಾನು ಮೊದಲ ವಿದ್ಯಾರ್ಥಿಯೂ ಅಲ್ಲ, ಕೊನೆಯ ವಿದ್ಯಾರ್ಥಿಯಂತೂ ಖಂಡಿತ ಅಲ್ಲವೇ ಅಲ್ಲ. ತಗೊಳ್ಳಿ, ಅಲ್ಲಿಂದ ಪ್ರತೀ ತರಗತಿಯಲ್ಲೂ ಕನ್ನಡದ ಪಾರುಪತ್ಯವೇ ಮೊದಲಾಯಿತು. ಆ ಮೇಡಮ್ ಸೇರಿ ಉಳಿದ ಅಧ್ಯಾಪಕರು ಕನ್ನಡದಲ್ಲೇ ಪಾಠ ಮಾಡಲು ಮುಂದಾದರು. ಕಾಲಕ್ರಮೇಣ ನನ್ನಲ್ಲಿ ಒಬ್ಬ ಶಿಕ್ಷಕ ಹುಟ್ಟಿಕೊಳ್ಳುತ್ತಾ ಬಂದುದನ್ನು ಆ ಮೇಡಮ್ ಗುರುತಿಸಿದರು. ಗಂಡು ಅಂದರೆ ಅಷ್ಟಾಗಿ ಒಪ್ಪದ, ಬ್ರಹ್ಮಚಾರಿಣಿಯಾಗೇ ಇದ್ದ ಅವರು ವಿದ್ಯಾರ್ಥಿಯಾಗಿ ನನ್ನ ಮೆಚ್ಚಿದರು. ಹೊಗಳಿದರು. ಬಹುಮಾನವನ್ನೂ ನೀಡಿದರು.

ಹೀಗೆ ಒಂದು ನಿರ್ದಿಷ್ಟ ಅಧ್ಯಯನದೊಂದಿಗೆ ನಾನು ನನ್ನ ಭಾಷೆ, ಓದು, ಸಮುದಾಯವನ್ನು ನೋಡುವ, ಸ್ವೀಕರಿಸುವ, ಮನುಷ್ಯ ಸಂಬಂಧಗಳ ಗಹನತೆಯನ್ನು ಅರ್ಥೈಸಿಕೊಳ್ಳುವ, ಹಿರಿಯರನ್ನು ಗೌರವಿಸುವ, ಸಮುದಾಯ ಸ್ವೀಕರಿಸುವ ಬದುಕನ್ನು ಕಟ್ಟಿಕೊಳ್ಳುವ ಬಗೆಯನ್ನು ಕಲಿಸುವ ವೌಲ್ಯಗಳನ್ನು ಕೊಡುವ ಶಿಕ್ಷಣ ವ್ಯವಸ್ಥೆ ಭಾರತದಂಥ ಬೃಹತ್ ರಾಷ್ಟ್ರಕ್ಕೆ ಬೇಕಾಗಿದೆ ಎಂಬುದು ಒಬ್ಬ ಶಿಕ್ಷಕನಾಗಿ ನನ್ನ ಸ್ಪಷ್ಟ ಅಭಿಪ್ರಾಯ. ನಾವೆಲ್ಲ ಕಲಿವಾಗ ಖಾಸಗಿ ಶಾಲೆಗಳು ಇರಲಿಲ್ಲ. ಇವೇ ಈಗ ಎಲ್ಲೆಲ್ಲೂ ತುಂಬಿಕೊಂಡಿವೆ.

ಇಡಿಯ ಶಿಕ್ಷಣ ವ್ಯವಸ್ಥೆ ಅಪವೌಲ್ಯವಾಗುತ್ತಿರುವುದಕ್ಕೆ ಇದು ಪ್ರಧಾನ ಕಾರಣವಾಗಿದೆ ಎನ್ನದೇ ವಿಧಿಯಿಲ್ಲ. ನಾವು ಫೀಸು ಕಟ್ಟುತ್ತೇವೆ, ಅದರಿಂದಾಗಿ ನಿಮಗೆ ಸಂಬಳ ಬರುತ್ತೆ ವಿನಾ ಹೇಗೆ ಬರ್ತಿತ್ತು ಅಂತ ಹೆತ್ತವರೇ ರಾಜಾರೋಷವಾಗಿ, ಸಾರಾಸಗಟಾಗಿ ಮಾತಾಡುವಾಗ, ನನ್ನ ಮುಂದೆ ಮಾತಾಡುವಾಗ ನನ್ನ ವಿದ್ಯಾರ್ಥಿ ಯಾವ ಗೌರವವನ್ನು ನನಗೆ ಕೊಡಲು ಸಾಧ್ಯ? ಶಾಲೆಯೊಂದರ ಆಂತರಿಕ ವ್ಯವಸ್ಥೆಗಳ ಬಗ್ಗೆ ಹೆತ್ತವರು ತಮ್ಮ ಮಕ್ಕಳ ಮುಂದೆ ಕ್ಷುಲ್ಲಕವಾಗಿ ಮಾತಾಡಿದರೆ, ಏಕವಚನದಲ್ಲಿ ತಮ್ಮ ಮಕ್ಕಳ ಶಿಕ್ಷಕರನ್ನು ಗೌರವಿಸಿದರೆ ಆ ಮಕ್ಕಳ ಮನಸಲ್ಲಿ ಯಾವ ಬಗೆಯ ಭಾವಗಳು ಶಾಲೆ, ಶಿಕ್ಷಕ, ಓದು, ಗೆಳೆತನ, ಸಮುದಾಯದ ಬಗ್ಗೆ ಬೆಳೆದೀತು ಎಂಬ ಸಾಮಾನ್ಯ ಪ್ರಜ್ಞೆಯೂ ದೊಡ್ಡವರೆನಿಸಿಕೊಂಡವರಲ್ಲಿ ಇಲ್ಲದೇ ಹೋದರೆ ಆ ಶಾಲೆಯೂ ಸಮುದಾಯವೂ ಹಾಳಾಗುವುದರಲ್ಲಿ ಸಂದೇಹವೇ ಇಲ್ಲ.

ಅಸಂಖ್ಯ ಪ್ರಮಾಣದಲ್ಲಿ ಖಾಸಗಿ ಹುಟ್ಟಿಕೊಂಡಾಗಲೇ ಶಿಕ್ಷಣ ಒಂದು ದಂಧೆಯಾಗಿ ತನ್ನ ಮೌಲ್ಯವನ್ನು ಕಳೆದುಕೊಂಡಿತು. ರಾಷ್ಟ್ರೀಯ ಸದುದ್ದೇಶದೊಂದಿಗೆ, ಸ್ಥಳೀಯ ಆದ್ಯತೆಗಳನ್ನು ಗಮನಿಸಿ ಖಾಸಗಿ ಶಾಲೆಗಳು ಹುಟ್ಟಿಕೊಂಡಿರುವುದಕ್ಕೂ, ಇದೊಂದು ದಂಧೆಯಾಗಿ ಹುಟ್ಟಿಕೊಂಡಿರುವುದಕ್ಕೂ ಅಪಾರ ವ್ಯತ್ಯಾಸವಿದೆ. ಮೊದಲನೆಯ ಆದ್ಯತೆಯನ್ನು ಇಟ್ಟುಕೊಂಡು ಹುಟ್ಟಿದ ಖಾಸಗಿ ಶಾಲೆಗಳಲ್ಲಿ ಅಂದಿನಿಂದ ಇಂದಿನವರೆಗೂ ಎಲ್ಲಾ ಬಗೆಯ ಮೌಲ್ಯಗಳು ಜೀವಂತವಾಗೇ ಇದ್ದು ಶಿಕ್ಷಣ ಶಿಕ್ಷಣ ರೂಪದಲ್ಲೇ ಇದೆ. ಅದರ ಘನತೆ, ಗೌರವ ಕಡಿಮೆಯಾಗಿಲ್ಲ.

ದಂಧೆಯ ರೂಪದಲ್ಲಿ ಹುಟ್ಟಿಕೊಂಡವು ಮಾತ್ರ ಹತ್ತು ತಿಂಗಳ ವ್ಯವಹಾರವನ್ನು ಮಾಡುತ್ತವೆಯಷ್ಟೆ. ಯಾವಾಗ ಉಳಿದವಂತೆ ಶಿಕ್ಷಣವೂ ವ್ಯವಹಾರವಾಯಿತೋ ಆವಾಗಲೇ ನಮ್ಮ ಮಕ್ಕಳು ನಿಜವಾದ ಶಿಕ್ಷಣದಿಂದ ವಂಚಿತರಾದರು. ಆದ್ದರಿಂದ ತಪ್ಪು ಮಕ್ಕಳದಲ್ಲ, ಶಿಕ್ಷಣವನ್ನು ದಂಧೆಯನ್ನಾಗಿ ಪರಿವರ್ತಿಸಿಕೊಂಡವರು ಮತ್ತು ಅಂಥ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸಿದವರದ್ದು ತಪ್ಪು.

ಪರಿಣಾಮವಾಗಿ ಸರಕಾರಿ ಶಾಲೆಗಳಲ್ಲಿ ಇದರ ಪ್ರಭಾವ ಬೀರಿ ಅವು ದಂಧೆಯ ರೂಪದ ಇಂಥ ಶಾಲೆಗಳನ್ನೇ ಅನುಕರಿಸಲು ಮುಂದಾಗಿ ಅತ್ತ ಅದೂ ಅಲ್ಲದ, ಇತ್ತ ಮೂಲಕ್ಕೂ ಸಿಗದ ರೂಪದಲ್ಲಿ ಗತಿಗೆಟ್ಟು ಅಸ್ತಿತ್ವವನ್ನು ಕಳೆದುಕೊಳ್ಳುತ್ತಾ ಬಂದವು. ಎಲ್ಲವನ್ನೂ ಗಮನಿಸಬೇಕಾದ ಸರಕಾರ ಪಂಚೇಂದ್ರಿಯಗಳು ಹಾಳಾದ ಮನುಷ್ಯನಂತೆ ವರ್ತಿಸುತ್ತಾ ಬಂತು.

ಕಾಲಕಳೆದಂತೆ ಅಧ್ಯಯನ, ಪರೀಕ್ಷೆ, ವೌಲ್ಯಮಾಪನ, ಅಂಕ ವಿತರಣೆ, ಪದವಿ ಪ್ರದಾನಗಳೆಲ್ಲ ಸಾಮೂಹಿಕವಾಗಿ ದಂಧೆಯಾಗಿ ಪರಿವರ್ತಿತವಾದವು. ದಂಧೆಯಾಗಿ ಪರಿವರ್ತನೆಗೊಂಡ ಶಾಲೆಗಳಲ್ಲಿ ಮಕ್ಕಳು ಮತ್ತು ವಿದ್ಯಾರ್ಥಿಗಳ ಮಧ್ಯೆ ಯಾವ ಮನುಷ್ಯ ಬಗೆಗಿನ ಅಥವಾ ಭಾವನಾತ್ಮಕವಾದ ಸಂಬಂಧವಿರಲು ಸಾಧ್ಯವಿಲ್ಲ ಎಂದೇ ನನ್ನ ಅಭಿಪ್ರಾಯ. ತಾನು ಕಲಿತ ಶಾಲೆಗೆ ವಿರುದ್ಧವಾಗಿ ಮಾತಾಡುವುದನ್ನು, ಅಸಡ್ಡೆಯಾಗಿ ನೋಡುವುದನ್ನು ನಾನು ನೋಡಿದ್ದೇನೆ. ನಾವೆಲ್ಲ ಕಲಿತ ಶಾಲೆಯ ಬಗ್ಗೆ ಈಗಲೂ ತೀರದ ಒಂದು ಭಾವ ನಮ್ಮಲ್ಲಿ ಆವರಿಸಿದೆ.

ನನ್ನ ಆಗಿನ ಮೇಷ್ಟ್ರುಗಳನ್ನು ಈಗ ನಾ ಮಾತಾಡಿಸುವಾಗಲೂ ಒಂದು ಅವ್ಯಕ್ತ ಭಯವಿದೆ. ಗೌರವವಿದೆ. ಕಾರಣ ಅವರು ಶಾಲೆಯಲ್ಲಿ ಮಾತ್ರ ನನಗೆ ಗುರುಗಳಾಗಿಲ್ಲವಾಗಿತ್ತು. ನಮ್ಮ ಮನೆಯ ಸದಸ್ಯರೊಂದಿಗೆ ನನ್ನ ವಿದ್ಯಾಭ್ಯಾಸದ ಚರ್ಚೆ ಮಾಡುತ್ತಿದ್ದರು. ಶಾಲೆಯಲ್ಲಿ ನಮ್ಮ ಓದಿನ ಬಗೆಗಿನ ವಿಚಾರವನ್ನು ಮನೆಗೆ ನಿತ್ಯ ಮುಟ್ಟಿಸುತ್ತಿದ್ದರು. ಊರಲ್ಲಿ ಏನೇ ಮಾಡುವಾಗಲೂ ಅವರ ಭಯ ಇದ್ದುದರಿಂದ ನಾವು ತಪ್ಪು ಮಾಡುವ ಸಾಧ್ಯತೆಗಳು ಕಡಿಮೆಯಾಗಿ, ನಮ್ಮನ್ನು ಬಹುಕಾಲದವರೆಗೆ ತಿದ್ದಿ ತೀಡಿ ಸರಿದಾರಿಗೆ ತಂದಿರುವುದರಿಂದ ನಾವು ದಾರಿ ತಪ್ಪಲಿಲ್ಲ.

ನನಗಷ್ಟೇ ನನ್ನ ಗುರುಗಳ ಪರಿಚಯವಿರದೇ ನಮ್ಮ ಇಡೀ ಮನೆತನ, ಊರು, ಕೇರಿಗೇ ಪರಿಚಯವಿರುವ ಆ ಕಾಲದಲ್ಲಿ ( ಈಗಲೂ ಅಂತ ವಾತಾವರಣದ ಶಾಲೆಗಳಿವೆ ) ಕಲಿತ ನಾವು ಬೇರೆಯೇನೂ ಅಲ್ಲದಿದ್ದರೂ ಮಾನಸಿಕವಾಗಿ, ಬೌದ್ಧಿಕವಾಗಿ, ಭಾವನಾತ್ಮಕವಾಗಿ ಶ್ರೀಮಂತರಾಗಿದ್ದೇವೆ ಎಂದು ಗಟ್ಟಿಯಾಗಿ ಹೇಳುತ್ತೇನೆ. ಕೊನೆಯಪಕ್ಷ ಇದಾವುದೂ ಇರದಿದ್ದರೂ ಅಡ್ಡಿಯಿಲ್ಲ, ತನಗೆ ಬೋಧಿಸುವ ಗುರುವಿನೊಂದಿಗೆ ಭಾವನಾತ್ಮಕವಾದ, ಮಾನಸಿಕವಾದ ಸಂಬಂಧವೂ ಇಲ್ಲದೇ ಹೋದರೆ ಏನನ್ನು ನಾವು ಕಲಿಯಲು ಸಾಧ್ಯವಿದೆ? ಎಲ್ಲವೂ ಕೇವಲ ಹಣದಲ್ಲಿಯೇ ನಿರ್ಧಾರವಾಗುತ್ತದೆ ಅಂತಾದರೆ ಯಾವ ಮೌಲ್ಯದ ಬಗ್ಗೆ ಎಷ್ಟು ಮಾತಾಡಿದರೇನು? ಕಡಿಮೆ ಫೀಸು ತಗೊಳ್ಳುವ ಖಾಸಗಿ ಶಾಲೆಯಾದರೂ ಪರವಾಗಿಲ್ಲ ಅಂತ ಹೇಳುವವರಿಗೆ ನಿಜವಾದ ಶಿಕ್ಷಣದ ಅಗತ್ಯವಾದರೂ ಏನಿದೆ? ನಾವು ಹಣ ಕೊಡ್ತೇವೆ, ನೀವು ನಮಗೆ ಅಂಕಗಳನ್ನು ಕೊಡಿ ಅಷ್ಟೇ ಅಂತ ಮಾತಾಡುವವರ ಮುಂದೆ, ಶಿಕ್ಷಣದ ಯಾವ ಮೌಲ್ಯವನ್ನು ಇಟ್ಟುಕೊಂಡು ಮಾತಾಡುತ್ತೀರಿ?

ನಮ್ಮ ನಡುವಿನ ಒಳ್ಳೆಯ ಉಪಾಧ್ಯಾಯರಲ್ಲಿ ಹೆಚ್ಚು ಕಲಿತಿರುವವರು ಇರುವುದು ಕಳಪೆಯಾಗಿ ಕಾಣುವ ಸರಕಾರಿ ಶಾಲೆಗಳಲ್ಲಿ. ಆದರೂ ಸರಕಾರಿ ಶಾಲೆಗಳೂ ಕುಸಿಯುತ್ತಿವೆ. ಕೇರಳದಲ್ಲಂತೂ ಮುಚ್ಚುತ್ತಿವೆ. ಕರ್ನಾಟಕ ಆ ಹಾದಿಯಲ್ಲಿದೆ. ಗಿಳಿಯೋದು ಶುಕಪಾಠದಂಥ ಕಳಪೆಯಾದ ಆಂಗ್ಲಮಾಧ್ಯಮ ಶಾಲೆಗಳು ಎಲ್ಲೆಲ್ಲೂ ರಾರಾಜಿಸುತ್ತಿರುವುದೇ ಇದಕ್ಕೆ ಕಾರಣ ಎಂಬುದು ಸರಕಾರ ಸೇರಿ ಎಲ್ಲರಿಗೂ ಅರ್ಥವಾಗಿರುವ ಸತ್ಯ. ಆದರೂ ಖಾಸಗಿ ಶಾಲೆಗಳ ಸ್ಥಾಪನೆಗೆ ಸರಕಾರವೇ ಪ್ರತಿವರ್ಷ ಆಹ್ವಾನ ನೀಡುತ್ತದೆ. ಉಳ್ಳವರು ಇಂಥ ಖಾಸಗಿ ಶಾಲೆಗಳಿಗೆ, ಬಡವರು ಸರಕಾರಿ ಶಾಲೆಗೆ ಹೋಗುವಂತಾಗಿ ಅಸಮಾನತೆಗೆ ಹುಟ್ಟಲು ಸರಕಾರವೇ ಕಾರಣವಾಯ್ತು. ಹೀಗಾದರೆ, ನಾವೆಲ್ಲ ಒಂದೇ ದೇಶದ ಮಕ್ಕಳು ಅಂತ ಹೇಗೆ ಹೇಳಲು ಸಾಧ್ಯ? ಇಂತಲ್ಲಿ ಜನರಲ್ಲಿ ಆರೋಗ್ಯವಂತ ಪ್ರಜ್ಞೆ ಮತ್ತು ಸಮುದಾಯ ಪ್ರಜ್ಞೆ ಹೇಗೆ ಬೆಳೆಯಲು ಸಾಧ್ಯ? ಇದು ಬಡವರಿಗೆ ಒಳ್ಳೆಯದಲ್ಲ ; ಉಳ್ಳವರಿಗೆ ಜೀವನಿಷ್ಠ ಜ್ಞಾನಾರ್ಜನೆಯ ದೃಷ್ಟಿಯಿಂದ ಹಿತವಲ್ಲ.

ಕನ್ನಡ ಮಾಧ್ಯಮದ ಕಲಿಕೆ ನಿಜವಾದುದಲ್ಲ ಎಂಬ ಪ್ರಜ್ಞೆ ಎಲ್ಲೆಲ್ಲೂ ಬೆಳೆದು, ಒಂದು ಶಾಲೆಯ ಅಸ್ತಿತ್ವವನ್ನು ಮಾಧ್ಯಮದ ಪ್ರಶ್ನೆಯಾಗಿ ನೋಡುವ ಮಟ್ಟಕ್ಕೆ ನಾವು ಕುಬ್ಜತೆಯನ್ನು ಬೆಳೆಸಿಕೊಂಡು ಬಿಟ್ಟಿದ್ದೇವೆ. ಅಷ್ಟಿಷ್ಟು ಕಾಸಿರುವವರೂ ತಮ್ಮ ಮಕ್ಕಳನ್ನು ಇಂಥ ಖಾಸಗಿ ಶಾಲೆಗೆ ಸೇರಿಸಲು ಮನಸು ಮಾಡಿರುವುದರಿಂದ ಸರಕಾರ ತನ್ನದು ಅಂತ ಅಂದುಕೊಂಡ ಯಾವ ಶಾಲೆಗಳನ್ನು ಭವಿಷ್ಯದಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲವೇನೋ ಅಂತ ನನಗನಿಸಲು ಶುರುವಾಗಿದೆ. ಹಾಗಂತ ಖಾಸಗಿ ಶಾಲೆಗಳ ಬಗ್ಗೆಯಾಗಲೀ, ಆಂಗ್ಲಮಾಧ್ಯಮ ಶಾಲೆಗಳ ಬಗ್ಗೆಯಾಗಲೀ ನನಗೆ ಅಸಡ್ಡೆ, ಅಗೌರವ ಖಂಡಿತಾ ಇಲ್ಲವೇ ಇಲ್ಲ. ನಮ್ಮ ನಮ್ಮ ಉಸಿರನ್ನು ನಾವಾಗಿಯೇ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುವ ಮೂಲಕ ಸ್ವಅಸ್ತಿತ್ವವನ್ನು ಉಳಿಸಿಕೊಳ್ಳುವ ಮೂಲಕ ಸುಂದರ, ಸ್ವಚ್ಛ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡಿದ, ಒಳ್ಳೆಯ ವಿದ್ಯಾರ್ಥಿಗಳ ಸಮೂಹವನ್ನೇ ಒಳಗೊಂಡ ಖಾಸಗಿ ಶಾಲೆಯಲ್ಲೇ ನಾನು ಅಧ್ಯಾಪನದಲ್ಲಿರುವುದು.

ನಮ್ಮ ಮಕ್ಕಳು ಈ ಕಾಲದಲ್ಲಿ ಆಂಗ್ಲ ಕಲ್ಪಿತ ಭ್ರಮಾಲೋಕದಲ್ಲಿ ಬದುಕುತ್ತಿರುವವರು ಅಂತ ಹೇಳುವ ಅನಂತಮೂರ್ತಿಯವರು ಸಾಮಾನ್ಯ ಶಾಲೆಗಳ ಬಗ್ಗೆ ಮಾತಾಡುತ್ತಾರೆ. ಎಲ್ಲಾ ವಿಷಯಗಳನ್ನೂ ಮಕ್ಕಳಿಗೆ ಆಪ್ತವಾಗಿ ಗೊತ್ತಿರುವ ದೇಶದ ಭಾಷೆಯಾದ ಕನ್ನಡದಲ್ಲೇ ಹೇಳಿಕೊಡಬೇಕು. ಇದರಿಂದ ವಿಷಯಜ್ಞಾನ ಬೆಳೆಯುತ್ತದೆ. ಐದನೆಯ ತರಗತಿಯಿಂದ ಇಂಗ್ಲಿಷನ್ನು ಮಾತನಾಡಲು ಕಲಿಸಿದರೆ ಸಾಕು.

ಇದರಿಂದ ಮುಂದಕ್ಕೆ ಅಗತ್ಯವಾದ ಇಂಗ್ಲಿಷಿನ ಭಯವೂ ಹೋಗುತ್ತದೆ ಎಂದು. ಮಾನವಿಕ ಅಭ್ಯಾಸಗಳನ್ನಾದರೂ ದೇಶದ ಭಾಷೆಯಲ್ಲಿ ನಮ್ಮ ಮಕ್ಕಳು ಓದುವಂತಾಗಬೇಕು. ಚರಿತ್ರೆ, ಭೂಗೋಳ, ಪರ್ಯಾವರಣ - ಇವೇ ಮುಂತಾದವುಗಳನ್ನು ದೇಶದ ಭಾಷೆಯಲ್ಲಿ ನಮ್ಮ ಮಕ್ಕಳು ಓದುವುದು ವೈಜ್ಞಾನಿಕವಾಗಿ ಸಮರ್ಥನೀಯ ಅನ್ನುವವರು ಅವರು. ಇದರಿಂದಾಗಿ ತಾನಿರುವ ಸುತ್ತಲ ಜಗತ್ತಿಗೆ ಸ್ಪಂದಿಸುವುದು ಸಾಧ್ಯವಾಗುತ್ತದೆನ್ನುವ ಅನಂತಮೂರ್ತಿಯವರು 1) ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವುದು 2) ಖಾಸಗಿ ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ ಮಾನವಿಕ ವಿಷಯಗಳನ್ನು ಮಕ್ಕಳ ಜ್ಞಾನಾಭಿವೃದ್ಧಿಯ ಸಲುವಾಗಿ ಕನ್ನಡದಲ್ಲಿ ಬೋಧಿಸುವುದು ಅತೀ ಮುಖ್ಯ ಎಂದು ಹೇಳುತ್ತಾ ಕನ್ನಡದ ಉಳಿವು, ನಮ್ಮ ಮಕ್ಕಳಲ್ಲಿ ಬೆಳೆಯಬೇಕಾದ ಸೃಜನಶೀಲತೆ ಬಗ್ಗೆ ತಮ್ಮ ಚಿಂತನೆಯನ್ನು ವ್ಯಕ್ತಪಡಿಸುತ್ತಾರೆ. ನಮ್ಮ ನಮ್ಮ ಮನೆಗಳಲ್ಲಿ ನಾವು ನಮ್ಮ ಶ್ರೀಮಂತ ಕನ್ನಡದಲ್ಲಿ ಮಾತಾಡೋಣ. ನಮ್ಮ ಮನೆಯ ಹಿತ್ತಲಿನ ದಣಪೆ ದಾಟಿ ಹೊರಜಗತ್ತಿಗೆ ಕಾಲಿಟ್ಟಾಗ, ಅಗತ್ಯ ಬಿದ್ದ ಸ್ಥಳದಲ್ಲಿ ಮಾತ್ರ ವ್ಯವಹಾರಕ್ಕೆ ಇಂಗ್ಲಿಷನ್ನು ಬಳಸೋಣ.

ಗಾಂಧಿ ಹೇಳಿದ ಮಾತು: ಒಂದು ಅತ್ಯುತ್ತಮ ಸೃಜನಶೀಲ ಭಾರತೀಯ ಮನಸಿನಲ್ಲಿ ಎರಡು ಅಂಶಗಳು ಕೂಡಿಕೊಂಡಿರುತ್ತವೆ. 1) ನಮ್ಮ ನೆಲದ ಪರಂಪರೆಯಲ್ಲಿ ಬೇರೂರಿ ಅದರ ಸತ್ವವನ್ನು ಹೀರಿಕೊಳ್ಳಬಲ್ಲ ಶಕ್ತಿ. 2) ಹೊರಗಿನ ನಿತ್ಯನೂತನ ಆಕಾಶಕ್ಕೆ ತೆರೆದಿದ್ದು, ಎಲ್ಲೆಡೆಯಿಂದಲೂ ಪ್ರೇರಣೆಗಳನ್ನು ಪಡೆದುಕೊಳ್ಳಬಲ್ಲ ಶಕ್ತಿ. ಕುವೆಂಪು, ಕಾರಂತ, ಡಿವಿಜಿ, ಮಾಸ್ತಿ, ಪುತಿನ, ಶ್ರೀರಂಗ - ಇವರಲ್ಲಿ ಇವೆರಡನ್ನೂ ಕೂಡಿದ ವ್ಯಕ್ತಿತ್ವವನ್ನು ಕಾಣಬಹುದು. ನಮ್ಮ ನಮ್ಮ ವೈಚಾರಿಕತೆ ಹುಟ್ಟೋದು ಕೂಡ ಇಲ್ಲಿಂದಲೇ. ಆಧುನಿಕತೆ ಎಷ್ಟು ಬೆಳೆದಿದೆ ಎಂದರೆ ಯಾವ ದೇಶೀಯತೆಯನ್ನೂ ಉಳಿಸಿಕೊಳ್ಳಲಾಗದೇ ಹೋಗುವ ಬರ್ಬರತೆ ಆವರಿಸಿದೆ. ಕನ್ನಡ ಪೂರ್ಣವಾಗಿ ಉಳಿಯದೇ ಅಳಿಯದೇ ಒಂದು ಅತಂತ್ರವಾದ ಸ್ಥಿತಿಯಲ್ಲಿ ಕೋಮಾವಸ್ಥೆಯನ್ನು ತಲುಪಿದ ಅವಸ್ಥೆಗೆ ಹೋಗಿರುವುದರಿಂದ ನಮ್ಮ ಮಕ್ಕಳು ನಮ್ಮ ಮನೆಯ ಮಕ್ಕಳಾಗಿ ಬೆಳೆಯುತ್ತಿಲ್ಲ ಅನಿಸಲು ಶುರುವಾಗಿದೆ

. ಇದು ಜಾಗತೀಕರಣದ ಪರಿಣಾಮ. ಇದರಿಂದಾಗಿ ಅತ್ತ ಆಂಗ್ಲಭಾಷೆಯೂ ಸರಿಯಾಗಿ ಬರದ, ಇತ್ತ ಕನ್ನಡವೂ ಸರಿಯಾಗಿ ಬರದ ಒಂದು ಎಡವಟ್ಟು ಜನಾಂಗ ನಮ್ಮ ದೇಶದಲ್ಲಿ ಬೆಳೆಯುತ್ತಿದೆ ಎನ್ನುವ ಬನ್ನಂಜೆಯವರ ಮಾತು ನೆನಪಾಗುತ್ತಿದೆ. ಸರಕಾರಿ ಶಾಲೆಗಳಲ್ಲಿ ಬೋಧನೆ ಮಾಡುವ ಎಷ್ಟೋ ಅಧ್ಯಾಪಕರೂ ತಮ್ಮ ಮಕ್ಕಳನ್ನು ಇಂಗ್ಲಿಷಿನ ವ್ಯಾಮೋಹ ಮತ್ತು ಆದಷ್ಟು ಬೇಗ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಲೀ ಎಂಬ ಮಹದಾಸೆಯಿಂದ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳಿಗೆ ಸೇರಿಸಿ, ಕನ್ನಡದ ಉಳಿವಿನ ಬಗ್ಗೆ ನಾಟಕೀಯವಾಗಿ ಮಾತನಾಡುತ್ತ ಒಳಗೊಳಗೇ ಅಸಹ್ಯವೂ ಅಣಕವೂ ಮಾಡುತ್ತಾ, ಕನ್ನಡಿಗರಾಗಿ ಬದುಕುವ ದುರಂತವನ್ನು ಯಾರು ನೋಡಿಲ್ಲ ಹೇಳಿ! ದೇಶವನ್ನು ಬಡತನದಿಂದ ಮೇಲೆತ್ತಲು ನಮ್ಮ ಸರಕಾರ ಶತಪ್ರಯತ್ನ ಮಾಡುತ್ತಿದೆ ಎಂದು ಸರಕಾರದ ಹಣ ತಿಂದು ತೇಗುವ ರಾಜಕಾರಣಿಗಳು ಮಾತಾಡಿದರೆ ಹೇಗಿರುತ್ತದೋ ಹಾಗಿದೆ ಇವರ ಮಾತಿನ ಅರ್ಥ.

ಕನ್ನಡವನ್ನು ಹತ್ತನೆಯ ತರಗತಿವರೆಗೆ ಮಾತ್ರ ಓದಿದರೆ ಸಾಕೆಂಬ ಮನೋಸ್ಥಿತಿ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ನಮ್ಮ ಈ ರೋದನೆ ಖಂಡಿತಾ ಇದ್ದೇ ಇರುತ್ತದೆ. ಇದರ ಫಲವಾಗಿಯೇ ಮತ್ತೊಬ್ಬ ಹುಯಿಲಗೋಳ, ಸಾಲಿ ರಾಮಚಂದ್ರರಾಯರು, ತರಾಸು, ಎ.ಅರ್, ಕೃಷ್ಣ ಶಾಸ್ತ್ರೀ, ಕುವೆಂಪು, ಕಾರಂತ, ಬೇಂದ್ರೆ, ಮಾಸ್ತಿ, ಪುತಿನ, ಡಿವಿಜಿ, ಅಡಿಗ, ಸಿಎನ್‌ಆರ್ ರಾವ್, ಯುಅರ್ ರಾವ್, ಕೆಂಗಲ್, ಕೆ ಸಿ ರೆಡ್ಡಿ, ನಿಟ್ಟೂರು, ನಿಜಲಿಂಗಪ್ಪ - ಮುಂತಾದ ಕನ್ನಡದ ಮಹನೀಯರ ಛಾಪನ್ನು ಹೊಂದಿ ಹುಟ್ಟಿಬರಲು ಇಂದಿಗೂ ಸಾಧ್ಯವಾಗಿಲ್ಲ. ಅನುಕರಣೆಗೂ ಸಾಧ್ಯವಾಗಿಲ್ಲದ ಘನತೆಯ ಬದುಕನ್ನು ಬಾಳಿದವರವರು. ಕಾರಣ ಅಂಥ ಜೀವನ ಮೌಲ್ಯಗಳನ್ನು ಕಲಿಸುವ ಯಾವ ಸರಕಾರಿ ಶಾಲೆಗಳೂ, ಖಾಸಗಿ ಶಾಲೆಗಳೂ ಇಂದಿಲ್ಲ.

ಒಂದು ಸತ್ಯ ಕತೆಯೊಂದಿಗೆ ನನ್ನ ಬರಹವನ್ನು ಮುಗಿಸುತ್ತೇನೆ; ಒಂದು ಸಣ್ಣ ಹಳ್ಳಿಯಲ್ಲಿ ಹೈಸ್ಕೂಲು ಹುಡುಗಿಯರ ಫೈನಲ್ ವಾಲಿಬಾಲ್ ಪಂದ್ಯ ನಡೆಯುತ್ತಿತ್ತು. ಒಂದು ಟೀಮು ಖಾಸಗಿ ಆಂಗ್ಲಮಾಧ್ಯಮ ಶಾಲೆಯದ್ದು. ಇನ್ನೊಂದು ಸ್ಥಳೀಯವಲ್ಲದ ಒಂದು ಸರಕಾರಿ ಶಾಲೆಯದ್ದು. ಈ ಖಾಸಗಿ ಶಾಲೆಯ ಮಕ್ಕಳು ಆಟದಲ್ಲಿ ವಿಶೇಷ ತರಬೇತು ಪಡೆದವರು, ಒಳ್ಳೆಯ ಶೂ, ಡ್ರೆಸ್ ಧರಿಸಿದವರು. ಕಟ್ಟುಮಸ್ತಾದ ಶರೀರದೊಂದಿಗೆ ಚೆನ್ನಾಗಿ ಆಟದ ತಂತ್ರಗಳನ್ನು ಕಲಿತವರು. ಹಾರಿ ಹಾರಿ ವಿವಿಧ ಭಂಗಿಗಳಲ್ಲಿ ಅವರು ಹೊಡೆಯುವುದನ್ನು ನೋಡಿಯೇ ಈ ಸರಕಾರಿ ಶಾಲೆಯ ಟೀಮು ಸೋಲುವುದು ಗ್ಯಾರಂಟಿ ಅಂತ ನನ್ನನ್ನೂ ಸೇರಿ ಅಲ್ಲಿರುವ ಎಲ್ಲರಿಗೂ ಅನಿಸಿತ್ತು. ಪಾಪ, ಸರಕಾರಿ ಶಾಲೆ ಮಕ್ಕಳಿಗೆ ಕಾಲಿಗೆ ಶೂ ಇಲ್ಲ. ಧರಿಸಲು ಒಳ್ಳೆಯ ಡ್ರೆಸ್ ಇಲ್ಲ. ಬಡಕಲು ಗಟ್ಟಿ ಶರೀರವಿದೆ. ಆಟ ಶುರುವಾಯ್ತು. ಅಂದುಕೊಂಡಂತೆ ಖಾಸಗಿ ಶಾಲೆ ಟೀಮು ಅಂಕಗಳನ್ನು ಗಳಿಸುತ್ತಾ ಗಳಿಸುತ್ತಾ ಗೆಲ್ಲುವ ಹಂತಕ್ಕೆ ಬರುತ್ತಾ ಬಂತು. ಆದರೆ, ನೋಡುವವರೆಲ್ಲರೂ ಪ್ರೋತ್ಸಾಹ ಮಾಡುತ್ತಿರುವುದು ಸರಕಾರಿ ಶಾಲೆ ಟೀಮಿಗೆ. ಅವರು ಹಾರಿ ಒಂದು ಶಾಟ್‌ಗಳನ್ನು ಮಾಡಿದರೂ ‘ಹೋ’ ಅಂತ ಕೂಗುತ್ತಾ ಇದ್ರು. ಅಂಥದೇ ಶಾಟ್‌ಗಳನ್ನು ಖಾಸಗಿ ಶಾಲೆ ಟೀಮು ಹೊಡೆದ್ರೂ ಯಾರೂ ಕೂಗಿ ಪ್ರೋತ್ಸಾಹ ಮಾಡ್ತಿರಲಿಲ್ಲ. ನೋಡುತ್ತಿದ್ದ ನಂಗೆ ಅಚ್ಚರಿಯಾಯಿತ್ತು. ಅಂತೂ ಎರಡು ತಾಸಿನ ಅವರ ಆಟ ಕೊನೆಗೆ ಖಾಸಗಿ ಶಾಲೆ ಟೀಮು ಗೆಲ್ಲುವುದರೊಂದಿಗೆ ಮುಗಿತು. ಆನಂತರ ಬಹುಮಾನ ವಿತರಣೆ.

ಬೆಸ್ಟ್ ಪಾಸರ್, ಸ್ಮೆಷರ್, ಡಿಫೆೆನ್ಸರ್ ಎಲ್ಲವೂ ಖಾಸಗಿ ಶಾಲೆಯ ಟೀಮಿಗೆ ಕೊಟ್ಟರು. ವಿಜೇತ ಟೀಮಿಗೆ ಕೊಡಬೇಕಾದ ಪಾರಿತೋಷಕವನ್ನು ಕೊಟ್ಟಾಯಿತು. ಆದರೆ ಯಾರದ್ದೂ ಅಷ್ಟೊಂದು ಹುರುಪಿನ ಚಪ್ಪಾಳೆ, ಕೂಗು, ಸಿಳ್ಳೆಯಿಲ್ಲ. ಆದರೆ ರನ್ನರ್ ಅಪ್ ಪಾರಿತೋಷಕವನ್ನು ಸರಕಾರಿ ಶಾಲೆ ಟೀಮಿಗೆ ಕೊಡುವಾಗ ಮಾತ್ರ ಕಿವಿ ಕಿತ್ಕೊಂಡು ಹೋಗುವಷ್ಟು ಕೂಗು, ಸಿಳ್ಳೆ, ಚಪ್ಪಾಳೆಯ ಹರುಷ. ಇದೆಂಥ ವಿಚಿತ್ರ ನೋಡಿ !!! ಹಾಗಂತ ಹಾಗೆ ಕೂಗಿದವರಲ್ಲಿ ಬಹುಪಾಲು ಮಂದಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲೇ ಕಲಿತವರು. ಅಲ್ಲಿ ಸೇರಿದವರೆಲ್ಲ ಬೇರೆ ಬೇರೆ ಊರಿನಿಂದ ಬಂದವರು. ಅವರು ಯಾರು ಹಾಗೆ ಮಾಡಬೇಕು ಅಂತ ಮೊದಲೇ ನಿರ್ಧರಿಸಿಕೊಂಡು ಬಂದು ಆ ರೀತಿ ವ್ಯಕ್ತಪಡಿಸಿದವರಲ್ಲ. ಅಲ್ಲಿ ಬಂದು ಒಟ್ಟಾದವರಂತೂ ಖಂಡಿತಾ ಅಲ್ಲ.ಯಾಕೆ ಹೀಗಾಯ್ತು? ಕನ್ನಡ ಶಾಲೆಗಳ ಬಗ್ಗೆ ಜನರಲ್ಲಿ ಇನ್ನೂ ಒಲವು ಸಾಯಲಿಲ್ಲವೇ? ಅಥವಾ ಕನ್ನಡತನ ಅಂತ ನಾವೇನು ಹೇಳ್ತೀವಿ ಅದು ನಮ್ಮನ್ನು ಬಿಡಲಿಲ್ಲವೇ? ಅಥವಾ ಅಂತರಾಳದಲ್ಲಿ ಒಪ್ಪದ ಆಂಗ್ಲದ ಕುರಿತಾದ ನಿಲುವೇ? ಅದು ನಮ್ಮದಲ್ಲದ ಎಂಬ ಅರಿವೇ? ಅಥವಾ ಅಂಥ ಶಾಲೆಗಳ ಬಗ್ಗೆ ಇರುವ ಪೂರ್ವಾಗ್ರಹವೇ? - ಯಾವುದೂ ಅರ್ಥವಾಗದೇ ನನ್ನ ಮನಸ್ಸೂ ಸರಕಾರಿ ಶಾಲೆಯ ಟೀಮನ್ನೇ ಪ್ರೋತ್ಸಾಹ ಮಾಡಿತ್ತು.

Writer - ಟಿ.ದೇವಿದಾಸ್

contributor

Editor - ಟಿ.ದೇವಿದಾಸ್

contributor

Similar News