×
Ad

ಮಹಿಳೆಯರು-ಮಕ್ಕಳ ರಕ್ಷಣೆ ಮೂಲಕ ಆತ್ಮವಿಶ್ವಾಸ ಮೂಡಿಸಿ: ಪೊಲೀಸರಿಗೆ ಮುಖ್ಯಮಂತ್ರಿ ಸೂಚನೆ

Update: 2017-04-10 19:30 IST

ಬೆಂಗಳೂರು, ಎ.10: ಪೊಲೀಸ್ ಸಿಬ್ಬಂದಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸಬೇಕು. ಸರಗಳ್ಳತನ, ದರೋಡೆ, ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಿ, ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಪೊಲೀಸ್ ಇಲಾಖೆಯಿಂದ ಮಹಿಳೆಯರ ರಕ್ಷಣೆಗೆ ‘ಪಿಂಕ್ ಹೊಯ್ಸಳ’ ವಾಹನಗಳಿಗೆ ವಿಧಾನಸೌಧದ ಮುಂಭಾಗದಲ್ಲಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಜನರಿಗೆ ಆತ್ಮವಿಶ್ವಾಸ ಮೂಡಿಸುವಂತೆ ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸಿದರೆ ಇಲಾಖೆ ಮತ್ತು ತಮಗೂ ಗೌರವ ಸಿಗಲಿದೆ ಎಂದರು.

ಪೊಲೀಸರು ದಕ್ಷತೆ ಹಾಗೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಆ ಮೂಲಕ ಅಪರಾಧ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಕಿಡಿಗೇಡಿಗಳು, ದುಷ್ಕರ್ಮಿಗಳ ಬಗ್ಗೆ ಪೊಲೀಸರು ನಿಗಾ ವಹಿಸಬೇಕು. ಆ ಮೂಲಕ ಅಪರಾಧ ಕೃತ್ಯಗಳನ್ನು ತಡೆಗಟ್ಟಬೇಕು ಎಂದರು.

ಮಹಿಳೆಯರ ರಕ್ಷಣೆಗಾಗಿ ಒಟ್ಟು 51 ಪಿಂಕ್ ಹೊಯ್ಸಳ ವಾಹನಗಳನ್ನು ನೂತನವಾಗಿ ಸೇರ್ಪಡೆ ಮಾಡಿದ್ದು, ಇಲಾಖೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕು. ಜೊತೆಗೆ ಪೊಲೀಸ್ ಸಿಬ್ಬಂದಿಯೂ ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕೆಂದು ಸಿದ್ದರಾಮಯ್ಯ ಸೂಚಿಸಿದರು.

ತಕ್ಷಣ ಸ್ಪಂದನೆ: ಮಹಿಳೆಯರು, ಮಕ್ಕಳು ಹೆಚ್ಚಾಗಿರುವ ಸಿದ್ಧ ಉಡುಪು ಕಾರ್ಖಾನೆಗಳು, ಐಟಿ-ಬಿಟಿ ಕಂಪೆನಿಗಳು, ಮಹಿಳಾ ಶಾಲಾ-ಕಾಲೇಜು, ಹಾಸ್ಟೆಲ್ ಪ್ರದೇಶಗಳಲ್ಲಿ ಪಿಂಕ್ ಹೊಯ್ಸಳ ವಾಹನಗಳನ್ನು ನಿಯೋಜಿಸಲಾಗುವುದು. ಸಂಕಷ್ಟಕ್ಕೆ ಸಿಲುಕಿರುವ ಮಹಿಳೆಯರು ಆ್ಯಪ್ ಮೂಲಕ ಪೊಲೀಸರನ್ನು ಸಂಪರ್ಕಿಸಿದರೆ, ಕೂಡಲೇ ಧಾವಿಸಿ ಸ್ಪಂದಿಸಲಿದ್ದಾರೆಂದು ಸಿದ್ದರಾಮಯ್ಯ ತಿಳಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಗರಾಭಿವೃದ್ಧಿ ಸಚಿವ ರೋಷನ್ ಬೇಗ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್‌ಚಂದ್ರ ಕುಂಠಿಯಾ, ಗೃಹ ಇಲಾಖೆ ಕಾರ್ಯದರ್ಶಿ ಸುಭಾಶ್ಚಂದ್ರ, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಪೊಲೀಸ್ ಮಹಾ ನಿರ್ದೇಶಕ ಆರ್.ಕೆ.ದತ್ತ, ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಪಿಂಕ್ ಹೊಯ್ಸಳ: ಪೊಲೀಸ್ ನಿಯಂತ್ರಣ ಕೊಠಡಿಗೆ ಮತ್ತು ಸುರಕ್ಷ ಮೊಬೈಲ್ ಆ್ಯಪ್‌ಗೆ ಬರುವ ದೂರುಗಳಿಗೆ ‘ಪಿಂಕ್ ಹೊಯ್ಸಳ’ ಸ್ಪಂದಿಸಲಿವೆ. ಮಹಿಳೆಯರ ಸುರಕ್ಷತೆ ಉಸ್ತುವಾರಿಯನ್ನು ಮಹಿಳಾ ಸಿಬ್ಬಂದಿಯೆ ನಿರ್ವಹಿಸಲಿದ್ದಾರೆ. ದೂರು ನೀಡಿದ 15 ನಿಮಿಷದಲ್ಲೆ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News