ಪ್ರೇಮಲತಾ ವಿರುದ್ಧ ಹೀನಾಯ ಷಡ್ಯಂತ್ರ, ಸಿಐಡಿ ವರದಿಯಲ್ಲಿ ಬಹಿರಂಗ

Update: 2017-03-22 14:22 GMT

ಬೆಂಗಳೂರು, ಮಾ.22: ಪ್ರೇಮಲತಾ ಪ್ರಕರಣಕ್ಕೆಸಂಬಂಧಿಸಿದಂತೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅನುಯಾಯಿ ಚಂದ್ರಶೇಖರ ಹಾಕಿದ್ದ ಬ್ಲಾಕ್ ಮೇಲ್ ಕೇಸ್‌ನಲ್ಲಿ ಸತ್ಯಾಂಶವಿಲ್ಲ , ದುರುದ್ದೇಶಪೂರಿತ ಎಂದು ಸಿಐಡಿ ಸಲ್ಲಿಸಿರುವ ವರದಿಯಲ್ಲಿ ದೃಢೀಕರಿಸಲಾಗಿದೆ ಎಂದು ಅಖಿಲ ಹವ್ಯಕ ಒಕ್ಕೂಟದ ಪರವಾಗಿ ಮಾಜಿ ಸಚಿವ ಕೆ.ಎಚ್.ಶ್ರೀನಿವಾಸ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಲತಾ ಸ್ವಾಮೀಜಿ ಮೇಲೆ ಅತ್ಯಾಚಾರ ದೂರು ದಾಖಲಿಸಿದ ನಂತರ ಅದನ್ನು ಮುಚ್ಚಿಕೊಳ್ಳಲು ಪ್ರೇಮಲತಾ ಸೇರಿದಂತೆ ದಿವಾಕರ ಶಾಸ್ತ್ರಿ, ಸಿ.ಎಂ.ನಾರಾಯಣ ಶಾಸ್ತ್ರಿ ನನಗೆ ಬೆದರಿಕೆ ಕರೆ ಮಾಡಿ, 3 ಲಕ್ಷ ಹಣ ನೀಡಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ದೂರು ದಾಖಲಿಸಲಾಗುತ್ತದೆ ಎಂದು ಬೆದರಿಕೆ ಹಾಕಿದ್ದರು. ಅದನ್ನು ತಿರಸ್ಕರಿಸಿದ್ದರಿಂದ ನನ್ನ ತೇಜೋವಧೆ ಮಾಡಲು ಸುಳ್ಳು ದೂರು ನೀಡಿದ್ದಾರೆ ಎಂದು ಹೇಳಿ ಸ್ವಾಮೀಜಿ ದೂರಿನಲಿ ಆಪಾದಿಸಿದ್ದರು ಎಂದು ಹೇಳಿದರು.

ಆ ಮೂಲಕ ಸ್ವಾಮೀಜಿ ಬ್ಲಾಕ್‌ವೆುೀಲ್ ಅನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಸೆಷನ್ಸ್ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ಹಾಕಲಾಗಿದ್ದ ಕೇಸನ್ನು ಯಾವುದೇ ವಿಚಾರಣೆ ಇಲ್ಲದೆ ವಜಾ ಮಾಡಿಸಲು ಷಡ್ಯಂತ್ರ ರೂಪಿಸಿದ್ದರು. ಆದರೆ, ಇದೀಗ ಸಿಐಡಿ ಪೊಲೀಸರು ನಡೆಸಿದ ತನಿಖೆಯಲ್ಲಿ ಸ್ವಾಮೀಜಿ ಮಾಡಿರುವ ಎಲ್ಲ ಆರೋಪಗಳು ಸುಳ್ಳು ಎಂದು ಹೇಳಿದೆ ಎಂದರು.

ಸಿಐಡಿ ನಡೆಸಿರುವ ತನಿಖೆ ವರದಿಯಲ್ಲಿ, ಆರೋಪಿತರಾದ ದಿವಾಕರಶಾಸ್ತ್ರಿ, ಪ್ರೇಮಲತಾ, ಸಿ.ಎಂ.ಎನ್.ಶಾಸ್ತ್ರಿ ಅವರ ವಿರುದ್ಧ ಮಾಡಲಾದ ಆರೋಪಗಳನ್ನು ದೃಢೀಕರಿಸಲು ಈವರೆಗೆ ನಡೆಸಿದ ತನಿಖೆಯಲ್ಲಿ ವಿಚಾರಣೆ ಮಾಡಿದ ಸಾಕ್ಷಿಗಳಿಂದ ಮತ್ತು ಸಂಗ್ರಹಿಸಿದ ದಾಖಲಾತಿಗಳಿಂದ ಯಾವುದೇ ಸೂಕ್ತ ಸಾಕ್ಷಾಧಾರಗಳು ಸಿಕ್ಕಿಲ್ಲ. ಅಲ್ಲದೆ, 3 ಕೋಟಿ ಹಣಕ್ಕೆ ಒತ್ತಾಯಿಸಿದ ಬಗ್ಗೆ, ಪ್ರೇಮಲತಾ ಇದಕ್ಕೆ ಕುಮ್ಮಕ್ಕು ನೀಡಿರುವ ಕುರಿತು ಸೂಕ್ತವಾದ ಸಾಕ್ಷಾಧಾರಗಳು ಇಲ್ಲ. ಆದುದರಿಂದ ಈ ಪ್ರಕರಣವು ಸುಳ್ಳು ಪಿರ್ಯಾದೆಂದು ಪರಿಗಣಿಸಿ ನ್ಯಾಯಾಲಯ ಅಂಗೀಕರಿಸಬೇಕೆಂದು ತಿಳಿಸಲಾಗಿದೆ ಎಂದು ಅವರು ತಿಳಿಸಿದರು.

ಹೀಗಾಗಿ ಕೂಡಲೇ ಬ್ಲಾಕ್‌ಮೇಲ್ ಆಧಾರದ ಮೇಲೆ ರಾಘವೇಶ್ವರ ಸ್ವಾಮೀಜಿಗೆ ನ್ಯಾಯಾಲಯ ನೀಡಿರುವ ಬೇಲ್ ತುರ್ತಾಗಿ ವಜಾ ಮಾಡಿ, ಅವರನ್ನು ಬಂಧಿಸಬೇಕು. ಸುಳ್ಳು ಕೇಸನ್ನು ದಾಖಲಿಸಿರುವ ಸ್ವಾಮೀಜಿ ಬೆಂಬಲಿಗರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ವೆುೀಲ್ಮನವಿ ದೂರಿನ ವಿಚಾರಣೆ ಶೀಘ್ರವಾಗಿ ಇತ್ಯರ್ಥ ಪಡಿಸಿ ಸಂತ್ರಸ್ತರಿಗೆ ನ್ಯಾಯಾದಾನ ನೀಡಬೇಕು ಎಂದು ಆಗ್ರಹಿಸಿದರು.

ಅನೈತಿಕ ಚಟುವಟಿಕೆಗಳಲ್ಲಿ ಕಾಲ ಕಳೆಯುತ್ತಿರುವ ರಾಘವೇಂದ್ರ ಸ್ವಾಮೀಜಿ, ಅವರು ಮಾಡುವ ತಪ್ಪನ್ನು ಹೊರಗಡೆ ಯಾರು ಹೇಳುತ್ತಾರೆ ಅವರೆಲ್ಲರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ, ಬೆದರಿಸಿ, ಭಾವನಾತ್ಮಕವಾಗಿ ಬ್ಲಾಕ್‌ಮೇಲ್ ಮಾಡುತ್ತಾ, ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಾ, ಗೋವಿನ ಹೆಸರಿನಲ್ಲಿ, ಹಿಂದೂಗಳ ಹೆಸರಿನಲ್ಲಿ ತಮ್ಮ ಅಕ್ರಮಗಳನ್ನು ಮುಚ್ಚಿ ಹಾಕಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News