ನಿಧನ: ಯು.ದುಗ್ಗಪ್ಪ

Update: 2017-04-07 17:23 GMT

ಉಡುಪಿ, ಎ.7: ಹವ್ಯಾಸಿ ಕಲಾವಿದ, ಕಲಾಸಂಘಟಕ, ಯಕ್ಷಗಾನ ಗುರು ಹಾಗೂ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಯು.ದುಗ್ಗಪ್ಪತೀವ್ರ ಹೃದಯಾಘಾತದಿಂದ ಇಂದು ಬೆಳಗಿನ ಜಾವ ಮಲಗಿದ್ದಲ್ಲೇ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ಪ್ರಾಯ ವಾಗಿತ್ತು. ದುಗ್ಗಪ್ಪ ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

 ಉಡುಪಿ ಸಮೀಪದ ಉಪ್ಪೂರಿನವರಾದ ದುಗ್ಗಪ್ಪ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಉದ್ಯೋಗಿಯಾಗಿದ್ದು, ಅನೇಕ ಊರುಗಳಲ್ಲಿ ಕಾರ್ಯನಿರ್ವಹಿಸಿದ ಬಳಿಕ ಪ್ರಸಕ್ತ ಉಡುಪಿ ಶಾಖೆಯಲ್ಲಿ ಅಧಿಕಾರಿಯಾಗಿದ್ದರು. ಎಳವೆಯಿಂದಲೂ ಯಕ್ಷಗಾನ, ನಾಟಕ ಮೊದಲಾದ ಕಲೆಗಳಲ್ಲಿ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದ ಅವರು, ಬದುಕಿನುದ್ದಕ್ಕೂ ಈ ಹವ್ಯಾಸವನ್ನು ಮುಂದುವರಿ ಸಿಕೊಂಡು ಬಂದಿದ್ದರು.

ಮೊದಲು ತೋನ್ಸೆ ಕಾಂತಪ್ಪ ಮಾಸ್ತರ್ ಅನಂತರ ಅವರ ಮಗ ತೋನ್ಸೆ ಜಯಂತ್‌ಕುಮಾರ್‌ರಿಂದ ಯಕ್ಷಗಾನ ತರಬೇತಿ ಪಡೆದಿದ್ದ ದುಗ್ಗಪ್ಪ, ಯಕ್ಷಗಾನದ ಎಲ್ಲಾ ಅಂಗಗಳಲ್ಲಿಯೂ ಪರಿಣತರಾಗಿದ್ದರು. ಗುರು ಬನ್ನಂಜೆ ಸಂಜೀವ ಸುವರ್ಣರಿಂದಲೂ ತರಬೇತಿ ಪಡೆದಿದ್ದರು. ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್‌ನಲ್ಲಿ ಯಕ್ಷಗಾನ ಗುರುಗಳಾಗಿ ಹತ್ತು ವರ್ಷಗಳಿಂದ ಮಕ್ಕಳಿಗೆ ತರಬೇತಿ ನೀಡುತ್ತಿದ್ದರು.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ದುಗ್ಗಪ್ಪ, ಚಿಕ್ಕಮೇಳವನ್ನು ಸಂಘಟಿಸಿ ತಿರುಗಾಟ ನಡೆಸಿದ್ದರು. ಬಡಾನಿಡಿಯೂರು ಗಜಾನನ ಯಕ್ಷಗಾನ ಕಲಾಸಂಘದಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಪ್ರಸಕ್ತ ಅದರ ಅಧ್ಯಕ್ಷರಾಗಿದ್ದರು. ಉಡುಪಿ ರಂಗಭೂಮಿ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು.

ಜೇಸಿ ತರಬೇತುದಾರರಾಗಿದ್ದರು. ಗುರು ತೋನ್ಸೆ ಕಾಂತಪ್ಪ ಮಾಸ್ತರರ ಶತಮಾನೋತ್ಸವ ಸಮಿತಿ, ತೋನ್ಸೆ ಜಯಂತ್ ಕುಮಾರ್ ಷಷ್ಟ್ಯಬ್ದ ಸಮಿತಿಗಳ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.
 ಯಕ್ಷಗಾನ ಕಲಿಕೆಗೆ ಸಂಬಂಧಪಟ್ಟಂತೆ ಱಬಲ್ಲಿರೇನಯ್ಯೞ, ಱಚಿಕ್ಕಮೇಳೞಪುಸ್ತಕ ರಚಿಸಿದ್ದ ಇವರು ಉಡುಪಿ ಜಿಲ್ಲೆಯ ಯಕ್ಷಗಾನ ಸಂಘಟನೆ ಮತ್ತು ಹವ್ಯಾಸಿ ಕಲಾವಿದರ ವಿಳಾಸ, ದೂರವಾಣಿ ಸಂಖ್ಯೆಯನ್ನು ಹೊಂದಿರುವ ಱಕೈಪಿಡಿೞಯನ್ನು ಸಿದ್ದಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ