ಕಮಲ ಪಕ್ಷಕ್ಕೆ ಕಮಲನಾಥ್ ?

Update: 2017-04-08 18:57 GMT

ಕಮಲ ಪಕ್ಷಕ್ಕೆ ಕಮಲನಾಥ್?

ಕರ್ನಾಟಕದ ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಎಂ.ಕೃಷ್ಣ ಬಿಜೆಪಿ ಸೇರಿದ ಬಳಿಕ, ಕಾಂಗ್ರೆಸ್ನಲ್ಲಿ ಮತ್ತೊಂದು ದೊಡ್ಡ ವಿಕೆಟ್ ಪತನವಾಗುತ್ತದೆ ಎಂಬ ವದಂತಿ ದಿಲ್ಲಿಯಲ್ಲಿ ದಟ್ಟವಾಗಿ ಹಬ್ಬಿದೆ. ಕಾಂಗ್ರೆಸ್ನ ಸಕ್ರಿಯ ಮುಖಂಡ ಹಾಗೂ ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ಸಿಗ ಕಮಲನಾಥ್ ಅವರನ್ನು ಪಕ್ಷದ ತೆಕ್ಕೆಗೆ ಪಡೆಯಲು ಕಸರತ್ತು ನಡೆಸಿದೆ. ಮಧ್ಯಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಇದರಲ್ಲಿ ಬಿಜೆಪಿ ಯಶಸ್ವಿಯಾದರೆ ಕಾಂಗ್ರೆಸ್ಗೆ ದೊಡ್ಡ ಹೊಡೆತ ಬೀಳಲಿದೆ. ಏಕೆಂದರೆ ಕಮಲನಾಥ್ ಇದುವರೆಗೂ ಚಿದ್ವಾರ ಲೋಕಸಭಾ ಕ್ಷೇತ್ರದಿಂದ ಸೋಲರಿಯದ ಸರದಾರ. ರಾಜ್ಯದಲ್ಲಿ ಅತ್ಯಂತ ಪ್ರಭಾವಿ ನಾಯಕ ಎಂಬ ಹೆಗ್ಗಳಿಕೆಯೂ ಅವರದ್ದು, ಕಮಲನಾಥ್ ಕಮಲ ಪಕ್ಷಕ್ಕೆ ಸೇರಿದರೆ ಸತತ ನಾಲ್ಕನೆ ಬಾರಿಯೂ ಮಧ್ಯಪ್ರದೇಶದ ಚುಕ್ಕಾಣಿ ಕಾಂಗ್ರೆಸ್ ಕೈ ತಪ್ಪುವುದು ಖಚಿತ. ಯಾವುದೇ ಬಗೆಯಲ್ಲಾದರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹಣೆಯಬೇಕು ಎಂಬ ಸಾಹಸಕ್ಕೆ ಬಿಜೆಪಿ ಕೈಹಾಕಿದೆ.

ಬಬ್ಬರ್ ಗೆ ಶಿಕ್ಷೆ?

ಕಾಂಗ್ರೆಸ್ ಪಾಳಯದಲ್ಲಿ ಹತಾಶೆ, ಸಿಟ್ಟು ಮುಂದುವರಿದಿದೆ. ಇದೀಗ ಕಾಂಗ್ರೆಸ್ನ ಹಲವು ಮುಖಂಡರ ಸಿಟ್ಟು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಂ ನಬಿ ಆಝಾದ್ ಅವರ ಕಡೆ ಮತ್ತು ಉತ್ತರ ಪ್ರದೇಶ ರಾಜ್ಯ ಘಟಕದ ಅಧ್ಯಕ್ಷ ರಾಜ್ ಬಬ್ಬರ್ ಅವರತ್ತ ತಿರುಗಿದೆ. ಈ ಇಬ್ಬರು ಮುಖಂಡರು ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಡುವಿನ ಮೈತ್ರಿಯ ಶಿಲ್ಪಿಗಳು. ಇದೀಗ ಜನಮತ ಸುಸ್ಪಷ್ಟ. ಕಾಂಗ್ರೆಸ್ ಪಕ್ಷ ಅವಸಾನಕ್ಕೆ ಕಾರಣಗಳನ್ನು ಪಕ್ಷದ ಮುಖಂಡರು ಹುಡುಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶದಲ್ಲಿ ನಿರೀಕ್ಷಿತ ಸಾಧನೆ ತೋರಲು ವಿಫಲವಾಗಲು ಮುಖ್ಯ ಕಾರಣವೆಂದರೆ, ಆಝಾದ್ ಹಾಗೂ ಬಬ್ಬರ್ ಅವರು, ಅಧಿಕಾರ ವಿರೋಧಿ ಅಲೆ ಮತ್ತು ಯಾದವೀ ಕಲಹದಿಂದ ಕಂಗೆಟ್ಟಿದ್ದ ಸಮಾಜವಾದಿ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡದ್ದು ಎಂಬ ವಾದ ಒಂದು ವಲಯದಲ್ಲಿ ಕೇಳಿಬರುತ್ತಿದೆ. ಆದರೆ ಇದೀಗ ಪಕ್ಷಕ್ಕೆ ಹಾನಿ ಆಗಿದೆ. ಇದಕ್ಕೆ ಶಿಕ್ಷೆಯಾಗಿ ರಾಜ್ ಬಬ್ಬರ್ ಅವರನ್ನು ಗೋರಖ್ಪುರ ಲೋಕಸಭಾ ಕ್ಷೇತ್ರದಿಂದ ನಡೆಯುವ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಮಾಡಬೇಕು ಎಂಬ ಒತ್ತಡವನ್ನು ರಾಜ್ಯ ಕಾಂಗ್ರೆಸ್ ಮುಖಂಡರು ರಾಹುಲ್ಗಾಂಧಿಗೆ ಮಾಡಿದ್ದಾರೆ. ಯೋಗಿ ಆದಿತ್ಯನಾಥ್ ಅವರ ರಾಜೀನಾಮೆಯಿಂದಾಗಿ ಈ ಸ್ಥಾನ ತೆರವಾಗಿದೆ. ಹಾಗೊಂದು ವೇಳೆ ಸ್ಪರ್ಧಿಸಬೇಕಾಗಿ ಬಂದರೆ ಬಬ್ಬರ್ಗೆ ಇದಕ್ಕಿಂತ ಕಠಿಣ ಸ್ಥಿತಿ ಬರಲಾರದು.

ಸಿನ್ಹಾಗೆ ಸಂತಸ!

ಮೊದಲು ಎದೆನೋವು. ಬಳಿಕ ಒಂದಷ್ಟು ಒಳ್ಳೆಯ ಸುದ್ದಿ. ಮನೋಜ್ ಸಿನ್ಹಾ ಉತ್ತರ ಪ್ರದೇಶದ ಸಿಎಂ ಗಾದಿಯ ರೇಸ್ನಲ್ಲಿ ಮೂಂಚೂಣಿಯಲ್ಲಿದ್ದವರು. ಆದರೆ ಯೋಗಿ ಆದಿತ್ಯನಾಥ್ ಆ ಕುರ್ಚಿ ಆಕ್ರಮಿಸಿಕೊಂಡರು. ಕೇಂದ್ರ ಸಂಪುಟದಲ್ಲಿ ಸಂಪರ್ಕ ಖಾತೆ ರಾಜ್ಯ ಸಚಿವ (ಸ್ವತಂತ್ರ ಹೊಣೆ)ರಾಗಿರುವ ಸಿನ್ಹಾ ರೈಲ್ವೆ ಖಾತೆಯ ರಾಜ್ಯ ಸಚಿವರೂ ಹೌದು. ಇವರಿಗೆ ಭಡ್ತಿ ನೀಡಲಾಗುತ್ತದೆ ಎಂಬ ವದಂತಿ ಹಬ್ಬಿದೆ. ಮುಂದಿನ ಸಂಪುಟ ಪುನಾರಚನೆಯಲ್ಲಿ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗುತ್ತದೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಎಪ್ರಿಲ್ ಎರಡನೆ ವಾರ ಈ ಶುಭಸುದ್ದಿ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಸಿನ್ಹಾ ಇದ್ದಾರೆ. ಆದರೆ ಇದರಿಂದ ಸಿನ್ಹಾ ಹೆಚ್ಚು ರೋಮಾಂಚನಗೊಳ್ಳುವ ಅಗತ್ಯವಿಲ್ಲ. ಏಕೆಂದರೆ ಖಾಲಿ ಇರುವ ರಕ್ಷಣಾ ಸಚಿವ ಹುದ್ದೆ ಅವರಿಗೆ ಸಿಗುವ ಸಾಧ್ಯತೆ ಕಡಿಮೆ ಎಂದು ಕೆಲ ಮೂಲಗಳು ಹೇಳುತ್ತವೆ.

ರಾಖಿ ನಾಟಕ!
ಮಾಜಿ ನಟಿ ಹಾಗೂ ಪಶ್ಚಿಮ ಬಂಗಾಳದಿಂದ ಲೋಕಸಭೆಗೆ ಆಯ್ಕೆಯಾಗಿರುವ ಮೂನ್ ಮೂನ್ ಸೇನ್ ಅವರಿಗೆ, ಸಂಸತ್ತಿನಲ್ಲಿ ಪುರುಷ ಸಂಸದರು ತಮ್ಮ ಬಗ್ಗೆ ಅತಿಯಾದ ಕಾಳಜಿ ವಹಿಸುವುದನ್ನು ಹೇಗೆ ನಿಭಾಯಿಸಬೇಕು ಎನ್ನುವುದು ಚೆನ್ನಾಗಿ ಗೊತ್ತು. ಇಂಥ ವ್ಯಕ್ತಿಯೊಬ್ಬರಿಗೆ ಸೇನ್ ಪಾಠ ಕಲಿಸಿದ್ದನ್ನು ಕೆಲ ಪತ್ರಕರ್ತರ ಬಳಿ ಹೇಳಿಕೊಂಡರು. ಒಬ್ಬ ಸಂಸದ ಸೇನ್ ಜತೆ ಮಧ್ಯಾಹ್ನದೂಟ ಸವಿಯಲು ಬಯಸಿದರು. ಇದಕ್ಕಾಗಿ ತಮ್ಮಲ್ಲಿಗೆ ಬರುವಂತೆ ಅಥವಾ ನಿಮ್ಮ ಸ್ಥಳಕ್ಕೇ ಬರುವುದಾಗಿ ದುಂಬಾಲು ಬಿದ್ದರು. ಈ ಸಂಸದನ ಕಾಟ ತಡೆಯಲಾರದೇ, ಆತನನ್ನು ಖಾಯಂ ಆಗಿ ದೂರ ಇಡುವ ಸಲುವಾಗಿ ಒಂದು ಜಾಣ ಉಪಾಯ ಹೂಡಿದರು. ಕಳೆದ ರಾಖಿ ಹಬ್ಬದ ಸಂದರ್ಭದಲ್ಲಿ ಆ ಸಂಸದನಿಗೆ ರಾಖಿ ಹಾಗೂ ಉಡುಗೊರೆ ಕಳುಹಿಸಿಕೊಟ್ಟರು. ಆ ದಿನದ ಬಳಿಕ ಸಂಸದ ಒಂದು ದಿನವೂ ಸೇನ್ ಅವರನ್ನು ಊಟಕ್ಕೆ ಕರೆಯಲಿಲ್ಲ. ಇಂಥ ವ್ಯಕ್ತಿಗಳನ್ನು ಹೇಗೆ ನಿಭಾಯಿಸಬೇಕು ಎಂಬ ಕಲೆ ಕೆಲವರಿಗೆ ಚೆನ್ನಾಗಿ ಗೊತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News