ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ : ಎಂ.ಬಿ.ಪಾಟೀಲ್
ಬೆಂಗಳೂರು, ಮಾ.24: ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆ ಇರುವಾಗ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಬೇಕೆಂಬ ಸುಪ್ರೀಂಕೋರ್ಟ್ ನಿರ್ದೇಶನವನ್ನು ಪಾಲಿಸುವುದು ಅಸಾಧ್ಯವಾಗಿದೆ ಎಂದು ಕರ್ನಾಟಕ ತಿಳಿಸಿದೆ.
ರಾಜ್ಯದಲ್ಲಿ ಕುಡಿಯುವ ನೀರಿಗೆ ಕೊರತೆಯಾಗಿದೆ. ನಮ್ಮಲ್ಲಿ ನೀರಿದ್ದರೆ ತಮಿಳುನಾಡಿಗೆ ನೀರು ಬಿಡುತ್ತಿದ್ದೆವು. ಬೆಂಗಳೂರು, ಮೈಸೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಬೇಕಾದ ಕುಡಿಯುವ ನೀರಿನ ಪ್ರಮಾಣಕ್ಕಿಂತ ಸುಮಾರು 3ರಿಂದ 4 ಟಿಎಂಸಿ ಅಡಿಯಷ್ಟು ನೀರಿನ ಕೊರತೆ ಇದೆ . ಆದ್ದರಿಂದ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಪಿಟಿಐಗೆ ತಿಳಿಸಿದ್ದಾರೆ.
ಈ ವಿಷಯವನ್ನು ರಾಜ್ಯ ಸರಕಾರ ಈಗಾಗಲೇ ಸುಪ್ರೀಂಕೋರ್ಟ್‌ನ ಗಮನಕ್ಕೆ ತಂದಿದ್ದು ರಾಜ್ಯದ ಕಾನೂನು ತಜ್ಞರ ತಂಡವೊಂದು ಈ ವಿಷಯದ ಕುರಿತು ಪರಿಶೀಲನೆ ನಡೆಸುತ್ತಿದೆ ಎಂದವರು ತಿಳಿಸಿದರು.
ಮುಂದಿನ ಆದೇಶದವರೆಗೆ 2000 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಬಿಡಬೇಕೆಂಬ ಮಧ್ಯಂತರ ಆದೇಶವು ಚಾಲ್ತಿಯಲ್ಲಿರುತ್ತದೆ ಎಂದು ಮಾ.21ರಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂಕೋರ್ಟ್‌ನ ಪೀಠವು ಕರ್ನಾಟಕಕ್ಕೆ ತಿಳಿಸಿತ್ತು. ಕಾವೇರಿ ಜಲವಿವಾದ ನ್ಯಾಯಮಂಡಳಿ 2007ರಲ್ಲಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ತಮಿಳುನಾಡು, ಕೇರಳ ಮತ್ತು ಕರ್ನಾಟಕ ರಾಜ್ಯಗಳು ಸಲ್ಲಿಸಿರುವ ಅರ್ಜಿಯ ಕುರಿತ ಅಂತಿಮ ಆದೇಶದ ವಿಚಾರಣೆಯನ್ನು ಜುಲೈ 11ರಿಂದ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.