ಬೆಂವಿವಿ ಸಿಂಡಿಕೇಟ್ ಸದಸ್ಯರ ನಾಮ ನಿರ್ದೇಶನ ವಿಚಾರ : ರಾಜ್ಯ ಉನ್ನತ ಶಿಕ್ಷಣ ಇಲಾಖೆಗೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಮಾ.10: ಬೆಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿ ಎನ್.ವಿಜಯಕುಮಾರ್ ಸಿಂಹ ಹಾಗೂ ಇತರೆ ನಾಲ್ವರನ್ನು ನಾಮ ನಿರ್ದೇಶನ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಉನ್ನತ ಶಿಕ್ಷಣ ಇಲಾಖೆಗೆ ಹೈಕೋರ್ಟ್ ನೋಟಿಸ್ ನೀಡಿದೆ.
ನಾಮ ನಿರ್ದೇಶನ ಪ್ರಶ್ನಿಸಿ ಕೆ.ಎನ್. ರಮೇಶ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಬೆಂಗಳೂರು ವಿಶ್ವವಿದ್ಯಾಲಯ, ಸಿಂಡಿಕೇಟ್‌ಗೆ ನಾಮ ನಿರ್ದೇಶನಗೊಂಡಿರುವ ಎನ್. ವಿಜಯ ಕುಮಾರ ಸಿಂಹ, ಜಯಣ್ಣ, ನತೀಸ್ ಫಾತಿಮಾ, ಬಿ.ಜಿ. ರವಿಕುಮಾರ್ ಮತ್ತು ಕೆ.ಆರ್. ಮಂಜುನಾಥ್ ಅವರಿಗೂ ನೋಟಿಸ್ ಜಾರಿ ಮಾಡಿದೆ.
ಎನ್.ವಿಜಯ ಕುಮಾರ ಸಿಂಹ ಹಾಗೂ ಇತರರನ್ನು ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಬೆಂಗಳೂರು ವಿಶ್ವವಿದ್ಯಾಲಯ ಆದೇಶ ಹೊರಡಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಈ ಐವರ ನಾಮ ನಿರ್ದೇಶನವು ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ ಸೆಕ್ಷನ್ 28(ಜಿ)ಗೆ ವಿರುದ್ಧವಾಗಿದೆ. ಹೀಗಾಗಿ, ಬೆಂಗಳೂರು ವಿಶ್ವವಿದ್ಯಾಲಯದ ನಾಮ ನಿರ್ದೇಶನ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.