ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಜಾರ್ಜ್ ತಾಕೀತು
ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಜಾರ್ಜ್ ತಾಕೀತು
ಬೆಂಗಳೂರು, ಎ.10: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಎಲ್ಲ ಪ್ರಗತಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ತಾಕೀತು ಮಾಡಿದ್ದಾರೆ.
ಸೋಮವಾರ ಬೆಳಗ್ಗೆ ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ ಮತ್ತು ಅಧಿಕಾರಿಗಳೊಂದಿಗೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ನಗರ ವ್ಯಾಪ್ತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಓಕಳಿಪುರಂ ಬಳಿ ನಡೆಯುತ್ತಿರುವ ಅಷ್ಟಪಥ ಕಾಮಗಾರಿ, ವೆಸ್ಟ್ ಆಫ್ ಕಾರ್ಡ್ ರೋಡ್ ಹಾಗೂ ರಾಜ್‌ಕುಮಾರ್ ರಸ್ತೆಯ ವಿವೇಕಾನಂದ ಕಾಲೇಜು ಬಳಿ ನಡೆಯುತ್ತಿರುವ ಅಂಡರ್‌ಪಾಸ್ ಕಾಮಗಾರಿ ವೀಕ್ಷಿಸಿದರು. ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿರುವುದು ಕಂಡುಬಂದ ಹಿನ್ನೆಲೆ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೆ.ಜೆ.ಜಾರ್ಜ್,ಗುತ್ತಿಗೆದಾರರು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಸಭೆ ಕರೆದು ಚರ್ಚೆ: ವೆಸ್ಟ್ ಆಫ್ ಕಾರ್ಡ್‌ರೋಡ್‌ನಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲಿಸಿ 18 ತಿಂಗಳೊಳಗೆ ಮುಗಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದು, ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದಕ್ಕೆ ಕಾರಣ ಕೇಳಿದ ಸಚಿವರು, ಕೂಡಲೇ ಕೆಲಸ ಮುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇದಕ್ಕೂ ಮೊದಲು ಶಾಸಕ ಸುರೇಶ್‌ಕುಮಾರ್ ಮಾತನಾಡಿ, ಕಾಮಗಾರಿ ವಿಳಂಬದ ಬಗ್ಗೆ ಸಚಿವರ ಗಮನಕ್ಕೆ ತಂದರು. ಗುತ್ತಿಗೆದಾರರು ಎಪ್ರಿಲ್‌ಗೆ ಎರಡು ಮೇಲ್ಸೇತುವೆ ಕಾಮಗಾರಿ ಮುಗಿಸುವುದಾಗಿ ಹೇಳಿದ್ದರು. ಆದರೆ, ಈಗ ಸೆಪ್ಟೆಂಬರ್ ಎನ್ನುತ್ತಿದ್ದಾರೆ. ಕಾಮಗಾರಿಗೆ ಇದ್ದಂತಹ ಎಲ್ಲ ಸಮಸ್ಯೆಗಳನ್ನೂ ನಿವಾರಿಸಿದ್ದೇವೆ. ಆದರೂ, ವಿಳಂಬ ಮಾಡುತ್ತಿದ್ದಾರೆ ಎಂದು ಸಚಿವರಿಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಅವರು, ಈ ಬಗ್ಗೆ ಸಭೆ ಕರೆದು ಚರ್ಚೆ ನಡೆಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ನಂದಿನಿ ಲೇಔಟ್‌ನ ಭುವನೇಶ್ವರಿ ನಗರದ ಮೇಲ್ಸೇತುವೆ ಕಾಮಗಾರಿ ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳಲಿದೆೆ. ಬಸವೇಶ್ವರನಗರ ಮಾಗಡಿ ರಸ್ತೆ ಜಂಕ್ಷನ್‌ನ 350 ಮೀ.ಉದ್ದದ ಕಾಮಗಾರಿ ಮೇ ಅಂತ್ಯದೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ವೇಳೆ ಶಾಸಕ ಮುನಿರತ್ನ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿ ಪ್ರಮುಖರು ಹಾಜರಿದ್ದರು.