ಕೆಪಿಎಸ್ಸಿ ಹಗರಣ: ಗೋನಾಳ ಭೀಮಪ್ಪ ವಿಚಾರಣೆಗೆ ಹೈಕೋರ್ಟ್ ತಡೆ
ಬೆಂಗಳೂರು, ಎ.10: ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಸಿದ ಆರೋಪ ಎದುರಿಸುತ್ತಿರುವ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ ಭೀಮಪ್ಪ ವಿರುದ್ಧದ ಲೋಕಾಯುಕ್ತ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ.
ಈ ಸಂಬಂಧ ಎಫ್‌ಐಆರ್ ರದ್ದು ಕೋರಿ ಗೋನಾಳ ಭೀಮಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಎಸ್.ಕೆ.ಮುಖರ್ಜಿ ಹಾಗೂ ನ್ಯಾ.ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಗೋನಾಳ ಭೀಮಪ್ಪ ಅವರ ವಿರುದ್ಧ ತನಿಖೆ ನಡೆಸಲು ರಾಷ್ಟ್ರಪತಿಗಳು ಆದೇಶಿಸಬೇಕು. ಆದರೆ, ಇಲ್ಲಿ ರಾಜ್ಯಪಾಲರು ಭೀಮಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಲು ಹಾಗೂ ಸಿಐಡಿ ತನಿಖೆಗೆ ಆದೇಶಿಸಿರುವುದು ಕಾನೂನು ಬಾಹಿರವಾಗಿದೆ. ಹೀಗಾಗಿ, ಲೋಕಾಯುಕ್ತ ನ್ಯಾಯಾಲಯ ನಡೆಸುತ್ತಿರುವ ವಿಚಾರಣೆಗೆ ತಡೆ ನೀಡಬೇಕೆಂದು ಪೀಠಕ್ಕೆ ತಿಳಿಸಿದರು. ಗೋನಾಳ ಭೀಮಪ್ಪ ವಿರುದ್ಧದ ಆರೋಪಗಳಿಗೆ ಸಂಬಂಧಪಟ್ಟಂತೆ ಯಾವುದೆ ಸೂಕ್ತ ದಾಖಲೆಗಳು ಇಲ್ಲಿಯವರೆಗೆ ಲಭ್ಯವಾಗಿಲ್ಲ ಎಂದು ಪೀಠಕ್ಕೆ ತಿಳಿಸಿದರು.