ಬ್ಯಾಂಕಿಗೆ ಕನ್ನ ಹಾಕಿದವನ ಸಾಲ ಮನ್ನಾ ಎಷ್ಟು ಸರಿ?
ರೈತರ ಸಾಲಮನ್ನಾ ಕುರಿತಂತೆ ಪರವಿರೋಧ ಚರ್ಚೆ ತೀವ್ರಗೊಂಡಿದೆ. ಬಜೆಟ್‌ನಲ್ಲಿ ಬಡವರಿಗೆ, ದುರ್ಬಲ ವರ್ಗಗಳಿಗೆ ಯೋಜನೆಗಳನ್ನು ಘೋಷಿಸಿದಾಕ್ಷಣ ‘ಚುನಾವಣಾ ಓಲೈಕೆ’ ಎಂಬ ಆರೋಪಗಳು ಇತ್ತೀಚಿನ ದಿನಗಳಲ್ಲಿ ತೀವ್ರವಾಗುತ್ತಿವೆ. ಈ ಆರೋಪಗಳ ನೇತೃತ್ವ ವಹಿಸಿಕೊಂಡಿರುವುದು ಕಾರ್ಪೊರೇಟ್ ಕೃಪಾಪೋಷಿತ ಮಾಧ್ಯಮಗಳು ಎನ್ನುವುದರಲ್ಲಿ ಎರಡು ಮಾತಿಲ್ಲ.
ಬಡವರ, ದಲಿತರ, ಅಲ್ಪಸಂಖ್ಯಾತ ವರ್ಗದವರ, ಶೋಷಿತರ ಓಲೈಕೆ ಇಲ್ಲದೆ ಚುನಾವಣೆಯನ್ನು ಗೆಲ್ಲಬಹುದು ಎಂದು ರಾಜಕಾರಣಿಗಳು ಭಾವಿಸುವುದೇ ಪ್ರಜಾಸತ್ತೆಯ ಅತೀ ದೊಡ್ಡ ಸೋಲು. ಉತ್ತರ ಪ್ರದೇಶದ ಫಲಿತಾಂಶವನ್ನು ಮುಂದಿಟ್ಟುಕೊಂಡು ಕೆಲವು ರಾಜಕೀಯ ವಿಮರ್ಶಕರು ‘ಓಲೈಕೆಗಳಿಲ್ಲದೆಯೇ ಚುನಾವಣೆಯನ್ನು ಗೆಲ್ಲಬಹುದು ಎನ್ನುವುದನ್ನು ಬಿಜೆಪಿ ತೋರಿಸಿಕೊಟ್ಟಿದೆ’ ಎಂದು ಬರೆದು ಬಿಟ್ಟಿದ್ದರು.
ಜನಸಾಮಾನ್ಯರು, ಬಡವರ್ಗವನ್ನು ಓಲೈಸದೇ ಕಾರ್ಪೊರೇಟ್‌ಶಕ್ತಿಗಳು ಮತ್ತು ಮತೀಯ ಶಕ್ತಿಗಳನ್ನು ಓಲೈಸಿ ಸುಲಭದಲ್ಲಿ ಚುನಾವಣೆಯನ್ನು ಗೆಲ್ಲಬಹುದು ಎನ್ನುವುದು ರಾಜಕಾರಣಿಗಳಿಗೆ ಮನದಟ್ಟಾದರೆ ಅದು ಪ್ರಜಾಸತ್ತೆಯ ಯಶಸ್ವಿ ಹೇಗಾಗುತ್ತದೆ? ಇಂದಿರಾಗಾಂಧಿಯ ಕಾಲದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ದಲಿತರು, ಬಡವರೇ ಕೇಂದ್ರ ಬಿಂದುವಾಗಿದ್ದರು. ‘ಗರೀಬಿ ಹಠಾವೋ’ ‘ಭೂಸುಧಾರಣೆ ಕಾಯ್ದೆ’ ‘ಬ್ಯಾಂಕ್ ರಾಷ್ಟ್ರೀಕರಣ’ ‘ದಲಿತರ ಉದ್ಧಾರ’ ಮೊದಲಾದವುಗಳನ್ನು ಇಟ್ಟುಕೊಂಡು ಇಂದಿರಾ ಗಾಂಧಿ ಚುನಾವಣೆಯನ್ನು ಗೆದ್ದರು.
ಆದರೆ ಇಂದು ಅವೆಲ್ಲವೂ ತಿರುವು ಮುರುವು ಆಗುತ್ತಿದೆ. ಕಾರ್ಪೊರೇಟ್‌ಗಳಿಗೆ ಅನುಕೂಲ ಮಾಡಿಕೊಟ್ಟರೆ, ಇಡೀ ಚುನಾವಣೆಯನ್ನು ಸುಲಭದಲ್ಲಿ ಗೆದ್ದು ಬಿಡಬಹುದು ಎನ್ನುವುದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಆದುದರಿಂದಲೇ ಬಡವರ, ದಲಿತರ, ಅಲ್ಪಸಂಖ್ಯಾತರ, ದುರ್ಬಲವರ್ಗಗಳ ಪರವಾಗಿ ಯಾವ ಯೋಜನೆಗಳೂ ಇಲ್ಲದ ಕೇಂದ್ರ ಬಜೆಟ್ ‘ಅಭಿವೃದ್ಧಿ ಪರ’ ಬಜೆಟ್ ಆಗಿ ಮಾಧ್ಯಮಗಳಿಗೆ ಭಾಸವಾಗುತ್ತದೆ. ಕಾರ್ಪೊರೇಟ್ ಶಕ್ತಿಗಳಿಗೆ ಪೂರಕವಾಗಿ ಬಜೆಟನ್ನು ರೂಪಿಸುವ ಕೆಲಸ ನಡೆಯುತ್ತಿದೆ. ಇಂದು ಮಾಧ್ಯಮಗಳೂ ಕಾರ್ಪೊರೇಟ್ ಹಣದ ತಳಹದಿಯ ಮೇಲೆ ನಿಂತಿರುವುದರಿಂದ, ಮತ ಹಾಕುವವನ ಓಲೈಕೆಗಿಂತ, ಮತಗಳನ್ನು ನಿಯಂತ್ರಿಸುವ ಅದೃಶ್ಯ ಶಕ್ತಿಯನ್ನು ಓಲೈಸುವುದೇ ಹೆಚ್ಚು ಅನುಕೂಲಕರ ಎಂದು ಭಾವಿಸುವ ಮನಸ್ಥಿತಿ ರಾಜಕಾರಣಿಗಳಲ್ಲಿ ನಿರ್ಮಾಣವಾಗುತ್ತಿದೆ.
ಆದುದರಿಂದಲೇ ಸಿದ್ದರಾಮಯ್ಯ ಜನಪರವಾದ ಯೋಜನೆಗಳನ್ನು ಘೋಷಿಸಿದಾಗ ಮಾಧ್ಯಮಗಳಿಗೆ ಖಜಾನೆಯನ್ನು ಖಾಲಿ ಮಾಡುವ ಸಂಚಿನಂತೆ ಕಾಣುತ್ತದೆ. ರೈತರ ಸಾಲಮನ್ನಾ ಆದರೆ ಬ್ಯಾಂಕ್‌ಗಳು ಮುಳುಗಿ ಹೋಗುತ್ತವೆ ಎಂಬಂತೆ ಅವು ಅರಚಾಡುತ್ತವೆ. ಇದೇ ಸಂದರ್ಭದಲ್ಲಿ ಬೃಹತ್ ಉದ್ಯಮಿಗಳು ಬ್ಯಾಂಕ್‌ನಿಂದ ಮಾಡಿರುವ ಸಹಸ್ರಾರು ಕೋಟಿ ರೂ. ಸಾಲಗಳು ಬೇರೆ ಬೇರೆ ಹೆಸರುಗಳಲ್ಲಿ ಮನ್ನಾ ಆಗುತ್ತಿರುವುದರ ಕುರಿತಂತೆ ಮಾಧ್ಯಮಗಳಿಗೆ ಯಾವ ಆಸಕ್ತಿಯೂ ಇಲ್ಲ. ಇಂದು ದೇಶದ ಬ್ಯಾಂಕುಗಳು ಮುಳುಗುವ ಸ್ಥಿತಿಗೆ ಬಂದಿರುವುದು ಇಂತಹ ಭಾರೀ ಉದ್ಯಮಿಗಳ ಸಾಲ ವಿವಿಧ ರೀತಿಯಲ್ಲಿ ಮನ್ನಾ ಆಗುತ್ತಿರುವುದರಿಂದ. ಇತ್ತೀಚೆಗೆ ಎಸ್‌ಬಿಐ ಸಹಸ್ರಾರು ಕೋಟಿ ರೂಪಾಯಿಗಳನ್ನು ರೈಟ್‌ಆಫ್ ಮಾಡಿರುವುದು ಮಾಧ್ಯಮಗಳಲ್ಲಿ ಚರ್ಚೆ ಆಯಿತು.
ಆದರೆ ಕೇಂದ್ರ ವಿತ್ತ ಸಚಿವರು ‘ರೈಟ್ ಆಫ್ ಎಂದರೆ ಸಾಲ ಮನ್ನಾ ಅಲ್ಲ’ ಎಂದು ತೇಲಿಸಿ, ಬ್ಯಾಂಕನ್ನು, ಸಾಲ ಮರುಪಾವತಿ ಮಾಡದ ಉದ್ಯಮಿಗಳನ್ನು ಸಮರ್ಥಿಸಿಕೊಂಡರು. ರೈಟ್ ಆಫ್ ಎಂದರೆ ಸಾಲವನ್ನು ವಾರ್ಷಿಕ ಲೆಕ್ಕಾಚಾರಗಳಿಂದ ಬದಿಗಿಡುವುದು. ಅಂದರೆ ಅವುಗಳನ್ನು ವಸೂಲಿ ಮಾಡಲು ಅಧಿಕಾರಿಗಳಿಗೆ, ಸಿಬ್ಬಂದಿಗೆ ಯಾವುದೇ ಒತ್ತಡ ಇರುವುದಿಲ್ಲ. ಬರಬೇಕಾದ ಸಾಲವನ್ನೇ ವಸೂಲಿ ಮಾಡಲು ಸಿಬ್ಬಂದಿ ಒದ್ದಾಡುತ್ತಿರುವಾಗ, ಲೆಕ್ಕದಿಂದ ಹೊರಗಿಟ್ಟಿರುವ ಸಾಲವನ್ನು ಸಿಬ್ಬಂದಿ ಅತ್ಯುತ್ಸಾಹದಿಂದ ವಸೂಲಿ ಮಾಡುವುದು ಸಾಧ್ಯವೇ? ಒಂದು ರೀತಿಯಲ್ಲಿ ಬ್ಯಾಂಕ್‌ಗಳು ಆ ಹಣದ ಆಸೆಯನ್ನು ಕೈ ಬಿಟ್ಟಿರುತ್ತವೆ.
ಇದೀಗ ಹಲವು ಬ್ಯಾಂಕುಗಳನ್ನು ಮುಳುಗಿಸಿ ವಿದೇಶದಲ್ಲಿ ಅಡಗಿಕೊಂಡಿರುವ ವಿಜಯ ಮಲ್ಯ ಈ ದೇಶದ ಬ್ಯಾಂಕುಗಳಿಗೆ ಇನ್ನೊಂದು ಕೊಡುಗೆಯನ್ನು ನೀಡಿದ್ದಾರೆ.ಒಂದು ರೀತಿಯಲ್ಲಿ ಅವರು ಬ್ಯಾಂಕುಗಳಿಗೆ ಮಾಡುವ ಉಪಕಾರವಿದು. ತಾನು ಮಾಡಿರುವ 9 ಸಾವಿರ ಕೋಟಿ ರೂ. ಸಾಲ ಬಾಕಿಯಲ್ಲಿ ರಿಯಾಯಿತಿ ತೋರಿಸಿದರೆ ಏಕ ಕಾಲದಲ್ಲಿ ಪಾವತಿಸಿ ಇತ್ಯರ್ಥ ಮಾಡಲು ಸಿದ್ಧ ಎಂದು ಅವರು ಹೇಳಿದ್ದಾರೆ. ಆ ಮೂಲಕ ಅವರನ್ನು ಸಾಲಮುಕ್ತರನ್ನಾಗಿಸಿ, ಮತ್ತೆ ಈ ದೇಶದಲ್ಲಿ ಸಂಭಾವಿತ ಉದ್ಯಮಿಯಾಗಿ ಓಡಾಡಲು ಬ್ಯಾಂಕುಗಳು ಮತ್ತು ಸರಕಾರ ಅವಕಾಶ ನೀಡಬೇಕಂತೆ. ದೊಡ್ಡ ಸಾಲಗಳನ್ನು ಪಾವತಿಸಲು ಬೃಹತ್ ಉದ್ಯಮಿಗಳು ವಿಫಲರಾದಾಗ, ಅಂತಿಮವಾಗಿ ಎರಡೂ ಪಕ್ಷದವರು ಜೊತೆಗೂಡಿ ಒಂದು ಮೊತ್ತವನ್ನು ನಿರ್ಧರಿಸುತ್ತಾರೆ.
ಇದರಿಂದಾಗಿ ಬ್ಯಾಂಕುಗಳು ಸಂಪೂರ್ಣ ಹಣ ಕಳೆದುಕೊಳ್ಳುವುದರಿಂದ ಬಚಾವಾಗುತ್ತವೆ. ಹಾಗೆಯೇ ಉದ್ಯಮಿಗಳೂ ಕಾನೂನು ಕ್ರಮಗಳಿಂದ ಬಚಾವಾಗುತ್ತಾರೆ. ಆದರೆ ಇದು ಅನೇಕ ಸಂದರ್ಭಗಳಲ್ಲಿ ಉದ್ಯಮಿಗಳಿಗೆ ಪೂರಕವಾಗಿರುತ್ತದೆ. ನಿರ್ಧಾರವಾಗುವ ಮೊತ್ತ ಸಾಲ ಬಾಕಿಯ ಶೇ. 20 ಅಥವಾ ಶೇ. 30ರಷ್ಟೇ ಇರುತ್ತದೆೆ. ಕೆಲವು ಉದ್ಯಮಿಗಳು ತಾವಿನ್ನೇನು ಮುಳುಗುತ್ತೇವೆ ಎಂದು ಗೊತ್ತಾದಾಗ ಇನ್ನಷ್ಟು ಸಾಲಗಳನ್ನು ಮೈಮೇಲೆ ಎಳೆದುಕೊಳ್ಳುವುದೂ ಇದೆ. ಅಂದರೆ ಮುಳುಗಿಸುವುದಕ್ಕೋಸ್ಕರವೇ ಸಾಲವನ್ನು ಮಾಡುವ ಪರಿಪಾಠವನ್ನು ಅದೆಷ್ಟೋ ಉದ್ಯಮಿಗಳು ಹೊಂದಿದ್ದಾರೆ. ಏಕಕಾಲದ ಪಾವತಿಯ ಕೊಡುಗೆಯನ್ನು ಮಲ್ಯ ಮುಂದಿರಿಸಿದ್ದೂ ಇದೇ ಕಾರಣಕ್ಕೆ.
ಇದರಿಂದಾಗಿ ಈತ ಪಾವತಿಸಬೇಕಾದ ಸುಮಾರು ಶೇ. 70 ರಷ್ಟು ಸಾಲ ಮನ್ನಾ ಆಗುವ ಸಾಧ್ಯತೆಗಳಿವೆ. ಕೆಲವೊಮ್ಮೆ ಏಕಕಾಲದ ಪಾವತಿಯನ್ನು ಕಂತುಗಳಲ್ಲಿ ಕಟ್ಟುವ ಭರವಸೆಯನ್ನು ನೀಡುವುದೂ ಇದೆ. ಅಂತಿಮವಾಗಿ ಒಂದೆರಡು ಕಂತುಗಳನ್ನು ಕಟ್ಟಿ ಸುಮ್ಮಗಾಗುವ ಉದ್ಯಮಿಗಳೂ ಇದ್ದಾರೆ. ಕೊನೆಯಲ್ಲಿ ಅಳಿದುಳಿದ ಸಾಲ ರೈಟ್ ಆಫ್ ಆಗುತ್ತವೆ. ಬ್ಯಾಂಕುಗಳನ್ನು ಮುಳುಗಿಸಿದ ಉದ್ಯಮಿ ಸಮಾಜದಲ್ಲಿ ಗಣ್ಯನಂತೆ ಮೆರೆಯುತ್ತಾನೆ.
ರೈತರ ಬಡ್ಡಿಮನ್ನಾ, ಸಾಲಮನ್ನಾದಿಂದ ಬ್ಯಾಂಕುಗಳು ಮುಳುಗುತ್ತವೆ, ಖಜಾನೆ ಖಾಲಿಯಾಗುತ್ತವೆ ಎನ್ನುವ ಜನರು ಮೊದಲು ಮೇಲಿನ ಉದ್ಯಮಿಗಳಿಗೆ ಆಗುತ್ತಿರುವ ಮನ್ನಾಗಳ ಬಗ್ಗೆ ಧ್ವನಿಯೆತ್ತಬೇಕಾಗಿದೆ. 10 ಸಾವಿರ ರೂಪಾಯಿ ಸಾಲ ಪಡೆದು, ಬಡ್ಡಿ ಕಟ್ಟಲಾಗದೆ, ಮನೆ ಜಪ್ತಿಗೊಳಗಾಗಿ ಅಂತಿಮವಾಗಿ ಅವಮಾನದಿಂದ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಪರವಾಗಿ ಸರಕಾರ ಓಲೈಕೆ ರಾಜಕಾರಣ ಮಾಡಿದರೆ ಅದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆಯೇ ಹೊರತು, ನಷ್ಟವಾಗುವುದಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಬರದಿಂದ ಕಂಗೆಟ್ಟು ಈಗಾಗಲೇ ಬಡ್ಡಿ ಮೇಲೆ ಬಡ್ಡಿ ಕಟ್ಟಿ ನಷ್ಟಕ್ಕೊಳಗಾಗಿರುವ ಸಣ್ಣ ರೈತರ ಸಾಲವನ್ನು ಮನ್ನಾ ಮಾಡುವ ಬಗ್ಗೆ ಒಲವು ತೋರಿಸುವ ಅಗತ್ಯವಿದೆ. ಇದೇ ಸಂದರ್ಭದಲ್ಲಿ, ಮಲ್ಯನಂತಹ ಉದ್ಯಮಿಗಳನ್ನು ವಿದೇಶದಿಂದ ಹೆಡೆಮುರಿ ಕಟ್ಟಿ ದೇಶಕ್ಕೆಳೆತಂದು ಜೈಲಿಗೆ ತಳ್ಳಬೇಕು ಮಾತ್ರವಲ್ಲ, ಆತ ಮುಚ್ಚಿಟ್ಟಿರುವ ಸಂಪತ್ತನ್ನೆಲ್ಲ ಮುಟ್ಟುಗೋಲು ಹಾಕಿ ಬ್ಯಾಂಕುಗಳನ್ನು ಉಳಿಸಬೇಕು.