×
Ad

ಪಾಸ್‌ಪೋರ್ಟ್ ಮುನಿರಾಜು ಬಂಧನ ; ಈತನ ಬಳಿ ಎಷ್ಟು ಪಾಸ್‌ಪೋರ್ಟ್ ಇದ್ದವು ಎಂಬುದು ಇಲ್ಲಿದೆ ನೋಡಿ...!

Update: 2017-04-06 17:50 IST

ಬೆಂಗಳೂರು, ಎ.6: ಆಫ್ರಿಕ ಪ್ರಜೆಗಳ ಪಾರ್ಸ್‌ಪೋರ್ಟ್‌ಗಳನ್ನು ಅಡಮಾನ ಆಧಾರದ ಮೇಲೆ ವಶದಲ್ಲಿಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದ ಆರೋಪದ ಮೇಲೆ ಪಾಸ್‌ಪೋರ್ಟ್ ಮುನಿರಾಜ್‌ನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

 ಬಂಧಿತ ಆರೋಪಿ ಬಿ.ಮುನಿರಾಜು(45), ಇಲ್ಲಿನ ಕಾಚರಕನಹಳ್ಳಿಯ ಸೆಂಟ್ ಥಾಮಸ್ ಟೌನ್ ಪೋಸ್ಟ್‌ನ ನಿವಾಸಿಯಾಗಿದ್ದಾನೆ ಎಂದು ಪೊಲೀಸರು ಗುರುತಿಸಿದ್ದಾರೆ.

ಇಲ್ಲಿನ ಬಾಣಸವಾಡಿ ಪೊಲೀಸ್ ಠಾಣಾ ಸರಹದ್ದಿನ ಕಲ್ಯಾಣನಗರದ 2ನೆ ಬ್ಲಾಕ್ ಎಚ್‌ಆರ್‌ಬಿಆರ್ ರಸ್ತೆಯ ಕಟ್ಟಡವೊಂದರಲ್ಲಿ ಎಲೆಕ್ಟ್ರಾನಿಕ್ಸ್ ಅಂಗಡಿಯ ಮೇಲೆ ದಾಳಿ ನಡೆಸಿದಾಗ, ಆರೋಪಿ ಮುನಿರಾಜು ಆಫ್ರಿಕನ್ ದೇಶಗಳ ಪ್ರಜೆಗಳಿಂದ ಪಾಸ್‌ಪೋರ್ಟ್, ರೆಸಿಡೆನ್ಸಿಯಲ್ ಪರ್ಮಿಟ್, ಲ್ಯಾಪ್‌ಟಾಪ್, ಮೊಬೈಲ್, ವಾಹನಗಳನ್ನು ಅಡಮಾನ ಆಧಾರದ ಮೇಲೆ ವಶದಲ್ಲಿಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದ ಎಂದು ಸಿಸಿಬಿ ತಿಳಿಸಿದೆ.

ಮುನಿರಾಜು ವಶದಲ್ಲಿದ್ದ 341 ಆಫ್ರಿಕನ್ ದೇಶದ ಪಾಸ್‌ಪೋರ್ಟ್‌ಗಳು, 83 ರೆಸಿಡೆನ್ಸಿಯಲ್ ಪರ್ಮಿಟ್‌ಗಳು, 93 ಲ್ಯಾಪ್‌ಟಾಪ್‌ಗಳು, 155 ಮೊಬೈಲ್‌ಗಳು ಹಾಗೂ ನಾಲ್ಕು ಬೈಕ್, ಏಳು ಕಾರುಗಳು ಸೇರಿ ಒಟ್ಟು 34 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪಡೆಯಲಾಗಿದೆ.

ಪ್ರಕರಣ ಸಂಬಂಧ ಇಲ್ಲಿನ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News