ಬಂಗಾಳ ದಲ್ಲಿ ಹುಟ್ಟಿಕೊಂಡ ಮೀನು ರಾಜಕೀಯ!

Update: 2017-04-08 17:48 GMT

2014ರ ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ಅಂದರೆ ಶೇ.17ರಷ್ಟಿದ್ದ ಬಿಜೆಪಿ ಜನಪ್ರಿಯತೆ, 2016ರ ವಿಧಾನಸಭಾ ಚುನಾವಣೆ ವೇಳೆಗೆ ಶೇ.10ಕ್ಕೆ ಕುಸಿದಿದೆ. ಬಿಜೆಪಿಯ ಮತಗಳಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಕಸರತ್ತುಗಳು ಆರಂಭವಾಗಿವೆ. ವ್ಯವಸ್ಥಿತ ಪ್ರಚಾರಾಂದೋಲದ ಮೂಲಕ ಹರಡುತ್ತಿರುವ ಹಿಂದುತ್ವ ಸಿದ್ಧಾಂತದ ವಿರುದ್ಧ ಟಿಎಂಸಿ ನಾಯಕತ್ವದಲ್ಲಿ ಹೋರಾಡಲು ಎಡರಂಗ ಕೈ ಜೋಡಿಸಬೇಕು ಎಂದು ಮಮತಾ ಬ್ಯಾನರ್ಜಿ ಇತ್ತೀಚೆಗೆ ಮನವಿ ಮಾಡಿಕೊಂಡಿದ್ದಾರೆ.

ಬಂಗಾಳಿಗಳಿಗೆ ಮೀನು ಅವರ ಬದುಕಿನ ಅವಿಭಾಜ್ಯ ಅಂಗ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ನನ್ನ ತಾಯಿಯ ತವರುಮನೆ ಅಂದರೆ ಮುಖರ್ಜಿ ಕುಟುಂಬ, ಜನಸಂಘದ ಸಂಸ್ಥಾಪಕ ಎಸ್.ಪಿ.ಮುಖರ್ಜಿಯವರಿಗೆ ದೂರದ ಸಂಬಂಧ. ಅವರು ಕನ್ಯಾಕುಬ್ಜ ಬ್ರಾಹ್ಮಣರಾದರೂ, ಅವರ ವಂಶ ಉತ್ತರ ಪ್ರದೇಶದ ಕನ್ನೌಜ್ ಮೂಲದ್ದು. ಪ್ರತಿನಿತ್ಯ ಮೀನು- ಮಾಂಸ ಸೇವಿಸುವವರು. ಅವರು ಆಹಾರ ಮತ್ತು ಧರ್ಮಕ್ಕೆ ಸಂಬಂಧ ಕಲ್ಪಿಸಿದವರಲ್ಲ. ಪ್ರತಿ ಊಟಕ್ಕೆ ಮುನ್ನ ತಮ್ಮ ಪವಿತ್ರ ದಾರವನ್ನು ಹಿಡಿದುಕೊಂಡು ಏನನ್ನೋ ಪಠಿಸಿ, ಮಾಂಸಾಹಾರಿ ಉಪಾಹಾರ, ಮಧ್ಯಾಹ್ನದೂಟ ಹಾಗೂ ರಾತ್ರಿಯೂಟ ಸೇವಿಸುತ್ತಿದ್ದರು. ಅವರು ತಿನ್ನುಬಾಕನೇನೂ ಆಗಿರಲಿಲ್ಲ.

ಅಜ್ಜ ಸಂಪೂರ್ಣ ಶಾಖಾಹಾರವನ್ನು ಅತಾರ್ಕಿಕ ಎಂದು ಪರಿಗಣಿಸಿದ್ದರು. ಇದು ಪ್ರಮುಖವಾದ ಪೋಷಕಾಂಶವನ್ನು ನಿರಾಕರಿಸುವ ಮೂಲಕ ಅನಾರೋಗ್ಯವಂತರನ್ನಾಗಿಸುವ ಹಾಗೂ ಮಾನಸಿಕ ಅಭಿವೃದ್ಧಿಯನ್ನು ತಡೆಯುವ ಆಹಾರಕ್ರಮವಾಗಿ ಶಾಖಾಹಾರವನ್ನು ಕಂಡಿದ್ದರು. ನನ್ನ ಬಾಲ್ಯದಿಂದಲೂ ಹಿಸ್ಲಾ ಖಾದ್ಯದ ರಸವನ್ನು ಹೀರುವಂತೆ ಸೂಚಿಸುತ್ತಿದ್ದರು. ಇದು ಮೆದುಳಿಗೆ ಒಳ್ಳೆಯದು ಎಂದು ಸಲಹೆ ನೀಡುತ್ತಿದ್ದರು. ಸಮುದ್ರದ ಆಹಾರ ಹಾಗೂ ಮೀನಿನಲ್ಲಿ ಒಮೆಗಾ-3 ಸಮೃದ್ಧವಾಗಿದ್ದು, ಇತಿಹಾಸ ಪೂರ್ವದ ಕಾಲದಿಂದಲೂ ಮಾನವನ ಮೆದುಳು ಬೆಳವಣಿಗೆಯಲ್ಲಿ ಇದು ಮಹತ್ವದ ಪಾತ್ರ ವಹಿಸಿದೆ. ಇದು ವೈಜ್ಞಾನಿಕ ಸತ್ಯ ಕೂಡಾ. ಆದ್ದರಿಂದ ಬಂಗಾಳಿ ಆಹಾರ ಕ್ರಮದಲ್ಲಿ ಮೀನು ಖಾಯಂ ಖಾದ್ಯವಾಗಿರುವುದರಿಂದಲೇ ನೆನಪುಶಕ್ತಿ ಹಾಗೂ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳು ಬಂಗಾಳಿಗಳಲ್ಲಿ ಕನಿಷ್ಠ.

ಆದರೆ ಈಗ ಮೀನು, ನಮ್ಮ ಪ್ರೀತಿಪಾತ್ರ ಮೀನಿನ ಮೇಲೆ ಬಂಗಾಳದಲ್ಲಿ ದಾಳಿಯಾಗುತ್ತಿದೆ. ಬಿಜೆಪಿಯ ಹಿಂದುತ್ವ ಆಹಾರ ರಾಜಕೀಯ, ಸಾಮಾಜಿಕ ಜಾಲತಾಣಗಳ ಆಂದೋಲನ ಮೂಲಕ ಬಂಗಾಳಕ್ಕೂ ತಲುಪಿದೆ.

ಕಳೆದ ಆರು ತಿಂಗಳಿಂದ, ಬಂಗಾಳಿ ಮಾತನಾಡುವ ರಕ್ಕಸರು ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಣುತ್ತಿದ್ದಾರೆ. ಅವರು ಕ್ರಿಮಿಗಳಂತೆ ಗುಂಪುಗೂಡುತ್ತಾರೆ. ಇವರು ಯಾವ ಸಿದ್ಧಾಂತವನ್ನು ಬೆಂಬಲಿಸುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ಯಾವ ಪತ್ತೇದಾರಿ ಕೌಶಲವಾಗಲೀ, ಮಾನಸಿಕ ಅಸ್ತ್ರವಾಗಲೀ ಬೇಕಿಲ್ಲ.

ಬಂಗಾಳದ ಗ್ರಾಮೀಣ ಪ್ರದೇಶಗಳಲ್ಲಿ ಗೋ ಸಂರಕ್ಷಣೆ ದೊಡ್ಡ ವಿವಾದವಾಗುತ್ತಿರುವ ಬಗ್ಗೆ ಮತ್ತು ಇದು ಜಾತಿ ರಾಜಕೀಯವನ್ನು ಉತ್ತೇಜಿಸುತ್ತಿರುವ ವರದಿಗಳು ಬರುತ್ತಿವೆ. ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಜನರನ್ನು ಧ್ರುವೀಕರಣಗೊಳಿಸುವ ತಳಮಟ್ಟದ ಆಂದೋಲನ ಬಂಗಾಳದ ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಾಗಲೇ ಈ ಬಗ್ಗೆ ಮಾತನಾಡಿದ್ದಾರೆ. ಈ ಅಭಿಯಾನವನ್ನು ನಿಲ್ಲಿಸಲು ಅಥವಾ ತಡೆ ಒಡ್ಡುವುದು ಅವರ ಇಚ್ಛೆ.

ಈ ರಕ್ಕಸರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರಚಾರಾಂದೋಲನದ ಮೂಲಕ ವ್ಯಾಪಿಸಿದ್ದಾರೆ. ಖ್ಯಾತ ಕವಿ ಮೈಕೆಲ್ ಮಧುಸೂದನ್ ದತ್ತಾ, ಕ್ರೈಸ್ತಧರ್ಮಕ್ಕೆ ಮತಾಂತರ ಹೊಂದಿ, ವಿದೇಶಿ ಮಹಿಳೆಯನ್ನು ವಿವಾಹವಾಗಿ ರಾಮನನ್ನು ಅವಮಾನಿಸಿದ ಕಾರಣದಿಂದ ಅವರ ಬರಹಗಳನ್ನು ನಿಷೇಧಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಇದೇ ಗಡಣ ಟ್ಯಾಗೋರರನ್ನು ಚಾರಿತ್ರ್ಯಹೀನ, ಹಿಂದೂವಿರೋಧಿ ಹಾಗೂ ಬ್ರಿಟಿಷ್ ಮತ್ತು ಜಾತ್ಯತೀತವಾದಿಗಳ ದಲ್ಲಾಳಿ ಎಂದೂ ಘೋಷಿಸಿದೆ.

ಇನ್ನೊಂದೆಡೆ, ಬಂಗಾಳವನ್ನು ಮನಸ್ಸಿನಲ್ಲಿಟ್ಟುಕೊಂಡು ವಂದೇ ಮಾತರಂ ಬರೆದ ಬಂಕಿಮ್‌ಚಂದ್ರ ಚಟ್ಟೋಪಾಧ್ಯಾಯ ಅವರನ್ನು ನೈಜ ಹಿಂದೂ ಎಂದು ಬಣ್ಣಿಸಲಾಗುತ್ತಿದೆ. ಜತೆಗೆ ಅವರಿಗೆ ನೊಬೆಲ್ ಪ್ರಶಸ್ತಿ ಸಿಗಬೇಕಿತ್ತು. ಆದರೆ ಅವರು ಸತ್ಯವನ್ನು ಮಾತನಾಡಿದ ಕಾರಣಕ್ಕೆ ನಿರಾಕರಿಸಲಾಗಿದೆ ಎಂಬ ಚರ್ಚೆಗಳೂ ಕೇಳಿಬರುತ್ತಿವೆ. ಆದರೆ ನೊಬೆಲ್ ಪ್ರಶಸ್ತಿ ಆರಂಭವಾಗುವ ಮುನ್ನವೇ ಬಂಕಿಮ್‌ಚಂದ್ರ ನಿಧನರಾಗಿದ್ದರು ಎಂಬ ಅಂಶವನ್ನು ಇವರು ಮರೆತಿದ್ದಾರೆ. ಈ ಎಲ್ಲ ಕಸರತ್ತುಗಳೂ ಹಿಂದೂ ಬಂಗಾಳಿಗಳನ್ನು ಎಚ್ಚರಿಸುವ ಸಲುವಾಗಿ. ತಮ್ಮ ನೈಜ ಇತಿಹಾಸವನ್ನು ಅರಿತುಕೊಳ್ಳುವಂತೆ ಅವರಿಗೆ ಕರೆ ನೀಡಲಾಗುತ್ತಿದೆ.

ಇದೀಗ ಅಖಿಲ ಭಾರತ ಮೀನು ಸಂರಕ್ಷಣಾ ಸಮಿತಿ ಎಂಬ ಹೆಸರಿನ ಹೊಸ ಸಂಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡಿದೆ. ಮೀನು ತಿನ್ನುವ ಬಂಗಾಳಿಗಳ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡುತ್ತಿದೆ. ಮತ್ಸ್ಯ ಎನ್ನುವುದು ವಿಷ್ಣುವಿನ ಹತ್ತು ಅವತಾರಗಳ ಪೈಕಿ ಒಂದು ಎಂದು ಹೇಳುವ ಮೂಲಕ ಧಾರ್ಮಿಕ ಅಂಶವನ್ನು ಬಿತ್ತುವ ಪ್ರಯತ್ನ ನಡೆಯುತ್ತಿದೆ. ಬಹುತೇಕ ಬಂಗಾಳಿಗಳಿಗೆ, ಇವೆಲ್ಲ ಕುಚೋದ್ಯವಾಗಿ ಕಾಣುತ್ತಿದೆ.

ಈ ಎಲ್ಲ ಹಾಸ್ಯದ ನಡುವೆಯೂ ಗಂಭೀರವಾದ, ಆತಂಕಕಾರಿ ವಿಚಾರವಿದೆ. ಹಲವಾರು ಮಂದಿ ಬಂಗಾಳಿಗಳಿಗೆ, ಇದು ಒಂದು ರಾಜಕೀಯ ಪಕ್ಷವನ್ನು ಪ್ರತಿರೋಧಿಸುವುದಕ್ಕಿಂತ ಹೆಚ್ಚಿನದು; ಇದೀಗ ಬಂಗಾಳದ ಉದಾರ ಸಂಸ್ಕೃತಿಯನ್ನು, ಸಂಪ್ರದಾಯವಾದಿ ಹಿಂದುಸ್ಥಾನಿ ಗೋಸಂಸ್ಕೃತಿಯಿಂದ ಸಂರಕ್ಷಿಸುವ ವಿಚಾರ. ಕಳೆದ ಶನಿವಾರ ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಖರಗಪುರ ಶಾಸಕ ದಿಲೀಪ್ ಘೋಷ್, ‘‘ಎಪ್ರಿಲ್ 5ರಂದು ರಾಮನವಮಿ ರ್ಯಾಲಿಯಲ್ಲಿ ತ್ರಿಶೂಲ ಹಾಗೂ ಖಡ್ಗ ಹಿಡಿದು ನೇತೃತ್ವ ವಹಿಸುತ್ತೇನೆ’’ ಎಂದು ಜಾಧವಪುರ ವಿಶ್ವವಿದ್ಯಾನಿಲಯದಲ್ಲಿ ನಡೆದ ಒಂದು ವಿಚಾರ ಸಂಕಿರಣದಲ್ಲಿ ಘೋಷಿಸಿದ್ದಾರೆ.

ರಾಮನವಮಿ ಆಚರಣೆ ಬಂಗಾಳಕ್ಕೆ ಇತ್ತೀಚಿನ ಆಮದು. ಉತ್ತರ ಭಾರತದಂತೆ ಬಂಗಾಳದಲ್ಲಿ ರಾಮನ ಆರಾಧನೆ ಜನಪ್ರಿಯವೇನೂ ಅಲ್ಲ. ಬಂಗಾಳದ ಉದಾರವಾದಿ ಸಂಸ್ಕೃತಿಯ ಮೇಲೆ ಹಿಂದೂಸ್ಥಾನಿ ಗೋ ವಲಯದ ಸಂಸ್ಕೃತಿಯನ್ನು ಹೇರುವ ಹುನ್ನಾರ ಎಂದು ಈ ಖಡ್ಗ- ತ್ರಿಶೂಲ ರ್ಯಾಲಿಯನ್ನು ಹಲವು ಮಂದಿ ವಿರೋಧಿಸಿದ್ದಾರೆ. ಸಾಮಾಜಿಕ- ಸಾಂಸ್ಕೃತಿಕ ವ್ಯವಸ್ಥೆಗೆ ಧಕ್ಕೆ ತರುವ ಇದಕ್ಕೆ ವ್ಯಾಪಕ ವಿರೋಧವಿದೆ. ಜನರನ್ನು ಧ್ರುವೀಕರಿಸುವ ಸಲುವಾಗಿ ಹಿಂದೂ ಐಡೆಂಟಿಟಿಯ ಮೂಲಕ ದಾಳಿ ಮಾಡುವ ಸಾಹಸ ನಡೆದಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ಅಂದರೆ ಶೇ.17ರಷ್ಟಿದ್ದ ಬಿಜೆಪಿ ಜನಪ್ರಿಯತೆ, 2016ರ ವಿಧಾನಸಭಾ ಚುನಾವಣೆ ವೇಳೆಗೆ ಶೇ.10ಕ್ಕೆ ಕುಸಿದಿದೆ. ಬಿಜೆಪಿಯ ಮತಗಳಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಕಸರತ್ತುಗಳು ಆರಂಭವಾಗಿದೆ. ವ್ಯವಸ್ಥಿತ ಪ್ರಚಾರಾಂದೋಲದ ಮೂಲಕ ಹರಡುತ್ತಿರುವ ಹಿಂದುತ್ವ ಸಿದ್ಧಾಂತದ ವಿರುದ್ಧ ಟಿಎಂಸಿ ನಾಯಕತ್ವದಲ್ಲಿ ಹೋರಾಡಲು ಎಡರಂಗ ಕೈಜೋಡಿಸಬೇಕು ಎಂದು ಮಮತಾ ಬ್ಯಾನರ್ಜಿ ಇತ್ತೀಚೆಗೆ ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿ ಪ್ರಚಾರಾಂದೋಲನ ಇದೀಗ ಅದಕ್ಕೇ ತಿರುಗು ಬಾಣವಾಗುವ ಸಾಧ್ಯತೆ ಇದೆ. ಬಂಗಾಳದಲ್ಲಿ ಮೀನು ವಿರೋಧಿ ಟ್ರಂಪ್ ಕಾರ್ಡ್ ಕೆಲಸ ಮಾಡುವಂತೆ ಕಾಣುತ್ತಿಲ್ಲ. ಬಂಗಾಳಿಗಳಿಗೆ ಮೀನು ನಿರಾಕರಿಸುವ ಬಿಜೆಪಿ ಕ್ರಮ ಬುಡಮೇಲಾಗುವ ಸಾಧ್ಯತೆ ಇದೆ. ಬಿಜೆಪಿಯ ಗಜ್ಜರಿ ಮತ್ತು ಬಡಿಗೆ ರಾಜಕೀಯದಲ್ಲಿ ಗಜ್ಜರಿ ಎನ್ನುವುದು ಪೌರಾಣಿಕ ಅಭಿವೃದ್ಧಿ ಹಾಗೂ ಬಡಿಗೆ ಎನ್ನುವುದು ಹಿಂದೂವಿರೋಧಿಗಳ, ಜಾತ್ಯತೀತರ, ಮುಸ್ಲಿಮರ, ಗುರಿಮಾಡಿದ ಬುದ್ಧಿಜೀವಿಗಳ, ರಾಷ್ಟ್ರವಿರೋಧಿಗಳ ಹಾಗೂ ರಾಜಕೀಯ ವಿರೋಧಿಗಳ ವಿರುದ್ಧದ ದ್ವೇಷಸಾಧನೆಯ ಅಸ್ತ್ರ. ಆದರೆ ಇದು ಸತ್ಯಜೀತ್ ರೇಯವರ ಜೋಯಿ ಬಾಬಾ ಪೆಲುನಾಥ್ ಚಿತ್ರದಂತೆ ತಲೆ ಕೆಳಗಾಗುವ ಎಲ್ಲ ಸೂಚನೆಯೂ ಇದೆ.

ರೋಮಿಯೊ ನಿಗ್ರಹ ಪಡೆ ಹೊಂದಿದ ಶಾಖಾಹಾರಿ ಹಿಂದೂರಾಷ್ಟ್ರ ಹಾಗೂ ಅತಿಯಾದ ಸಂಪ್ರದಾಯವಾದಿ ಮನೋಪ್ರವೃತ್ತಿ ಬಂಗಾಳದ ಯೋಚನೆಯಲ್ಲ; ಭಾರತದ ಯೋಚನೆಯೂ ಅಲ್ಲ. ಈ ಸಿದ್ಧಾಂತದಿಂದ ಹಿಮ್ಮೆಟ್ಟಿಸುವ ಮತ್ತು ಉದಾರ ಸಂಸ್ಕೃತಿಯನ್ನು ಸಂರಕ್ಷಿಸುವ ಸಲುವಾಗಿ ಇದಕ್ಕೆ ಪ್ರತಿರೋಧ ಒಡ್ಡಲು ಸಜ್ಜಾಗಿದ್ದಾರೆ.

ಹಿಂದುತ್ವ ಸಿದ್ಧಾಂತಕ್ಕೆ ದೊಡ್ಡ ಪ್ರಮಾಣದ ಪ್ರತಿರೋಧ ಒಡ್ಡಿದ ತಾಣವಾಗಿರುವ ಬಂಗಾಳ, 2014ರ ಬಳಿಕ ಇದರ ಬೆಳವಣಿಗೆಯನ್ನೂ ತಡೆದಿದೆ. ಬಂಗಾಳ ಪತನವಾದರೆ ಭಾರತವೂ ಪತನವಾಗುತ್ತದೆ ಎಂಬ ಭಾವನೆ ಕೋಲ್ಕತಾದ ಎಲ್ಲ ಪ್ರಗತಿಪರರಲ್ಲಿ ಮತ್ತು ಎಲ್ಲ ಉದಾರವಾದಿಗಳಲ್ಲಿದೆ. ಬಂಗಾಳಿಗಳ ಆತ್ಮ ಸಂಬಂಧ ಹೊಂದಿರುವುದೇ ಕೆರೆಗಳ, ನದಿಗಳ, ಸಮುದ್ರ ಹಾಗೂ ಮೀನುಗಳ ಜತೆ. ಈ ಮನೋಭಾವ ನಿಜವಾಗಿಯೂ ಕೆಲಸ ಮಾಡಿದರೆ, ಬಿಜೆಪಿ ರಾಜ್ಯದಲ್ಲಿ ದೀರ್ಘಕಾಲದ ವರೆಗೆ ಮುಂದಡಿ ಇಡುವ ಸಾಧ್ಯತೆಯೇ ಇಲ್ಲ.
(ದೇವಡನ್ ಚೌಧರಿ ‘ಅನಾಟಮಿ ಆಫ್ ಲೈಫ್’ ಕೃತಿಯ ಕರ್ತೃ. ಪಂಚ್ ನಿಯತಕಾಲಿಕಕ್ಕೆ ಬರಹಗಳನ್ನು ನೀಡುತ್ತಿರುವ ಅವರು ಕೊಲ್ಕತ್ತಾ ಮೂಲದವರು).
 

Writer - ದೇವಡನ್ ಚೌದ್ರಿ

contributor

Editor - ದೇವಡನ್ ಚೌದ್ರಿ

contributor

Similar News