ಭಾರತ - ಆಸ್ಟ್ರೇಲಿಯ ಅಂತಿಮ ಟೆಸ್ಟ್

Update: 2017-03-24 18:37 GMT


ಧರ್ಮಶಾಲಾ, ಮಾ.24: ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಸರಣಿಯ ನಾಲ್ಕನೆ ಹಾಗೂ ಅಂತಿಮ ಟೆಸ್ಟ್ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದ್ದು, ಉಭಯ ತಂಡಗಳಿಗೂ ಸರಣಿ ಗೆಲುವಿಗೆ ಈ ಟೆಸ್ಟ್ ನಿರ್ಣಾಯಕವಾಗಿದೆ.
ತಲಾ ಒಂದು ಟೆಸ್ಟ್‌ನಲ್ಲಿ ಗೆಲುವು ದಾಖಲಿಸಿ 1-1 ಸಮಬಲ ಸಾಧಿಸಿರುವ ಭಾರತ ಮತ್ತು ಆಸ್ಟ್ರೇಲಿಯ ಸರಣಿ ಗೆಲುವಿಗೆ ಈ ಪಂದ್ಯದಲ್ಲಿ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ.
ರಾಂಚಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು. ಈ ಕಾರಣದಿಂದಾಗಿ ಉಭಯ ತಂಡಗಳು ಅಂತಿಮ ಟೆಸ್ಟ್‌ನಲ್ಲಿ ಸರಣಿ ಗೆಲುವಿಗೆ ಹೋರಾಟ ನಡೆಸುವುದನ್ನು ನಿರೀಕ್ಷಿಸಲಾಗಿದೆ.
 ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಬಾರ್ಡರ್-ಗವಾಸ್ಕರ್ ಟ್ರೋಫಿ ದೊರೆಯಲಿದೆ. 2014-15ರಿಂದ ಭಾರತಕ್ಕೆ ಬಾರ್ಡರ್ ಗವಾಸ್ಕರ್ ಟ್ರೋಫಿ ಸಿಕ್ಕಿಲ್ಲ. ಆಸ್ಟ್ರೇಲಿಯಕ್ಕೂ ಸರಣಿ ಗೆಲುವು ಸ್ಮರಣೀಯವಾಗಲಿದೆ.
 ಆಸ್ಟ್ರೇಲಿಯ ನಂ.2 ಸ್ಥಾನದಲ್ಲಿ ಉಳಿಯಬೇಕಾದರೆ ಈ ಟೆಸ್ಟ್‌ನಲ್ಲಿ ಸೋಲು ತಪ್ಪಿಸಬೇಕಾಗಿದೆ.ಭಾರತ ನಂ.1 ಸ್ಥಾನವನ್ನು ಉಳಿಸಿಕೊಳ್ಳುವುದರೊಂದಿಗೆ 1 ಮಿಲಿಯನ್ ಡಾಲರ್ ಮೊತ್ತದ ನಗದು ಪ್ರಶಸ್ತಿಯನ್ನು ಪಡೆಯಲಿದೆ.
 ಆಸ್ಟ್ರೇಲಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸೋತು , ಹ್ಯಾಮಿಲ್ಟನ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ದಕ್ಷಿಣ ಆಫ್ರಿಕ ಗೆದ್ದರೆ ಅಥವಾ ಡ್ರಾ ಸಾಧಿಸಿದರೆ ಆಸ್ಟ್ರೇಲಿಯ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.3 ಸ್ಥಾನಕ್ಕೆ ಇಳಿಯಲಿದೆ.
ಅಂತಿಮ ಟೆಸ್ಟ್ ಪಂದ್ಯದ ಫಲಿತಾಂಶವನ್ನು ನಿರ್ಧರಿಸುವುದು ಕಷ್ಟ. ಯಾಕೆಂದರೆ ಧರ್ಮಶಾಲಾದಲ್ಲಿ ಮೊದಲ ಬಾರಿ ಟೆಸ್ಟ್ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಟೆಸ್ಟ್ ಪಂದ್ಯ ಕುತೂಹಲ ಕೆರಳಿಸಿದೆ.
ಭಾರತದ ವಿರುದ್ಧ ಆಸ್ಟ್ರೇಲಿಯ ಮೊದಲ ಟೆಸ್ಟ್‌ನಲ್ಲಿ ಗೆಲುವು ದಾಖಲಿಸಿತ್ತು. ಎರಡನೆ ಟೆಸ್ಟ್‌ನಲ್ಲಿ ಭಾರತ ಗೆಲುವಿನೊಂದಿಗೆ ತಿರುಗೇಟು ನೀಡಿತ್ತು. ಆದರೆ ಮೂರನೆ ಟೆಸ್ಟ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯ ಗೆಲುವು ನಿರಾಕರಿಸಿತ್ತು.
ತಂಡದ ಸಮಾಚಾರ: ನಾಯಕ ವಿರಾಟ್ ಕೊಹ್ಲಿ ಅಂತಿಮ ಟೆಸ್ಟ್‌ನಲ್ಲಿ ಆಡುವುದು ಸಂಶಯ. ಈ ಕಾರಣದಿಂದಾಗಿ ಶ್ರೇಯಸ್ ಅಯ್ಯರ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ರಾಂಚಿ ಟೆಸ್ಟ್‌ನಲ್ಲಿ ಫೀಲ್ಡಿಂಗ್ ವೇಳೆ ಬಿದ್ದ ಪರಿಣಾಮವಾಗಿ ಕೊಹ್ಲಿ ಭುಜಕ್ಕೆ ಗಾಯವಾಗಿತ್ತು. ಕೊಹ್ಲಿ ಆಡುವುದು ಪಂದ್ಯ ಆರಂಭವಾಗುವ ಹೊತ್ತಿಗೆ ನಿರ್ಧಾರವಾಗಲಿದೆ.
ಒಂದು ವೇಳೆ ಕೊಹ್ಲಿ ಆಡದಿದ್ದರೆ ಭಾರತಕ್ಕೆ ಭಾರೀ ಹಿನ್ನಡೆಯಾಗಲಿದೆ. ಆದರೆ ಕೊಹ್ಲಿ ಈ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 9.2.
ಭಾರತ ಅಂತಿಮ ಪಂದ್ಯಕ್ಕೆ ಐವರು ಬೌಲರ್‌ಗಳನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಂಡರೆ ಕರುಣ್ ನಾಯರ್ ಅವಕಾಶ ಕಳೆದುಕೊಳ್ಳುತ್ತಾರೆ. ಜಯಂತ್ ಯಾದವ್ ಸ್ಥಾನ ಪಡೆಯುವುದು ಖಚಿತ. ವಿಜಯ್ ಹಝಾರೆ ಟ್ರೋಫಿ ಫೈನಲ್‌ನಲ್ಲಿ ಮಿಂಚಿದ ವೇಗಿ ಮುಹಮ್ಮದ್ ಶಮಿ ಫಿಟ್‌ನೆಸ್ ಸಮಸ್ಯೆಯಿಂದ ಹೊರಬಂದಿರುವ ಬಗ್ಗೆ ಫಿಸಿಯೊ ಇನ್ನೂ ವರದಿ ನೀಡಿಲ್ಲ. ಈ ಕಾರಣದಿಂದಾಗಿ ಶಮಿ ಅಂತಿಮ ಟೆಸ್ಟ್‌ನಲ್ಲಿ ಆಡುವ ಅವಕಾಶ ವಂಚಿತಗೊಂಡಿದ್ದಾರೆ.
ಭುವನೇಶ್ವರ ಕುಮಾರ್ ಅಂತಿಮ ಹನ್ನೊಂದರಲ್ಲಿ ಆಡುವ ನಿರೀಕ್ಷೆ ಇದೆ. ಮೂರು ಟೆಸ್ಟ್‌ಗಳಲ್ಲಿ 3 ವಿಕೆಟ್ ಪಡೆದಿರುವ ಇಶಾಂತ್ ಶರ್ಮ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇಲ್ಲ ಎಂದು ತಂಡದ ಮೂಲಗಳು ತಿಳಿಸಿವೆ.
 ಆಸ್ಟ್ರೇಲಿಯ ರಾಂಚಿಯಂತೆ ಧರ್ಮಶಾಲಾದಲ್ಲೂ ಬ್ಯಾಟಿಂಗ್‌ನಲ್ಲಿ ಮಿಂಚುವ ನಿರೀಕ್ಷೆಯಲ್ಲಿದೆ. ನಾಯಕ ಸ್ಮಿತ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆಸ್ಟ್ರೇಲಿಯ ಅಂತಿಮ ಟೆಸ್ಟ್‌ನಲ್ಲಿ ಎಡಗೈ ಸ್ಪಿನ್ನರ್ ಸ್ಟೀವ್ ಓ’ಕೀಫೆ ಬದಲಿಗೆ ಜಾಕ್ಸನ್ ಬರ್ಡ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.ಸ್ಟೀವ್ ಓ’ಕೀಫೆ ಪುಣೆಯಲ್ಲಿ ಮೊದಲ ಟೆಸ್ಟ್‌ನಲ್ಲಿ 12 ವಿಕೆಟ್ ಪಡೆದಿದ್ದರು. ಬೆಂಗಳೂರು ಮತ್ತು ರಾಂಚಿ ಟೆಸ್ಟ್‌ಗಳಲ್ಲಿ 6 ವಿಕೆಟ್ ಪಡೆದಿದ್ದರು. ರಾಂಚಿಯಲ್ಲಿ 77 ಓವರ್‌ಗಳ ಬೌಲಿಂಗ್ ನಡೆಸಿದ್ದರು.
ಸಂಭಾವ್ಯ ತಂಡ
ಭಾರತ: ವಿರಾಟ್ ಕೊಹ್ಲಿ(ನಾಯಕ), ಲೋಕೇಶ್ ರಾಹುಲ್, ಚೇತೇಶ್ವರ ಪೂಜಾರ, ಶ್ರೇಯಸ್ ಅಯ್ಯರ್, ಅಜಿಂಕ್ಯ ರಹಾನೆ, ಕರುಣ್ ನಾಯರ್/ಜಯಂತ್ ಯಾದವ್, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜ, ಇಶಾಂತ್ ಶರ್ಮ/ಭುವನೇಶ್ವರ ಕುಮಾರ್, ಉಮೇಶ್ ಯಾದವ್.
ಆಸ್ಟ್ರೇಲಿಯ: ಸ್ಟೀವ್ ಸ್ಮಿತ್(ನಾಯಕ), ಡೇವಿಡ್ ವಾರ್ನರ್, ಮ್ಯಾಟ್ ರೆನ್‌ಶಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಂಬ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ಸ್ಟೀವ್ ಓ’ ಕೀಫೆ/ಜಾಕ್ಸನ್ ಬರ್ಡ್, ಜೋಶ್ ಹೇಝೆಲ್‌ವಡ್, ನಥಾನ್ ಲಿಯೊನ್.
ಪಂದ್ಯದ ಸಮಯ: ಬೆಳಗ್ಗೆ 9:30ಕ್ಕೆ ಆರಂಭ.
ಪಿಚ್ ಸ್ಥಿತಿಗತಿ
ಧರ್ಮಶಾಲಾದ ಹಸಿರು ಹುಲ್ಲಿನ ಕ್ರೀಡಾಂಗಣದ ಪಿಚ್ ವೇಗದ ಬೌಲರ್‌ಗಳ ಸ್ನೇಹಿಯಾಗಿದ್ದರೂ, ಕಳೆದ ಟ್ವೆಂಟಿ-20 ವಿಕಶ್ವಕಪ್‌ನಲ್ಲಿ ಸ್ಪಿನ್ನರ್‌ಗಳು ಇಲ್ಲಿ ಮಿಂಚಿದ್ದರು.
ಮೊಡ ಕವಿದ ವಾತಾವರಣವಿದ್ದು ಪಂದ್ಯದ ಕೊನೆಯ ಹೊತ್ತಿಗೆ ಮಳೆ ಬರುವ ಸಾಧ್ಯತೆ ಇದೆ.
ಅಂಕಿ -ಅಂಶ
*ಆಸ್ಟ್ರೇಲಿಯ 2004ರ ಬಳಿಕ ಭಾರತದಲ್ಲಿ ಮೊದಲ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ.
*ಧರ್ಮಶಾಲಾ ಭಾರತದ 27ನೆ ಟೆಸ್ಟ್ ಕ್ರೀಡಾಂಗಣ ಎನಿಸಿಕೊಳ್ಳಲಿದೆ.
,,,,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News