ಸೈನ್ಯದ ವ್ಯವಹಾರ ದಲ್ಲಿ ಜಾಕ್ಪಾಟ್ ಹೊಡೆದ ಭಾರತದ ಉದ್ಯಮಿಗಳು

Update: 2017-04-01 13:35 GMT

ಇದೀಗ ಅಮೆರಿಕವು ಭಾರತವನ್ನು ತನ್ನ ‘‘ಪ್ರಮುಖ ರಕ್ಷಣಾ ಪಾಲುದಾರ’’ ಎಂದು ನಾಮಾಂಕಿತಗೊಳಿಸಿದೆ. ಮತ್ತೊಂದೆಡೆ ತನಗೆ ಬೇಕಿರುವ ಸುಧಾರಿತ ಯುದ್ಧ ಸಾಮಗ್ರಿಗಳನ್ನು ಭಾರತವು ಅಮೆರಿಕ ಮತ್ತು ಇಸ್ರೇಲಿನ ಯುದ್ಧ ಸಾಮಗ್ರಿ ಉತ್ಪಾದನಾ ಕಂಪೆನಿಗಳಿಂದ ಹೆಚ್ಚೆಚ್ಚು ಕೊಂಡುಕೊಳ್ಳುತ್ತಿದೆ. ಅಷ್ಟು ಮಾತ್ರವಲ್ಲದೆ ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ರಕ್ಷಣಾ ಕಾರ್ಯದರ್ಶಿ ಜೇಮ್ಸ್‌ಮಟ್ಟಿಯವರು ಅಮೆರಿಕದ ಹೊಸ ಸರಕಾರಕ್ಕೆ ಚೀನಾಗೆ ಎದಿರಾಗಿ ಭಾರತವನ್ನು ಬೆಳೆಸಬೇಕೆಂಬ ಉದ್ದೇಶವಿದೆಯೆಂಬುದನ್ನು ಯಾವುದೇ ಮುಚ್ಚುಮರೆಯಿಲ್ಲದೆ ಘೋಷಿಸಿದ್ದಾರೆ.

ಅಮೆರಿಕದ ಏಳನೆ ನೌಕಾಪಡೆಗೆ ಅಗತ್ಯವಿರುವ ದುರಸ್ತಿ ಮತ್ತಿತರ ಸೇವೆಯನ್ನು ಒದಗಿಸಲು ಭಾರತವು ಮಾಡಿಕೊಂಡಿರುವ ಒಪ್ಪಂದವು ಭಾರತ ಮತ್ತು ಅಮೆರಿಕದ ಸಂಬಂಧಗಳಲ್ಲಿ ಬಂದಿರುವ ಅಗಾಧವಾದ ಬದಲಾವಣೆಗೆ ಸೂಚಕವಾಗಿದೆ. ಹಲವು ದಶಕಗಳ ಹಿಂದೆ, 1971ರ ಡಿಸೆಂಬರ್‌ನಲ್ಲಿ, ಪೂರ್ವ ಪಾಕಿಸ್ತಾನದ ವಿರುದ್ಧ, ಭಾರತದ ಮತ್ತು ‘ಮುಕ್ತಿಬಾಹಿನಿ’ಯ ವಿಜಯವು ಸನ್ನಿಹಿತವಾಗುತ್ತಿದ್ದ ಸಂದರ್ಭದಲ್ಲಿ ಭಾರತದ ಸೇನಾಪಡೆಗಳನ್ನು ಬೆದರಿಸಿ ಹಿಮ್ಮೆಟ್ಟಿಸಲು ಅಮೆರಿಕವು, ಆಗ ದಕ್ಷಿಣ ವಿಯೆಟ್ನಾಂನಲ್ಲಿ ಬೀಡುಬಿಟ್ಟಿದ್ದ, ಇದೇ ಏಳನೆ ನೌಕಾಪಡೆಗೆ ಸೇರಿದ್ದ 10 ನೌಕೆಗಳನ್ನು ಬಂಗಾಳಕೊಲ್ಲಿಗೆ ಅಟ್ಟಿತ್ತು. ಇದಕ್ಕೆ ಸ್ವಲ್ಪ ಮುಂಚೆ, 1971ರ ಆಗಸ್ಟ್‌ನಲ್ಲಿ ಭಾರತವು ಸೋವಿಯತ್ ರಶ್ಯಾದೊಂದಿಗೆ ಶಾಂತಿ, ಮೈತ್ರಿ ಮತ್ತು ಸಹಕಾರದ ಒಪ್ಪಂದವೊಂದನ್ನು ಮಾಡಿಕೊಂಡಿತ್ತು. ಅದರ ಒಂಬತ್ತನೆ ಕಲಮಿನ ಪ್ರಕಾರ ಒಂದು ವೇಳೆ ಭಾರತದ ಮೇಲೆ ಹೊರಗಿನಿಂದ ದಾಳಿ ನಡೆದಲ್ಲಿ ಅಥವಾ ಭದ್ರತೆಗೆ ನೈಜ ರೂಪದಲ್ಲಿ ಧಕ್ಕೆಯುಂಟಾದಲ್ಲಿ ಸೋವಿಯತ್ ಒಕ್ಕೂಟವು ಭಾರತದ ಸಹಾಯಕ್ಕೆ ಧಾವಿಸಬೇಕೆಂದು ಕರಾರಾಗಿತ್ತು. ಒಪ್ಪಂದಕ್ಕೆ ತಕ್ಕಂತೆ ಆಗ ಅಮೆರಿಕದ ಏಳನೆ ನೌಕಾಪಡೆಯು ಭಾರತಕ್ಕೆ ಹಾಕಿದ್ದ ಬೆದರಿಕೆಯನ್ನು ಹಿಮ್ಮೆಟ್ಟಿಸಲು ಸೋವಿಯತ್ ನೌಕಾಪಡೆಯ ಕ್ರೂಸರ್‌ಗಳು, ಡೆಸ್ತ್ರಾಯರ್‌ಗಳು ಮತ್ತು ಒಂದು ಜಲಾಂತರ್ಗಾಮಿ ನೌಕೆಯು ಅಮೆರಿಕದ ನೌಕೆಗಳ ಬೆನ್ನುಹತ್ತಿ ಹಿಂದೂ ಮಹಾಸಾಗರಕ್ಕಿಳಿದಿದ್ದವು.

ಅಮೆರಿಕ ಮತ್ತು ರಶ್ಯಾಗಳ ನಡುವಿನ ಶೀತಲ ಸಮರ ಕೊನೆ ಯಾಗುತ್ತಿದ್ದಂತೆ ಮತ್ತು ಸೋವಿಯತ್ ಒಕ್ಕೂಟ ಪತನವಾಗುವ ಮುಂಚೆಯೇ ಭಾರತವು ಅದುವರೆಗಿನ ತನ್ನ ವಿದೇಶಾಂಗ ನೀತಿಯಿಂದ ಉಲ್ಟಾ ಹೊಡೆಯುವ ಸೂಚನೆಯನ್ನು ನೀಡಿತ್ತು. 1990ರ ಆಗಸ್ಟ್ -1991ರ ಫೆೆಬ್ರವರಿಯ ನಡುವೆ ನಡೆದ ಪ್ರಥಮ ಗಲ್ಫ್ ಯುದ್ಧದ ಸಮಯದಲ್ಲೇ ತನ್ನ ನೆಲದಲ್ಲಿ ಅಮೆರಿಕದ ವಾಯುಪಡೆಯ ನೌಕೆಗಳು ಇಂಧನವನ್ನು ಮರುಭರ್ತಿ ಮಾಡಿಕೊಳ್ಳುವ ಅವಕಾಶವನ್ನು ಭಾರತವು ಒದಗಿಸಿತ್ತು.

ಆದರೆ 2016ರ ಆಗಸ್ಟ್‌ನಲ್ಲಿ ಭಾರತವು ಅಮೆರಿಕದೊಡನೆ ಮಾಡಿಕೊಂಡಿರುವ ಲಾಜಿಸ್ಟಿಕ್ಸ್ ಎಕ್ಸ್‌ಚೇಂಜ್ ಮೆಮೊರನ್ಡಮ್ ಆಫ್ ಅಗ್ರಿಮೆಂಟ್-   (ಯುದ್ಧೋಪಕರಣ ಮತ್ತು ಪೂರಕ ಸಾಮಗ್ರಿ-ಸರಂಜಾಮುಗಳ ವಿನಿಮಯ ಒಪ್ಪಂದ)ವು ಅದಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಏಕೆಂದರೆ ಈ ಒಪ್ಪಂದವು ಭಾರತ ಮತ್ತು ಅಮೆರಿಕವು ತಮ್ಮ ತಮ್ಮ ಸೇನಾ ನೆಲೆಯನ್ನು ಮತ್ತೊಬ್ಬರ ಸೇನಾಪಡೆಗಳಿಗೆ ಅಗತ್ಯವಿರುವ ಇಂಧನ ಪೂರಣ, ನಿರ್ವಹಣೆ ಮತ್ತು ಸರಬರಾಜು ಪೂರೈಕೆ ಮಾಡಲು ಅನುವಾಗವಂಥ ಕಲಮುಗಳನ್ನು ಹೊಂದಿವೆ. ಇದರಿಂದಾಗಿ ಭಾರತ ಮತ್ತು ಅಮೆರಿಕದ ಸೇನಾಪಡೆಗಳು ಇನ್ನೂ ಸನ್ನಿಹತವಾಗಲಿವೆ.

2016ರ ಆಗಸ್ಟ್ ಕೊನೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಆಗಿನ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಶ್ಟನ್ ಕಾರ್ಟರ್ ಅವರು, ಅಮೆರಿಕದ ಪ್ರಧಾನ ಸೇನಾ ಕಚೇರಿಯಾದ ಪೆಂಟಗನ್‌ನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಈ ಒಪ್ಪಂದದಿಂದಾಗಿ ‘‘ನಾವು ಬಯಸಿದಾಗ ಜಂಟಿಯಾಗಿ ಕಾರ್ಯಾಚರಣೆ ನಡೆಸುವುದು ಸುಲಭವಾಗುತ್ತದೆ’’ ಎಂದು ಹೇಳಿದ್ದರು. ಅಲ್ಲದೆ ಈ ಒಪ್ಪಂದವು ‘‘ಅಂತಹ ಜಂಟಿ ಕಾರ್ಯಾಚರಣೆಗಳ ನಿರ್ವಹಣೆಗಳನ್ನೂ ಸಹ ಮತ್ತಷ್ಟು ಸುಲಭ ಮತ್ತು ಸಮರ್ಥವಾಗಿಸುತ್ತದೆ’’ ಎಂದೂ ಘೋಷಿಸಿದ್ದರು.

ಈ ಒಪ್ಪಂದದ ಸಹ ಸಹಿದಾರನಾಗಿದ್ದ ಭಾರತದ ಆಗಿನ ರಕ್ಷಣಾ ಮಂತ್ರಿ ಮನೋಹರ್ ಪರಿಕ್ಕರ್ ಅವರು ಸಹ ತಮ್ಮ ಹೇಳಿಕೆಯಲ್ಲಿ ಈ ಒಪ್ಪಂದವು ‘‘ಜಂಟಿ ಕಾರ್ಯಾಚರಣೆಯ ಸಮಯದಲ್ಲಿ ಸಾಮಗ್ರಿಗಳ ಸರಬರಾಜನ್ನು ಸಲೀಸಾಗಿಸುತ್ತದೆ’’ ಎಂದು ಹೇಳಿದ್ದರು. (ಹೇಳಿಕೆಯಲ್ಲಿರುವ ಒತ್ತಕ್ಷರದ ಒತ್ತು ನಮ್ಮದು- ಸಂ). ನಮಗೆ ಖಚಿತವಾಗಿ ತಿಳಿದುಬಂದಿಲ್ಲವಾದರೂ ಈ ಒಪ್ಪಂದವು ಭಾರತದ ಸೇನಾನೆಲೆಗಳಿಂದ ಮತ್ತು ಬಂದರುಗಳಿಂದ ಸೈನಿಕರನ್ನು ಮತ್ತು ಸೇನಾ ಸಾಮಗ್ರಿಗಳನ್ನು ಪೂರ್ವ ನಿಯೋಜನೆ (ಫಾರ್ವರ್ಡ್ ಡಿಪ್ಲಾಯ್ಮೆಂಟ್)ಮಾಡಲು ಅವಕಾಶ ಮಾಡಿಕೊಡುತ್ತದೆ ಎಂದು ಹೇಳಲಾಗುತ್ತಿದೆ.

ಈ ಒಪ್ಪಂದವು ಸಂಪೂರ್ಣವಾಗಿ ಅನುಷ್ಠಾನಕ್ಕೆ ಬರಲು ಆರೇಳು ತಿಂಗಳುಗಳನ್ನು ತೆಗೆದುಕೊಂಡಿದೆ. ಈ ವರ್ಷದ ಫೆಬ್ರವರಿಯಲ್ಲಿ ಅನಿಲ್ ಧೀರೂಬಾಯ್ ಅಂಬಾನಿ ಗುಂಪಿನ (ಎಡಿಎಜಿ) ರಿಲಯನ್ಸ್ ಡಿಫೆನ್ಸ್ ಆ್ಯಂಡ್ ಇಂಜಿನಿಯರಿಂಗ್ ಎಂಬ ಕಂಪೆನಿಯು ತನ್ನ ಪಿಪಾವಯ್ ಹಡಗುಕಟ್ಟೆಯಲ್ಲಿ ಅಮೆರಿಕದ ಏಳನೆ ನೌಕಾಪಡೆಗೆ ಸೇರಿದ ಯುದ್ಧ ನೌಕೆಗಳಿಗೆ ಹಾಗೂ ತತ್ಸಂಬಂಧೀ ಇತರ ಹಡಗುಗಳಿಗೆ ದುರಸ್ತಿ ಮತ್ತು ಇತರ ಸೇವೆಗಳನ್ನು ಒದಗಿಸುವ ಮಾಸ್ಟರ್ ಶಿಫ್ ರಿಪೇರ್ ಅಗ್ರಿಮೆಂಟ್ (ಹಡಗು ದುರಸ್ತಿ ಸಮಗ್ರ ಒಪ್ಪಂದ)ವನ್ನು ಮಾಡಿಕೊಂಡಿತು.

ಈ ಒಪ್ಪಂದವು ಅಂಬಾನಿ ಕಂಪೆನಿಗೆ ಮುಂದಿನ ಐದು ವರ್ಷಗಳಲ್ಲಿ 1.5 ಬಿಲಿಯನ್ ಡಾಲರ್‌ಗಳಷ್ಟು (ಅಂದರೆ ಒಂದು ಡಾಲರ್‌ಗೆ 65 ರೂ. ವಿನಿಮಯ ದರದಲ್ಲಿ 6500 ಕೋಟಿ ರೂಪಾಯಿಗಳು- ಅನು) ಅಧಿಕ ಆದಾಯವನ್ನು ತಂದುಕೊಡುವ ನಿರೀಕ್ಷೆಯಿದೆ. ಅನಿಲ್ ಅಂಬಾನಿಯವರ ಎಡಿಎಜಿ ಕಂಪೆನಿ ಈ ಹಡಗುಕಟ್ಟೆಯನ್ನು 2015ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿದ್ದು ಕೇಂದ್ರ ಮತ್ತು ಗುಜರಾತ್ ಸರಕಾರಗಳ ಸಕ್ರಿಯ ಸಹಕಾರದಿಂದಾಗಿ ಅಮೆರಿಕದ ನೌಕಾಪಡೆಗಳಿಂದ ‘‘ಪರವಾನಿಗೆ ಪಡೆದ ಕಾಂಟ್ರಾಕ್ಟುದಾರ’’ನಾಗಲು ಬೇಕಾದ ಮಾರ್ಪಾಡುಗಳನ್ನು ಅತ್ಯಂತ ತ್ವರಿತವಾಗಿ ಪೂರೈಸಿ ಮೇಲ್ದರ್ಜೆಗೆ ಏರಿಸಲಾಯಿತು. ದಿಲ್ಲಿ ಸರಕಾರವು, ಈ ಒಪ್ಪಂದದ ಅನುಷ್ಠಾನವನ್ನು ಇಷ್ಟು ಬಹಿರಂಗವಾಗಿ, ರಿಲಯನ್ಸ್ ಕಂಪೆನಿಯು ಪೆಂಟಗಾನ್ ಜೊತೆ ಮಾಡಿಕೊಂಡ ವ್ಯವಹಾರದ ಮೂಲಕ ಪ್ರಾರಂಭಿಸಿರುವುದು ಕುತೂಹಲಕಾರಿಯಾಗಿದೆ.

ಭಾರತದ ರಕ್ಷಣಾ ವಲಯದ ಸಾಮಗ್ರಿ ಖರೀದಿ ಕ್ಷೇತ್ರದಲ್ಲಿ ಖಾಸಗಿ ಕಾರ್ಪೊರೇಟ್ ಕಂಪೆನಿಗಳು ದೊಡ್ಡ ಮಟ್ಟದಲ್ಲಿ ಪ್ರವೇಶಿಸುತ್ತಿವೆ. ಈ ಪ್ರಕ್ರಿಯೆ 2005ರಲ್ಲಿ ಆಗಿನ ಸರಕಾರದ ಬದಲಾದ ನೀತಿಯೊಂದಿಗೆ ಪ್ರಾರಂಭವಾಗಿತ್ತು. ಈ ಬದಲಾದ ನೀತಿಯ ಪ್ರಕಾರ ಭಾರತಕ್ಕೆ ರಕ್ಷಣಾ ಸಾಮಗ್ರಿಯನ್ನು ಸರಬರಾಜು ಮಾಡುತ್ತಿದ್ದ ವಿದೇಶಿ ಕಂಪೆನಿಗಳು ತಮ್ಮ ಒಟ್ಟು ವ್ಯಹಾರದ ಒಂದಷ್ಟು ಮೊತ್ತದ ಸಾಮಗ್ರಿಗಳನ್ನು ಸ್ಥಳೀಯ ಮರೆಗಳಿಂದ ಪಡೆದುಕೊಳ್ಳಬೇಕೆಂದು ಒಪ್ಪಿಸಲಾಯಿತು. 

ಮತ್ತು ಈ ನಿಟ್ಟಿನಲ್ಲಿ ವಿದೇಶಿ ಕಂಪೆನಿಗಳು ಭಾರತೀಯ ಕಂಪೆನಿಗಳೊಂದಿಗೆ ಸೇರಿಕೊಂಡು ಜಂಟಿ ಹೂಡಿಕಾ ಕಂಪೆನಿಗಳನ್ನು ರಚಿಸಿಕೊಳ್ಳಲು ಉತ್ತೇಜಿಸಲಾಯಿತು. ಉದಾಹರಣೆಗೆ ಡಸಾತ್ ರಿಲಯನ್ಸ್ ಏರೋಸ್ಪೇಸ್ ಎಂಬ ಕಂಪೆನಿಯನ್ನು ರಫಾಯಿಲ್ ಯುದ್ಧ ವಿಮಾನಗಳ ಖರೀದಿಯ ವ್ಯವಹಾರದಲ್ಲಿ ಸ್ಥಳೀಯ ಮೂಲದ ಸರಬರಾಜಿನ ಶರತ್ತಿನ ಲಾಭವನ್ನು ಪಡೆದುಕೊಳ್ಳಲೆಂದೇ ಹುಟ್ಟುಹಾಕಲಾಗಿತ್ತು. ಅಷ್ಟು ಮಾತ್ರವಲ್ಲದೇ ಅದು ಸರಕಾರದ ‘‘ಮೇಕ್ ಇನ್ ಇಂಡಿಯಾ’’ (ಭಾರತದಲ್ಲೇ ಉತ್ಪಾದಿಸಿ) ನೀತಿಗೂ ಪೂರಕವಾಗಿತ್ತು!.

ವಾಸ್ತವವಾಗಿ ಈ ನೀತಿಯಿಂದ ಲಾಭವನ್ನು ಪಡೆದುಕೊಳ್ಳುತ್ತಿರುವ ಭಾರತದ ಖಾಸಗಿ ಕಾರ್ಪೊರೇಟ್ ಕಂಪೆನಿಗಳು ವಿದೇಶಿ ರಕ್ಷಣಾ ಸಾಮಗ್ರಿ ಉತ್ಪಾದಕರ ಅತ್ಯಂತ ಕಿರಿಯ ಪಾಲುದಾರರಷ್ಟೇ ಆಗಿದ್ದಾರೆ. ಆದರೆ ನಮ್ಮ ರಕ್ಷಣಾ ವ್ಯವಸ್ಥೆಗೆ ಬೇಕಿರುವ ಉಪಕರಣಗಳ ಮತ್ತು ಶಸ್ತ್ರಾಸ್ತ್ರಗಳ ವಿನ್ಯಾಸ ಮತ್ತು ಉತ್ಪಾದನೆಗೆ ಬೇಕಿರುವ ತಾಂತ್ರಿಕ ಕೌಶಲ್ಯವನ್ನು ವಾಸ್ತವವಾಗಿ ಅಭಿವೃದ್ಧಿ ಪಡಿಸಿರುವುದು ರಕ್ಷಣಾ ಇಲಾಖೆಯಡಿ ಇರುವ ಭಾರತದ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳು ಮತ್ತು ರಕ್ಷಣಾ ಸಾಮಗ್ರಿ ಉತ್ಪಾದನಾ ಕಾರ್ಖಾನೆಗಳು. ಆದರೆ ಖಾಸಗಿ ಕಾರ್ಪೊರೇಟ್ ವಲಯಕ್ಕೆ ಅವಕಾಶ ದೊರಕಿಸುವ ಸಲುವಾಗಿಯೇ ಅವನು್ನ ಮೂಲೆಗುಂಪು ಮಾಡಲಾಗುತ್ತಿದೆ.

ಇದೀಗ ಅಮೆರಿಕವು ಭಾರತವನ್ನು ತನ್ನ ‘‘ಪ್ರಮುಖ ರಕ್ಷಣಾ ಪಾಲುದಾರ’’ ಎಂದು ನಾಮಾಂಕಿತಗೊಳಿಸಿದೆ. ಮತ್ತೊಂದೆಡೆ ತನಗೆ ಬೇಕಿರುವ ಸುಧಾರಿತ ಯುದ್ಧ ಸಾಮಗ್ರಿಗಳನ್ನು ಭಾರತವು ಅಮೆರಿಕ ಮತ್ತು ಇಸ್ರೇಲಿನ ಯುದ್ಧ ಸಾಮಗ್ರಿ ಉತ್ಪಾದನಾ ಕಂಪೆನಿಗಳಿಂದ ಹೆಚ್ಚೆಚ್ಚು ಕೊಂಡುಕೊಳ್ಳುತ್ತಿದೆ. ಅಷ್ಟು ಮಾತ್ರವಲ್ಲದೆ ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ರಕ್ಷಣಾ ಕಾರ್ಯದರ್ಶಿ ಜೇಮ್ಸ್ಸ್ ಮಟ್ಟಿಯವರು ಅಮೆರಿಕದ ಹೊಸ ಸರಕಾರಕ್ಕೆ ಚೀನಾಗೆ ಎದಿರಾಗಿ ಭಾರತವನ್ನು ಬೆಳೆಸಬೇಕೆಂಬ ಉದ್ದೇಶವಿದೆಯೆಂಬುದನ್ನು ಯಾವುದೇ ಮುಚ್ಚುಮರೆಯಿಲ್ಲದೆ ಘೋಷಿಸಿದ್ದಾರೆ. ಈ ಎಲ್ಲಾ ಹಿನ್ನೆಲೆಗಳಿಂದಾಗಿ ಭಾರತದ ರಕ್ಷಣಾ ವಲಯಕ್ಕೆ ಕಾಲಿಟ್ಟಿರುವ ಖಾಸಗಿ ಕಾರ್ಪೊರೇಟ್ ಕಂಪೆನಿಗಳು ಬರಲಿರುವ ದಿನಗಳಲ್ಲಿ ಅಪಾರ ಪ್ರಮಾಣದ ಲಾಭವನ್ನು ಬಾಚಿಕೊಳ್ಳಲಿದ್ದಾರೆ.

ಅಮೆರಿಕದ ಏಳನೆ ನೌಕಾಪಡೆಯ ದುರಸ್ತಿಸೇವೆಯ ಕಾಂಟ್ರಾಕ್ಟ್ ಪಡೆದ ನಂತರದಲ್ಲಿ ಅನಿಲ್ ಅಂಬಾನಿ ಕಂಪೆನಿಯ ವಕ್ತಾರರು ಪತ್ರಿಕಾಗೋಷ್ಠಿಯಲ್ಲಿ ಕೊಚ್ಚಿಕೊಳ್ಳುತ್ತಿದ್ದ ರೀತಿಯನ್ನು ನೋಡಿದರೆ ಅವರೇ ಚೀನಾ ವಿರುದ್ಧದ ಸೇನಾಪಡೆಯ ಮುಂಚೂಣಿಯನ್ನು ವಹಿಸಿಕೊಂಡಿರುವಂತಿತ್ತು. ಅನಿಲ್ ಅಂಬಾನಿ ಮತ್ತು ಅವರ ಅಣ್ಣ ಮುಖೇಶ್ ಅಂಬಾನಿಗಳು ನರೇಂದ್ರ ಮೋದಿಯನ್ನು ಭಾರತೀಯ ಜನತಾ ಪಕ್ಷದ ಪ್ರಧಾನಿಯನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಉಪಕಾರ (ಅಥವಾ ಹೂಡಿಕೆಯೆನ್ನಿ..)ಕ್ಕೆ ಪ್ರತಿಯಾಗಿ ಅವರಿಗೆ ಹಲವಾರು ಪಟ್ಟು ಹೆಚ್ಚಿನ ಲಾಭವು ಅತ್ಯಂತ ತ್ವರಿತವಾಗಿಯೇ ದೊರೆಯುವಂತಿದೆ.

 ಒಂದು ಕಾಲದಲ್ಲಿ ಅಮೆರಿಕದ ಏಳನೆ ನೌಕಾಪಡೆಯು ಭಾರತವು ಎದಿರಿಸುತ್ತಿದ್ದ ಪ್ರಮುಖ ಸೇನಾ ಅಪಾಯವಾಗಿತ್ತು; ಇದೀಗ ಅದು ಒಂದು ಲಾಭಗಳಿಕೆಯ ಅವಕಾಶವಾಗಿದೆ; ಕೆಲವರಿಗಂತೂ ಅದು ಚಿನ್ನದ ಪಾತ್ರೆಯಾಗಿಬಿಟ್ಟಿದೆ.

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News