ಉರಿನಾಲಗೆಯ ‘ಯೋಗಿ’ಯ ಗದ್ದುಗೆಯ ಸುತ್ತಮುತ್ತ...

Update: 2017-03-20 19:01 GMT

ಈಗ ಅವರ ನೇರ ಉದ್ದೇಶ ಇರುವುದು ‘ಅಭಿವೃದ್ಧಿ’ ಮಂತ್ರದ ಮೂಲಕ ತನ್ನ ನಗರ ಕೇಂದ್ರಿತ ಮತ ಬ್ಯಾಂಕನ್ನು ಹಿಡಿದಿಟ್ಟುಕೊಳ್ಳುವುದರ ಜೊತೆಗೇ ‘ಖಟ್ಟರ್ ಹಿಂದೂವಾದ’ ಜನ ತಿಳಿದಷ್ಟು ಅಪಾಯಕಾರಿ ಅಲ್ಲ ಎಂಬುದನ್ನು ಉತ್ತರಪ್ರದೇಶದಲ್ಲಿ ಸಾಬೀತುಪಡಿಸಿ ತೋರಿಸುವ ಮೂಲಕ ಮೇಲುವರ್ಗಗಳ ಜೊತೆ ಇತರ ವರ್ಗಗಳನ್ನೂ ತಮ್ಮೆಡೆಗೆ ಆಕರ್ಷಿಸಿಕೊಳ್ಳುವುದು.


ಎದುರಾಳಿ ತೀರಾ ಬಲಹೀನವಿದ್ದಾಗ ಅಥವಾ ತನಗಿದು ಖಚಿತ ಆಹಾರ ಎಂದುಕೊಂಡಿದ್ದಾಗ ಕೆಲವೊಮ್ಮೆ ಪ್ರಾಣಿಗಳು ತಮ್ಮ ಬೇಟೆಯನ್ನು ಆಡಿಸಿ ಸುಸ್ತುಮಾಡಿಸುವುದಿದೆ. ಮೋದಿ-ಶಾ ಜಂಟಿ ನಾಯಕತ್ವ ಮತ್ತು ಬಿಜೆಪಿ ಹೈಕಮಾಂಡು ಉತ್ತರಪ್ರದೇಶದಲ್ಲಿ ಘೋರಕನಾಥ ಪೀಠದ ಪೀಠಾಧಿಪತಿಯನ್ನು ಮುಖ್ಯಮಂತ್ರಿ ಗಾದಿಗೆ ಆಯುವ ಮೂಲಕ ಇಂತಹದೊಂದು ಬಲವಾದ ಸಂದೇಶವನ್ನು ದೇಶಕ್ಕೆ ಕೊಟ್ಟಿವೆ. ಮೂರು ಅವಧಿಗಳಿಗೆ ಸಂಸದರಾಗಿರುವ ಉರಿನಾಲಗೆಯ ಯೋಗಿ ಆದಿತ್ಯನಾಥ್, ಬಲಪರಿವಾರಕ್ಕೆ ತಾನೀಗ ಸಾಬೀತುಪಡಿಸಬಯಸಿರುವ ಲಾಜಿಕ್ಕನ್ನು ಸಮರ್ಥಿಸಿಕೊಳ್ಳಲು ಈ ಹಂತದಲ್ಲಿ ಅತ್ಯಂತ ಸೂಕ್ತದಾಳ.

ಯೋಗಿ ಆದಿತ್ಯನಾಥ ಅವರ ಆಯ್ಕೆ ಆದ ಬೆನ್ನಿಗೆ, ಪ್ರತಿಪಕ್ಷಗಳು ಮತ್ತು ಸೋಷಿಯಲ್ ಮೀಡಿಯಾ ಯಾವ ರೀತಿಹರಿಹಾಯಲಿವೆ ಎಂದು ಅರಿವಿಲ್ಲದೇ ಬಿಜೆಪಿ ತೆಗೆದುಕೊಂಡ ನಿರ್ಧಾರ ಇದಲ್ಲ. ಈ ಆಯ್ಕೆಯ ಉದ್ದೇಶವೇ ಇಂತಹದೊಂದು ಹರಿಹಾಯುವಿಕೆ ತಪ್ಪು, ಸುಳ್ಳು, ಅನಗತ್ಯ ಮತ್ತು ಅಪ್ರಸ್ತುತ ಎಂದು ಸ್ಥಾಪಿಸಿಕೊಳ್ಳುವುದು. ನೋಡಿ ಬೇಕಿದ್ದರೆ, ಆದಿತ್ಯನಾಥ ಮತ್ತವರ ತಂಡ ಬಾಯಿಗೆ ಬೀಗ ಹಾಕಿಕೊಂಡು ಉತ್ತರಪ್ರದೇಶದಲ್ಲಿ ‘ಮೋದಿ ಬ್ರಾಂಡಿನ’ ಅಭಿವೃದ್ಧಿಗಳಲ್ಲಿ ತೊಡಗಿಕೊಳ್ಳಲಿದೆ! ಆಡ್ವಾಣಿ- ವಾಜಪೇಯಿ ಕಾಲದ ನರೇಂದ್ರ ಮೋದಿ ಹೇಗಿದ್ದರು ಮತ್ತು ಈಗೆಲ್ಲಿದ್ದಾರೆ ಎಂದು ಒಮ್ಮೆ ಹಿಂದಿರುಗಿ ನೋಡಿದರೆ ಈ ಕ್ಲೋನಿಂಗ್ ತಳಿ ತಂತ್ರಜ್ಞಾನದ ಮಹತ್ತು ಅರಿವಿಗೆ ಬಂದೀತು.

ಇಲ್ಲಿ ಗೆಲುವಿನ ನಶೆಯ ಅಡಿಯಲ್ಲಿ ಉತ್ತರಪ್ರದೇಶದ ಜನ ಮರೆತುಬಿಡಲಿರುವ ಸಂಗತಿಯೊಂದಿದೆ. ಅದು ಕೌಶಾಂಬಿಯ‘ಕಾಮಧೇನು’ ಕೇಶವ ಪ್ರಸಾದ್ ಮೌರ್ಯ. ಮೊನ್ನೆ ಚುನಾವಣೆಯಲ್ಲಿ, ಅಲ್ಪಸಂಖ್ಯಾತ, ದಲಿತ ಮತ್ತು ಯಾದವ ಮತಗಳು ಒಡೆಯಲಿವೆ ಎಂಬುದು ಖಚಿತವಿದ್ದ ಬಿಜೆಪಿ, ಯಾದವೇತರ ಹಿಂದುಳಿದ ವರ್ಗಕ್ಕೆ ಸೇರಿದ ಮೌರ್ಯ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮುಂದಿಟ್ಟುಕೊಂಡು, ಮೇಲುವರ್ಗ-ಇತರ ಹಿಂದುಳಿದ ವರ್ಗಗಳ ಮತಗಳ ಗಂಟಿನ ಆಧಾರ ಗಳಿಸಿಕೊಂಡಿತಲ್ಲದೆ ಒಡೆದ ಪ್ರತಿಪಕ್ಷಗಳ ಮತಗಳೆದುರು ಭಾರೀ ಬಹುಮತ ಗಳಿಸಿಕೊಂಡಿತು. ಚುನಾವಣೆ ಗೆದ್ದ ಬೆನ್ನಿಗೇ ಅಚ್ಚರಿಯೆಂಬಂತೆ ಹಿನ್ನೆಲೆಗೆ ಸರಿದ ಮೌರ್ಯ, ಮೊನ್ನೆ ನಿಗೂಢ ಕಾರಣಗಳಿಗಾಗಿ ರಕ್ತದೊತ್ತಡ ಏರಿಸಿಕೊಂಡು ಕೆಲವು ದಿನಗಳಕಾಲ ಆಸ್ಪತ್ರೆಯ ಐಸಿಯುನಲ್ಲಿ ಕಳೆದದ್ದು ದೊಡ್ಡ ಸುದ್ದಿ ಆಗಲೇ ಇಲ್ಲ. ಇತ್ತ ಮೇಲುವರ್ಗಗಳಿಗೆ ಸೇರಿದ ಮನೋಜ್ ಸಿನ್ಹಾ, ಯೋಗಿ ಆದಿತ್ಯನಾಥ್ ಅವರ ಹೆಸರುಗಳು ಮುಂಚೂಣಿಗೆ ಬಂದವು. ಅಂತಿಮವಾಗಿ ಅಧಿಕಾರ ಸಿಕ್ಕಿದ್ದು, ಘೋರಕನಾಥ ಮಠದ ಪ್ರಧಾನ ಅರ್ಚಕರಾಗಿದ್ದ ಗಣಿತ ಪದವೀಧರ ಅಜಯ್ ಸಿಂಗ್ ಭಿಷ್ಟ್ (ಹಾಲೀ ಆದಿತ್ಯನಾಥ ಯೋಗಿ) ಅವರಿಗೇ! ಜೊತೆಗೆ ಹೈಕಮಾಂಡಿನ ಮತ್ತೊಬ್ಬ ಪ್ರತಿನಿಧಿ ದಿನೇಶ್ ಶರ್ಮಾ ಅವರಿಗೆ ಉಪಮುಖ್ಯಮಂತ್ರಿ ಕುರ್ಚಿ!! ಮೌರ್ಯ ಅವರೂ ಉಪಮುಖ್ಯಮಂತ್ರಿಗಳಲ್ಲೊಬ್ಬರು. ತಮಾಷೆ ಎಂದರೆ, ಈ ಮೂರಕ್ಕೆ ಮೂರೂ ಮಂದಿ ಹಾಲೀ ಉತ್ತರಪ್ರದೇಶ ವಿಧಾನಸಭೆಗೆ ಚುನಾಯಿತರಾಗಿರುವ 325 ಮಂದಿಯ ಪಟ್ಟಿಯಲ್ಲಿರುವವರಲ್ಲ.

ಅತ್ತ ಉತ್ತರಪ್ರದೇಶದಲ್ಲಿ ಕಾವಿ ಆಡಳಿತದಿಂದ ದೇಶಕ್ಕೆ ಹಾನಿ ಇಲ್ಲ ಎಂಬುದು ಸಾಬೀತಾದರೆ, ಮುಂದಿನ ಲೋಕಸಭಾಚುನಾವಣೆಯಲ್ಲಿ ಅದು ಅನುಕೂಲಕ್ಕೆ ಬರಲಿದೆ ಎಂಬ ನಂಬಿಕೆ ಬಿಜೆಪಿಯದ್ದಾದರೆ, ಇತ್ತ, ಒಡೆದು ಚೂರುಚೂರಾಗಿ ಹಂಚಿಹೋಗಿರುವ ಪ್ರತಿಪಕ್ಷಗಳು ತಮ್ಮ ಉಳಿವಿಗಾಗಿಯಾದರೂ ಮುಂದಿನ ಚುನಾವಣೆಯನ್ನು ಬಿಜೆಪಿಯೆದುರು ಒಗ್ಗಟ್ಟಾಗಿ ಎದುರಿಸುವುದು ಅನಿವಾರ್ಯ. ತ್ರಿಕೋನ, ಬಹುಕೋನ ಸ್ಪರ್ಧೆಗಳ ಬದಲು ನೇರ ಮುಖಾಮುಖಿಗಳು ನಡೆದಲ್ಲಿ ಬಿಜೆಪಿಗೆ ದೇಶದ ಬಹುತೇಕ ಕ್ಷೇತ್ರಗಳು ಬಿಸಿಗಡುಬಿನಂತಾಗಲಿವೆ ಎಂಬ ವಾಸ್ತವ ಬಿಜೆಪಿಯ ಗರ್ಭಗುಡಿಗೂ ಅರಿವಿದೆ. ಹಾಗಾಗಿ ಈಗ ಅವರ ನೇರ ಉದ್ದೇಶ ಇರುವುದು ‘ಅಭಿವೃದ್ಧಿ’ ಮಂತ್ರದ ಮೂಲಕ ತನ್ನ ನಗರ ಕೇಂದ್ರಿತ ಮತ ಬ್ಯಾಂಕನ್ನು ಹಿಡಿದಿಟ್ಟುಕೊಳ್ಳುವುದರ ಜೊತೆಗೇ ‘ಖಟ್ಟರ್ ಹಿಂದೂವಾದ’ ಜನ ತಿಳಿದಷ್ಟು ಅಪಾಯಕಾರಿ ಅಲ್ಲ ಎಂಬುದನ್ನು ಉತ್ತರಪ್ರದೇಶದಲ್ಲಿ ಸಾಬೀತುಪಡಿಸಿ ತೋರಿಸುವ ಮೂಲಕ ಮೇಲುವರ್ಗಗಳ ಜೊತೆ ಇತರ ವರ್ಗಗಳನ್ನೂ ತಮ್ಮೆಡೆಗೆ ಆಕರ್ಷಿಸಿಕೊಳ್ಳುವುದು.

ಇದು ವೀಡಿಯೊ ಗೇಂ ಮೋಡ್
ವೀಡಿಯೊ ಗೇಂಗಳಲ್ಲಿ ಅಂತಿಮ ಗುರಿ ಜಯವೇ ಆದರೂ ಪ್ರತೀ ಲೆವೆಲ್ ದಾಟುವಾಗ, ಆ ಲೆವೆಲ್ ಒಡ್ಡುವ ಚಾಲೆಂಜ್‌ಗಳನ್ನು ಪೂರ್ಣಗೊಳಿಸುವುದಷ್ಟೇ ಗುರಿ ಆಗಿರುತ್ತದೆ. ಇಲ್ಲಿ ಸಿದ್ಧಾಂತಗಳು, ಮಾನವೀಯ ರಸಗಳು, ಹಿಂದಿನ ಚರಿತ್ರೆ... ಯಾವುದೂ ಗಣನೆಗೆ ಬರುವುದಿಲ್ಲ. ‘‘ನಿಯಮಗಳನ್ನು ಪಾಲಿಸಬೇಕು; ಲಾಜಿಕ್ ಬಳಸಿ ಗೆಲ್ಲಬೇಕು’’ ಎಂಬೆರಡು ಸರಳ ಸೂತ್ರಗಳು ಮಾತ್ರ ಇಲ್ಲಿ ಕೆಲಸ ಮಾಡುತ್ತವೆ.

ಅಧಿಕಾರ ಪಡೆಯಲು ಗ್ರಾಸ್ ರೂಟ್ ಮಟ್ಟದ ರಾಜಕಾರಣ ಅಗತ್ಯ ಎಂದು ನಂಬಿದ್ದ ದೇಶದ ರಾಜಕಾರಣ ಈಗ ಹೊಸ ಮಜಲಿಗೆ ಬಂದು ತಲುಪಿದೆ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಯಾವುವೂ ಈವತ್ತು ತಮ್ಮನ್ನು ಗ್ರಾಸ್ ರೂಟ್ ಪಕ್ಷ ಎಂದು ಎದೆತಟ್ಟಿ ಹೇಳಿಕೊಳ್ಳುವ ಛಾತಿ ಉಳಿಸಿಕೊಂಡಿಲ್ಲ. ಯೋಜನೆ-ಯೋಚನೆಗಳೆರಡೂ ಇಲ್ಲದ ತರಗೆಲೆಗಳಂತಾಗಿರುವ ಪ್ರತಿಪಕ್ಷಗಳನ್ನು ನರೇಂದ್ರಮೋದಿಯವರ ಸಣ್ಣ ಊದುಸಿರು ಕೂಡ ‘ಬಿರುಗಾಳಿಯಾಗಿ’ ಹಾರಿಸಿಕೊಂಡು ಹೋಗುವ ಸ್ಥಿತಿ ಎದುರಾಗುತ್ತಿದೆ.

ಮೋದಿಯವರ ‘ಅಭಿವೃದ್ಧಿ’ ರಾತ್ರೋ ರಾತ್ರಿಯ ಪವಾಡ ಅಲ್ಲ; ಅದರ ತಳಪಾಯ ತನ್ನದು ಎಂದು ಎದೆ ತಟ್ಟಿ ಹೇಳಿಕೊಳ್ಳುವಷ್ಟೂ ಮೇಲರಿಮೆ ಉಳಿಸಿಕೊಂಡಿರದ ಕಾಂಗ್ರೆಸ್ ಮತ್ತು ‘ರಾಜಕಾರಣ’ದ ಕೆಸರು ಕೂಪದಲ್ಲೇ ಮುಳುಗಿಹೋಗಿರುವ ಉಳಿದ ಪ್ರತಿಪಕ್ಷಗಳು ಲೆಕ್ಕಕ್ಕಿದ್ದರೂ ಆಟಕ್ಕಿಲ್ಲದೆ ಈ ವೀಡಿಯೊ ಗೇಮನ್ನು ಸೋಲುತ್ತಿವೆ. ಯಾಕೆಂದರೆ, ಅವರು ಅತ್ತ ಈ ಆಟದ ನಿಯಮಗಳನ್ನೂ ಪಾಲಿಸುತ್ತಿಲ್ಲ; ಇತ್ತ ಗೆಲ್ಲಲು ಬೇಕಾದ ಲಾಜಿಕ್ಕನ್ನೂ ಹೊಂದಿಲ್ಲ. 

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News