‘ಮಾಧ್ಯಮಗಳ ನಿಯಂತ್ರಣ’ : ಸದನ ಸಮಿತಿ ರಚನೆಗೆ ರಮೇಶ್‌ಕುಮಾರ್ ವಿರೋಧ?
Update: 2017-03-31 21:46 IST
ಬೆಂಗಳೂರು, ಮಾ.31: ಮಾಧ್ಯಮಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಕೆ.ಬಿ.ಕೋಳಿವಾಡ ರಚಿಸಿರುವ ಸದನ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್‌ಕುಮಾರ್ ನಿರಾಕರಿಸಿದ್ದಾರೆ ಎನ್ನಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಕೆ.ಬಿ.ಕೋಳಿವಾಡ ಮಾತುಕತೆ ನಡೆಸಿರುವ ರಮೇಶ್‌ಕುಮಾರ್, ಸದನ ಸಮಿತಿ ರಚಿಸಿ ಅದಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ನೇಮಕ ಮಾಡುವ ಮುನ್ನ ಒಮ್ಮೆಯಾದರೂ ನನ್ನ ಜೊತೆ ಚರ್ಚಿಸಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಯಾವುದೆ ಸಮಸ್ಯೆಗಳಿದ್ದರೂ ಅದನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳೊಂದಿಗೂ ಚರ್ಚೆ ನಡೆಸಿ, ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಿದೆ. ಆದುದರಿಂದ, ಸದನ ಸಮಿತಿ ರಚನೆ ಮಾಡುವ ಅಗತ್ಯವಿಲ್ಲ ಎಂದು ರಮೇಶ್‌ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿ ದ್ದಾರೆ ಎಂದು ಹೇಳಲಾಗಿದೆ.