ಉಡ್ತಾ ಪಂಜಾಬ್,ಅಲಿಗಡ,ದಂಗಲ್ ಎದುರು ‘ರುಸ್ತುಮ್’ಗೆ ಶೇಷ್ಠ ನಟ ಪ್ರಶಸ್ತಿಯೇ?

Update: 2017-04-08 09:01 GMT

ಬಹುನಿರೀಕ್ಷಿತ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ‘ರುಸ್ತುಮ್ ’ಚಿತ್ರದ ನಟನೆಗಾಗಿ ಬಾಲಿವುಡ್‌ನ ಅಕ್ಷಯ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಿಜಕ್ಕೂ ಇದೊಂದು ನಿರಾಶಾದಾಯಕ ಆಯ್ಕೆ ಎಂದು ಹೇಳದೇ ವಿಧಿಯಿಲ್ಲ.

ನೀವು ಯಾವುದೇ ನಟನ ಅಭಿಮಾನಿಯಾಗಿರಲಿ..ಒಂದು ಕ್ಷಣ ಅದನ್ನು ಪಕ್ಕಕ್ಕಿಟ್ಟು ಈ ಪ್ರಶ್ನೆಗೆ ಉತ್ತರ ನೀಡಿ. ಅಕ್ಷಯ್ ನಟನೆಗಾಗಿ ನೀವೇ ಪ್ರಶಸ್ತಿಯನ್ನು ನೀಡುವಂತಿದ್ದರೆ ಅದು ಯಾವ ಚಿತ್ರವಾಗಿರುತ್ತಿತ್ತು...?

ನೀವು ಬಾಲಿವುಡ್ ಚಿತ್ರಗಳ ಭಕ್ತರಾಗಿದ್ದರೆ ನೀವು ಬಹುಶಃ ‘ಏರ್‌ಲಿಫ್ಟ್ ’ಚಿತ್ರವನ್ನು ಹೆಸರಿಸಬಹುದು ಅಥವಾ ‘ಸ್ಪೆಷಲ್ 26 ’ನ್ನು. ನೀವು ಅಕ್ಷಯ್ ಚಿತ್ರಗಳನ್ನು ಸದ್ಯಕ್ಕೆ ವೀಕ್ಷಿಸಿಲ್ಲವಾದರೆ ನೀವು ಕೆಲವು ವರ್ಷಗಳ ಹಿಂದೆ ಸಾಗಿ ‘ಹೇರಾ ಫೇರಿ ’ಯನ್ನು ಹೆಸರಿಸಬಹುದೇನೋ..?

ಕಳೆದೊಂದು ದಶಕಗಳಲ್ಲಿ ತೆರೆ ಕಂಡ ಅಕ್ಷಯ್ ಚಿತ್ರಗಳನ್ನೊಮ್ಮೆ ನೆನಪಿಸಿಕೊಳ್ಳಿ. ಹೆಚ್ಚಿನವುಗಳಲ್ಲಿ ಬರೀ ಜಾಳು ಕಥೆಗಳಷ್ಟೇ, ಆದರೆ ಭರಪೂರ ಹಾಸ್ಯವನ್ನು ಕಾಣಬಹುದು. ಈ ಪೈಕಿ ಕೆಲವು ಚಿತ್ರಗಳಲಿ ಅಕ್ಷಯ್‌ರ ವೃತ್ತಿ ಜೀವನ ಮತ್ತು ಯಶಸ್ಸಿನ ಟ್ರೇಡ್ ಮಾರ್ಕ್ ಆಗಿರುವ ಆ್ಯಕ್ಷನ್ ದೃಶ್ಯಗಳನ್ನು ನಾವು ಕಾಣಬಹುದು.

ಈಗ ಹೇಳಿ,ಟಿನು ಸುರೇಶ ದೇಸಾಯಿ ಅವರ ‘ರುಸ್ತುಮ್ ’ಯಾವ ಸ್ಥಾನದಲ್ಲಿದೆ ? ನನ್ನ ಮಟ್ಟಿಗೆ ಅದು ಯಾವುದೇ ಸ್ಥಾನದಲ್ಲಿಲ್ಲ.

 1959ರಲ್ಲಿ ಮುಂಬೈನಲ್ಲಿ ಸಂಚಲನ ಮೂಡಿಸಿದ್ದ ನಾನಾವತಿ ಕೊಲೆ ಪ್ರಕರಣವನ್ನು ಆಧರಿಸಿರುವ ರುಸ್ತುಮ್ ಅಂತಹ ಹೇಳಿಕೊಳ್ಳುವಂತಹ ಚಿತ್ರವೇನಲ್ಲ.ಚಿತ್ರದ ಜೀವಾಳವಾದ ನ್ಯಾಯಾಲಯದ ದೃಶ್ಯಗಳು ಗಟ್ಟಿತನವನ್ನು ಕಳೆದುಕೊಂಡಿವೆ. ಈ ವರ್ಷದ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದವರು ಪ್ರಿಯದರ್ಶನ್ ಮತ್ತು ಅವರು ಅಕ್ಷಯ್ ಜೊತೆ ಆರು ಸಿನೆಮಾಗಳನ್ನು ಮಾಡಿದ್ದಾರೆ ಎನ್ನುವುದನ್ನು ಇಲ್ಲಿ ಉಲ್ಲೇಖಿಸಲೇಬೇಕು.

ಅತ್ಯುತ್ತಮ ನಟನೆ ಮತ್ತು ಉತ್ತಮ ಚಿತ್ರ ನಿರ್ಮಾಣವನ್ನು ಗೌರವಿಸುವುದು ರಾಷ್ಟ್ರೀಯ ಪ್ರಶಸ್ತಿಗಳ ಹಿಂದಿನ ಉದ್ದೇಶ ಎಂದು ಪರಿಗಣಿಸಿದರೆ ರುಸ್ತುಮ್ ಚಿತ್ರಕ್ಕಾಗಿ ಅಕ್ಷಯ್‌ಗೆ ಪ್ರಶಸ್ತಿ ನೀಡಿರುವುದು ಅಸಮಂಜಸವಾಗಿರುವಂತೆ ಕಂಡು ಬರುತ್ತಿದೆ. ಈ ಹಿಂದೆ ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆಯಾದವರ ಸಾಧನೆಯನ್ನು ಗಮನಿಸಿದರೆ ಅಕ್ಷಯ್‌ರನ್ನು ಆಯ್ಕೆ ಮಾಡುವಾಗ ಜ್ಯೂರಿಗಳ ಮನಸ್ಸಿನಲ್ಲಿ ಏನಿತ್ತು ಎಂಬ ಅಚ್ಚರಿ ಮೂಡುವುದು ಸುಳ್ಳಲ್ಲ.

ಇದು ಅಕ್ಷಯ ಚಿತ್ರ. ಆದರೆ ಏಕೋ ಏನೋ...ಅವರಿಗೆ ನಟಿಸಲು ಈ ಚಿತ್ರವು ಅವಕಾಶವನ್ನೇ ನೀಡಿಲ್ಲ ಎಂದು ವಿಮರ್ಶಕ ಸುಪ್ರತೀಕ್ ಚಟರ್ಜಿ ಚಿತ್ರ ಬಿಡುಗಡೆ ಗೊಂಡಾಗ ಬರೆದಿದ್ದರು.

 2016ರ ಅತ್ಯುತ್ತಮ ಅಭಿನಯವನ್ನು ಮನೋಜ್ ಬಾಜಪೈ ಅವರು ಹನ್ಸಲ್ ಮೆಹ್ತಾ ಅವರ ‘ಅಲಿಗಡ ’ ಚಿತ್ರದಲ್ಲಿ ನೀಡಿದ್ದರು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ದೇಶದ ಅತ್ಯುತ್ತಮ ನಟರಲ್ಲೊಬ್ಬರಾಗಿರುವ ಬಾಜಪೈ ತನ್ನ ಸಲಿಂಗ ಕಾಮ ಪ್ರವೃತ್ತಿಯಿಂದಾಗಿ ಕೆಲಸವನ್ನು ಕಳೆದುಕೊಂಡಿದ್ದ ಏಕಾಂಗಿ ಪ್ರೊಫೆಸರ್‌ನ ಪಾತ್ರವನ್ನು ಅತ್ಯಂತ ಮನೋಜ್ಞವಾಗಿ ಅಭಿನಯಿಸಿದ್ದರು. ಅಷ್ಟೇ ಮನೋಜ್ಞ ಅಭಿನಯವನ್ನು ಆಮಿರ್ ಖಾನ್ ‘ದಂಗಲ್ ’ ಚಿತ್ರದಲ್ಲಿ ಪ್ರದರ್ಶಿಸಿದ್ದರು. ಇವರ ಸಾಲಿನಲ್ಲಿ ಶಾಹಿದ್ ಕಪೂರ್ ಕೂಡ ಇದ್ದರು. ಪಂಜಾಬಿನ ಯುವಜನರನ್ನು ಕಾಡುತ್ತಿರುವ ಮಾದಕ ದ್ರವ್ಯ ಸೇವನೆ ಪಿಡುಗಿನ ಕುರಿತಾದ ಸಾಮಾಜಿಕ ಕಳಕಳಿಯ ಚಿತ್ರ ‘ಉಡ್ತಾ ಪಂಜಾಬ್ ’ನಲ್ಲಿ ಮಾದಕ ದ್ರವ್ಯ ವ್ಯಸನಿ ರಾಕ್‌ಸ್ಟಾರ್ ಆಗಿ ತನ್ನ ಜೀವನದಲ್ಲಿಯೇ ಸರ್ವಶ್ರೇಷ್ಠ ನಟನೆ ಅವರದಾಗಿತ್ತು. ‘ಟ್ರಾಪ್ಡ್ ’ ಚಿತ್ರದಲ್ಲಿ ಅತ್ಯಂತ ಸಂಕೀರ್ಣವಾದ ಪಾತ್ರವನ್ನು ನಿರ್ವಹಿಸಿದ್ದ ರಾಜಕುಮಾರ ರಾವ್ ಕೂಡ ಇದೇ ಸಾಲಿನಲ್ಲಿ ನಿಲ್ಲುತ್ತಾರೆ. ನೀಜಾ ಪಾಂಡೆಯವರ ಎಂಎಸ್ ಧೋನಿ ಚಿತ್ರಕ್ಕಾಗಿ ಸುಷಾಂತ ಸಿಂಗ್ ರಾಜಪೂತ್ ಅವರಂತೂ ತನ್ನ ಸಂಪೂರ್ಣ ಪ್ರತಿಭೆಯನ್ನು ಧಾರೆಯೆರೆದಿದ್ದರು. ಇವರೆಲ್ಲ ಖಂಡಿತವಾಗಿಯೂ ಅತ್ಯುತ್ತಮ ನಟ ಪ್ರಶಸ್ತಿಗೆ ಅರ್ಹರಾಗಿದ್ದರು ಮತ್ತು ಈ ಎಲ್ಲ ಚಿತ್ರಗಳು ಸಾಮಾಜಿಕ ಕಳಕಳಿಯ ಜೊತೆಗೆ ಚರ್ಚೆಯನ್ನೂ ಹುಟ್ಟುಹಾಕಿದ್ದವು.

ಈ ಎಲ್ಲ ಚಿತ್ರಗಳನ್ನು ರುಸ್ತುಮ್‌ಗೆ ಹೋಲಿಸಿ ನೊಡಿ. ರುಸ್ತುಮ್ ಆಯ್ಕೆ ಸಮಿತಿಯ ಮೇಲೆ ಪ್ರಭಾವವನ್ನು ಬೀರಿದ್ದಾದರೂ ಹೇಗೆ ಎಂಬ ಅದೇ ಪ್ರಶ್ನೆ ಮತ್ತೆ ಮತ್ತೆ ಎದ್ದು ನಿಲ್ಲುತ್ತದೆ.

Writer - ಅಂಕುರ್ ಪಾಠಕ್

contributor

Editor - ಅಂಕುರ್ ಪಾಠಕ್

contributor

Similar News