ಸದನದಲ್ಲಿ ‘ಡೈರಿ’ ಹೋರಾಟ ಮುಂದುವರಿಸಲು ಬಿಜೆಪಿ ಸಿದ್ಧತೆ?

Update: 2017-03-19 14:57 GMT

ಬೆಂಗಳೂರು, ಮಾ.19: ವಿಧಾನಪರಿಷತ್ ಸದಸ್ಯ ಗೋವಿಂದರಾಜುಗೆ ಸೇರಿದ್ದು ಎನ್ನಲಾದ ಡೈರಿ ವಿಚಾರವನ್ನು ಮುಂದಿಟ್ಟುಕೊಂಡು ಸೋಮವಾರವೂ ಸದನದಲ್ಲಿ ಹೋರಾಟ ಮುಂದುವರೆಸಲು ಪ್ರತಿಪಕ್ಷ ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.

ಗುರುವಾರ ಹಾಗೂ ಶುಕ್ರವಾರ, ಸದನದಲ್ಲಿ ಈ ಡೈರಿ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದ ಬಿಜೆಪಿ, ಸಿಬಿಐ ತನಿಖೆಗೆ ಆದೇಶಿಸುವಂತೆ ಪಟ್ಟು ಹಿಡಿದಿತ್ತು. ಇದರಿಂದಾಗಿ, ಎರಡು ದಿನಗಳ ಕಲಾಪದ ಬಹುಪಾಲು ಅವಧಿಯು ಗದ್ದಲದಲ್ಲೆ ಕಳೆದು ಹೋಯಿತು. ಸೋಮವಾರ ಮತ್ತೆ ಸದನ ಆರಂಭವಾಗುತ್ತಿದ್ದಂತೆ ಧರಣಿಯನ್ನು ಮುಂದುವರೆಸಬೇಕೆ ಅಥವಾ ಕೈ ಬಿಡಬೇಕೆ ಎಂಬುದರ ಕುರಿತು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ.

ಪ್ರತಿಪಕ್ಷ ಬಿಜೆಪಿ ಎಷ್ಟೇ ಹೋರಾಟ ಮಾಡಿದರೂ, ಅದಕ್ಕೆ ಮಣಿಯದಿರಲು ಆಡಳಿತರೂಢ ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ. ಆದರೆ, ಸರಕಾರ ಈ ವಿಚಾರದಲ್ಲಿ ಸ್ವಲ್ಪ ಮೃದುಧೋರಣೆ ಅನುಸರಿಸಿದರೆ, ತಮ್ಮ ಪಟ್ಟು ಸಡಿಲಿಸಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ಮುಂದಾಗಬಹುದು ಎನ್ನಲಾಗಿದೆ.

ಈ ಮಧ್ಯೆ ನಿಲುವಳಿ ಸೂಚನೆಯಡಿ ರಾಜ್ಯದಲ್ಲಿನ ಬರಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲೆ ಈ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸಬಹುದಾಗಿದ್ದು, ಪ್ರತ್ಯೇಕವಾಗಿ ನಿಲುವಳಿ ಸೂಚನೆಯ ಅಗತ್ಯವಿಲ್ಲ ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ, ನಿಲುವಳಿ ಸೂಚನೆಗೆ ಅವಕಾಶ ನೀಡದೆ ಇರಬಹುದು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News