ಶಿಕ್ಷಣ ಎಂಬ ಮರೀಚಿಕೆಯ ಬೆನ್ನೇರಿ...

Update: 2017-03-27 07:49 GMT

++++++++++++++++

ಶೆಕ್ಷಣಿಕ ಮನೋವಿಜ್ಞಾನವು ಮನುಷ್ಯನ ವರ್ತನೆಯಲ್ಲಿ ಕೇಂದ್ರ ವಾಗಿರುತ್ತದೆ.ಅದನ್ನೇ ಭ್ರೃತಹರಿ, ‘‘ಬದುಕು ಬಹಳ ದೊಡ್ಡ ವಿಶ್ವವಿದ್ಯಾನಿಲಯ. ಇಲ್ಲಿ ಪದವೀಧರರಾದವರಿಲ್ಲ. ಬಹುಮಟ್ಟಿಗೆ ಶಾಶ್ವತ ಎನ್ನಬಹುದಾದ ಧನಾತ್ಮಕ ಪರಿವರ್ತನೆ ಯನ್ನು ತರುವುದು ಕಲಿಕೆ ಎಂದು ವ್ಯಾಖ್ಯಾನಿಸಿದೆ.

ಕಲಿಕೆಯು ಕೇವಲ ಶಾಲೆಯಲ್ಲಿ ನಡೆಯುತ್ತದೆಂದು ಭಾವಿಸುವುದು ತಪ್ಪು.ಜೀವನ ಸನ್ನಿವೇಶವು ವ್ಯಕ್ತಿಯಲ್ಲಿ ಕಲಿಕೆಯನ್ನು ಉಂಟುಮಾಡುವ ಬಹುದೊಡ್ಡ ಉತ್ತೀರ್ಣರಾದವರೂ ಇಲ್ಲ. ಬದುಕಿ ಬಂದವರಷ್ಟೆ ಕೆಲವರಿರುವರು’’ ಎಂದು ವ್ಯಾಖ್ಯಾನಿಸಿರುವುದು. ಇಂದು ಮಕ್ಕಳಿಗೆ ದೊರಕುವ ಜೀವನ ಸನ್ನಿವೇಶವು ವ್ಯಾಪಕವಾಗಿದೆ ಮತ್ತು ಜಟಿಲವೂ ಆಗಿದೆ.ಇಲ್ಲಿ ಕಲಿಕೆ ನಡೆಯುತ್ತದೆ.

ಆದರೆ ಅದು ಧನಾತ್ಮಕವೇ ಆಗಿರುವುದಿಲ್ಲ. ಏಕೆಂದರೆ ಧನಾತ್ಮಕ ಎಂಬ ಪರಿಕಲ್ಪನೆ ನಾಗರಿಕ ಸಂಸ್ಕಾರದಿಂದ ಹುಟ್ಟಿಕೊಂಡಿರುವುದು.ಆದರೆ ಮೂಲತಃ ಮನುಷ್ಯನೂ ಒಂದು ಮೃಗವೇ. ಸ್ವಾಭಾವಿಕವಾಗಿ ಅವನು ಕೆಟ್ಟದ್ದರ ಕಡೆಗೆ ಆಕರ್ಷಿತನಾಗುತ್ತಾನೆ. ಒಟ್ಟೂ ಜೀವನ ಸನ್ನಿವೇಶದಲ್ಲಿ ಉಂಟಾಗುವ ಕಲಿಕೆಗೆ ವ್ಯವಸ್ಥೆ ಎನ್ನುವು ದೊಂದು ಇಲ್ಲ. ವ್ಯವಸ್ಥೆ ಇರುವ ಕಲಿಕಾ ಕೇಂದ್ರಗಳೆಂದರೆ ಕುಟುಂಬ ಮತ್ತು ಶಾಲೆಗಳು ಮಾತ್ರ.

ಕುಟುಂಬ

ಆಧುನಿಕ ಕುಟುಂಬಗಳು ಮಕ್ಕಳಿಗೆ ಭೌತಿಕ ಅಗತ್ಯಗಳನ್ನು ಕೊಡಿಸುವುದರಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿವೆ. ಬೌದ್ಧಿಕ ಅಗತ್ಯಗಳು, ಭಾವನಾತ್ಮಕ ವಿಕಾಸ, ಸಾಮಾಜಿಕ ವಿಕಾಸ ಮುಂತಾದ ಅಗತ್ಯಗಳನ್ನೆಲ್ಲ ಶಾಲೆಗಳು ಪೂರೈಸುತ್ತವೆ ಎಂದು ಕುಟುಂಬಗಳು ಭಾವಿಸುತ್ತವೆ. ಸರಳವಾಗಿ ಹೇಳುವುದಾದರೆ ಮಕ್ಕಳಿಗಾಗಿ ಹೆಚ್ಚು ಹಣ ವ್ಯಯಿಸುವುದರ ಹೊರತಾಗಿ ಎಲ್ಲ ಜವಾಬ್ದಾರಿಗಳನ್ನು ಶಾಲೆಗಳೇ ಪೂರೈಸುತ್ತವೆ ಎಂದು ಭಾವಿಸುತ್ತವೆ. ತಂದೆ ತಾಯಿಯನ್ನು ಇಂಟರ್ವ್ಯೆ ಮಾಡಿ ತಂದೆ ತಾಯಿಗಳಿಗೆ ಮಕ್ಕಳಿಗೆ ಟ್ಯೂಷನ್ ಹೇಳಲು ಬರುವುದಾದರೆ ಮಾತ್ರ ಮಕ್ಕಳನ್ನು ತೆಗೆದುಕೊಳ್ಳುವ ಶಾಲೆಗಳು, ಟ್ಯೂಷನ್ ಹೇಳುವುದಕ್ಕೇ ತಾಯಿ ತಂದೆಯನ್ನು ಅವಲಂಬಿಸಿದ ಮೇಲೆ ಇನ್ನು ಉಳಿದ ವಿಕಾಸದ ಪ್ರಕ್ರಿಯೆಯನ್ನು ಹೇಗೆ ಮಾಡಬಲ್ಲವು ಎಂದು ತಾಯಿ ತಂದೆಯರು ಯೋಚಿಸುವುದಿಲ್ಲ.ಯೋಚಿಸಿದರೂ ಅವರಿಗೆ ಬೇರೆ ಆಯ್ಕೆಗಳಿರುವುದಿಲ್ಲ.

ಶಾಲೆಗಳು

ಶಾಲಾ ಸ್ವರೂಪ ಎನ್ನುವುದು ಸರ್ವಶಿಕ್ಷಣ ಅಭಿಯಾನ ಬಂದ ನಂತರ ಬಹಳ ಜಟಿಲವಾಗಿದೆ. ಖಾಸಗಿ ಶಾಲೆಗಳು ಹಣ ಮಾಡುವ ಕೇಂದ್ರವಾಗಿವೆ ಎಂದು ವ್ಯಾಖ್ಯಾನಿಸುವುದು ಸುಲಭ. ಹಾಗಾದರೆ ಸರಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳು ಭರವಸೆಯ ಕೇಂದ್ರಗಳಾಗಬೇಕಾಗಿತ್ತು.ಆದರೆ ಆಗಿಲ್ಲ.ಅಂದರೆ ಸಮಸ್ಯೆಯು ಖಾಸಗಿ ಶಾಲೆಗಳ ಮೇಲೆ ದೋಷಾರೋಪಣೆ ಮಾಡಿದಷ್ಟು ಸರಳವಾಗಿಲ್ಲ. ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ, ಸಾಂಸ್ಕೃತಿಕ ವಿಕಾಸ ಗಳೆಲ್ಲವೂ ಶೈಕ್ಷಣಿಕ ಆದರ್ಶಗಳಾಗಿಯೆ ಇದ್ದರೂ ವಾಸ್ತವದಲ್ಲಿ ವ್ಯಾವಹಾರಿಕ ವಿಕಾಸಕ್ಕೆ ಮಾತ್ರ ಬದ್ಧವಾಗಿ ಖಾಸಗಿ, ಸರಕಾರಿ, ಅನುದಾನಿತ ಶಾಲೆಗಳೆಲ್ಲವೂ ಸ್ವರೂಪಾತ್ಮಕವಾಗಿ ಸಂಘಟಿಸಲ್ಪಟ್ಟಿವೆ.ಶಿಕ್ಷಣದ ಸ್ವರೂಪವೇ ಇಷ್ಟಕ್ಕೆ ಸೀಮಿತವಾದ ಮೇಲೆ ಕಲಿಕೆಯು ಕೂಡ ಆ ವ್ಯಾಪ್ತಿಯನ್ನು ಮೀರಲಾರದು.

ಪಠ್ಯ ಸ್ವರೂಪ

ನಮ್ಮ ಪಠ್ಯಗಳ ರಚನೆಯ ಹಿಂದೆ ಶೈಕ್ಷಣಿಕ ತತ್ವಜ್ಞಾನ ಕೆಲಸ ಮಾಡುತ್ತದೆ.ಆದರೆ ಪಠ್ಯ ರಚನೆಯ ಅನುಷ್ಠಾನ ಮಾತ್ರ ಅತ್ಯಂತ ಅವೈಜ್ಞಾನಿಕವಾಗಿದೆ. ಉದಾಹರಣೆ ಹೇಳುವುದಾದರೆ ಹತ್ತನೆಯ ತರಗತಿಯ ಮಕ್ಕಳಿಗೆ ಕಲಿಕಾ ಹೊರೆಯನ್ನು ಕಡಿಮೆ ಮಾಡಬೇಕೆಂದು ನಾಲ್ಕು ವರ್ಷಗಳ ಹಿಂದೆ ಪಠ್ಯ ಬದಲಾವಣೆ ಮಾಡಲಾಯಿತು.ಇದು ಶೈಕ್ಷಣಿಕ ತತ್ವಶಾಸ್ತ್ರಕ್ಕನುಗುಣವಾಗಿಯೆ ಇದ್ದ ಚಿಂತನೆ.ಆದರೆ ಬಂದ ಹೊಸ ಪಠ್ಯ ಹೇಗಿದೆ ಗೊತ್ತಾ? 149ಪುಟಗಳ ಸಮಾಜ ವಿಜ್ಞಾನ ಪಠ್ಯವನ್ನು ರದ್ದುಪಡಿಸಿ 350ಪುಟಗಳ ಪಠ್ಯವನ್ನು ಜಾರಿಗೊಳಿಸಲಾಯಿತು! ನಿಜವಾಗಿ ಆಗಬೇಕಾದ್ದು ಹೇಗೆ ಎಂದರೆ ಪಠ್ಯ ವಸ್ತು ಕಡಿಮೆಯಾಗಿ ಬೋಧನೆಯ ಅವಧಿ ಜಾಸ್ತಿಯಾಗಬೇಕು.

ಆಗ ಬೋಧನಾ ವಿಷಯಗಳನ್ನು ಅನೇಕ ವಿಕಾಸಾತ್ಮಕ ವಿನ್ಯಾಸಕ್ಕನುಗುಣವಾಗಿ ಬೋಧಿಸಲು ಆಗುತ್ತದೆ.ಆದರೆ ನಮ್ಮಲ್ಲಿ ಬೋಧನಾ ಅವಧಿ ಕಡಿಮೆಯಾಗಿ ಪಠ್ಯವಸ್ತು ಜಾಸ್ತಿಯಾಗುತ್ತಾ ಹೋಗಿದೆ. ಪಠ್ಯ ರಚನೆಯ ಹಿಂದೆ ಶೈಕ್ಷಣಿಕ ತತ್ವಶಾಸ್ತ್ರದ ಚಿಂತನೆ ಇದ್ದರೂ ಪಠ್ಯ ರಚನೆಯು ಅನೇಕ ರಾಜಕೀಯ ಹಿತಾಸಕ್ತಿಯ ಅಗತ್ಯಕ್ಕೆ ತಕ್ಕಂತೆ ಆಗುವುದು, ಕೆಳ ಹಂತದ ಬೋಧನಾ ಅನುಭವವಿಲ್ಲದ ವಿಶ್ವ ವಿದ್ಯಾನಿಲಯಗಳ ಪ್ರಾಧ್ಯಾಪಕರೇ ಕೆಳ ಹಂತದ ಪಠ್ಯಗಳನ್ನೂ ರಚಿಸುವುದು, ಪಠ್ಯವನ್ನು ಅವಸರ ಅವಸರವಾಗಿಯೇ ರಚಿಸಿ ಪೂರ್ಣಗೊಳಿಸಬೇಕಾದ ಸನ್ನಿವೇಶದ ನಿರ್ಮಾಣ ಮುಂತಾದ ಕಾರಣಗಳಿಂದ ಪಠ್ಯಗಳು ವಿದ್ಯಾರ್ಥಿ ಸ್ನೇಹಿಯಾಗದೆ ರಾಜಕೀಯ ಮತ್ತು ಟೆಂಡರುದಾರರ ಸ್ನೇಹಿಯಾಗಲು ಕಾರಣವಾಗಿದೆ.

ಪಠ್ಯ ಮತ್ತು ಪರೀಕ್ಷೆ

ಪಠ್ಯಗಳು ಹೇಗೇ ಇರಲಿ, ಬೋಧನೆಯು ಪರೀಕ್ಷೆಯನ್ನು ನಿರ್ದೇಶಿಸಿಯೇ ಇರುತ್ತದೆ. ನಮ್ಮಲ್ಲಿ ಪರೀಕ್ಷೆಗಳು ವಿವರ ಕೇಂದ್ರಿತವಾಗಿವೆ. ಆದ್ದರಿಂದ ಬೋಧನೆಯೂ ವಿವರ ಕೇಂದ್ರಿತವೇ ಆಗಿರುತ್ತದೆ. ಆಗ ಕಲಿಕೆಯು ವಿಕಾಸಾತ್ಮಕವಾಗಿ ಇರುವುದೇ ಇಲ್ಲ. ಉದಾಹರಣೆಗೆ ಹೇಳುವುದಾದರೆ ಸಮಾಜ ವಿಜ್ಞಾನದಲ್ಲೂ ಬಸವಣ್ಣನ ಪಾಠ, ಕನ್ನಡ ಭಾಷಾ ಪಠ್ಯದಲ್ಲೂ ಬಸವಣ್ಣನ ಪಾಠ, ಇಂಗ್ಲಿಷ್ ಭಾಷಾ ಪಠ್ಯದಲ್ಲೂ ಬಸವಣ್ಣನ ಪಾಠ ಬರುತ್ತದೆ.ಈ ರೀತಿ ಒಂದೇ ವಿಷಯವನ್ನು ಬೇರೆ ಬೇರೆ ಪಾಠದಲ್ಲಿ ಕೊಡುವುದೇ ಸೂಕ್ತ ಅಲ್ಲ.ಒಂದು ವೇಳೆ ಹಾಗೆ ಕೊಟ್ಟಾಗಲೂ ಅದು ಯಾವ ರೀತಿ ಬೋಧಿಸಲ್ಪಡ ಬೇಕೆಂದರೆ, ಸಮಾಜ ವಿಜ್ಞಾನದಲ್ಲಿ ಕರ್ನಾಟಕದ ಚರಿತ್ರೆ ನಿರ್ಮಾಣದಲ್ಲಿ ಬಸವಣ್ಣನ ಪಾತ್ರ ಏನು ಎಂದು ಅರಿವಾಗುವ ವಿನ್ಯಾಸದಲ್ಲಿ ಬೋಧಿಸಲ್ಪಡಬೇಕು.

ಕನ್ನಡ ಪಠ್ಯದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಯಲ್ಲಿ ಬಸವಣ್ಣನ ಪಾತ್ರ ಏನು ಎಂಬ ವಿನ್ಯಾಸದಲ್ಲಿ ಬೋಧಿಸಲ್ಪಡಬೇಕು.ಇಂಗ್ಲಿಷ್ ಪಠ್ಯದಲ್ಲಿ ಬಸವಣ್ಣನ ವ್ಯಕ್ತಿತ್ವ ಮತ್ತು ಸಾಹಿತ್ಯ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯಕ್ಕೆ ಸಮೀಕರಿಸಲ್ಪಟ್ಟು ಬೋಧಿಸಲ್ಪಡಬೇಕು. ಈ ವಿನ್ಯಾಸದಲ್ಲಿ ಬೋಧನೆ ನಡೆಯಬೇಕಾದರೆ ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳು ಈ ವಿನ್ಯಾಸದಲ್ಲೇ ಇರಬೇಕು. ಆದರೆ ಮೂರೂ ಪಠ್ಯಗಳಲ್ಲೂ ಪರೀಕ್ಷೆಯಲ್ಲಿ ಕೇಳುವುದು ಬಸವಣ್ಣನವರು ಎಲ್ಲಿ ಹುಟ್ಟಿದರು ಎಂಬ ರೀತಿಯ ಪ್ರಶ್ನೆಯನ್ನೇ. ಆಗ ಮೂರೂ ಪಾಠಗಳಲ್ಲೂ ಬೋಧನೆಯೂ ಈ ಮಾಹಿತಿಯನ್ನು ಕಲಿಸುವಷ್ಟಕ್ಕೆ ಸೀಮಿತವಾಗುತ್ತದೆ.ಅಂದರೆ ಮೂರೂ ಪಾಠಗಳಲ್ಲಿ ಕೊಟ್ಟೂ ಮಕ್ಕಳು ಕಲಿತದ್ದು ಕೇವಲ ಒಂದೇ ರೂಪದ ಮಾಹಿತಿಯನ್ನು ಮಾತ್ರ. ಈ ಮಾಹಿತಿಯು ಒಂದು ವಿವರದ ನೆನಪನ್ನು ಮಾತ್ರ ಮಕ್ಕಳಲ್ಲಿ ಉಳಿಸುತ್ತದೆ ಹೊರತು ಬೇರೆ ಯಾವುದೇ ರೀತಿಯ ಧನಾತ್ಮಕ ವಿಕಾಸವನ್ನು ಸಾಧಿಸುವುದಿಲ್ಲ.

ಆದರೆ ಪಠ್ಯ ವೈವಿಧ್ಯಕ್ಕೆ ಶೈಕ್ಷಣಿಕ ಆಶಯಗಳಿವೆ. ಭಾಷಾ ಪಠ್ಯಗಳು ವರ್ತನೆ, ಆಲೋಚನೆ, ಭಾಷೆಯ ಸ್ವರೂಪಗಳ ಪರಸ್ಪರ ಸಂಬಂಧಗಳನ್ನು ಅರ್ಥ ಮಾಡಿಸಿ ಭಾವನಾತ್ಮಕ ವಿಕಾಸವನ್ನೂ, ಬೌದ್ಧಿಕ ಸಂಸ್ಕಾರವನ್ನೂ ರೂಪಿಸಬೇಕು.ಗಣಿತದ ಬೋಧನೆಯು ತರ್ಕ ಶಕ್ತಿಯಿಂದ ಅಮೂರ್ಥವನ್ನೂ ಅರ್ಥ ಮಾಡಿಕೊಳ್ಳುವ ವ್ಯಕ್ತಿತ್ವ ವಿಕಾಸವನ್ನು ಸಾಧಿಸಬೇಕು.ವಿಜ್ಞಾನದ ಬೋಧನೆಯು ನಿಗೂಢವಾದುದರ ಬಗ್ಗೆ ಕುತೂಹಲ ಮತ್ತು ಶೋಧಕ ಪ್ರವೃತ್ತಿಯನ್ನು ಬೆಳೆಸಬೇಕು. ಈಗ ಶಾಲೆಗಳಲ್ಲಿ ನಡೆಯುತ್ತಿರುವ ಬೋಧನೆ-ಕಲಿಕೆ-ಪರೀಕ್ಷೆಗಳನ್ನು ನೋಡಿದರೆ ಇವು ಯಾವುದಾದರೂ ನಡೆಯುತ್ತವೆ ಎಂದು ನಿಮಗನಿಸುತ್ತದಾ? ಒಂದು ವೇಳೆ ವಿಕಾಸದ ಈ ಅಗತ್ಯಗಳು ನಡೆದಿದ್ದರೆ ಪರೀಕ್ಷಾ ಕೇಂದ್ರಕ್ಕೆ ಪೊಲೀಸರ ಸರ್ಪಗಾವಲಿನ ಅಗತ್ಯವೇನು.

ವಾಸ್ತವಿಕವಾಗಿ ಶೈಕ್ಷಣಿಕ ತತ್ವಶಾಸ್ತ್ರದ ದೃಷ್ಟಿಯಲ್ಲಿ ಇರಬೇಕಾದ್ದು ಪರೀಕ್ಷೆಗಳಲ್ಲ. ಇರಬೇಕಾದ್ದು ವೌಲ್ಯಮಾಪನ. ಆದರೆ ಪರೀಕ್ಷೆಯನ್ನೇ ಇಲ್ಲವಾಗಿಸಿ ವೌಲ್ಯಮಾಪನವನ್ನು ನೆಚ್ಚಿಕೊಳ್ಳಲು ಬೇಕಾದಷ್ಟು ಮಾನವ ಸಂಪನ್ಮೂಲದ ಒದಗಣೆ ಹಾಗೂ ಹಣಕಾಸು ಒದಗಣೆ ಭಾರತದಂಥ ನೂರಿಪ್ಪತ್ತೈದು ಕೋಟಿ ಜನ ಸಂಖ್ಯೆ ಇರುವ ದೇಶದ ಸರಕಾರಕ್ಕೆ ಕಷ್ಟವಾಗುತ್ತದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದ್ದರಿಂದ ಸದ್ಯಕ್ಕೆ ನಮಗೆ ಪರೀಕ್ಷೆಗಳು ಅನಿವಾರ್ಯ.ಆದರೆ ಆ ಪರೀಕ್ಷೆಯನ್ನು ಒಂದು ಯುದ್ಧಕಾಲೀನ ಸನ್ನಿವೇಶದಂತೆ ನಡೆಸಬೇಕಾದಷ್ಟು ದುರ್ಬಲವಾಗಿ ಬೋಧನೆ ಮತ್ತು ಕಲಿಕೆಯನ್ನು ನಿರ್ವಹಿಸಬೇಕಾದ ಅಗತ್ಯ ಖಂಡಿತಾ ಇಲ್ಲ.ಇದರಲ್ಲೂ ಇನ್ನೊಂದು ಕುಚೋದ್ಯವಿದೆ.

ಎಸೆಸೆಲ್ಸಿಯಲ್ಲಿ 20ಅಂಕಗಳು ಶಿಕ್ಷಕರಿಂದ ನಿರ್ಧರಿಸಲ್ಪಡುತ್ತವೆ.ವಿದ್ಯಾರ್ಥಿಗಳ ಕಾರ್ಯನಿರ್ವಹಣೆಯ ಆಧಾರದಲ್ಲಿ ಆಯಾ ವಿಷಯ ಶಿಕ್ಷಕರು ಅಂಕವನ್ನು ಕೊಡಬೇಕು.ಆದರೆ ಈ ಕಾರ್ಯನಿರ್ವಹಣೆಯ ದಕ್ಷತೆಯಲ್ಲಿ ಸಂಕಲನಾತ್ಮಕ ವೌಲ್ಯಮಾಪನದಲ್ಲಿ ವಿದ್ಯಾರ್ಥಿ ಪಡೆದ ಅಂಕಗಳೂ ಸೇರುತ್ತವೆ. ಸಂಕಲನಾತ್ಮಕ ಮೌಲ್ಯಮಾಪನವೆಂದರೆ ಪರೀಕ್ಷೆ.ಸಂಕಲನಾತ್ಮಕ ಮೌಲ್ಯಮಾಪನವೂ ಸೇರಿದ ಮೇಲೆ ಅದು ಕಾರ್ಯನಿರ್ವಹಣಾ ಮೌಲ್ಯಮಾಪನವಾಗುವುದು ಹೇಗೆ? ಹೀಗೆ ಶಿಕ್ಷಕರು ಕೊಟ್ಟ ಅಂಕಗಳಲ್ಲಿ ಅವರು ಎಷ್ಟೇ ಕೊಟ್ಟಿದ್ದರೂ 6 ಅಂಕಗಳು ಮಾತ್ರ ವಿದ್ಯಾರ್ಥಿಯ ಉತ್ತೀರ್ಣತೆಯ ನಿರ್ಧಾರಕ್ಕೆ ಬರುತ್ತದೆ! ಪಿಯುಸಿಗೆಲ್ಲ ಸೇರುವಾಗ ಶಿಕ್ಷಕರು ಕೊಟ್ಟ ಅಂಕವನ್ನು ಕಳೆದು ಬೋರ್ಡ್ ಕೊಟ್ಟ ಅಂಕವನ್ನು ಮಾತ್ರ ಪರಿಗಣಿಸಲಾಗುತ್ತದೆ. ಅಂದರೆ ವಿದ್ಯಾರ್ಥಿಯನ್ನು ಹತ್ತಿರದಿಂದ ಬಲ್ಲ ಶಿಕ್ಷಕರು ನಂಬಿಕೆಗೆ ಅರ್ಹರಲ್ಲ ಎಂದಾಯಿತು.

ಇಲ್ಲಿ ನನ್ನ ಎರಡು ಪ್ರಶ್ನೆಗಳಿವೆ. ಮೊದಲನೆಯದು ಶಿಕ್ಷಕರು ನಂಬಿಕೆಗೆ ಅರ್ಹರಲ್ಲವೆಂದ ಮೇಲೆ ಅವರಿಗೆ 20 ಅಂಕಗಳನ್ನು ಕೊಡಲು ಅಧಿಕಾರ ಕೊಟ್ಟಿರುವುದರ ಔಚಿತ್ಯವೇನು? ಎರಡನೆಯದು, ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಗಳೆಂಬ ಪ್ರೀತಿಯಿಂದ ವಿದ್ಯಾರ್ಥಿಗಳಿಗೆ ಜಾಸ್ತಿ ಅಂಕಗಳನ್ನು ಕೊಡಲು ಸಾಧ್ಯವಿದೆ. ಆದರೆ ಆಗಲೂ ಅದು ಫ್ರಾಡ್ ಆಗಿರುವುದಿಲ್ಲ. ವಿದ್ಯಾರ್ಥಿಗಳಿಗೆ ಶಿಕ್ಷಕರ ಪ್ರೀತಿಯನ್ನು ಪಡೆಯಬಲ್ಲ ಕಾರ್ಯನಿರ್ವಹಣಾ ದಕ್ಷತೆ ಇದ್ದಾಗ ಮಾತ್ರ ಇದು ಸಾಧ್ಯ. ಇನ್ನೊಬ್ಬರ ಪ್ರೀತಿಯನ್ನು ಪಡೆಯಬಲ್ಲ ಶಕ್ತಿಯನ್ನೇ ಒಂದು ಸಾಮರ್ಥ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದಾದರೆ ಪ್ರೀತಿ ಎಂಬ ಸಾರ್ವಕಾಲಿಕ, ಸಾರ್ವತ್ರಿಕ ಮೌಲ್ಯ ಸುಶಿಕ್ಷಿತರಲ್ಲಿ ಇರಬೇಕಾಗಿಲ್ಲ ಎಂದಾಯಿತು.

ನನ್ನ ಒಬ್ಬ ವಿದ್ಯಾರ್ಥಿ ಇದ್ದಾನೆ.ಪ್ರಶ್ನೋತ್ತರಗಳನ್ನು ಕಲಿಯಲು ಅವನಿಗೆ ತುಂಬಾ ಕಷ್ಟ ಆಗುತ್ತದೆ. ಆದರೆ ಇಡೀ ಶಾಲೆಯಲ್ಲಿ ಯಾವ ವಿದ್ಯಾರ್ಥಿಗೆ ಕಾಯಿಲೆಯಾದರೂ ಮೊದಲು ಹೋಗಿ ಉಪಚರಿಸುತ್ತಾನೆ. ಯಾರಿಗೆ ಕಾಲು ನೋವಾದರೂ ತಾನೇ ಹೋಗಿ ಎಣ್ಣೆ ಹಾಕಿ ಮಸಾಜ್ ಮಾಡುತ್ತಾನೆ. ತಾನು ಮಾಡುವುದನ್ನು ಮಾಡಿದ ಮೇಲೆ ಬಂದು ಶಿಕ್ಷಕರಿಗೆ ಹೇಳುತ್ತಾನೆ. ಯಾರು ಪಾಸಾಗದಿದ್ದರೂ ಅವನು ಪಾಸಾಗಲೇಬೇಕೆಂದು ನಾನು ಬಯಸುತ್ತೇನೆ.ಅವನು ಡಾಕ್ಟರ್ ಆಗಲು ಸಾಧ್ಯವಾಗದೆ ಇದ್ದರೂ ಮೇಲ್ ನರ್ಸ್ ಆದರೂ ಆಗಬೇಕು. ಅದಕ್ಕೆ ನಾನು ಮಾಡಬಹುದಾದ್ದೇನು?

20 ಅಂಕಗಳನ್ನು ಪೂರ್ತಿಯಾಗಿ ಕೊಡಬಹುದು. ಆದರೆ ಅದರಲ್ಲಿ 6 ಅಂಕಗಳನ್ನು ಮಾತ್ರ ಪರಿಗಣಿಸಿದರೆ ಅವನು ಎಸೆಸೆಲ್ಸಿ ದಾಟಲಿಕ್ಕೇ ಸಾಧ್ಯವಾಗದಿರಬಹುದು. ಇನ್ನು ಮೇಲ್ ನರ್ಸ್ ಆಗುವುದೆಲ್ಲಿಂದ ಬಂತು.

ಶಿಕ್ಷಕರ ಒತ್ತಡ

ಶಿಕ್ಷಕರ ಒತ್ತಡದ ಬಗ್ಗೆ ಮಾತನಾಡಿದ ಕೂಡಲೇ ಜನಗಣತಿ ಮಾತ್ರ ಶಿಕ್ಷಕರಿಗೆ ಕೊಡಲಾಗುವ ಇತರ ಕರ್ತವ್ಯಗಳು ಎನ್ನಲಾಗುತ್ತದೆ. ಜನಗಣತಿ ಮಾತ್ರ ಅಲ್ಲ,ಇನ್ನೊಂದು ಹತ್ತು ಹೆಚ್ಚುವರಿ ಕರ್ತವ್ಯಗಳನ್ನು ಶಿಕ್ಷಕರಿಗೆ ಕೊಡಲಿ, ಏನೂ ಸಮಸ್ಯೆ ಇಲ್ಲ.ಸಮಸ್ಯೆಯಾಗುವುದು ಅಧಿಕೃತ ಆದೇಶದಂತೆ ಕರ್ತವ್ಯದಿಂದ ಬಿಡುಗಡೆ ಹೊಂದಿ ಮಾಡುವ ಹೆಚ್ಚುವರಿ ಕರ್ತವ್ಯಗಳಿಂದಲ್ಲ.

ಶಾಲೆಗೆ ಬಂದು ಹಾಜರಿ ಹಾಕಿ ಅಲ್ಲಿ ಮೀಟಿಂಗು, ಇಲ್ಲಿ ಮೀಟಿಂಗು, ಅವರ ಭೇಟಿ, ಇವರ ಭೇಟಿ, ತಾಲೂಕು ಕೇಂದ್ರದಿಂದ ಅಕ್ಕಿ ತರಲು, ಸೈಕಲ್‌ಗೆ ಪಂಚರ್ ಹಾಕಿಸಲು, ಶೂ ತರಲು ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ ಎಂದು ಸುತ್ತಾಡುವ ಅನಧಿಕೃತ ಇತರ ಕೆಲಸಗಳು ಮತ್ತು ಯಾವ ಕ್ಷಣದಲ್ಲಿ ಯಾವ ಪ್ರಭಾರ ಕರ್ತವ್ಯ ಬರುತ್ತದೊ ಎಂಬ ಆತಂಕದಲ್ಲೇ ಬೋಧಿಸಬೇಕಾದ ಸ್ಥಿತಿಯಲ್ಲಿ ವಿಕಾಸಾತ್ಮಕವಾಗಿ ಕಲಿಕೆ ನಡೆಸಲು ಆಗುವುದಿಲ್ಲ. ದಿವಸಕ್ಕೆ ನಾಲ್ಕು ಪಿರಿಯೆಡ್ ಬೋಧಿಸುವ ಅಧ್ಯಾಪಕನಿಗೆ ಆರು ಪಿರಿಯೆಡ್ ಕೊಡಿ. ಈ ಹೆಚ್ಚುವರಿ ಕಾರ್ಯದಿಂದ ಬೋಧನಾ ದಕ್ಷತೆಗೆ ಯಾವ ದುಷ್ಪರಿಣಾಮವೂ ಆಗುವುದಿಲ್ಲ.

ನಾಲ್ಕು ಪಿರಿಯೆಡ್ ಬೋಧಿಸುವ ಶಿಕ್ಷಕನಿಗೆ ಎರಡೇ ಪಿರಿಯೆಡ್ ಕೊಟ್ಟು ಸೈಕಲ್ ತೆಗೆದುಕೊಂಡು ಬರಲು ಕಳಿಸಿದರೂ ಎರಡು ಪಿರಿಯೆಡ್‌ನ ಬೋಧನಾ ದಕ್ಷತೆ ಕುಸಿಯುತ್ತದೆ. ಶೈಕ್ಷಣಿಕ ಆಡಳಿತಾತ್ಮಕ ಹುದ್ದೆಗಳು ಜಾಸ್ತಿಯಾದಷ್ಟೂ ಅವರ ಮೀಟಿಂಗು ಮತ್ತು ಅವರ ಕೆಲಸಗಳಿಗೆ ಶಿಕ್ಷಕರೇ ಹೋಗಬೇಕಾಗಿ ಬಂದು ಶಿಕ್ಷಕರು ತರಗತಿಯಲ್ಲಿ ಇರುವ ಅವಧಿ ಕಡಿಮೆಯಾಗುತ್ತದೆ.

ಪಠ್ಯವಸ್ತು 1990ರ ದಶಕಕ್ಕೆ ಹೋಲಿಸಿದರೆ ಮೂರು ಪಟ್ಟು ಜಾಸ್ತಿಯಾಗಿದೆ. ಮುಖ್ಯೋಪಾಧ್ಯಾಯರಿಗೆ ಒಬ್ಬ ಅಟೆಂಡರ್, ಒಬ್ಬ ಎಫ್‌ಡಿಎಗಳನ್ನು ಪೂರ್ಣಕಾಲಿಕವಾಗಿ ಸಹಾಯಕ ಸಿಬ್ಬಂದಿಯಾಗಿ ನೇಮಿಸಿ ಈ ಸಮಸ್ಯೆಯನ್ನು ಬಗೆಹರಿಸಬಹುದು.ಆದರೆ ಅಂತಹದ್ದೇನನ್ನೂ ಮಾಡದೆ ಗೊಂದಲವನ್ನು ಹೆಚ್ಚಿಸುತ್ತಾ ಹೋಗುವ ಶಿಕ್ಷಣ ವ್ಯವಸ್ಥೆಯಲ್ಲಿ ನಿಜವಾದ ಶಿಕ್ಷಣವು ಕೇವಲ ಮರೀಚಿಕೆಯಾಗಿರುತ್ತದೆ.

  

    

Writer - ಅರವಿಂದ ಚೊಕ್ಕಾಡಿ

contributor

Editor - ಅರವಿಂದ ಚೊಕ್ಕಾಡಿ

contributor

Similar News