ತಿನ್ನಲು ಯೋಗ್ಯವಲ್ಲದ ಊಟ ನೀಡುತ್ತಿದೆ ಇಸ್ಕಾನ್ !
ಬೆಂಗಳೂರು, ಎ.7: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ನೀಡುತ್ತಿರುವ ಮಧ್ಯಾಹ್ನದ ಬಿಸಿ ಊಟ ತಿನ್ನಲು ಯೋಗ್ಯ ಅಲ್ಲ ಎಂದು ಆಹಾರ ತಜ್ಞರ ವರದಿ ದೃಢಪಡಿಸಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಮಾ.27ರಂದು ಇಲ್ಲಿನ ಧರ್ಮರಾಯಸ್ವಾಮಿ ವಾರ್ಡ್‌ನಲ್ಲಿ ಪೌರ ಕಾರ್ಮಿಕರಿಗೆ ಇಸ್ಕಾನ್ ಸಂಸ್ಥೆ ಹಳಸಿದ ಅನ್ನ ನೀಡಿತ್ತೆಂದು ಪಾಲಿಕೆ ಸದಸ್ಯೆ ಪ್ರತಿಭಾ ಧನರಾಜ್ ಆಪಾದಿಸಿದ್ದಲ್ಲದೆ, ಅನ್ನವನ್ನು ಪಾಲಿಕೆ ಸಭೆಗೆ ತಂದು ಪ್ರದರ್ಶಿಸಿ ಇಸ್ಕಾನ್ ಕಳಪೆ ಊಟ ನೀಡುತ್ತಿದೆ ಎಂದು ಎಲ್ಲರ ಗಮನ ಸೆಳೆದಿದ್ದರು.
ಬಳಿಕ ಪಾಲಿಕೆ ಮೇಯರ್ ಜಿ.ಪದ್ಮಾವತಿ ಆಹಾರವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಹಳಸಿದ ಅನ್ನವನ್ನು ಪರೀಕ್ಷಿಸಿದ ಪಬ್ಲಿಕ್ ಹೆಲ್ತ್ ಇನ್‌ಸ್ಟಿಟಿಟ್ಯೂಟ್ ಸಂಸ್ಥೆಯ ಮೈಕ್ರೋ ಬಯಾಲಜಿಸ್ಟ್ಗಳು ಇಸ್ಕಾನ್ ಊಟ ತಿನ್ನಲು ಯೋಗ್ಯವಲ್ಲ ಎಂದು ವರದಿ ನೀಡಿದೆ.
ಇಸ್ಕಾನ್ ಸಂಸ್ಥೆ ನೀಡುವ ಊಟದ ಬಗ್ಗೆ ಸರಕಾರದೊಂದಿಗೆ ಚರ್ಚಿಸಿ, ಬಳಿಕ ಕ್ರಮ ಕೈಗೊಳ್ಳುತ್ತೇವೆ.
-ಜಿ.ಪದ್ಮಾವತಿ, ಬಿಬಿಎಂಪಿ ಮೇಯರ್