ಡಿಜಿಟಲ್ ಪಾವತಿ: ಒಂದು ಕೋ.ರೂ.ಗೆದ್ದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕ

Update: 2017-04-09 16:07 GMT

ಹೊಸದಿಲ್ಲಿ,ಎ.9: ಡಿಜಿಟಲ್ ಪಾವತಿಗಳನ್ನು ಜನಪ್ರಿಯಗೊಳಿಸುವ ಸರಕಾರದ ಯೋಜನೆಯಡಿ 1,590 ರೂ.ಗಳ ವಹಿವಾಟನ್ನು ಕಾರ್ಡ್ ಮೂಲಕ ನಡೆಸಿದ್ದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರೋರ್ವರು ಒಂದು ಕೋ.ರೂ.ಗಳ ಬಹುಮಾನವನ್ನು ಗೆದ್ದುಕೊಂಡಿದ್ದಾರೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ರವಿವಾರ ರಾಷ್ಟ್ರಪತಿ ಭವನದಲ್ಲಿ ಡಿಜಿಟಲ್ ಪಾವತಿ ಉತ್ತೇಜನ ಯೋಜನೆಯಡಿ 100ನೇ ಡ್ರಾದ ಅದೃಷ್ಟಶಾಲಿ ವಿಜೇತರನ್ನು ಆಯ್ಕೆ ಮಾಡಿದರು.

ಲಕ್ಕಿ ಗ್ರಾಹಕ್ ಯೋಜನಾ ಮತ್ತು ಡಿಜಿಧನ್ ವ್ಯಾಪಾರ ಯೋಜನಾದ ಆರು ವಿಜೇತರನ್ನು ರಾಷ್ಟ್ರಪತಿಗಳು ಈ ಸಂದರ್ಭದಲ್ಲಿ ಅಭಿನಂದಿಸಿದರು.
ಗ್ರಾಹಕರ ವಿಭಾಗದಲ್ಲಿ 50 ಲ.ರೂ.ಗಳ ಎರಡನೆಯ ಬಹುಮಾನ ಬ್ಯಾಂಕ್ ಆಫ್ ಬರೋಡಾ ಮತ್ತು 25 ಲ.ರೂ.ಗಳ ಮೂರನೆಯ ಬಹುಮಾನ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಗ್ರಾಹಕರಿಗೊಲಿದವು.

ಎಲ್ಲ ಮೂವರೂ ಗ್ರಾಹಕರು ತಮ್ಮ ರುಪೇ ಡೆಬಿಟ್ ಕಾರ್ಡ್‌ಗಳನ್ನು ಬಳಸಿ ವಹಿವಾಟು ನಡೆಸಿದ್ದರು. ವಿಜೇತರ ಹೆಸರುಗಳು ತಕ್ಷಣಕ್ಕೆ ಗೊತ್ತಾಗಿಲ್ಲ. ಡ್ರಾದಲ್ಲಿ ಅವರ ವಹಿವಾಟು ಸಂಖ್ಯೆಗಳು ಮಾತ್ರ ಪ್ರದರ್ಶಿತವಾಗಿದ್ದವು.

ವಿಜೇತರನ್ನು ಗುರುತಿಸಲು ಇವುಗಳನ್ನು ಕಾರ್ಡ್ ವಿವರಗಳೊಂದಿಗೆ ಹೋಲಿಸಲಾಗುವುದು. ಮೂವರು ವ್ಯಾಪಾರಿಗಳು ಸಹ 50,25 ಮತು 12 ಲ.ರೂ.ಗಳ ಬಹುಮಾನಗಳಿಗೆ ಪಾತ್ರರಾಗಿದ್ದಾರೆ.

ಎ.14ರಂದು ನಾಗ್ಪುರದಲ್ಲಿ ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಜೇತರನ್ನು ಅಭಿನಂದಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News