×
Ad

ಠಾಣಾ ವ್ಯಾಪ್ತಿಯಲ್ಲಿ ಜನಸಂಪರ್ಕ ಸಭೆ ಕಡ್ಡಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-04-02 17:23 IST

ಬೆಂಗಳೂರು, ಎ.2: ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ತಿಂಗಳಿಗೊಮ್ಮೆ ಕಡ್ಡಾಯವಾಗಿ ಜನ ಸಂಪರ್ಕ ಸಭೆಯನ್ನು ಏರ್ಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

 ವಿವಾರ ಕೋರಮಂಗಲದ ಕೆಎಸ್ಸಾರ್ಪಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕ ವಿಚೇತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಪದಕ ವಿತರಿಸಿ ಮಾತನಾಡಿದ ಅವರು, ಅಪರಾಧ ಕೃತ್ಯಗಳನ್ನು ಎಸಗುವ ಅಪರಾಧಿಗಳ ಕುರಿತು ಸಂಪೂರ್ಣ ಮಾಹಿತಿ ಪಡೆಯಬೇಕಾದರೆ ಜನಸಂಪರ್ಕ ಸಭೆ ಅಗತ್ಯವಿದೆ ಎಂದು ತಿಳಿಸಿದರು.

ಅಪರಾಧಿಗಳ ವಿರುದ್ಧ ಸಾಕ್ಷ ಹೇಳಲು ಜನತೆ ಹಿಂಜರಿಯುತ್ತಿದ್ದಾರೆ. ಇದರಿಂದ ಎಷ್ಟೇ ಅಪರಾಧ ಎಸಗಿದರು ಲೀಲಾಜಾಲವಾಗಿ ತಪ್ಪಿಸಿಕೊಳ್ಳುವಂತಾಗಿದೆ. ಹೀಗಾಗಿ ಸಾಕ್ಷಿಧಾರರಿಗೆ ಸೂಕ್ತ ರಕ್ಷಣೆಯ ಭರವಸೆ ನೀಡಿದರೆ ಅಪರಾಧಿಗಳಿಗೆ ಸೂಕ್ತ ಶಿಕ್ಷೆಯಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಚಿಂತಿಸಬೇಕು ಎಂದು ಅವರು ಹೇಳಿದರು.

 ಸಮಾಜದಲ್ಲಿ ಶಾಂತಿ ಕಾಪಾಡಬೇಕಾದರೆ ಪೊಲೀಸ್ ವ್ಯವಸ್ಥೆ ಸಮರ್ಥವಾಗಿರಬೇಕು. ದುಷ್ಟರು, ಒಳ್ಳೆಯವರು ಕೂಡಿಯೇ ಸಮಾಜವಾಗಿರುತ್ತದೆ. ಇದರಲ್ಲಿ ದುಷ್ಟರಿಂದ ಒಳ್ಳೆಯವರಿಗೆ ರಕ್ಷಣೆ ನೀಡುವುದು ಸರಕಾರ ಹಾಗೂ ಪೊಲೀಸ್ ಇಲಾಖೆಯ ಜವಾಬ್ದಾರಿ. ಈ ನಿಟ್ಟಿನಲ್ಲಿ ಅಮಾಯಕರಿಗೆ ತೊಂದರೆ ಕೊಡುವ, ಶೋಷಣೆ ಮಾಡುವ, ಕೊಲೆ, ಕಳ್ಳತನ, ದರೋಡೆಯಂತಹ ಕೃತ್ಯಗಳನ್ನು ನಡೆಸುವವರ ಮೇಲೆ ಪೊಲೀಸ್ ಠಾಣೆಗಳಲ್ಲಿ ನಿರಂತರ ನಿಗಾ ವಹಿಸಬೇಕು. ಆ ಮೂಲಕ ಅಪರಾಧ ಕೃತ್ಯಗಳನ್ನು ಕಡಿಮೆ ಮಾಡಬೇಕು ಎಂದು ಅವರು ತಿಳಿಸಿದರು.

ಅಪರಾಧ ನಡೆದಾಗ ಪತ್ತೆಹಚ್ಚಿ ಶಿಕ್ಷೆ ಕೊಡಿಸುವುದು ಒಂದು ಭಾಗವಾದರೆ, ಅಪರಾಧ ನಡೆಯುವ ಮುನ್ನ ತಡೆಗಟ್ಟುವುದೇ ಬಹಳ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪೊಲೀಸರಿಗೂ ಜಾಣ್ಮೆ ಮತ್ತು ತಾಳ್ಮೆ ಅತ್ಯಗತ್ಯವಾಗಿದೆ. ಇವರೆಡು ಗುಣಗಳಿದ್ದ ವ್ಯಕ್ತಿಮಾತ್ರ ಉತ್ತಮ ಪೊಲೀಸ್ ಆಗಲು ಸಾಧ್ಯವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪೊಲೀಸ್ ಇಲಾಖೆಯಲ್ಲಿ ಹಲವು ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿಯೇ ಅನೇಕ ಪ್ರಕರಣಗಳನ್ನು ಭೇದಿಸಲು ಸಾಧ್ಯವಾಗಿದೆ. ಕೆಲವು ವರ್ಷಗಳ ಹಿಂದೆ ಎಟಿಎಂನಲ್ಲಿ ಬ್ಯಾಂಕ್ ಉದ್ಯಮಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಯನ್ನು ಇತೀಚೆಗಷ್ಟೆ ಬಂಧಿಸಲಾಗಿದೆ. ಒಂದು ವೇಳೆ ಆರೋಪಿಯನ್ನು ಬಂಧಿಸದೇ ಇದ್ದಿದ್ದರೆ ಪೊಲೀಸರಿಗೆ ಅದರ ಕಳಂಕ ಸದಾ ಇರುತ್ತಿತ್ತು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇತ್ತೀಚೆಗೆ ಭಾವ ಮತ್ತು ನಾದಿನಿ ನಡುವೆ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು ಪೊಲೀಸರು ಭೇದಿಸಿದಾಗ ಅದು ಪ್ರೇಮ ಪ್ರಸಂಗ ಎಂಬುದು ತಿಳಿಯಿತು ಕೃತ್ಯಕ್ಕೆ ಅತ್ಯಾಚಾರದ ಕಥೆ ಕಟ್ಟಿ ದೊಡ್ಡ ಪ್ರಚಾರ ನಡೆಸಲಾಗಿತ್ತು. ಪೊಲೀಸರು ತನಿಖೆ ನಡೆಸಿ ವಾಸ್ತವವನ್ನು ಜನರ ಮುಂದಿಟ್ಟರು. ಮತ್ತೊಂದು ಪ್ರಕರಣದಲ್ಲಿ ಇನ್ನೊಬ್ಬರ ಮೇಲೆ ದ್ವೇಷ ತೀರಿಸಿಕೊಳ್ಳಲು ಅಪ್ಪ-ಮಗಳು ಸೇರಿ ಅತ್ಯಾಚಾರದ ಆರೋಪ ಮಾಡಿದರು. ಅದರಲ್ಲೂ ಚಾಣಾಕ್ಷತನದಿಂದ ಪ್ರಕರಣ ಭೇದಿಸಿದ ಪೊಲೀಸರು ಅತ್ಯಾಚಾರ ನಡೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಇಂತಹ ಘಟನೆಗಳಿಂದ ಜನರಿಗೆ ಪೊಲೀಸರ ಮೇಲಿನ ವಿಶ್ವಾಸ ಹೆಚ್ಚಾಗುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಠಿಆ, ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣಕ್ಕಾಗಿ ಈಗಾಗಲೇ 10ಕೋಟಿ ರೂ. ನೀಡಲಾಗಿದ್ದು, ಇನ್ನೂ 10 ಕೋಟಿ ರೂ.ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.

- ಮುಖ್ಯಮಂತ್ರಿ ಸಿದ್ದರಾಮಯ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News