ಸಿದ್ದರಾಮಯ್ಯ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಪ್ರಕರಣ : ಟ್ವಿಟರ್ ಸಂಸ್ಥೆ ವಿರುದ್ಧ ಮೊಕದ್ದಮೆ ದಾಖಲಿಸಲು ಚಿಂತನೆ
ಬೆಂಗಳೂರು, ಮಾ.28: ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿನಲ್ಲಿ ಟ್ವಿಟರ್‌ನಲ್ಲಿ ನಕಲಿ ಖಾತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು, ಟ್ವಿಟರ್ ಸಂಸ್ಥೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಲು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ.
‘@CMoKarnataka’ ಕಳೆದ ಡಿಸೆಂಬರ್‌ನಲ್ಲಿ ಕಿಡಿಗೇಡಿಯೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿನಲ್ಲಿ ನಕಲಿ ಖಾತೆ ತೆರದು ವಿವಾದಿತ ಪೋಸ್ಟ್‌ಗಳನ್ನು ಮಾಡಿದ್ದ. ಈ ಬಗ್ಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು ದೂರು ನೀಡಿದ್ದರು. ಬಳಿಕ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಟ್ವಿಟರ್ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿದ್ದರು ಎನ್ನಲಾಗಿದೆ.
ಪ್ರಕರಣದ ಆರೋಪಿಯ ವಿವರ ನೀಡುವ ಭರವಸೆ ನೀಡಿದ್ದ ಟ್ವಿಟರ್ ಸಂಸ್ಥೆಯ ಅಧಿಕಾರಿಗಳು ಇದುವರೆಗೂ ಮಾಹಿತಿ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಎರಡೀ ಬಾರಿಗೆ ಟ್ವಿಟರ್ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿದ್ದರು. ಆದರೂ, ಎರಡನೆ ಬಾರಿಯೂ ನೋಟಿಸ್ ಬರದೇ ಹೋದಲ್ಲಿ ಸಾಕ್ಷ ನಾಶದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳುವ ಅವಕಾಶ ಕಾನೂನಿನಲ್ಲಿ ಇದೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.