×
Ad

ನಿಲ್ಲದ ನೋಟು ಬದಲಾವಣೆ ದಂಧೆ : 5 ಕೋಟಿ ರೂ. ಹಳೇ ನೋಟು ವಶ

Update: 2017-03-28 20:11 IST

ಬೆಂಗಳೂರು, ಮಾ.28: ಕೇಂದ್ರ ಸರಕಾರ ಏಕಾಏಕಿ ಗರಿಷ್ಠ ಮುಖಬೆಲೆಯ 1 ಸಾವಿರ ಮತ್ತು 500 ರೂ.ನೋಟುಗಳನ್ನು ಅಮಾನ್ಯೀಕರಣಗೊಳಿಸಿ ಐದು ತಿಂಗಳು ಕಳೆದರೂ, ಇನ್ನೂ ನೋಟು ಬದಲಾವಣೆ ದಂಧೆ ನಡೆಯುತ್ತಿದ್ದು, ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಬಂಧಿಸಿ 5 ಕೋಟಿ ರೂ.ಮೌಲ್ಯದ ಹಳೇ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಜಯನಗರದ ಆಂಬ್ರೋಸ್ ಯಾನೆ ಡೇವಿಡ್(42), ಗುರುಪ್ಪನಪಾಳ್ಯದ ಆರೀಫ್‌ಪಾಶ(34), ಕೇರಳ ರಾಜ್ಯದ ಫೆಲಿಕ್ಸ್(35) ಹಾಗೂ ಶಾಂತಿನಗರದ ನಂಜುಂಡ ಯಾನೆ ಮಾಲೆಗೌಡ(46) ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಾದ ಆಂಬ್ರೋಸ್, ಆರಿಫ್ ಹಾಗೂ ಫೆಲಿಕ್ಸ್ ಇಲ್ಲಿನ ರಾಜಾಜಿನಗರದ ಶಿವಾಲಿ ಲಾಡ್ಜ್ ಮುಂಭಾಗ ನಿಷೇಧಿತ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳುವ ಸಂಚು ಹಾಕುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಬೆಂಗಳೂರು ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತ ಎಸ್.ರವಿ ತಿಳಿಸಿದ್ದಾರೆ.

ಇವರ ವಶದಲ್ಲಿದ್ದ 1.98 ಕೋಟಿ ರೂ. ವೌಲ್ಯದ ಹಳೆಯ ನೋಟುಗಳನ್ನು ಮತ್ತು ಎರಡು ದುಬಾರಿ ಕಾರು, ಮೂರು ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದರು.

ಮಾಲೆಗೌಡ: ನಗರದ ಶಂಕರಪುರದ ನ್ಯೂ ಶಾಂತಿಸಾಗರ್ ಹೊಟೇಲ್ ಮುಂಭಾಗ ಹಳೇ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ಆರೋಪಿ ಮಾಲೆಗೌಡನನ್ನು ಬಂಧಿಸಲಾಗಿದೆ.

ಈತನ ವಶದಲ್ಲಿದ್ದ 3 ಕೋಟಿ ರೂ. ವೌಲ್ಯದ ಹಳೇ ನೋಟುಗಳು, ಮೊಬೈಲ್ ಪಡೆಯಲಾಗಿದ್ದು, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಎಸ್.ರವಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News