9 ಕೋ.ರೂ. ಮೌಲ್ಯದ ಹಳೆ ನೋಟು ಪತ್ತೆ: ಎಂಎಲ್ಸಿಯೊಬ್ಬರ ಅಳಿಯನ ಸಹಿತ 14 ಮಂದಿಯ ಬಂಧನ
ಬೆಂಗಳೂರು, ಎ. 2: ಗರಿಷ್ಠ ಮುಖಬೆಲೆಯ ಹಳೇ ನೋಟುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಬಳಿಕ ಹೊಸ ನೋಟುಗಳಾಗಿ ಬದಲಾಯಿಸುವ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಸಿ.ವೀರಣ್ಣ ಮತ್ತಿಕಟ್ಟಿ ಅಳಿಯ ಸೇರಿದಂತೆ 14 ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 9.10 ಕೋಟಿ ರೂ.ವೌಲ್ಯದ ಹಳೇ ನೋಟುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಎಂಎಲ್ಸಿ ಅಳಿಯನನ್ನು ಪ್ರವೀಣ್‌ಕುಮಾರ್ ಯಾನೆ ಕಂಟ್ರಾಕ್ಟರ್ ಪ್ರವೀಣ್ (43) ಎಂದು ಗುರುತಿಸಲಾಗಿದ್ದು, ಇನ್ನುಳಿದ ಆರೋಪಿಗಳನ್ನು ಬೆನ್ಸನ್‌ಟೌನ್ ನಿವಾಸಿ ಎಡ್ವಿನ್ ರೋಜಾರಿಯೊ(38), ಉದ್ಯಮಿ ನಾಗರಬಾವಿಯ ಎನ್. ಉಮೇಶ್(45),ರಾಜು(47), ತಮಿಳುನಾಡಿನ ಡೆಂಕಣಿಕೋಟೆಯ ಎಸ್. ಕಿಶೋರ್‌ಕುಮಾರ್(30).
ನಾಗರಬಾವಿ 9ನೆ ಬ್ಲಾಕ್‌ನ ಪ್ರಭು(34), ಹೆಬ್ಬಾಳ ಕೆಂಪಾಪುರದ ಮನ್ ಮೋಹನ್ (51), ಪುತ್ತೂರಿನ ನಾರಾಯಣಭಟ್(56), ಮಲ್ಲೇಶ್ವರಂನ ಪಿ. ಚಂದ್ರಶೇಖರ್(50), ವಿಜಯ ಬ್ಯಾಂಕ್ ಕಾಲೋನಿಯ ಶ್ರೀನಿವಾಸ್ (39), ಆರ್.ಟಿ.ನಗರದ ಮುಹಮ್ಮದ್ ಇಮ್ರಾನ್(28), ಬಸವೇಶ್ವರನಗರದ ಅರುಣ್ (42), ಬಾಣಸವಾಡಿಯ ಹ್ಯಾರಿಸ್ (40) ಹಾಗೂ ಮೂಡಲಪಾಳ್ಯ ಕಲ್ಯಾಣ ನಗರಿಯ ಶೇಖರ್ (37) ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಬೆನ್ಸನ್‌ಟೌನ್‌ನಲ್ಲಿರುವ ಆರೋಪಿ ಪ್ರವೀಣ್‌ಕುಮಾರ್ ಮನೆ ಮೇಲೆ ಶನಿವಾರ ರಾತ್ರಿ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ, ಪ್ರಕರಣ ಬೆಳಕಿಗೆ ಬಂದಿದ್ದು, ಹೊಸ ನೋಟಿಗೆ ಬದಲಿಸಲು ಹಳೇ ನೋಟುಗಳನ್ನು ಸಂಗ್ರಹಿಸಿದ್ದ ಎನ್ನಲಾಗಿದೆ. ಪ್ರಕರಣ ಸಂಬಂಧ ನೋಟುಗಳಲ್ಲದೆ ಎರಡು ಕಾರುಗಳು, ಎರಡು ಬೈಕ್‌ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡು, ವಿಚಾರಣೆಗೊಳಪಡಿಸಿದ್ದಾರೆ.
ಆರು ತಿಂಗಳಿನಿಂದ ನನ್ನ ಅಳಿಯ ಪ್ರವೀಣ್‌ಕುಮಾರ್ ನನ್ನ ಸಂಪರ್ಕದಲ್ಲಿ ಇಲ್ಲ. ಆತನ ಬಂಧನಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ವ್ಯಕ್ತಿತ್ವದ ಬಗ್ಗೆ ಎಲ್ಲರಿಗೂ ಗೊತ್ತಿದೆ.
-ಸಿ.ವೀರಣ್ಣ ಮತ್ತಿಕಟ್ಟಿ ವಿಧಾನ ಪರಿಷತ್ ಸದಸ್ಯ