ಎಲ್ಲ ಕೃಷಿಸಾಲಗಳ ಮನ್ನಾಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ

Update: 2017-04-04 13:05 GMT

ಚೆನ್ನೈ,ಎ.4: ಸಾಲಮನ್ನಾ ಸೌಲಭ್ಯವನ್ನು ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿದವರಿಗೆ ಮಾತ್ರ ಸೀಮಿತಗೊಳಿಸುವ ಬದಲು ಅದನ್ನು ಎಲ್ಲ ರೈತರ ಕೃಷಿಸಾಲಗಳಿಗೆ ವಿಸ್ತರಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯವು ಮಂಗಳವಾರ ತಮಿಳುನಾಡು ಸರಕಾರಕ್ಕೆ ಆದೇಶಿಸಿದೆ. ಅಲ್ಲದೆ, ತಮ್ಮ ಬೆಳೆಸಾಲವನ್ನು ಮರುಪಾವತಿಸಲು ವಿಫಲರಾಗಿರುವ ರೈತರ ವಿರುದ್ಧ ಯಾವುದೇ ದಂಡನಾ ಅಥವಾ ಸಾಲ ವಸೂಲಾತಿ ಕ್ರಮಗಳನ್ನು ಆರಂಭಿಸದಂತೆ ಅಧಿಕಾರಿಗಳನ್ನು ನಿರ್ಬಂಧಿಸಿದೆ.

ನ್ಯಾಯಾಲಯದ ಆದೇಶದಿಂದಾಗಿ ತಮಿಳುನಾಡು ಸರಕಾರಕ್ಕೆ 1,980 ಕೋ.ರೂ.ಗಳ ಹೆಚ್ಚುವರಿ ಹಣಕಾಸು ಹೊರೆಯುಂಟಾಗಲಿದೆ ಮತ್ತು ‘ಇತರ ’ವರ್ಗಕ್ಕೆ ಸೇರಿದ 3.01 ಲಕ್ಷ ರೈತರಿಗೆ ಲಾಭವಾಗಲಿದೆ.

ತಮಿಳುನಾಡು ಸರಕಾರವು 2.5 ಎಕರೆವರೆಗೆ ಮತ್ತು 5 ಎಕರೆವರೆಗೆ ಭೂಮಿಯನ್ನು ಹೊಂದಿರುವ ಸಣ್ಣ ರೈತರ ಕೃಷಿಸಾಲಗಳನ್ನು ಮನ್ನಾ ಮಾಡಿ ಕಳೆದ ವರ್ಷದ ಜೂ.28 ರಂದು ಆದೇಶ ಹೊರಡಿಸಿತ್ತು ಮತ್ತು ಇದರಿಂದಾಗಿ ಸರಕಾರದ ಬೊಕ್ಕಸದ ಮೇಲೆ 5,780 ಕೋ.ರೂ.ಗಳ ಹೊರೆ ಬಿದ್ದಿತ್ತು.

  5 ಎಕರೆಗಿಂತ ಹೆಚ್ಚಿನ ಭೂಮಿ ಹೊಂದಿರುವ ರೈತರನ್ನು ಸಾಲ ಮನ್ನಾ ವ್ಯಾಪ್ತಿಯಿಂದ ಹೊರಗಿಟ್ಟಿದ್ದನ್ನು ತಾರತಮ್ಯದಿಂದ ಕೂಡಿದ ಮತ್ತು ವಿವೇಚನೆಯಿಲ್ಲದ ನೀತಿಯೆಂದು ಬಣ್ಣಿಸಿದ ನ್ಯಾಯಮೂರ್ತಿಗಳಾದ ಎಸ್.ನಾಗಮುತ್ತು ಮತ್ತು ಎಂ.ವಿ.ಮುರಳೀಧರನ್ ಅವರ ವಿಭಾಗೀಯ ಪೀಠವು ಸರಕಾರದ ಆದೇಶವನ್ನು ರದ್ದುಗೊಳಿಸುವ ಗೋಜಿಗೆ ಹೋಗದೆ, ರೈತರು ಹೊಂದಿರುವ ಭೂಮಿಯನ್ನು ಪರಿಗಣಿಸದೆ ಸಾಲಮನ್ನಾ ಸೌಲಭ್ಯವನ್ನು ಎಲ್ಲ ರೈತರಿಗೆ ವಿಸ್ತರಿಸುವಂತೆ ಸರಕಾರಕ್ಕೆ ನಿರ್ದೇಶ ನೀಡಿತು.

2016,ಮಾ.31ರವರೆಗೆ ಪ್ರಾಥಮಿಕ ಕೃಷಿ ಸಹಕಾರಿ ಬ್ಯಾಂಕ್‌ಗಳಿಂದ ಪಡೆದಿರುವ ಸಾಲಗಳಿಗೆ ನ್ಯಾಯಾಲಯದ ನಿರ್ದೇಶ ಅನ್ವಯಿಸುತ್ತದೆ.

ಸರಕಾರದ ಹಣಕಾಸು ಸ್ಥಿತಿ ಗಂಭೀರವಾಗಿದೆ ಎಂದು ನಮಗೆ ಗೊತ್ತಿದೆ. ಮುಖ್ಯ ಕಾರ್ಯದರ್ಶಿಗಳು ಅಡ್ವೋಕೇಟ್ ಜನರಲ್‌ಗೆ ಬರೆದಿರುವ ಪತ್ರದಲ್ಲಿ ಇದನ್ನು ಪುನರುಚ್ಚರಿಸಿದ್ದಾರೆ. ರಾಜ್ಯ ಸರಕಾರವು ಈಗಾಗಲೇ 5,780 ಕೋ.ರೂ.ಗಳ ಸಾಲಮನ್ನಾ ಹೊರೆಯನ್ನು ಏಕಾಂಗಿಯಾಗಿ ಭರಿಸಿದೆ ಮತ್ತು ಈಗ 1980.33 ಕೋ.ರೂ.ಗಳ ಹೆಚ್ಚುವರಿ ಹೊರೆ ಬೀಳಲಿದೆ ಎಂದ ಪೀಠವು, ಕೇಂದ್ರವೂ ಈ ಹೊರೆಯನ್ನು ಹಂಚಕೊಳ್ಳಲು ಮುಂದಾಗಬೇಕು ಎಂದು ಒತ್ತಿ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News