ಶಿಕ್ಷಣ ಕಾಯ್ದೆ ವಿಧೇಯಕಗಳ ಮಂಡನೆ
ಬೆಂಗಳೂರು, ಮಾ.27: ಕರ್ನಾಟಕ ಶಿಕ್ಷಣ(ಎರಡನೆ ತಿದ್ದುಪಡಿ) ಕಾಯ್ದೆ ಹಾಗೂ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ)(ತಿದ್ದುಪಡಿ) ಕಾಯ್ದೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದರು.
ಲೈಂಗಿಕ ಅಪರಾಧಗಳಿಂದ ರಕ್ಷಿಸುವುದು ಸೇರಿದಂತೆ ವಿದ್ಯಾರ್ಥಿಗಳ ರಕ್ಷಣೆ ಮತ್ತು ಭದ್ರತೆಯನ್ನು ಪ್ರತಿಯೊಂದು ಶಿಕ್ಷಣ ಸಂಸ್ಥೆ ಮತ್ತು ಸಿಬ್ಬಂದಿಯು ಖಚಿತಪಡಿಸಿ ಕೊಳ್ಳುವುದಕ್ಕೆ ಉಪಬಂಧಗಳನ್ನು ಕಲ್ಪಿಸುವುದು ಮತ್ತು ನಿಯಮಗಳ ಉಲ್ಲಂಘನೆಗೆ ದಂಡ ವಿಧಿಸಲು 2017ನೆ ಸಾಲಿನ ಕರ್ನಾಟಕ ಶಿಕ್ಷಣ(ಎರಡನೇ ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ.
ಶಿಕ್ಷಕರಿಗೆ ತಮ್ಮ ಆದ್ಯತೆಯ ಮೇರೆಗೆ ಸ್ಥಳ ನಿಯುಕ್ತಿಯನ್ನು ಕೋರುವ ಆಯ್ಕೆಗಳು ಮತ್ತು ಮೃದುತ್ವವನ್ನು ಕಲ್ಪಿಸುವ ಮೂಲಕ ಶಿಕ್ಷಕರ ವರ್ಗಾವಣೆ ಮತ್ತು ಸ್ಥಳ ನಿಯುಕ್ತಿ ಪ್ರಕ್ರಿಯೆಯನ್ನು ಸುಗಮಗೊಳಿಸುವುದು. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಕೇಂದ್ರೀಯ ಪ್ರಾಯೋಜಿತ ಸ್ಕೀಮಿನ ಅಡಿಯಲ್ಲಿನ ಖಾಲಿ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಲು 2017ನೆ ಸಾಲಿನ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ)(ತಿದ್ದುಪಡಿ) ವಿಧೇಯಕವನ್ನು ಜಾರಿಗೆ ತರಲು ಸರಕಾರ ಮುಂದಾಗಿದೆ.
ಶೆಟ್ಟರ್ ಆಕ್ಷೇಪ: ಸದನದ ಇವತ್ತಿನ ಕಾರ್ಯವಿಧಾನದಲ್ಲಿ ಯಾವುದೆ ವಿಧೇಯಕ ಮಂಡನೆ ಕುರಿತು ತಿಳಿಸಿರಲಿಲ್ಲ. ಆದರೂ, ಸರಕಾರ ಈಗ ಹೆಚ್ಚುವರಿ ಕಾರ್ಯವಿಧಾನದಲ್ಲಿ ವಿಧೇಯಕಗಳ ಮಂಡನೆಯನ್ನು ಸೇರ್ಪಡೆಗೊಳಿಸಿ ವಿಧೇಯಕ ಮಂಡನೆ ಮಾಡುತ್ತಿರುವುದು ಸರಿಯಲ್ಲ. ಪ್ರತಿಬಾರಿ ಸರಕಾರ ಇದೇ ಧೋರಣೆಯನ್ನು ಅನುಸರಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆಕ್ಷೇಪ ವ್ಯಕ್ತಪಡಿಸಿದರು.
ಸದನ ಆರಂಭಗೊಂಡ ಒಂದೆರಡು ದಿನಗಳಲ್ಲಿ ವಿಧೇಯಕಗಳನ್ನು ಮಂಡನೆ ಮಾಡಿದರೆ, ಅವುಗಳ ಚರ್ಚೆಗೆ ಅವಕಾಶವಿರುತ್ತದೆ. ಆದರೆ, ನಾಳೆ ಒಂದು ದಿನ ಮಾತ್ರ ಅಧಿವೇಶನವಿದೆ. ಮುಖ್ಯಮಂತ್ರಿ ಇನ್ನೂ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸಬೇಕಿದೆ. ಇಂತಹ ಸಂದರ್ಭದಲ್ಲಿ ವಿಧೇಯಕಗಳನ್ನು ಮಂಡಿಸುತ್ತಿರುವುದು ಸರಿಯಲ್ಲ ಎಂದು ಅವರು ಟೀಕಿಸಿದರು.
ವಿರೋಧ ಪಕ್ಷದ ನಾಯಕರ ಮನವಿಗೆ ಸ್ಪಂದಿಸಿದ ಸ್ಪೀಕರ್ ಕೆ.ಬಿ.ಕೋಳಿವಾಡ, ರಾಜ್ಯ ಸರಕಾರವು ಇನ್ನು ಮುಂದೆ ತರಾತುರಿಯಲ್ಲಿ ವಿಧೇಯಕಗಳನ್ನು ಮಂಡನೆ ಮಾಡುವ ಬದಲು, ಸದಸ್ಯರ ಚರ್ಚೆಗೆ ಅವಕಾಶವಿರುವಂತೆ ಮಂಡನೆ ಮಾಡಲು ಗಮನ ಹರಿಸುವಂತೆ ಸೂಚನೆ ನೀಡಿದರು.