ನಾವು ನೆನಪಿಟ್ಟುಕೊಳ್ಳುವುದು ಹೇಗೆ?

Update: 2017-04-08 10:07 GMT

ನಮ್ಮ ಮಿದುಳಿನಲ್ಲಿ ನೆನಪುಗಳು ರೂಪುಗೊಳ್ಳುವಾಗ ಮತ್ತು ಅವು ಶೇಖರಗೊಳ್ಳುವಾಗ ನಿಜಕ್ಕೂ ನಡೆಯುವ ವಿದ್ಯಮಾನಗಳು ಸಂಶೋಧನೆಯೊಂದರಲ್ಲಿ ಬೆಳಕಿಗೆ ಬಂದಿವೆ ಮತ್ತು ಇವು ಸಂಶೋಧಕರಿಗೇ ಅಚ್ಚರಿಯನ್ನುಂಟು ಮಾಡಿವೆ.

 ಯಾವುದೇ ಘಟನೆಯಿರಲಿ, ಏಕಕಾಲದಲ್ಲಿ ಅದರ ಎರಡು ನೆನಪುಗಳನ್ನು ರೂಪಿಸಿಕೊಳ್ಳುವ ಮೂಲಕ ಮಿದುಳು ದುಪ್ಪಟ್ಟು ಕೆಲಸವನ್ನು ನಿರ್ವಹಿಸುತ್ತದೆ ಎನ್ನುವುದನ್ನು ನ್ಯೂರಲ್ ಸರ್ಕ್ಯೂಟ್ ಜೆನೆಟಿಕ್ಸ್‌ನ ರಿಕೆನ್-ಎಂಐಟಿ ಸೆಂಟರ್‌ನ ಅಮೆರಿಕ ಮತ್ತು ಜಪಾನಿ ವಿಜ್ಞಾನಿಗಳನ್ನೊಳಗೊಂಡ ತಂಡವು ಪತ್ತೆ ಹಚ್ಚಿದ್ದು, ‘ಸಾಯನ್ಸ್ ’ಜರ್ನಲ್ ಈ ಸಂಶೋಧನಾ ವರದಿಯನ್ನು ಪ್ರಕಟಿಸಿದೆ.

ಮಿದುಳು ಎರಡು ಬಾರಿ ನೆನಪುಗಳನ್ನು ದಾಖಲಿಸಿಕೊಳ್ಳುತ್ತದೆ. ಒಂದು ಯಾವಾಗಲಾದರೂ ನೆನಪಿಸಿಕೊಳ್ಳಲು ಮತ್ತು ಇನ್ನೊಂದು ಜೀವಿತಾವಧಿಯವರೆಗೆ.

ಎಲ್ಲ ನೆನಪುಗಳು ಅಲ್ಪಾವಧಿಯ ನೆನಪುಗಳಾಗಿ ಆರಂಭಗೊಳ್ಳುತ್ತವೆ ಮತ್ತು ನಿಧಾನವಾಗಿ ದೀರ್ಘಾವಧಿಯ ನೆನಪುಗಳಾಗಿ ಪರಿವರ್ತನೆಗೊಳ್ಳುತ್ತವೆ ಎಂದು ಈವರೆಗೆ ಭಾವಿಸಲಾಗಿತ್ತು.

ನಮ್ಮ ವೈಯಕ್ತಿಕ ಅನುಭವಗಳನ್ನು ನೆನಪಿರಿಸಿಕೊಳ್ಳುವಲ್ಲಿ ಮಿದುಳಿನ ಎರಡು ಭಾಗಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಿಪ್ಪೋಕ್ಯಾಂಪಸ್ ಅಲ್ಪಾವಧಿ ನೆನಪುಗಳಿಗೆ ತಾಣವಾಗಿದ್ದರೆ, ಕಾರ್ಟೆಕ್ಸ್ ದೀರ್ಘಾವಧಿಯ ನೆನಪುಗಳ ಗೋದಾಮು ಆಗಿದೆ. 1950ರ ದಶಕದ ಹೆನ್ರಿ ಮೋಲಾಯಿಸನ್ ಪ್ರಕರಣದ ಬಳಿಕ ಈ ಪರಿಕಲ್ಪನೆ ಪ್ರಸಿದ್ಧಿಯನ್ನು ಪಡೆದುಕೊಂಡಿತ್ತು

ಮೂರ್ಛೆರೋಗಕ್ಕೆ ಸಂಬಂಧಿತ ಶಸ್ತ್ರಚಿಕಿತ್ಸೆ ಸಂದರ್ಭ ಹೆನ್ರಿಯ ಹಿಪ್ಪೋಕ್ಯಾಂಪಸ್‌ಗೆ ಹಾನಿಯುಂಟಾಗಿತ್ತು ಮತ್ತು ಇತ್ತೀಚಿನ ಯಾವುದೇ ವಿಷಯವನ್ನು ನೆನಪಿಸಿಕೊಳ್ಳಲು ಆತನಿಗೆ ಸಾಧ್ಯವಿರಲಿಲ್ಲ, ಆದರೆ ಶಸ್ತ್ರಚಿಕಿತ್ಸೆಗೂ ಮೊದಲಿನ ನೆನಪುಗಳು ಮಾತ್ರ ಹಸಿರಾಗಿದ್ದವು. ಹೀಗಾಗಿ ನೆನಪುಗಳು ಹಿಪ್ಪೋಕ್ಯಾಂಪಸ್‌ನಲ್ಲಿ ರೂಪುಗೊಳ್ಳುತ್ತವೆ ಮತ್ತು ಬಳಿಕ ಕಾರ್ಟೆಕ್ಸ್‌ಗೆ ಸ್ಥಳಾಂತರಗೊಂಡು ಅಲ್ಲಿ ಶೇಖರಣೆಯಾಗುತ್ತವೆ ಎನ್ನುವುದು ಈ ವರೆಗಿನ ಪರಿಕಲ್ಪನೆಯಾಗಿತ್ತು.

ಆದರೆ ವಸ್ತುಸ್ಥಿತಿ ಹೀಗಿಲ್ಲ ಎನ್ನುವ ಬೆರಗು ಬೀಳಿಸುವ ಅಂಶವನ್ನು ಸಂಶೋಧನಾ ವರದಿಯು ಹೊರಗೆಡವಿದೆ.

ಪ್ರಯೋಗಗಳನ್ನು ಇಲಿಗಳ ಮೇಲೆ ನಡೆಸಲಾಗಿತ್ತಾದರೂ ಅವು ಮಾನವನ ಮಿದುಳಿಗೂ ಅನ್ವಯಿಸುತ್ತವೆ ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ.

ಆಘಾತಕ್ಕೆ ಪ್ರತಿಕ್ರಿಯೆಯಾಗಿ ನಿರ್ದಿಷ್ಟ ನೆನಪುಗಳು ಪರಸ್ಪರ ಸಂಬಂಧಿತ ಮಿದುಳು ಕೋಶಗಳ ಗೊಂಚಲಾಗಿ ರೂಪುಗೊಳ್ಳುವುದನ್ನು ವೀಕ್ಷಿಸುವುದು ಈ ಪ್ರಯೋಗಗಳಲ್ಲಿ ಸೇರಿತ್ತು. ಬಳಿಕ ಪ್ರತ್ಯೇಕ ನರತಂತುಗಳ ಚಟುವಟಿಕೆಯನ್ನು ನಿಯಂತ್ರಿಸಲು ಮಿದುಳಿನೊಳಗೆ ಬೆಳಕಿನ ಕಿರಣಗಳನ್ನು ಹಾಯಿಸಲಾಗಿತ್ತು ಮತ್ತು ತನ್ಮೂಲಕ ನೆನಪುಗಳನ್ನು ಹಸಿರಾಗಿಸಲು ಅಥವಾ ಇಲ್ಲವಾಗಿಸಲು ಅವರಿಗೆ ಸಾಧ್ಯವಾಗಿತ್ತು. ಅಂತಿಮವಾಗಿ ಸಂಶೋಧಕರು ನೆನಪುಗಳು ಏಕಕಾಕದಲ್ಲಿ ಹಿಪ್ಪೋಕ್ಯಾಂಪಸ್ ಮತ್ತು ಕಾರ್ಟೆಕ್ಸ್‌ನಲ್ಲಿ ರೂಪುಗೊಳ್ಳುತ್ತವೆ ಎನ್ನುವುದನ್ನು ದೃಢಪಡಿಸಿದ್ದಾರೆ.

ಈ ಫಲಿತಾಂಶದ ಬಗ್ಗೆ ಸ್ವತಃ ಅಚ್ಚರಿ ವ್ಯಕ್ತಪಡಿಸಿರುವ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಸುಸುಮು ಟೊನೆಗಾವಾ ಅವರು, ಇದು ದಶಕಗಳ ಕಾಲ ನಂಬಿ ಕೊಂಡಿದ್ದ ಕಲ್ಪಿತ ಸಿದ್ಧಾಂತಕ್ಕೆ ವ್ಯತಿರಿಕ್ತವಾಗಿದೆ ಎಂದು ತಿಳಿಸಿದ್ದಾರೆ.

ಹಿಪ್ಪೋಕ್ಯಾಂಪಸ್ ಮತ್ತು ಕಾರ್ಟೆಕ್ಸ್ ನಡುವಿನ ಸಂಪರ್ಕಕ್ಕೆ ದೀರ್ಘ ಕಾಲ ತಡೆಯುಂಟಾಗಿದ್ದರೆ ದೀರ್ಘಾವಧಿಯ ನೆನಪು ಎಂದಿಗೂ ಪಕ್ವಗೊಳ್ಳುವುದಿಲ್ಲ ಎನ್ನುವದನ್ನೂ ಸಂಶೋಧಕರು ಬೆಳಕಿಗೆ ತಂದಿದ್ದಾರೆ.

ಕ್ಯಾಂಬ್ರಿಜ್ ವಿವಿಯಲ್ಲಿ ನೆನಪಿನ ಮೇಲೆ ಸಂಶೋಧನೆ ನಡೆಸುತ್ತಿರುವ ಡಾ.ಎಮಿ ಮಿಲ್ಟನ್ ಅವರು ಟೊನೆಗಾವಾ ತಂಡದ ಸಂಶೋಧನೆಯನ್ನು ಅದ್ಭುತ ಎಂದು ಬಣ್ಣಿಸಿದ್ದಾರೆ.

ತಮ್ಮ ಸಂಶೋಧನೆಯು ಮುಂದುವರಿದಿದ್ದು, ಬುದ್ಧಿಮಾಂದ್ಯತೆ ಸೇರಿದಂತೆ ಕೆಲವು ನೆನಪುಗಳ ಕಾಯಿಲೆಗಳಲ್ಲಿ ಏನಾಗುತ್ತದೆ ಎನ್ನುವುದರ ಮೇಲೆ ಬೆಳಕು ಚೆಲ್ಲಬಹುದು ಎಂದು ಟೊನೆಗಾವಾ ಹೇಳಿದ್ದಾರೆ.

ಅಲ್ಝೀಮರ್ಸ್ ರೋಗಿಗಳಲ್ಲಿ ಇನ್ನೂ ನೆನಪುಗಳು ರೂಪುಗೊಳ್ಳುತ್ತಿರುತ್ತವೆ, ಆದರೆ ಅವುಗಳನ್ನು ತಮ್ಮ ಸ್ಮತಿ ಪಟಲದಲ್ಲಿ ತಂದುಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ ಎನ್ನುವುದನ್ನು ಅವರ ಹಿಂದಿನ ಅಧ್ಯಯನವೊಂದು ತೋರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News