ಫ್ಲೈಓವರ್‌ನಡಿ ನಳನಳಿಸುತ್ತಿದೆ ‘ಸುಂದರ ಉದ್ಯಾನವನ’!

Update: 2017-03-24 11:07 GMT

ಮಂಗಳೂರು, ಮಾ.24: ನಗರಗಳ ವಾಹನದಟ್ಟನೆಯ ಪ್ರದೇಶಗಳಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಫ್ಲೈ ಓವರ್‌ಗಳನ್ನು ನಿರ್ಮಿಸಲಾಗುತ್ತದೆ. ಆದರೆ ಬಹುತೇಕವಾಗಿ ಫ್ಲೈ ಓವರ್‌ಗಳಡಿಯ ವಿಶಾಲವಾದ ಪ್ರದೇಶ ಪಾರ್ಕಿಂಗ್ ಜಾಗವಾಗಿಯೋ, ಅನಧಿಕೃತ ಚಟುವಟಿಕೆಗಳ ತಾಣಗಳಾಗಿ ರೂಪುಗೊಳ್ಳುತ್ತವೆ. ಆದರೆ ಅದಕ್ಕೊಂದು ಅಪವಾದ ಎಂಬಂತಿದೆ ಕೂಳೂರು ಫ್ಲೈಓವರ್‌ನಡಿ.

ತೀವ್ರ ವಾಹನ ಹಾಗೂ ಜನಜಂಗುಳಿಯ ಪ್ರದೇಶವಾಗಿಯೇ ಗುರುತಿಸಿಕೊಂಡಿರುವ ಕೂಳೂರು ಹೈವೇನಲ್ಲಿ (ಕೂಳೂರು ಜಂಕ್ಷನ್‌ನ ಬಸ್ಸು ನಿಲ್ದಾಣದ ಎದುರು) ನಿರ್ಮಾಣವಾದ ಫ್ಲೈ ಓವರ್‌ನ ಒಂದು ಭಾಗವೀಗ ಸಂಪೂರ್ಣ ಹಸಿರುಮಯವಾಗಿದೆ. ಗುಲಾಬಿ, ದಾಸವಾಳ ಮೊದಲಾದ ಹೂವಿನ ಗಿಡಗಳ ಜತೆ ಸುಮಾರು 150 ಬಗೆಯ ವಿವಿಧ ಜಾತಿಯ ಮರಗಳನ್ನು ನೆಟ್ಟು ಇಲ್ಲಿ ಬೆಳೆಸಲಾಗುತ್ತಿದೆ. ಇಷ್ಟು ಮಾತ್ರವಲ್ಲ, ಫ್ಲೈಓವರ್‌ನ ಅಡಿಭಾಗದ 1800 ಚದರ ಅಡಿ ವಿಸ್ತೀರ್ಣದ ಜಾಗವು ಇಂಟರ್ ಲಾಕ್ ಅಳವಡಿಕೆಗೊಂಡಿದೆ. ಜತೆಗೆ ಜನರು ಫ್ಲೈ ಓವರ್‌ನಡಿಯಿಂದ ಒಂದು ರಸ್ತೆಯಿಂದ ಇನ್ನೊಂದು ರಸ್ತೆ ದಾಟಲು ಅನುಕೂಲವಾಗುವಂತೆ ಐದು ಅಡಿ ಅಗಲದ ಆರಾಮದಾಯಕ ಮೂರು ಕಾಲುದಾರಿಗಳೂ (ಪಾತ್‌ವೇ) ನಿರ್ಮಾಣವಾಗಿವೆ. ಫ್ಲೈಓವರ್‌ನ ಗೋಡೆಗಳಿಗೆ ಸುಣ್ಣ ಬಳಿದು ಹಳ್ಳಿ ಮನೆಯ ಸೊಗಡಿನ ಜತೆಗೆ ಸ್ವಚ್ಛ ಭಾರತಕ್ಕೆ ಪೂರಕವಾದ ಘೋಷಣಾ ಬರಹಗಳನ್ನು ಬರೆಯಲಾಗಿದೆ. ಪ್ರತಿನಿತ್ಯ ಲಕ್ಷಾಂತರ ಜನ ಸಂಚರಿಸುವ ಈ ಫ್ಲೈಓವರ್‌ನ ಗೋಡೆಯಲ್ಲಿ ‘ಶ್ರಮವಿಲ್ಲದೆ ಸ್ವಚ್ಛತೆ ಇಲ್ಲ, ಸ್ವಚ್ಛತೆ ಇಲ್ಲದ ಸುಖ ಇಲ್ಲ. ಸ್ವಚ್ಛತೆಯ ತಂತ್ರ ಯಶಸ್ಸಿನ ಮಂತ್ರ’ ಮೊದಲಾದ ಗೋಡೆ ಬರಹಗಳು ಸ್ವಚ್ಛತೆಯ ಮಹತ್ವದ ಬಗ್ಗೆ ಜಾಗೃತಿಯನ್ನೂ ಮೂಡಿಸುತ್ತಿವೆ.

ಇದು ಸರಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದುಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸ್ಥಳೀಯ ನಿವಾಸಿ ಗುರುಚಂದ್ರ ಹೆಗ್ಡೆ ಅವರ ಸ್ವ ಆಸಕ್ತಿಯ ಜತೆಗೆ ಸ್ಥಳೀಯರ ಸಹಕಾರದ ಪ್ರತಿಫಲ. ಫ್ಲೈ ಓವರ್ ನಿರ್ಮಾಣವಾದ ಬಳಿಕ ಇತರ ಕಡೆಗಳಂತೆ ಇಲ್ಲಿಯೂ ಪಾರ್ಕಿಂಗ್ ಹಾಗೂ ಅಕ್ರಮ ಚಟುವಟಿಕೆಗಳು ಆರಂಭಗೊಂಡಿತ್ತು. ನಿರ್ವಹಣೆ ಇಲ್ಲದೆ, ಗಲೀಜು ತಾಣವಾಗಿ ಮಾರ್ಪಟ್ಟಿತ್ತು. ಸ್ವಚ್ಛ ಭಾರತದ ಕೂಗು ದೇಶದೆಲ್ಲೆಡೆ ಕೇಳಿ ಬರುತ್ತಿರುವ ಇಂತಹ ಸಂದರ್ಭದಲ್ಲಿ ತನ್ನ ಕಣ್ಣೆದುರೇ ಸಾರ್ವಜನಿಕ ಆಸ್ತಿಯಾಗಿರುವ ಫ್ಲೈ ಓವರ್‌ನ ತಾಣವನ್ನೇಕೆ ಸ್ವಚ್ಛವಾಗಿಡುವಲ್ಲಿ ತಾನೇಕೆ ಪಾಲುದಾರನಾಗಬಾರದು ಎಂಬ ಪ್ರಶ್ನೆ ಹುಟ್ಟುತ್ತಲೇ ಗುರುಚಂದ್ ಹೆಗ್ಡೆಯವರು ಉದ್ಯಾನವನ ನಿರ್ಮಾಣಕ್ಕೆ ಮುಂದಾದರು. ಸ್ಥಳೀಯ ಕೆಲವರ ಜತೆ ಈ ಬಗ್ಗೆ ಚರ್ಚಿಸಿದ ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆಯಿಂದ ಈ ಬಗ್ಗೆ ಒಪ್ಪಿಗೆಯನ್ನೂ ಪಡೆದುಕೊಂಡರು. ಕಳೆದ ಸೆಪ್ಟಂಬರ್‌ನಲ್ಲಿ ಸರ್ವಧರ್ಮಗಳ ಗುರುಗಳ ಜತೆ ಮಹಾನಗರ ಪಾಲಿಕೆ ಮೇಯರ್ ಹಾಗೂ ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರನ್ನು ಕರೆಯಿಸಿ ಉದ್ಘಾಟನಾ ಕಾರ್ಯಕ್ರಮವನ್ನೂ ನೆರವೇರಿಸಿದ್ದಾರೆ.

ಹೈವೇ ನಡುವೆ ಹಸಿರುಕ್ರಾಂತಿ!

‘‘ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಧೂಳು ಹಾಗೂ ವಾಹನಗಳ ವಿಷಾನಿಲದಿಂದ ಇಂತಹ ಹಸಿರು ಉದ್ಯಾನವನ ಕೊಂಚ ಮಟ್ಟಿಗಾದರೂ ಮನಸ್ಸಿಗೆ ಉಲ್ಲಾಸವನ್ನು ನೀಡಬಹುದು ಎಂಬುದು ನನ್ನ ಭಾವನೆ. ನಾನು ಈ ಪಾರ್ಕ್ ನಿರ್ಮಾಣಕ್ಕೆ ಮುಂದಾದಾಗ ಸ್ಥಳೀಯರು ಕೂಡಾ ಸಹಕಾರ ನೀಡಿದರು. ಇದಕ್ಕಾಗಿ ನಾಗರಿಕ ಹಿತರಕ್ಷಣಾ ಸಮಿತಿಯನ್ನು ರಚಿಸಲಾಯಿತು. ಫ್ಲೈ ಓವರ್‌ನ ಮೂರು ಸ್ಪಾನ್‌ಗಳ (ಒಂದು ಸ್ಪಾನ್ ತಲಾ 60 ಅಡಿ ಉದ್ದ) 200 ಅಡಿ ಉದ್ದ ಹಾಗೂ 30 ಅಡಿ ಅಗಲಕ್ಕೆ ಇಂಟರ್ ಲಾಕ್ ಅಳವಡಿಸಿ ಗಿಡ, ಮರಗಳನ್ನು ನೆಡಲಾಗಿದೆ. ಪ್ರಸ್ತುತ ಇಲ್ಲಿ ಸುಮಾರು 150ರಷ್ಟು ಮರ ಗಿಡಗಳನ್ನು ನೆಡಲಾಗಿದೆ. ಮೂರು ಸ್ಪಾನ್‌ಗಳ ನಡುವೆ ಮೂರು ಕಡೆ ಸಾರ್ವಜನಿಕರು ರಸ್ತೆ ದಾಟಲು ಕಾಲುದಾರಿಯನ್ನೂ ರಚಿಸಲಾಗಿದೆ. ಒಟ್ಟು 4.50 ಲಕ್ಷ ರೂ.ಗಳನ್ನು ಈ ಎಲ್ಲಾ ಕಾರ್ಯಕ್ಕಾಗಿ ವೆಚ್ಚ ಮಾಡಲಾಗಿದೆ. 1.10 ಲಕ್ಷ ರೂ. ದೇಣಿಗೆ ಸ್ಥಳೀಯರಿಂದ ಲಭ್ಯವಾಗಿದೆ’’ ಎನ್ನುತ್ತಾರೆ ಗುರುಚಂದ್ರ ಹೆಗ್ಡೆ.

‘‘ಈ ಕಾರ್ಯದಿಂದ ಉತ್ತೇಜನಗೊಂಡು ಸ್ಥಳೀಯ ರಿಕ್ಷಾ ಚಾಲಕರು ಕೂಡಾ ಫ್ಲೈಓವರ್‌ನ ಉಳಿದ ಸ್ಲಾನ್‌ಗಳ ಸ್ವಚ್ಛತೆಯನ್ನು ಮಾಡಿಕೊಂಡಿದ್ದಾರೆ. ಗಿಡಗಳನ್ನು ನೆಟ್ಟಿದ್ದಾರೆ. ಸ್ವಚ್ಛ ಭಾರತದ ಪರಿಕಲ್ಪನೆ ಕೈಯ್ಯಲ್ಲಿ ಪೊರಕೆ ಹಿಡಿದು ಒಂದು ದಿನದ ಮಟ್ಟಿಗೆ ಫೋಟೋ ತೆಗಿಸಿಕೊಳ್ಳುವ ಕಾರ್ಯಕ್ರಮವಾಗಬಾರದು. ನಮ್ಮ ಮನೆಯನ್ನು ನಾವು ಸ್ವಚ್ಛವಾಗಿಡುವಂತೆಯೇ ಸಾರ್ವಜನಿಕ ಸ್ಥಳಗಳನ್ನೂ ಸ್ವಚ್ಛವಾಗಿಡಲು ನಮ್ಮಿಂದಾದ ಪ್ರಯತ್ನ ಮಾಡಬೇಕು. ಅದು ಸಾಧ್ಯವಾಗದಿದ್ದರೂ ಸಾರ್ವಜನಿಕ ಸ್ಥಳಗಳನ್ನು ಗಲೀಜು ಮಾಡುವ ಕಾರ್ಯವನ್ನಂತೂ ಮಾಡಲೇಬಾರದು’’ ಎಂದು ಹೇಳುತ್ತಾರೆ ಗುರುಚಂದ್ರ.

ಪಾರ್ಕ್ ನಿರ್ಮಾಣ ಆರಂಭದ ವೇಳೆ ಗಿಡಗಳಿಗೆ ನೀರಿನ ಸಮಸ್ಯೆ ಎದುರಾಗಿತ್ತು. ಇಲ್ಲಿನ ಪೆಟ್ರೋಲ್ ಬಂಕ್‌ನಿಂದ ಬಕೆಟ್‌ನಲ್ಲಿ ನೀರು ಹೊತ್ತು ತಂದು ಹಾಕುವ ಕೆಲಸ ಮಾಡುತ್ತಿದ್ದೆ. ನಾಲ್ಕು ತಿಂಗಳು ಈ ರೀತಿಯ ಪ್ರಕ್ರಿಯೆ ನಡೆಸಿದ್ದೆ. ಬಳಿಕ ಎರಡು ತಿಂಗಳಿನಿಂದೀಚೆಗೆ ಮನಪಾದಿಂದ ನೀರಿನ ಸಂಪರ್ಕಕ್ಕೆ ಅನುಮತಿ ದೊರಕಿತು. ಬಳಿಕ ಸ್ವಂತ ಖರ್ಚಿನಲ್ಲಿ ಪೈಪ್ ಅಳವಡಿಸಿ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಈಗಲೂ ದಿನಾ ಬೆಳಗ್ಗೆ 5.30ರ ವೇಳೆಗೆ ಸಮೀಪದಲ್ಲೇ ಇರುವ ಮನೆಯಿಂದ ಬಂದು ನೀರು ಹಾಕುತ್ತೇನೆ. ಮನಸ್ಸಿಗೂ ಒಂದು ರೀತಿಯಲ್ಲಿ ತೃಪ್ತಿ ಸಿಗುತ್ತದೆ. ಕಳೆದ ಅಕ್ಟೋಬರ್‌ನಲ್ಲಿ ಅಮೆರಿಕದಲ್ಲಿ ಉದ್ಯೋಗದಲ್ಲಿರುವ ಮಗ ಅಕ್ಷಯ್ ಹೆಗ್ಡೆ ವಿವಾಹ ನಿಮಿತ್ತ ಮನೆಗೆ ಆಗಮಿಸಿದ್ದ. ಅವನಿಗೂ ನನ್ನ ಈ ಕಾರ್ಯಕಂಡು ‘ಹ್ಯಾಟ್ಸ್ ಆಫ್ ಟು ಅಪ್ಪ’ ಅಂದ’’ ಎಂದು ಸಂತಸ ಹಂಚಿಕೊಳ್ಳುತ್ತಾರೆ 55ರ ಹರೆಯದ ಗುರುಚಂದ್.

ಮಾರ್ಗದರ್ಶನ ನೀಡಲು ಸಿದ್ಧ

‘‘ನಾನು ನನ್ನ ಆತ್ಮತೃಪ್ತಿಗಾಗಿ ಮಾಡಿದ ಕಾರ್ಯವನ್ನು ಸಮಾಜ ಗುರುತಿಸಿದೆ. ಸದ್ಯ ಆರ್ಥಿಕವಾಗಿ ನನಗೆ ಮುಂದೆ ಹೆಚ್ಚಿನ ಇಂತಹ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ, ಸರಕಾರ, ಹೆದ್ದಾರಿ ಪ್ರಾಧಿಕಾರ ಅಥವಾ ಸ್ಥಳೀಯ ಸಂಘ ಸಂಸ್ಥೆಗಳು ಇಂತಹ ಕಾರ್ಯಗಳಿಗೆ ಮುಂದಾದಲ್ಲಿ ಮಾರ್ಗದಶನ ನೀಡಲು ನಾನು ಸಿದ್ಧ. ನಗರದಲ್ಲಿ ಏಳೆಂಟು ಫ್ಲೈಓವರ್‌ಗಳು ಸಿದ್ಧವಾಗುತ್ತಿವೆ. ಅಲ್ಲಿಯೂ ಇಂತಹ ಪರಿಸರ ಪೂರಕ ಕಾರ್ಯಗಳು ನಡೆಯಬೇಕು. ‘ಸ್ಮಾರ್ಟ್ ಸಿಟಿ’ಯಾಗುತ್ತಿರುವ ಮಂಗಳೂರಿನಲ್ಲಿ ಪರಿಸರ ಕಾಳಜಿಗೂ ಒತ್ತು ನೀಡಬೇಕು. ಮನೆಗೊಂದು ಗಿಡದ ಪರಿಕಲ್ಪನೆಯ ಜತೆಗೆ ನಗರಗಳಲ್ಲಿ ಜಾಗದ ಸಮಸ್ಯೆ ಹಿನ್ನೆಲೆಯಲ್ಲಿ ಇಂತಹ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೊಂದು ಗಿಡದ ಪರಿಕಲ್ಪನೆಗೆ ಸಾರ್ವಜನಿಕರು ತಮ್ಮಿಂದಾದ ಕೊಡುಗೆಯನ್ನೂ ನೀಡಬಹುದು’’ ಎನ್ನುವುದು ಗುರುಚಂದ್ರರವರ ಅನಿಸಿಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News