ಸರಕಾರಗಳ ನೀತಿಗಳಿಂದ ಜನತೆಯ ಖಿನ್ನತೆ ಹೆಚ್ಚಳ: ಆರೋಗ್ಯ ಸಚಿವ ರಮೇಶ್‌ಕುಮಾರ್
ಬೆಂಗಳೂರು, ಎ.8: ಕೇಂದ್ರ ಹಾಗೂ ರಾಜ್ಯ ಸರಕಾರಗಳ ನೀತಿಗಳು ಸಹ ಜನತೆಯನ್ನು ಖಿನ್ನತೆಗೆ ದೂಡುತ್ತಿವೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಶ್ವ ಆರೋಗ್ಯ ಸಂಸ್ಥೆ ನಗರದ ನಿಮ್ಹಾನ್ಸ್‌ನ ಕನ್ವೆನ್ಷನ್ ಸಭಾಂಗಣದಲ್ಲಿ ಆಯೋಜಿಸಿದ್ದ "ವಿಶ್ವ ಆರೋಗ್ಯ ದಿನಾಚರಣೆ"ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಾಮಾನ್ಯ ವ್ಯಕ್ತಿಯೊಬ್ಬನಿಗೆ ಕ್ಯಾನ್ಸರ್‌ನಂತಹ ಗಂಭೀರ ರೋಗ ಬಂದರೆ ಗುಣ ಪಡಿಸಿಕೊಳ್ಳಲು ಸಾಧ್ಯವಿಲ್ಲ. ಸರಕಾರಿ ಆಸ್ಪತ್ರೆಗಳಲ್ಲಿಯೂ ಕಡಿಮೆ ಖರ್ಚಿನಲ್ಲಿ ಇಂತಹ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ 30ರಿಂದ 40 ಲಕ್ಷ ರೂ. ಖರ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆ ವ್ಯಕ್ತಿ ಖಿನ್ನತೆಯಿಂದ ಬಳಲುವುದು ಸಹಜವೆಂದು ಅವರು ಹೇಳಿದರು.
ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಮಾತನಾಡಿ, ದೇಶದಲ್ಲಿ ಸುಮಾರು 6 ಕೋಟಿ ಮಂದಿ ಖಿನ್ನತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಖಿನ್ನತೆಯ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಸಿನಿಮಾ ತಾರೆ ದೀಪಿಕಾ ಪಡುಕೋಣೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಕುಟುಂಬ ಕಲ್ಯಾಣ ಇಲಾಖೆಯ ಆಯಕ್ತ ಸುಬೋಧ್ ಯಾದವ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ.ರತನ್ ಕೇಲ್ಕರ್ ಮತ್ತಿತರರಿದ್ದರು.
ಸಮಾಜದಲ್ಲಿರುವ ಪೂರ್ವಗ್ರಹ ಪೀಡಿತ, ಆರ್ಥಿಕ ಹಾಗೂ ಸಾಮಾಜಿಕ ಹಿನ್ನೆಲೆ ವ್ಯಕ್ತಿಯೊಬ್ಬನ ಖಿನ್ನತೆಗೆ ಕಾರಣವಾಗಬಹುದು. ಹೀಗಾಗಿ ಈ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಲಿವ್ ಲವ್ ಲಾಫ್ ಸಂಸ್ಥೆಯನ್ನು ಸ್ಥಾಪಿಸಿ, ವೈದ್ಯರ ಜೊತೆಗೂಡಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
-ದೀಪಿಕಾ ಪಡುಕೋಣೆ, ಸಿನಿಮಾ ನಟಿ
ರಾಜಕಾರಣಿಗಳಿಗೆ ಖಿನ್ನತೆ ಖಾಯಂ: ಚುನಾವಣೆಯ ಸ್ಪರ್ಧೆಗೆ ಟಿಕೆಟ್ ಸಿಗಲಿಲ್ಲವೆಂದು, ಟಿಕೆಟ್ ಸಿಕ್ಕರೆ ಗೆಲ್ಲಲಿಲ್ಲವೆಂದು, ಗೆದ್ದರೆ ಸಚಿವ ಸ್ಥಾನ ಸಿಕ್ಕಿಲ್ಲವೆಂದು, ಹೀಗೆ ರಾಜಕಾರಣಿಗಳು ಒಂದಲ್ಲಾ ಒಂದು ವಿಷಯಕ್ಕೆ ಸದಾ ಖಿನ್ನತೆಯನ್ನು ಅನುಭವಿಸುತ್ತಿರುತ್ತಾರೆ ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್ ಇದೇ ಸಂದರ್ಭ ಹೇಳಿದರು.