ದೀಪಾ ಕರ್ಮಾಕರ್‌ಗೆ ಶಸ್ತ್ರಚಿಕಿತ್ಸೆ: ಏಷ್ಯನ್ ಚಾಂಪಿಯನ್‌ಶಿಪ್‌ಗೆ ಅಲಭ್ಯ

Update: 2017-04-04 18:18 GMT

 ಹೊಸದಿಲ್ಲಿ, ಎ.4: ಭಾರತದ ಜಿಮ್ನಾಸ್ಟಿಕ್ ತಾರೆ ದೀಪಾ ಕರ್ಮಾಕರ್ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಮುಂದಿನ ತಿಂಗಳು ನಡೆಯಲಿರುವ ಏಷ್ಯನ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿಯಲಿದ್ದಾರೆ.

ಕರ್ಮಾಕರ್ ಮುಂಬೈನಲ್ಲಿ ಎಸಿಎಲ್ ಸರ್ಜರಿಗೆ ಒಳಗಾಗಲಿದ್ದು, ಥಾಯ್ಲೆಂಡ್‌ನಲ್ಲಿ ಮೇ 18 ರಿಂದ ಆರಂಭವಾಗಲಿರುವ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವುದಿಲ್ಲ.

‘‘ಇತ್ತೀಚೆಗೆ ಅಭ್ಯಾಸ ನಡೆಸುತ್ತಿದ್ದಾಗ ನನಗೆ ಗಾಯವಾಗಿತ್ತು. ಮುಂಬೈನಲ್ಲಿ ಎಸಿಎಲ್ ಸರ್ಜರಿಗೆ ಒಳಗಾಗಲಿದ್ದೇನೆ. ಪುನಶ್ಚೇತನ ಶಿಬಿರದಲ್ಲಿ ಭಾಗವಹಿಸಿದ ಬಳಿಕ ಶೀಘ್ರವೇ ಸ್ಪರ್ಧಾತ್ಮಕ ಕ್ರೀಡೆಗೆ ವಾಪಸಾಗುವೆ’’ ಎಂದು ಕರ್ಮಾಕರ್ ಟ್ವೀಟ್ ಮಾಡಿದ್ದಾರೆ.

ಭಾರತೀಯ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್‌ಗೆ ಈ ಹಿಂದೆ ಚಿಕಿತ್ಸೆ ನೀಡಿರುವ ಖ್ಯಾತ ವೈದ್ಯ ಡಾ.ಅನಂತ್ ಜೋಶಿ ಅವರು 23ರ ಹರೆಯದ ಕರ್ಮಾಕರ್‌ಗೆ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಜಿಮ್ನಾಸ್ಟಿಕ್ ಎನಿಸಿಕೊಳ್ಳುವ ಮೂಲಕ ಕರ್ಮಾಕರ್ ಪ್ರಸಿದ್ಧಿಗೆ ಬಂದಿದ್ದರು. ರಿಯೋ ಗೇಮ್ಸ್‌ನಲ್ಲಿ ವೋಲ್ಟ್ ವಿಭಾಗದಲ್ಲಿ ನಾಲ್ಕನೆ ಸ್ಥಾನ ಪಡೆದು ಗಮನ ಸೆಳೆದಿದ್ದರು.

2014ರಲ್ಲಿ ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸುವ ಮೂಲಕ ಕರ್ಮಾಕರ್ ಬೆಳಕಿಗೆ ಬಂದಿದ್ದರು. ಕರ್ಮಾಕರ್ ಜಿಮ್ನಾಸ್ಟಿಕ್‌ನಲ್ಲಿ ಕಂಚಿನ ಪದಕ ಜಯಿಸಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News