×
Ad

158 ಮಂದಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ: ಇಂದು ಮುಖ್ಯಮಂತ್ರಿಯಿಂದ ಪ್ರದಾನ

Update: 2017-04-10 23:01 IST

ಬೆಂಗಳೂರು,ಎ.10: ಹಿರಿಯ ಸಾಹಿತಿಗಳಾದ ಎಂ.ಎಚ್.ಕೃಷ್ಣಯ್ಯ, ಡಾ.ವಸುಂಧರಾ ಭೂಪತಿ, ಪತ್ರಕರ್ತರಾದ ಅಬ್ಬೂರ್ ರಾಜಶೇಖರ್, ಹಮೀದ್ ಪಾಳ್ಯ, ಮುನೀರ್ ಅಹಮದ್ ಅಜಾದ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಾಡು-ನುಡಿಗಾಗಿ ಗಣನೀಯ ಸೇವೆ ಸಲ್ಲಿಸಿದ 158 ಮಂದಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸೋಮವಾರ ಪಾಲಿಕೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಪದ್ಮಾವತಿ ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸಾಹಿತ್ಯ, ಸಂಗೀತ, ರಂಗಭೂಮಿ, ಮಾಧ್ಯಮ, ಚಲನಚಿತ್ರ, ವೈದ್ಯಕೀಯ, ನೃತ್ಯ, ಶಿಕ್ಷಣ, ಕ್ರೀಡೆ, ಯೋಗ, ಸಮಾಜ ಸೇವಾ, ಸರಕಾರಿ ಸೇವೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಗಾಗಿ 1,500 ಅರ್ಜಿಗಳು ಬಂದಿದ್ದವು, ಇವರಲ್ಲಿ ಅರ್ಹ 158 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 10 ಸಾವಿರ ರೂ., ಪ್ರಮಾಣ ಪತ್ರ, ಫಲಕಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.

ಎ.11ರ ಸಂಜೆ 5.30ಕ್ಕೆ ಪಾಲಿಕೆ ಆವರಣದಲ್ಲಿನ ಡಾ.ರಾಜ್‌ಕುಮಾರ್ ಗಾಜಿನಮನೆಯಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನಗರ ಜಿಲ್ಲಾ ಉಸ್ತುವರಿ ಸಚಿವರು, ಸಂಸದರು, ಶಾಸಕರು ಸೇರಿಂದತೆ ಬಿಬಿಎಂಪಿ ಸದಸ್ಯರು ಉಪಮೇಯರ್, ಆಡಳಿತ ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ದಿವ್ಯ ಜ್ಯೋತಿ ಯಾತ್ರೆ: ಮಂಗಳವಾರ ಬೆಳಗ್ಗೆ ಎಂಟು ಗಂಟೆಗೆ ಪಾಲಿಕೆ ಮುಂಭಾಗವಿರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಅಂದು ಬೆಳಗ್ಗೆ 9 ಗಂಟೆಗೆ ಕೆಂಪೇಗೌಡ ನಿರ್ಮಿಸಿರುವ ನಾಲ್ಕು ಗುಡಿ ಗೋಪುರಗಳಿರುವ ಹಲಸೂರು ಕೆರೆ, ಲಾಲ್‌ಬಾಗ್, ಕಂಪಾಂಬುದಿ ಕೆರೆ ಹಾಗೂ ರಮಣಶ್ರೀ ಉದ್ಯಾನದಿಂದ ದಿವ್ಯಜ್ಯೋತಿ ಯಾತ್ರೆ ಆರಂಭವಾಗಲಿದೆ. ಈ ಬಾರಿ ಕೆಂಪೇಗೌಡ ಐಕ್ಯ ಸ್ಥಳ ಮಾಗಡಿ ತಾಲೂಕಿನ ಕೆಂಪಾಪುರದಿಂದ ದಿವ್ಯಜ್ಯೋತಿ ಯಾತ್ರೆಯನ್ನು ಆರಂಭಿಸಲಾಗುವುದು ಮೇಯರ್ ಪದ್ಮಾವತಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲಿಕೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಉಪಮೇಯರ್ ಆನಂದ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News