ಭಕ್ತರಿಗಾಗಿ ದೇವಸ್ಥಾನದಲ್ಲಿಯೇ ಹಾವು ಬಿಟ್ಟ ಪೂಜಾರಿ! ಈಗ ಪೊಲೀಸರ ಅತಿಥಿ

Update: 2017-03-29 09:32 GMT

ಚಿಕ್ಕಬಳ್ಳಾಪುರ/ಬೆಂಗಳೂರು, ಮಾ.29: ಯುಗಾದಿ ಹಬ್ಬದಂದು ಹೆಚ್ಚಾಗಿ ಭಕ್ತರನ್ನು ಸೆಳೆಯಲು ದೇವಸ್ಥಾನದ ವಿಗ್ರಹದ ಮುಂದೆಯೇ ಹಾವು ಬಿಟ್ಟು, ನಾಗಮಣಿ ದೇವತೆ ಪ್ರತ್ಯಕ್ಷವಾಗಿದ್ದಾಳೆ ಎಂದು ಸಾರ್ವಜನಿಕರನ್ನು ನಂಬಿಸಲು ಮುಂದಾಗಿದ್ದ ಪೂಜಾರಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಚೌಡೇಶ್ವರಿ ದೇವಸ್ಥಾನದ ಪೂಜಾರಿ ಪ್ರಶಾಂತ್ ಯಾನೆ ಪುರುಷೋತ್ತಮ್(38) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇಂದು ಯುಗಾದಿ ಹಬ್ಬದ ಹಿನ್ನಲೆ ದೇವಸ್ಥಾನಕ್ಕೆ ಹೆಚ್ಚು ಭಕ್ತರು ಬರಬೇಕೆನ್ನುವ ಆಸೆಯಿಂದ ಪೂಜಾರಿ ಪ್ರಶಾಂತ್, ಹಲ್ಲು ತೆಗೆದಿರುವ ನಾಗರ ಹಾವು ತಂದು ದೇವಸ್ಥಾನದ ಗರ್ಭಗುಡಿಯಲ್ಲಿ ಬಿಟ್ಟಿದ್ದ. ಅಲ್ಲದೆ, ಹಾವು ಇರುವ ಜಾಗದಲ್ಲಿ ಎಲ್‌ಇಡಿ ಲೈಟ್ ಹಾಕಿ ಅದು ಎಲ್ಲರಿಗೂ ಕಾಣುವಂತೆ ಮಾಡಿದ್ದ. ಬಳಿಕ ಸಾರ್ವಜನಿಕರನ್ನು ಕರೆದು, "ನಾನು 108 ದಿನದಿಂದ ವಿಶೇಷ ಪೂಜೆ ಮಾಡಿದ ಕಾರಣ ಇಂದು ದೇವಿ ನಾಗಮಣಿ ಪ್ರತ್ಯಕ್ಷವಾಗಿದ್ದಾಳೆ .ಎಲ್ಲರೂ, ಪೂಜೆ ಮಾಡಿಸಿ" ಎಂದು ಪೂಜಾರಿ ಹೇಳಿದ್ದ ಎಂದು ಸಾರ್ವಜನಿಕರೊಬ್ಬರು ತಿಳಿಸಿದ್ದಾರೆ.

ಪೂಜಾರಿ ಮಾತುಗಳಿಂತ ಶಂಕೆ ವ್ಯಕ್ತಪಡಿಸಿದ ಕೆಲವರು ಪೊಲೀಸರಿಗೆ ದೂರು ನೀಡಿದ್ದು, ತದನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪೂಜಾರಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಇದೆಲ್ಲಾ ನಾಟಕ ಎಂದು ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಗಳೂರಿನ ನಿವಾಸಿಯಾಗಿರುವ ಪೂಜಾರಿ, ಕಳೆದ ನಾಲ್ಕು ವರ್ಷಗಳಿಂದ ಚೌಡೇಶ್ವರಿ ದೇವಸ್ಥಾನದ ಪೂಜಾರಿಯಾಗಿದ್ದ. ಆದರೆ, ಹಣ ಸಂಪಾದನೆ ಮಾಡಲು ಈ ಕೃತ್ಯವೆಸಗಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಗುಡಿಬಂಡೆ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News