ಬೆಂಗಳೂರಿನಲ್ಲಿನ್ನು ಗಸ್ತು ಕರ್ತವ್ಯಕ್ಕೆ ಅಶ್ವಾರೋಹಿ ಪೊಲೀಸರು
ಬೆಂಗಳೂರು, ಮಾ.28: ಚೀತಾ ಮತ್ತು ಹೊಯ್ಸಳಗಳ ಬಳಿಕ ಈಗ ಬಂಗೀ ಡ್ಯಾನ್ಸರ್,ಲಾಕ್ಡ್ ಅವೇ,ರೇಶಂ ಮತ್ತು ಥೋರನ್ ಬೆಂಗಳೂರು ನಗರ ಪೊಲೀಸರ ಗಸ್ತು ಪಡೆಗೆ ಸೇರ್ಪಡೆಗೊಳ್ಳಲಿದ್ದಾರೆ. ನಗರ ಸಶಸ್ತ್ರ ಪಡೆ (ಸಿಎಆರ್)ಯ ಲಾಯದಲ್ಲಿರುವ ಈ ನಾಲ್ಕು ಕುದುರೆಗಳು ಗುರುವಾರ ವಿಧ್ಯುಕ್ತವಾಗಿ ಗಸ್ತು ಪಡೆಗೆ ಸೇರಲಿವೆ.
ವಾರದ ಕೆಲವು ನಿರ್ದಿಷ್ಟ ದಿನಗಳಲ್ಲಿ ಸಾರ್ವಜನಿಕರಿಗೆ ನೆರವಾಗಲು ಅಶ್ವಾರೋಹಿ ಪೊಲೀಸರು ಮಧ್ಯಾಹ್ನ 3ರಿಂದ ರಾತ್ರಿ 9 ಗಂಟೆಯವರೆಗೆ ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆ ಮತ್ತು ಕಬ್ಬನ್ ಪಾರ್ಕ್ ರಸ್ತೆಗಳಲ್ಲಿ ಗಸ್ತು ಕಾರ್ಯದಲ್ಲಿ ತೊಡಗಲಿದ್ದಾರೆ. ಮೈಸೂರಿನಲ್ಲಿರುವಂತೆ ಶೀಘ್ರವೇ ಪೂರ್ಣ ಪ್ರಮಾಣದ ಅಶ್ವಾರೋಹಿ ಪೊಲೀಸ್ ಕಂಪನಿಯನ್ನು ರೂಪಿಸಲು ಬೆಂಗಳೂರು ಪೊಲೀಸರು ಯೋಜಿಸಿದ್ದಾರೆ.
ನಿರ್ದಿಷ್ಟ ದಿನಗಳಲ್ಲಿ ಆಯಾ ಪ್ರದೇಶಗಳಲ್ಲಿಯ ಜನಸಂಖ್ಯೆಯನ್ನು ಆಧರಿಸಿ ಈ ಅಶ್ವಾರೋಹಿ ಗಸ್ತು ಪೊಲೀಸರನ್ನು ನಿಯೋಜಿಸಲಿದ್ದೇವೆ. ನೆರವು ಕೋರುವ ಪಾದಚಾರಿ ಗಳು ಅಥವಾ ಇನ್ನಿತರರಿಗೆ ಸ್ಪಂದಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಬೆಂಗಳೂರು ನಗರ ಪೊಲಿಸ್ ಆಯುಕ್ತ ಪ್ರವೀಣ್ ಸೂದ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಸದ್ಯದ ಯೋಜನೆಯಂತೆ ಮಂಗಳವಾರಗಳಂದು ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಮತ್ತು ಗುರುವಾರಗಳಂದು ಬ್ರಿಗೇಡ್ ರಸ್ತೆಯಲ್ಲಿ ಅಶ್ವಾರೋಹಿ ಗಸ್ತು ಪೊಲೀಸರನ್ನು ನಿಯೋಜಿಸಲಾಗುವುದು. ಶನಿವಾರ ಮತ್ತು ರವಿವಾರಗಳಂದು ಕಬ್ಬನ್ ಪಾರ್ಕ್ ಪ್ರದೇಶದಲ್ಲಿ ಈ ಅಶ್ವಾರೋಹಿ ಪೊಲಿಸರು ಕಣ್ಣಿಗೆ ಬೀಳಲಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಸಹಾಯ ಕೋರುವ ನಾಗರಿಕರಿಗೆ ತುರ್ತಾಗಿ ಮತ್ತು ಪರಿಣಾಮಕಾರಿಯಾಗಿ ಸ್ಪಂದಿಸುವುದು ಈ ನೂತನ ಉಪಕ್ರಮದ ಹಿಂದಿನ ಉದ್ದೇಶ ವಾಗಿದೆ ಎಂದು ಸೂದ್ ತಿಳಿಸಿದರು.
ಸಿಎಆರ್ ಲಾಯದಲ್ಲಿ ಸದ್ಯ ಐದು ಕುದುರೆಗಳಿವೆಯಾದರೂ,ಒಂದಕ್ಕೆ 15ಕ್ಕೂ ಹೆಚ್‌ಉ ವಯಸ್ಸಾಗಿದೆ. ಹೀಗಾಗಿ ನಾಲ್ಕು ಕುದುರೆಗಳನ್ನಷ್ಟೇ ಗಸ್ತು ಕರ್ತವ್ಯಕ್ಕೆ ಆಯ್ಕೆ ಮಾಡಲಾಗಿದೆ.
ಮುಂಬರುವ ದಿನಗಳಲ್ಲಿ ಗಸ್ತು ಕಾರ್ಯಕ್ಕೆ ಕುದುರೆಗಳ ಸಂಖ್ಯೆಯನ್ನು 11ಕ್ಕೆ ಹೆಚ್ಚಿಸಲು ಪೊಲೀಸ್ ಇಲಾಖೆಯು ಉದ್ದೇಶಿಸಿದೆ. ಮೈಸೂರಿನ ಅಶ್ವಾರೋಹಿ ಪೊಲೀಸ್ ಕಂಪನಿಯಿಂದ ಹೆಚ್ಚುವರಿ ಕುದುರೆಗಳನ್ನು ತರಿಸುವ ನಿರೀಕ್ಷೆಯಿದೆ.