ಮಾಧ್ಯಮಗಳ ನಿಯಂತ್ರಣಕ್ಕೆ ಸದನ ಸಮಿತಿ ರಚನೆ : ಸ್ಪೀಕರ್‌ಗೆ ಕಪ್ಪುಬಾವುಟ ಪ್ರದರ್ಶಿಸಿದ ವಾಟಾಳ್‌ ನಾಗರಾಜ್

Update: 2017-03-30 13:52 GMT

ಬೆಂಗಳೂರು, ಮಾ.30: ಮಾಧ್ಯಮಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಂಟಿ ಸದನ ಸಮಿತಿಯನ್ನು ರಚನೆ ಮಾಡಿರುವ ಕ್ರಮವನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿರುವ ಸ್ಪೀಕರ್ ಕೆ.ಬಿ.ಕೋಳಿವಾಡ ಕಚೇರಿ ಎದುರು ಕಪ್ಪು ಬಾವುಟ ಪ್ರದರ್ಶಿಸಿದ ವಾಟಾಳ್ ನಾಗರಾಜ್, ಮಾಧ್ಯಮಗಳನ್ನು ನಿಯಂತ್ರಿಸಲು ಮುಂದಾಗಿರುವ ಕ್ರಮ ಸರಿಯಲ್ಲ. ಕೂಡಲೆ ತಮ್ಮ ಆದೇಶವನ್ನು ಹಿಂಪಡೆಯಬೇಕು ಎಂದು ಸ್ಪೀಕರ್‌ಗೆ ಒತ್ತಾಯಿಸಿದರು.

ಸ್ಪೀಕರ್‌ಗಳು ಬರುತ್ತಾರೆ ಹೋಗುತ್ತಾರೆ. ಆದರೆ, ಸದನ ತನ್ನ ಗಾಂಭೀರ್ಯ ಉಳಿಸಿಕೊಂಡಿದೆ. ಮಾಧ್ಯಮಗಳ ವಿರುದ್ಧ ಸದನ ಸಮಿತಿ ರಚನೆ ಸರಿಯಲ್ಲ. ದೃಶ್ಯಮಾಧ್ಯಮಗಳು ಬಂದ ನಂತರ ಹಲವಾರು ಬದಲಾವಣೆಗಳು ಆಗಿವೆ. ಸದನದಲ್ಲಿ ಸದಸ್ಯರು ಹಾಜರಿರುವುದಿಲ್ಲ. ಅದನ್ನು ಮಾಧ್ಯಮಗಳು ತೋರಿಸುವುದು ತಪ್ಪೇ ಎಂದು ವಾಟಾಳ್‌ನಾಗರಾಜ್ ಪ್ರಶ್ನಿಸಿದರು.

 ದೃಶ್ಯ ಮಾಧ್ಯಮಗಳಿಂದ ಆಗಿರುವ ತೊಂದರೆಯಾದರೂ ಏನು. ಈ ಮಾಧ್ಯಮಗಳಿಂದ ಸದನ ಎಚ್ಚರವಾಗಿರುತ್ತದೆ. ಆದುದರಿಂದ, ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ ಹಾಕಲು ಮುಂದಾಗಬೇಡಿ. ಮಾಧ್ಯಮಗಳ ನಿಯಂತ್ರಣ ಪ್ರಜಾಪ್ರಭುತ್ವ ವಿರೋಧಿ ಕ್ರಮ. ಹೀಗಾಗಿ ಈಗ ರಚನೆ ಆಗಿರುವ ಸದನ ಸಮಿತಿ ವಿಸರ್ಜನೆ ಆಗಬೇಕು ಎಂದು ವಾಟಾಳ್‌ನಾಗರಾಜ್ ಆಗ್ರಹಿಸಿದರು.

ಕೆ.ಆರ್.ರಮೇಶ್‌ಕುಮಾರ್ ಸದನ ಸಮಿತಿಯ ಅಧ್ಯಕ್ಷತೆಯನ್ನು ವಹಿಸಬಾರದು. ಶಾಸಕರ ಲೋಪದೋಷಗಳನ್ನು ಮಾಧ್ಯಮಗಳು ತೋರಿಸುವುದರಲ್ಲಿ ಯಾವುದೆ ತಪ್ಪಿಲ್ಲ ಎಂದು ವಾಟಾಳ್ ನಾಗರಾಜ್ ಪ್ರತಿಪಾದಿಸಿದರು.

ಸದನ ಸಮಿತಿ ರಚನೆ ತಪ್ಪಲ್ಲ: ನಾನು ಸ್ಪೀಕರ್, ಸದನ ನನಗಿಂತ ದೊಡ್ಡದು. ಅನೇಕ ಶಾಸಕರು ಈ ವಿಚಾರದ ಬಗ್ಗೆ ಚರ್ಚೆ ನಡೆಸಲು ಅವಕಾಶ ಕೋರಿ ನನಗೆ ನೋಟಿಸ್ ನೀಡಿದ್ದರು. ಅದರಂತೆ, ನಾನು ಅವರಿಗೆ ಅವಕಾಶ ನೀಡಿದ್ದೆ. ಎಲ್ಲ ಪಕ್ಷದ ಶಾಸಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಸ್ಪೀಕರ್ ಕೆ.ಬಿ.ಕೋಳಿವಾಡ ತಿಳಿಸಿದರು.

ಶಾಸಕರ ಗೌರವಕ್ಕೆ ಚ್ಯುತಿಯಾಗುತ್ತಿರುವ ಬಗ್ಗೆ ಎಲ್ಲ ಶಾಸಕರು ಸದನದಲ್ಲಿ ಮಾತನಾಡಿದ್ದಾರೆ. ಇದು ಸದನದ ನಿರ್ಣಯ, ನನ್ನ ವೈಯಕ್ತಿಕವಾದ ನಿರ್ಣಯವಲ್ಲ. ಸದನದ ಅಭಿಪ್ರಾಯದಂತೆ ಜಂಟಿ ಸದನ ಸಮಿತಿಯನ್ನು ರಚನೆ ಮಾಡಿದ್ದೇನೆ. ಈ ಸಮಿತಿಯು ಮಾಧ್ಯಮಗಳನ್ನು ನಿಯಂತ್ರಿಸುವ ಉದ್ದೇಶಕ್ಕಲ್ಲ. ಬದಲಾಗಿ, ಅವುಗಳ ಪ್ರಸಾರ ಗುಣಮಟ್ಟ ಹೆಚ್ಚಳ ಮಾಡುವುದಾಗಿದೆ ಎಂದು ಸ್ಪೀಕರ್ ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಾಟಾಳ್‌ನಾಗರಾಜ್, ತಮ್ಮ ನಿರ್ಧಾರಕ್ಕೆ ಇಡೀ ಸದನ ಒಪ್ಪಿಗೆ ಕೊಟ್ಟಿಲ್ಲ. ಯಾರೋ ಆರೇಳು ಶಾಸಕರು ಮಾಡಿದ ಆರೋಪ ಇಡೀ ಸದನದ ಅಭಿಪ್ರಾಯ ಆಗುವುದಿಲ್ಲ. ಇಡೀ ಶಾಸನಸಭೆಯ ಇತಿಹಾಸದಲ್ಲೆ ಇಂತಹ ಸಮಿತಿಯನ್ನು ಯಾವ ಸ್ಪೀಕರ್ ಕೂಡ ರಚನೆ ಮಾಡಿದ ಉದಾಹರಣೆ ಇಲ್ಲ. ತಾವು ಯಾಕೆ ಇಂತಹ ಕೆಟ್ಟ ಸಂಪ್ರದಾಯಕ್ಕೆ ಕೈ ಹಾಕಿ, ವೈಯಕ್ತಿಕವಾಗಿ ಆರೋಪವನ್ನು ಮೈಲೆ ಎಳೆದುಕೊಳ್ಳುತ್ತೀರಾ ಎಂದರು.

ಮಾಧ್ಯಮಗಳ ಗುಣಮಟ್ಟ ಸುಧಾರಿಸಲು ನೀವು ಯಾರು, ಈ ಸಮಿತಿ ರಚನೆ ಮಾಡುವ ಮುನ್ನ ಮಾಧ್ಯಮದವರ ಅಭಿಪ್ರಾಯವನ್ನು ಕೇಳಿದ್ದೀರಾ ಎಂದು ಸ್ಪೀಕರ್‌ಗೆ ವಾಟಾಳ್‌ನಾಗರಾಜ್ ಪ್ರಶ್ನಿಸಿದರು.

ಸ್ಪೀಕರ್ ಜೊತೆ ವಾಗ್ವಾದಕ್ಕೆ ಇಳಿದ ವಾಟಾಳ್ ನಾಗರಾಜ್‌ರನ್ನು ವಶಕ್ಕೆ ಪಡೆದ ಪೊಲೀಸರು, ಆನಂತರ ಬಿಡುಗಡೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News