ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಿದರೆ ಮುಸ್ಲಿಮರಿಗೆ ಟಿಕೆಟ್ : ಕೆ.ಎಸ್.ಈಶ್ವರಪ್ಪ ವಿವಾದಿತ ಹೇಳಿಕೆ
ಬೆಂಗಳೂರು, ಮಾ.28: ಬಿಜೆಪಿ ಕಚೇರಿಯಲ್ಲಿ ಮುಸ್ಲಿಮರು ಬಂದು ಕಸ ಗುಡಿಸಿದರೆ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುತ್ತೇವೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ.
ಮಂಗಳವಾರ ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯ ರಿಝ್ವೆನ್ ಅರ್ಶದ್, ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದಂತಹ ವಿಧಾನಸಭಾ ಚುನಾವಣೆಯಲ್ಲಿ ಎಷ್ಟು ಮಂದಿ ಮುಸ್ಲಿಮರಿಗೆ ನಿಮ್ಮ ಪಕ್ಷದಿಂದ ಟಿಕೆಟ್ ನೀಡಿದ್ದೀರಾ ಎಂದು ಪ್ರಶ್ನಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಟೀಕೆಟ್ ಬೇಕಾದರೆ ಮುಸ್ಲಿಮರು ಬಂದು ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಲಿ. ಆಗ ಟಿಕೆಟ್ ನೀಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಹಾಗೂ ಈಶ್ವರಪ್ಪ ನಡುವೆ ವಾಗ್ವಾದ ನಡೆಯಿತು. ಅಲ್ಲದೆ, ಈಶ್ವರಪ್ಪ ಕ್ಷಮೆ ಕೋರಬೇಕು ಎಂದು ಗದ್ದಲ್ಲ ಎಬ್ಬಿಸಿದರು.
ಅಲ್ಪಸಂಖ್ಯಾತರ ಬಗ್ಗೆ ಈಶ್ವರಪ್ಪ ಈ ರೀತಿಯ ಹೇಳಿಕೆಯನ್ನು ನೀಡಬಾರದಿತ್ತು. ಬಿಜೆಪಿಯವರು ಮೊದಲಿನಿಂದಲು ಅಲ್ಪಸಂಖ್ಯಾತರ ವಿರೋಧಿಗಳು. ಈಶ್ವರಪ್ಪ ಬಳಸಿದಂತಹ ಪದವನ್ನು ಕಡತದಿಂದ ತೆಗೆಯಬೇಕು ಎಂದು ಮುಖ್ಯಮಂತ್ರಿ ಆಗ್ರಹಿಸಿದರು.
ಆದರೆ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಈಶ್ವರಪ್ಪ, ಕಸ ಹೊಡೆಯಬೇಕು ಎಂದರೆ ಪಕ್ಷಕ್ಕಾಗಿ ದುಡಿಯುವುದು, ಪೋಸ್ಟರ್, ಬ್ಯಾನರ್‌ಗಳನ್ನು ಕಟ್ಟುವುದು. ಚಮಚಾಗಿರಿ ಮಾಡೋದು ಅಲ್ಲ. ಅಲ್ಪಸಂಖ್ಯಾತರಾದ ಅಬ್ದುಲ್‌ಕಲಾಂರನ್ನು ರಾಷ್ಟ್ರಪತಿ ಹಾಗೂ ಜಾರ್ಜ್ ಫರ್ನಾಂಡೀಸ್‌ರನ್ನು ಕೇಂದ್ರ ಸಚಿವ ಮಾಡಿದ್ದು ಯಾರೂ ಎಂದು ಪ್ರಶ್ನಿಸಿದರು.