ಕೆಪಿಎಸ್‌ಸಿ 2011ನೆ ಸಾಲಿನ ಗೆಜೆಟೆಡ್ ಹುದ್ದೆ: ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ ತಡೆ
ಬೆಂಗಳೂರು, ಎ.5: ಕೆಪಿಎಸ್‌ಸಿ 2011ನೆ ಸಾಲಿನ 362 ಗೆಜೆಟೆಡ್ ಹುದ್ದೆಗಳ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆ ಹಿಂಪಡೆದಿದ್ದ ಸರಕಾರದ ಆದೇಶ ರದ್ದುಪಡಿಸಿದ್ದ ಕೆಎಟಿ ತೀರ್ಪಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಈ ಸಂಬಂಧ ಆರ್.ರೇಣುಕುಮಿಕೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಆರ್.ಕೋತ್ವಾಲ್ ಅವರು, 2011ನೆ ಸಾಲಿನ 362 ಗೆಜೆಟೆಡ್ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸಿಐಡಿ ಅವರು ವರದಿಯನ್ನು ನೀಡಿದ್ದರೂ ರಾಜ್ಯ ಸರಕಾರ ಕೆಎಟಿ ಆದೇಶದಂತೆ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ನೇಮಕಾತಿ ಆದೇಶವನ್ನು ನೀಡಲು ಮುಂದಾಗಿದೆ. ಹೀಗಾಗಿ, ನ್ಯಾಯಪೀಠವು ಕೆಎಟಿ ಆದೇಶವನ್ನು ರದ್ದು ಮಾಡಬೇಕೆಂದು ಮನವಿ ಮಾಡಿದರು.
ಅಲ್ಲದೆ, 2011ನೆ ಸಾಲಿನ 362 ಗೆಜೆಟೆಡ್ ಹುದ್ದೆಗಳನ್ನು ನೇಮಕಾತಿ ಮಾಡುವಂತೆ ಕೆಎಟಿ ಆದೇಶ ಹೊರಡಿಸಿದೆ. ಆದರೆ, ರಾಜ್ಯ ಸರಕಾರ ಈ ಆದೇಶವನ್ನು ಪ್ರಶ್ನಿಸದೆ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ನೇಮಕಾತಿಗೆ ಆದೇಶ ನೀಡಲು ಮುಂದಾಗಿದೆ. ಹಾಗೂ ಈಗಾಗಲೇ 78 ಅಭ್ಯರ್ಥಿಗಳಿಗೆ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಆದೇಶ ಪತ್ರವನ್ನು ನೀಡಿದೆ ಎಂದು ಪೀಠಕ್ಕೆ ತಿಳಿಸಿದರು.
ಪ್ರಕರಣವೇನು?
2011ನೆ ಸಾಲಿನಲ್ಲಿ ಗೆಜೆಟೆಡ್ ಹುದ್ದೆಗಳಿಗೆ ಪರೀಕ್ಷೆ ಬರೆದಿದ್ದ ಮೈತ್ರಿಯಾ ಎಂಬ ಅಭ್ಯರ್ಥಿಯು ತಮಗೆ ಎಸಿಗಿಂತ ಕಡಿಮೆ ಹುದ್ದೆ ನೀಡಿದ್ದಾರೆ ಹಾಗೂ ಎಸಿ ಹುದ್ದೆ ನೀಡಲು ತಮ್ಮಿಂದ ಹಣ ಕೇಳಿದ್ದಾರೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೆಪಿಎಸ್‌ಸಿ 2011ನೆ ಸಾಲಿನ 362 ಗೆಜೆಟೆಡ್ ಹುದ್ದೆಗಳ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಯನ್ನು 2013ರಲ್ಲಿ ಹಿಂದಕ್ಕೆ ಪಡೆದಿತ್ತು.
ಈ ಕ್ರಮವನ್ನು ಪ್ರಶ್ನಿಸಿ ಕೆಲವರು ಕೆಎಟಿ ಮೊರೆ ಹೋದ ಹಿನ್ನೆಲೆಯಲ್ಲಿ ನೇಮಕಾತಿ ಮಾಡುವಂತೆ ಕೆಎಟಿ ಆದೇಶಿಸಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡು 362 ಗೆಜೆಟೆಡ್ ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿತ್ತು.
2011ನೆ ಸಾಲಿನ 362 ಗೆಜೆಟೆಡ್ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸಿಐಡಿ ಅವರು ವರದಿಯನ್ನು ನೀಡಿದ್ದರೂ ರಾಜ್ಯ ಸರಕಾರ ಕೆಎಟಿ ಆದೇಶದಂತೆ ಸಚಿವ ಸಂಪುಟದಲ್ಲಿ ತಿ ೀರ್ಮಾನ ತೆಗೆದುಕೊಂಡು ನೇಮಕಾತಿ ಆದೇಶವನ್ನು ನೀಡಲು ಮುಂದಾಗಿತ್ತು. ಹೀಗಾಗಿ, ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಇಂದು ಕೆಎಟಿ ಆದೇಶಕ್ಕೆ ತಡೆಯಾಗಿದೆ.
-ಆರ್.ಕೋತ್ವಾಲ್, ಹೈಕೋರ್ಟ್ ವಕೀಲ